ಕೈ ಪ್ರಾಬಲ್ಯ ಕಳೆದುಕೊಂಡ ಮೂರು ಕ್ಷೇತ್ರ
Team Udayavani, Mar 6, 2023, 2:54 PM IST
ಮಂಡ್ಯ: 1952ರ ಮೊದಲ ಚುನಾವಣೆಯಿಂದ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್, 1999ರಲ್ಲಿ ಜಿಲ್ಲೆಯ ಒಟ್ಟು 9 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ನಂತರದ ಚುನಾವಣೆಗಳಲ್ಲಿ ಸೊರಗುತ್ತಾ ಕ್ಷೇತ್ರ ಗಳಲ್ಲಿ ಏಳು-ಬೀಳುಗಳನ್ನು ಕಂಡಿದೆ.
ಜಿಲ್ಲೆಯ ಪ್ರಸ್ತುತ ಏಳು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಕಳೆದ 15 ವರ್ಷಗಳಿಂದ ಒಂದು ಬಾರಿಯೂ ಕಾಂಗ್ರೆಸ್ ಗೆದ್ದಿಲ್ಲ. ಶ್ರೀರಂಗಪಟ್ಟಣ ಹಾಗೂ ಮೇಲುಕೋಟೆ ಕ್ಷೇತ್ರಗಳಲ್ಲಿ ಕಳೆದ 15 ವರ್ಷಗಳಿಂದ ಕೈಗೆ ಅಧಿಕಾರ ಸಿಕ್ಕಿಲ್ಲ. ಮದ್ದೂರು ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ದಳವೇ ಗೆಲುವು ಸಾಧಿಸುತ್ತಿದೆ.
ಮದ್ದೂರಿನಲ್ಲಿ 8 ಬಾರಿ ಗೆದ್ದಿದ್ದ ಕೈ: ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ನೆಲ ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ 8 ಬಾರಿ ಗೆಲುವು ಸಾಧಿಸಿದೆ. ಆದರೆ, ಕಳೆದ 10 ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 1957ರ ಚುನಾವಣೆಯಲ್ಲಿ ಎಚ್.ಕೆ.ವೀರಣ್ಣಗೌಡರು ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗುತ್ತಾರೆ. 1967ರಲ್ಲಿ ಎಚ್.ಕೆ. ವೀರಣ್ಣಗೌಡರ ಅಳಿಯ ಎಂ.ಮಂಚೇಗೌಡ, 1972ರಲ್ಲಿ ಎ.ಡಿ.ಬಿಳಿಗೌಡ, 1983ರಲ್ಲಿ ಮತ್ತೆ ಮಂಚೇಗೌಡರು ಗೆಲುವು ಸಾಧಿಸಿದರು. 1984ರಲ್ಲಿ ನಡೆದ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನ ಜಯವಾಣಿ ಮಂಚೇಗೌಡ, 1989ರಲ್ಲಿ ಎಸ್.ಎಂ. ಕೃಷ್ಣ, 1999ರಲ್ಲಿ ಮತ್ತೆ ಎಸ್.ಎಂ.ಕೃಷ್ಣ ಹಾಗೂ 2004ರಲ್ಲಿ ಡಿ.ಸಿ.ತಮ್ಮಣ್ಣ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ. ನಂತರ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕಳೆದುಕೊಂಡಿದೆ.
ಆರು ಬಾರಿ ಕೈ ಹಿಡಿದಿದ್ದ ಶ್ರೀರಂಗನ ಬೀಡು: ಕೋಟೆ ಕೊತ್ತಲ ನಾಡು, ಶ್ರೀರಂಗನ ನೆಲೆಬೀಡು ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಆರು ಬಾರಿಗೆ ಗೆಲುವು ಸಾಧಿಸಿತ್ತು. 1952ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆ.ಪುಟ್ಟಸ್ವಾಮಿ ಮೊದಲ ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. 1957ರಲ್ಲಿ ಚುಂಚೇಗೌಡರು, 1962ರಲ್ಲಿ ಎ.ಜಿ.ಬಂದೀಗೌಡರು, 1972ರಲ್ಲಿ ದಮಯಂತಿ ಬೋರೇಗೌಡರು ಕಾಂಗ್ರೆಸ್‌ನಿಂದ ಗೆದ್ದು ಪ್ರಥಮ ಮಹಿಳಾ ಶಾಸಕಿಯಾಗಿದ್ದರು. 1989ರಲ್ಲಿ ಮತ್ತೆ ಎರಡನೇ ಬಾರಿಗೆ ದಮಯಂತಿ ಬೋರೇಗೌಡರು ಕಾಂಗ್ರೆಸ್‌ನಿಂದ ಚುನಾಯಿತರಾಗುತ್ತಾರೆ. 1999ರಲ್ಲಿ ಪಾರ್ವತಮ್ಮ ಶ್ರೀಕಂಠಯ್ಯ ಅವರು ಅನುಕಂಪದ ಅಲೆಯಲ್ಲಿ ಶಾಸಕಿಯಾಗಿ ಆಯ್ಕೆಯಾಗುತ್ತಾರೆ. ನಂತರ ಅಲ್ಲಿಂದ ಇದುವರೆಗೂ ಕಾಂಗ್ರೆಸ್ ಗೆದ್ದಿಲ್ಲ.
ಚಲುವನ ಬೀಡಲ್ಲಿ 5 ಬಾರಿ ವಿಜಯ ಪತಾಕೆ: ಮೇಲುಕೋಟೆ ಚಲುವನಾರಾಯಣಸ್ವಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಐದು ಬಾರಿ ವಿಜಯಪತಾಕೆ ಹಾರಿಸಿತ್ತು. 1952ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿ.ವೈ.ನೀಲೇಗೌಡರು ಮೊದಲ ಶಾಸಕರಾಗುತ್ತಾರೆ. 1962ರಲ್ಲಿ ಎರಡನೇ ಬಾರಿಗೆ ಮತ್ತೆ ಬಿ.ವೈ.ನೀಲೇ ಗೌಡರು ಜಯಗಳಿಸುತ್ತಾರೆ. 1972ರಲ್ಲಿ ಕಾಂಗ್ರೆಸ್ ಇಬ್ಭಾಗವಾದರೂ ಆಡಳಿತ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಹಲಗೇಗೌಡರು ಗೆಲುವು ಸಾಧಿಸುತ್ತಾರೆ. 1989 ರಲ್ಲಿ ಮತ್ತೆ ಡಿ.ಹಲಗೇಗೌಡರು ಶಾಸಕರಾಗು ತ್ತಾರೆ. 1999ರಲ್ಲಿ ಕೆ.ಕೆಂಪೇಗೌಡರು ಜಯಗಳಿಸಿ ಕಾಂಗ್ರೆಸ್ ಶಾಸಕರಾಗಿದ್ದರು. ನಂತರ ನಡೆದ 2004ರಿಂದಲೂ ಇಲ್ಲಿ ಕಾಂಗ್ರೆಸ್ ಪ್ರದರ್ಶನ ಹೀನಾಯವಾಗಿದೆ.
ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯಿಂದ ಪಕ್ಷಕ್ಕೆ ಹಿನ್ನೆಡೆ : ಜಿಲ್ಲೆಯಲ್ಲಿ ಪ್ರಬಲವಾಗಿದ್ದ ಕಾಂಗ್ರೆಸ್ ಹಿನ್ನೆಡೆ ಅನುಭವಿಸಲು ಪಕ್ಷದಲ್ಲಿನ ಒಳಬೇಗುದಿ, ಭಿನ್ನಾಭಿಪ್ರಾಯ, ಗುಂಪುಗಾರಿಕೆಯೇ ಕಾರಣವಾಗಿದೆ. ಮದ್ದೂರು ಕ್ಷೇತ್ರದಲ್ಲೂ ಮುಖಂಡರ ನಡುವಿನ ಒಗ್ಗಟ್ಟಿನ ಕೊರತೆ ಕಾಡುತ್ತಿದ್ದರೆ, ಮೇಲುಕೋಟೆಯಲ್ಲಿ ಪಕ್ಷದ ಕಾರ್ಯಕರ್ತರು ಛಿದ್ರವಾಗಿ ಜೆಡಿಎಸ್ ಹಾಗೂ ರೈತ ಸಂಘ ಸೇರ್ಪಡೆಯಾಗಿದ್ದಾರೆ. ಅಲ್ಲದೆ, ಪ್ರಬಲ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಇನ್ನುಳಿದಂತೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲೂ ಸಹ ಕಾರ್ಯಕರ್ತರು, ಮುಖಂಡರ ನಡುವಿನ ಅಂತರ ಹೆಚ್ಚಾಗಿದೆ. ಒಗ್ಗಟ್ಟು ಇಲ್ಲದಿರುವುದರಿಂದಲೇ ಕಾಂಗ್ರೆಸ್ ಸತತ 15 ವರ್ಷಗಳಿಂದ ಸೋಲುತ್ತಾ ಬಂದಿದೆ. ಮದ್ದೂರಿನಲ್ಲೂ ಪ್ರಬಲ ಅಭ್ಯರ್ಥಿಯ ಕೊರತೆ ಕಾಡಿತ್ತು. ಶ್ರೀರಂಗಪಟ್ಟಣದಲ್ಲಿ ಗೆಲ್ಲುವ ಅವಕಾಶಗಳಿದ್ದರೂ ಮುಖಂಡರು, ನಾಯಕರ ನಡುವಿನ ಮುಸುಕಿನ ಗುದ್ದಾಟದಿಂದ ಕೈ ನೆಲಕಚ್ಚುವಂತಾಗಿತ್ತು.
ಮದ್ದೂರು, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಪೈಪೋಟಿ: ಮುಂಬರುವ ಚುನಾವಣೆಯಲ್ಲಿ ಮದ್ದೂರು ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆಯೇ ಹೆಚ್ಚಾಗಿದೆ. ಮದ್ದೂರು ಕಾಂಗ್ರೆಸ್ ಪಕ್ಷದಿಂದ ಉಡುಗೊರೆಗಳ ಮೂಲಕವೇ ಗಮನ ಸೆಳೆದಿರುವ ಕದಲೂರು ಉದಯ್ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಹಾಲಿ ಶಾಸಕ ಡಿ.ಸಿ.ತಮ್ಮಣ್ಣಗೆ ಪ್ರಬಲ ಪೈಪೋಟಿ ಎದುರಾಗುವುದರಲ್ಲಿ ಸಂಶಯವಿಲ್ಲ. ಶ್ರೀರಂಗಪಟ್ಟಣ ಕ್ಷೇತ್ರದಲ್ಲೂ ಈ ಬಾರಿ ಕಾಂಗ್ರೆಸ್ ಗೆಲ್ಲುವ ಪಕ್ಷವಾಗಿ ಪ್ರಬಲವಾಗಿದ್ದು, ಒಗ್ಗಟ್ಟು ಅನಿವಾರ್ಯವಾಗಿದೆ.
-ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.