Coastal Karnataka Election 2023; ಕರಾವಳಿಯಲ್ಲೂ ಬಂಡಾಯ ಪಕ್ಷೇತರರದ್ದೇ ಆತಂಕ!
ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರರಾಗಿ ನಿಲ್ಲುವ ಸಾಧ್ಯತೆ ಹೆಚ್ಚಿದೆ.
Team Udayavani, Apr 14, 2023, 10:51 AM IST
ಮಂಗಳೂರು: ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಆದರೆ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಘೋಷಣೆ ಮಾಡಿರುವ ಅಭ್ಯರ್ಥಿಗಳ ಬಗೆಗಿನ ಅಪಸ್ವರವೂ ಕರಾವಳಿಯಲ್ಲೂ ಕೇಳಿಬರುತ್ತಿದೆ.
ಈ ಬಾರಿ ಬಿಜೆಪಿಯಲ್ಲೂ ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಪಕ್ಷದೊಳಗೆ ಅಸಮಾಧಾನ ಕಂಡು ಬರುತ್ತಿದೆ. ಕೆಲವೆಡೆ ಬಂಡಾಯದ ಸೂಚನೆಗಳೂ ಇವೆ. ಕಾಂಗ್ರೆಸ್‌ನಲ್ಲಿ ಈಗಾಗಲೇ ಘೋಷಣೆಯಾಗಿರುವ ಕೆಲವು ಕ್ಷೇತ್ರಗಳಲ್ಲಿ
ಅಪಸ್ವರ, ವಿರೋಧದ ಅಲೆ ದಟ್ಟವಾಗಿದೆ. ಉಡುಪಿ ಕ್ಷೇತ್ರದಲ್ಲಿ ಈಗಾಗಲೇ ಘೋಷಿತ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಎದುರು ಕೃಷ್ಣಮೂರ್ತಿ ಆಚಾರ್ಯ ಬಂಡಾಯದ ಬಾವುಟ ಹಾರಿಸಿದ್ದಾರೆ. ಸುಳ್ಯದಲ್ಲೂ ಘೋಷಿತ ಅಭ್ಯರ್ಥಿ ಕೃಷ್ಣಪ್ಪ ಎದುರು ನಂದಕುಮಾರ್ ಬಂಡಾಯ ಏಳುವ ಲಕ್ಷಣ ತೋರಿದ್ದಾರೆ.
ಕರಾವಳಿಯ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ವರಿಷ್ಠರು ಸಾಕಷ್ಟು ಬಾರಿ ಚರ್ಚೆ, ವಿಮರ್ಶೆ, ಪರಾಮರ್ಶೆ ನಡೆಸಿ ಟಿಕೆಟ್ ಅಂತಿಮಗೊಳಿಸಿದ್ದರೂ ಬಂಡಾಯದ ಭೀತಿ ದೂರವಾಗಿಲ್ಲ. ಬಿಜೆಪಿಯಲ್ಲಿ ಈಗಾಗಲೇ ಎಲ್ಲ ಕ್ಷೇತ್ರಗಳ ಟಿಕೆಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಬೈಂದೂರಿನಲ್ಲಿ ಬಂಡಾಯವೋ ಅಧಿಕೃತ ಅಭ್ಯರ್ಥಿಗೆ ಬೆಂಬಲವೋ ಎಂಬುದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ.
ಉಡುಪಿ ಮತ್ತು ಕಾಪುವಿನಲ್ಲೂ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ ಕಾಪುವಿನಲ್ಲಿ ಲಾಲಾಜಿ ಆರ್ ಮೆಂಡನ್ ಘೋಷಿತ ಪಕ್ಷದ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಅವರೊಂದಿಗೆ ಬುಧವಾರವೇ ಜಂಟಿ ಪತ್ರಿಕಾಗೋಷ್ಟಿ ನಡೆಸಿ ಬೆಂಬಲ ಸೂಚಿಸಿದರು. ಉಡುಪಿಯಲ್ಲಿ ಕೆ. ರಘುಪತಿ ಭಟ್ ಪಕ್ಷದ ನಾಯಕರ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರೂ ಗುರುವಾರ ಪಕ್ಷದ ಅಭ್ಯರ್ಥಿ ಯಶ್‌ಪಾಲ್ ಸುವರ್ಣರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬೆಂಬಲ ನೀಡಿದ್ದಾರೆ. ಈ ಮೂಲಕ ಸಂಭವನೀಯ ಬಂಡಾಯ ತಣ್ಣಗಾಗಿದೆ.
ಹಾಗೆಯೇ ದಕ್ಷಿಣ ಕನ್ನಡದಲ್ಲಿ ಪುತ್ತೂರಿನಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಬಂಡಾಯ ಸಾಧ್ಯತೆ ಕಡಿಮೆ. ಆದರೆ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರರಾಗಿ ನಿಲ್ಲುವ ಸಾಧ್ಯತೆ ಹೆಚ್ಚಿದೆ.
ಕರಾವಳಿಯ ಚುನಾವಣ ಇತಿಹಾಸವನ್ನು ಗಮನಿಸಿದರೆ, ಇಲ್ಲಿ ಬಂಡಾಯ ಅಥವಾ ಪಕ್ಷೇತರರಾಗಿ ಗೆದ್ದವರು ಅಪರೂಪವಾದರೂ ಈ ವಿರೋಧದ ಅಲೆ, ಬಂಡಾಯದ ಬಿಸಿ ಮಾತ್ರ ಪಕ್ಷಗಳನ್ನು ಹುಬ್ಬೇರಿಸುವಂತೆ ಮಾಡಿರುವ ಉದಾಹರಣೆಗಳಿವೆ. ಬ್ರಹ್ಮಾವರ ಕ್ಷೇತ್ರದಲ್ಲಿ ಜಯಪ್ರಕಾಶ್ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರೆ, ಕೆ. ಜಯಪ್ರಕಾಶ್ ಹೆಗ್ಡೆ ಪಕ್ಷೇತರರಾಗಿ ಸತತ 2 ಬಾರಿ ವಿಜಯದ ಮಾಲೆ ಧರಿಸಿರುವುದು ಇತಿಹಾಸ.
ಇದಲ್ಲದೆ ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರರಾಗಿ ಗೆದ್ದಿದ್ದರು. ಪುತ್ತೂರಿನಲ್ಲಿ 2004ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಶಕುಂತಳಾ ಶೆಟ್ಟಿ 2008ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ಆದರೆ ಈ ಚುನಾವಣೆಯಲ್ಲಿ 25,171 ಮತಗಳನ್ನು ಪಡೆಯುವ ಮೂಲಕ ಅವರು ತೃತೀಯ ಸ್ಥಾನದಲ್ಲಿದ್ದು, ಗೆದ್ದ ಅಭ್ಯರ್ಥಿಯ ಮತಗಳ ಅಂತರವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅಂಥದ್ದೇ ಪರಿಸ್ಥಿತಿ ಈ ಬಾರಿ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಕಂಡುಬರಲಿದೆಯೇ ಎಂಬ ಕುತೂಹಲ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.