ನೂರರ ಗಂಟು ಯಾರಿಗೆ? ಈ ಕುರಿತ ಒಂದು ಸಮಗ್ರ ನೋಟ ಇಲ್ಲಿದೆ…
Team Udayavani, Mar 27, 2023, 6:10 AM IST
ವಿಧಾನಸಭೆ ಚುನಾವಣ ತಯಾರಿಯಲ್ಲಿರುವ ಕಾಂಗ್ರೆಸ್, ಈಗಾಗಲೇ 124 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು ಉಳಿದ 100 ಕ್ಷೇತ್ರಗಳ ಟಿಕೆಟ್ ಘೋಷಣೆಗೆ ತಯಾರಿ ನಡೆಸಿದೆ. ಈ ಉಳಿದ ನೂರು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಳೆದು ತೂಗಿ ಘೋಷಣೆ ಮಾಡುವ ಲೆಕ್ಕಾಚಾರದಲ್ಲಿದೆ ಕಾಂಗ್ರೆಸ್. ಹಾಗಾದರೆ ಗ್ರೌಂಡ್‌ನಲ್ಲಿ ಏನಾಗುತ್ತಿದೆ? ಎಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ? ಈ ಕುರಿತ ಒಂದು ಸಮಗ್ರ ನೋಟ ಇಲ್ಲಿದೆ…
ಮೈಸೂರು ಜಿಲ್ಲೆ; ಬಾಕಿ ಕ್ಷೇತ್ರ: 03
ಮೈಸೂರು ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಯುವ ಮುಖಂಡ ಎನ್.ಎಂ.
ನವೀನ್ ಕುಮಾರ್ ಮತ್ತು ಪಾಲಿಕೆ ಮಾಜಿ ಸದಸ್ಯ ಪ್ರದೀಪ್ ಕುಮಾರ್ ನಡುವೆ ಪೈಪೋಟಿ ಇದೆ. ಈ ಮೂವರೂ ಸಿದ್ದರಾಮಯ್ಯ ಬೆಂಬಲಿಗರೇ ಆಗಿದ್ದಾರೆ. ಸೋಮಶೇಖರ್ ಈಗಾಗಲೇ 2 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. ನವೀನ್‌ಕುಮಾರ್ ಮತ್ತು ಪ್ರದೀಪ್ ಕುಮಾರ್ ಹೊಸಬರು. ಚಾಮರಾಜದಲ್ಲಿ ಮಾಜಿ ಶಾಸಕ ವಾಸು ಮತ್ತು ಹರೀಶ್‌ಗೌಡ ನಡುವೆ ಜಿದ್ದಾಜಿದ್ದಿ ಇದೆ. ವಾಸು, ವೀರಪ್ಪ ಮೊಯ್ಲಿ ಆಪ್ತರು, ಹರೀಶ್‌ಗೌಡ ಸಿದ್ದರಾಮಯ್ಯ ನಿಕಟವರ್ತಿ. ಇನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಸಿದ್ದು ಆಪ್ತರ ನಡುವೆಯೇ ಪೈಪೋಟಿ ನಡೆದಿದೆ.
ಚಿಕ್ಕಬಳ್ಳಾಪುರ; ಬಾಕಿ ಕ್ಷೇತ್ರ: 02
ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಫೈನಲ್ ಆಗಿದ್ದು ಉಳಿದ ಎರಡರಲ್ಲಿ ಇನ್ನೂ ಆಗಿಲ್ಲ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಹಾಲಿ ಶಾಸಕ ವಿ.ಮುನಿಯಪ್ಪ ಅವರಿಗೆ ಟಿಕೆಟ್ ಅನುಮಾನ ಎಂಬ ಮಾತುಗಳಿವೆ. ಹೀಗಾಗಿ ಎಬಿಡಿ ಸಂಸ್ಥೆಯ ಅಧ್ಯಕ್ಷ ರಾಜೀವ್‌ಗೌಡ, ಎಸ್.ಎನ್.ಕ್ರಿಯಾ ಟ್ರಸ್ಟಿನ ಅಧ್ಯಕ್ಷ ಆಂಜಿನಪ್ಪ ಪುಟ್ಟು ನಡುವೆ ಪೈಪೋಟಿ ಇದೆ. ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರದಲ್ಲಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಯುತ್ತಿದೆ. ಇಲ್ಲಿ ಕೆಪಿಸಿಸಿ ಸದಸ್ಯ ವಿನಯ್ ಎನ್. ಶಾಮ…, ಜಿ.ಪಂ. ಮಾಜಿ ಅಧ್ಯಕ್ಷ ಗಂಗರು ಕಾಲುವೆ ನಾರಾಯಣಸ್ವಾಮಿ, ಹಿರಿಯ ಮುಖಂಡ ವಕೀಲ ನಾರಾಯಣಸ್ವಾಮಿ, ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ರಘು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ರಮೇಶ್ ನಡುವೆ ಪೈಪೋಟಿ ಇದೆ.
ರಾಮನಗರ; ಬಾಕಿ ಕ್ಷೇತ್ರ: 01
ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಟಿಕೆಟ್ ಘೋಷಣೆಯಾಗಿದೆ. ಮೊದಲ ಪಟ್ಟಿ ಘೋಷಣೆಯಾಗುತ್ತಿದ್ದಂತೆ, ಚನ್ನಪಟ್ಟಣದಲ್ಲಿ ಕೈ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಸನ್ನ ಪಿ.ಗೌಡ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದಾರೆ. ಇಲ್ಲಿ ಬಿಜೆಪಿಯಲ್ಲಿರುವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂಬ ಮಾತುಗಳಿವೆ. ಆದರೆ ಇನ್ನೂ ಖಚಿತವಾಗಿಲ್ಲ.
ಮಂಡ್ಯ ;ಬಾಕಿ ಕ್ಷೇತ್ರ: 04
ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಘೋಷಣೆಯಾಗಿದೆ. ಮಂಡ್ಯ ಕ್ಷೇತ್ರದಲ್ಲಿ 16 ಮಂದಿ ಆಕಾಂಕ್ಷಿಗಳಿರುವುದರಿಂದ ಫೈನಲ್ ಮಾಡಲಾಗಿಲ್ಲ. ಮದ್ದೂರು ಕ್ಷೇತ್ರಕ್ಕೆ ಕದಲೂರು ಉದಯ್ ಬಹುತೇಕ ಅಭ್ಯರ್ಥಿಯಾಗಲಿದ್ದು, ಘೋಷಣೆ ಬಾಕಿ ಉಳಿದಿದೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ 6 ಮಂದಿ ಆಕಾಂಕ್ಷಿತರಿದ್ದಾರೆ. ಆದರೂ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿರುವ ಬಿ.ಎಲ್.ದೇವರಾಜುಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಮೇಲುಕೋಟೆಯಲ್ಲಿ ಟಿಕೆಟ್‌ಗಾಗಿ ಆರು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಬಾರಿಯೂ ರೈತ ಸಂಘಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಿತ್ರದುರ್ಗ:ಬಾಕಿ ಕ್ಷೇತ್ರ: 03
ಮಾಜಿ ಸಚಿವ ಎಚ್.ಆಂಜನೇಯ ಪ್ರತಿನಿಧಿಸುತ್ತಿದ್ದ ಹೊಳಲ್ಕೆರೆ ಮೀಸಲು ವಿಧಾನಸಭಾ ಕ್ಷೇತ್ರ ಮೊದಲ ಪಟ್ಟಿಯಲ್ಲಿ ಇಲ್ಲ. ಜಿ.ಪಂ. ಮಾಜಿ ಸದಸ್ಯೆ ಸವಿತಾ-ರಘು ದಂಪತಿ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಚಿತ್ರದುರ್ಗ ಕ್ಷೇತ್ರದಿಂದ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಎಂಎಲ್‌ಸಿ ರಘು ಆಚಾರ್, ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ರೇಸ್‌ನಲ್ಲಿದ್ದಾರೆ. ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಅಲ್ಪಸಂಖ್ಯಾಕರಿಗೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ಡಿಸಿಸಿ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಮುಖಂಡ ಆರ್.ಕೆ. ಸರ್ದಾರ್ ಮತ್ತಿತರರು ಟಿಕೆಟ್ ಬಯಸಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಕಾಂಗ್ರೆಸ್ ಪಾಳೆಯದಿಂದ ಬಿಜೆಪಿ ಸೇರಿದ್ದಾರೆ. ಇಲ್ಲಿ ಪರಾಜಿತ ಅಭ್ಯರ್ಥಿ ಡಾ| ಯೋಗೀಶ್‌ಬಾಬು, ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ, ಎನ್.ವೈ. ಸುಜಯ್ ಆಕಾಂಕ್ಷಿಗಳಾಗಿದ್ದಾರೆ. ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಮೊಳಕಾಲ್ಮೂರಿನಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಶಿವಮೊಗ್ಗ; ಬಾಕಿ ಕ್ಷೇತ್ರ: 04
ಶಿವಮೊಗ್ಗ ನಗರ ಕ್ಷೇತ್ರದಲ್ಲಿ 11 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ವೀಕ್ಷಕರ ತಂಡ ಮೂರು ಜನರ ಹೆಸರನ್ನು ಶಿಫಾರಸು ಮಾಡಿದ್ದು, ಸದ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹಾಗೂ ಎಚ್.ಸಿ. ಯೋಗೇಶ್ ಹೆಸರು ಅಂತಿಮ ಪಟ್ಟಿಯಲ್ಲಿದೆ. ಮೀಸಲು ಕ್ಷೇತ್ರವಾಗಿರುವ ಶಿವಮೊಗ್ಗ ಗ್ರಾಮಾಂತರದಲ್ಲಿ ಕೆಪಿಸಿಸಿ ಸದಸ್ಯೆ ಪಲ್ಲವಿ, ಬಿಜೆಪಿಯಿಂದ ವಲಸೆ ಬಂದಿರುವ ನಾರಾಯಣಸ್ವಾಮಿ, ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ ಶ್ರೀನಿವಾಸ್ ಮುಂಚೂಣಿಯಲ್ಲಿದ್ದು, ಮೂವರೂ ಜಾತಿ ಮುಖಂಡರ ಮೂಲಕ ಟಿಕೆಟ್‌ಗೆ ಒತ್ತಡ ಹೇರುತ್ತಿದ್ದಾರೆ. ಶಿಕಾರಿಪುರದಲ್ಲಿ 8 ಮಂದಿ ಆಕಾಂಕ್ಷಿಗಳಿದ್ದು, ಎಲ್ಲರೂ ಒಗ್ಗಟ್ಟು ಕೂಡ ಪ್ರದರ್ಶಿಸಿದ್ದಾರೆ. ಗೋಣಿ ಮಾಲತೇಶ್ ಅಥವಾ ನಾಗರಾಜ ಗೌಡ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ತೀರ್ಥಹಳ್ಳಿಯಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಬೆಂಬಲಿಗರ ಟಿಕೆಟ್ ಫೈಟ್ ಜೋರಾಗಿದೆ. ಅರ್ಜಿ ಹಾಕಿದ ಮೂರು ಮಂದಿಯಲ್ಲಿ ಮಾಜಿ ಸಚಿವ ಕಿಮ್ಮನೆ ಹಾಗೂ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದ ಆರ್.ಎಂ.ಮಂಜುನಾಥ್‌ಗೌಡ ಮಧ್ಯೆ ಟಿಕೆಟ್ ಫೈಟ್ ಜೋರಾಗಿದೆ.
ಹಾವೇರಿ ; ಬಾಕಿ ಕ್ಷೇತ್ರ: 01
ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಇಲ್ಲಿ ಪ್ರಬಲ ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಸ್ಪರ್ಧಿಸುವಂತೆ ಹೈಕಮಾಂಡ್ ಒತ್ತಡ ಹಾಕುತ್ತಿದ್ದರೂ ಅವರು ಇನ್ನೂ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ. ಈ ಬಾರಿ ಸಿಎಂ ವಿರುದ್ಧ ಪಂಚಮಸಾಲಿ ಅಸ್ತ್ರ ಬಳಸಲು ಕಾಂಗ್ರೆಸ್ ಮುಂದಾಗಿದ್ದರಿಂದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಕೈ ಟಿಕೆಟ್ ಭರವಸೆ ಕಳೆದುಕೊಂಡಂತಿದೆ. ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನ ಮರ, ಶಶಿಧರ ಯಲಿಗಾರ ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದಾರೆ.
ಗದಗ ;ಬಾಕಿ ಕ್ಷೇತ್ರ: 02
ಎಸ್ಸಿ ಮೀಸಲು ಕ್ಷೇತ್ರ ಶಿರಹಟ್ಟಿಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಪಂ. ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಸಹಿತ ಇತರ 12 ಜನ ಅರ್ಜಿ ಸಲ್ಲಿಸಿದ್ದು ಪ್ರಚಾರವನ್ನೂ ಆರಂಭಿಸಿದ್ದಾರೆ. ಅಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದ್ದರಿಂದ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. ನರಗುಂದದಲ್ಲಿ ಮಾಜಿ ಸಚಿವ ಬಿ.ಆರ್.ಯಾವಗಲ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಐದು ಬಾರಿ ಶಾಸಕರಾಗಿರುವ ಬಿ.ಆರ್.ಯಾವಗಲ್‌ಗೆ ಡಾ| ಸಂಗಮೇಶ ಕೊಳ್ಳಿ, ಗಾಣಿಗ ಸಮುದಾಯದ ಮುಖಂಡ ದಶರಥ ಗಾಣಿಗೇರ, ಹಾಗೂ ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ತನಗೆ ಸಿಗದಿದ್ದರೆ ಪುತ್ರ ವಿವೇಕ ಯಾವಗಲ್‌ಗೆ ಟಿಕೆಟ್ ನೀಡವಂತೆ ಬಿ.ಆರ್.ಯಾವಗಲ್ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಇಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಡಬೇಕು ಎಂಬ ಕೂಗು ಹೆಚ್ಚಾಗಿದೆ.
ಕಲಬುರಗಿ; ಬಾಕಿ ಕ್ಷೇತ್ರ: 03
ಅಫಜಲಪುರ ಕ್ಷೇತ್ರದ ಹಾಲಿ ಶಾಸಕ ಎಂ.ವೈ. ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡಿಲ್ಲ. ವಯಸ್ಸಿನ ಕಾರಣ ನಾನು ಸ್ಪರ್ಧಿಸಲ್ಲ. ತಮ್ಮ ಮಗನಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಜತೆಗೆ ಎಂ.ವೈ. ಪಾಟೀಲರ ಪುತ್ರರಾದ ಜಿ.ಪಂ. ಮಾಜಿ ಸದಸ್ಯ ಅರುಣಕುಮಾರ ಪಾಟೀಲ, ವೈದ್ಯರಾದ ಡಾ|ಸಂಜು ಪಾಟೀಲ ನಡುವೆ ಟಿಕೆಟ್‌ಗೆ ಪೈಪೋಟಿ ಏರ್ಪಟ್ಟಿದೆ. ಸಿದ್ದು ಬೆಂಬಲಿಗ ರಾಜೇಂದ್ರ ಪಾಟೀಲ ರೇವೂರ ಕೂಡ ಟಿಕೆಟ್‌ಗೆ ದುಂಬಾಲು ಬಿದ್ದಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ಯುವ ಮುಖಂಡ ಸಂತೋಷ ಬಿಲಗುಂದಿ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಇಬ್ಬರೂ ಸಂಬಂಧದಲ್ಲಿ ಬೀಗರು. ಯಾರಿಗೆ ಕೊಟ್ಟರೆ ಸೂಕ್ತ ಎಂಬುದನ್ನು ಹೈಕಮಾಂಡ್ ಆತ್ಮಾವಲೋಕನ ನಡೆಸುತ್ತಿದೆ. ಕಲಬುರಗಿ ಗ್ರಾಮೀಣದಲ್ಲಿ ಈಚೆಗೆ ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ರೇವು ನಾಯಕ ಬೆಳಮಗಿ ಹಾಗೂ ಮಾಜಿ ಸಚಿವ ದಿವಂಗತ ಜಿ. ರಾಮಕೃಷ್ಣ ಪುತ್ರ ವಿಜಯಕುಮಾರ ರಾಮಕೃಷ್ಣ ನಡುವೆ ಟಿಕೆಟ್‌ಗಾಗಿ ತಿಕ್ಕಾಟ ನಡೆದಿದೆ.
ವಿಜಯಪುರ ; ಬಾಕಿ ಕ್ಷೇತ್ರ: 01
ಮಾಜಿ ಸಚಿವ ಎಸ್.ಆರ್. ಪಾಟೀಲ ದೇವರಹಿಪ್ಪರಗಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಲೇ ಕೈ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವ 10 ಆಕಾಂಕ್ಷಿಗಳೆಲ್ಲ ಒಟ್ಟಾಗಿ ಸಭೆ ಸಹಿತ ಪಕ್ಷದ ಹೈಕಮಾಂಡ್‌ಗೆ ಆಕ್ಷೇಪಣೆ ಸಂದೇಶ ರವಾನಿಸಿದ್ದಾರೆ. ಈಗಾಗಲೇ ನಾವೆಲ್ಲ ಚುನಾವಣೆಗೆ ಪಕ್ಷ ಸಂಘಟಿಸುತ್ತಿದ್ದೇವೆ. ನಮ್ಮಲ್ಲೇ ಯಾರಿಗಾದರೂ ಟಿಕೆಟ್ ನೀಡಿ ಎಂದಿದ್ದಾರೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಮಾತ್ರವಲ್ಲ ಭವಿಷ್ಯದಲ್ಲಿ ಪ್ರಕಟಿಸುವ ಎರಡನೇ ಪಟ್ಟಿಯಲ್ಲೂ ಈ ಕ್ಷೇತ್ರದ ಟಿಕೆಟ್ ಘೋಷಣೆ ಪಕ್ಷದ ವರಿಷ್ಠರಿಗೆ ಕಗ್ಗಂಟಾಗುವ ಸಾಧ್ಯತೆ ಇಲ್ಲದಿಲ್ಲ.
ಬಾಗಲಕೋಟೆ; ಬಾಕಿ ಕ್ಷೇತ್ರ: 05
ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ, ಕಾಂಗ್ರೆಸ್ ಒಬಿಸಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ|ದೇವರಾಜ ಪಾಟೀಲ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಈಟಿ ಟಿಕೆಟ್ ಕೇಳಿದ್ದಾರೆ. ಖರ್ಗೆ, ಪರಮೇಶ್ವರ, ಡಿಕೆಶಿ ದೇವರಾಜ ಪರ ಒಲುವು ತೋರಿದ್ದರೆ, ಸಿದ್ದರಾಮಯ್ಯ ಮೇಟಿ ಪರ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಬೀಳಗಿಯಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ ಟಿಕೆಟ್ ಕೇಳಿದ್ದಾರೆ. ಮಾಜಿ ಶಾಸಕ ಜೆ.ಟಿ. ಪಾಟೀಲ್‌ಗೆ ಟಿಕೆಟ್ ಕೊಟ್ಟರೆ ಬಂಡಾಯವಾಗಿ ಕಣಕ್ಕಿಳಿಯುತ್ತೇವೆಂದು ಕಾಂಗ್ರೆಸ್‌ನ ಕೆಲವು ಹಿರಿಯ ಮುಖಂಡರು ಬಹಿರಂಗ ಹೇಳಿದ್ದಾರೆ. ಇಲ್ಲಿ 9 ಮಂದಿ ಸ್ಪರ್ಧೆಯಲ್ಲಿದ್ದಾರೆ. ಮೀಸಲು ಕ್ಷೇತ್ರ ಮುಧೋಳದಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಸತೀಶ ಬಂಡಿವಡ್ಡರ ಮಧ್ಯೆ ಪೈಪೋಟಿ ಇದೆ. ಈ ಬಾರಿ ಟಿಕೆಟ್ ಕೊಟ್ಟರೆ ಗೆಲ್ಲುವೆ ಎಂದು ಸತೀಶ ಪಟ್ಟು ಹಿಡಿದ್ದಾರೆ. ತಿಮ್ಮಾಪುರ ಕೂಡ ಹಿರಿತನದ ಆಧಾರದ ಮೇಲೆ ತೀವ್ರ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಚಿವೆ ಉಮಾಶ್ರೀ ಕೂಡ ರೇಸಿನಲ್ಲಿದ್ದಾರೆ. ಒಟ್ಟಾರೆ 15 ಮಂದಿ ಪೈಪೋಟಿಯಲ್ಲಿದ್ದಾರೆ. ಇನ್ನು ಸಿದ್ದರಾಮಯ್ಯ ಪುನಃ ಬಾದಾಮಿಗೆ ಬರದಿದ್ದರೆ ಅವರ ಉತ್ತರಾಧಿಕಾರಿಯಾಗಿ ಹೊಳಬಸು ಶೆಟ್ಟರ ಇಲ್ಲವೇ ಎಂ.ಬಿ.ಹಂಗರಗಿ ಅವರಿಗೆ ಟಿಕೆಟ್ ಕೊಡಬೇಕೆಂದು ಒಂದು ಬಣ ಪಟ್ಟು ಹಿಡಿದರೆ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಪುತ್ರ ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸಗೌಡರ, ಅನಿಲ ದಡ್ಡಿ ಟಿಕೆಟ್ ಕೊಡಿ ಎಂದು ಕೇಳಿದ್ದಾರೆ.
ಉತ್ತರ ಕನ್ನಡ ;ಬಾಕಿ ಕ್ಷೇತ್ರ: 03
ಕುಮಟಾ-ಹೊನ್ನಾವರದಲ್ಲಿ 14 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಮಾಜಿ ಶಾಸಕಿ ಶಾರದಾ ಶೆಟ್ಟಿ ಟಿಕೆಟ್ ಆಕಾಂಕ್ಷಿ. ದೇಶಪಾಂಡೆ ಅವರನ್ನು ಕೇಳಿ ಕಾಂಗ್ರೆಸ್ ಒಂದು ನಿರ್ಣಯಕ್ಕೆ ಬರಲಿದೆ. ಶಿರಸಿ-ಸಿದ್ದಾಪುರದಲ್ಲಿ ಭೀಮಣ್ಣ ನಾಯ್ಕ ಅಭ್ಯರ್ಥಿ. ವಸಂತ ನಾಯ್ಕ ಮಾತ್ರ ಪಕ್ಷ ಹೇಳಿದರೆ ಸ್ಪರ್ಧೆಗೆ ರೆಡಿ ಅನ್ನುವ ಸ್ಥಿತಿಯಲ್ಲಿ ಇದ್ದಾರೆ. ಮುಂಡಗೋಡ ಯಲ್ಲಾಪುರ ಭಾಗದ ಪ್ರಭಾವಿ ಲಿಂಗಾಯತ ಮುಖಂಡ ವಿ.ಎಸ್.ಪಾಟೀಲ್ ಹೆಸರು ಬಹುತೇಕ ಫೈನಲ್. ಪಾಟೀಲರು ಕಾಂಗ್ರೆಸ್ ಸೇರುವ ಮುನ್ನ ಪ್ರಶಾಂತ ದೇಶಪಾಂಡೆ ಇಲ್ಲಿ ಆಕಾಂಕ್ಷಿಯಾಗಿದ್ದರು.
ದಾವಣಗೆರೆ ; ಬಾಕಿ ಕ್ಷೇತ್ರ: 04
ಹರಿಹರ ಕ್ಷೇತ್ರದ ಹಾಲಿ ಶಾಸಕ ಎಸ್. ರಾಮಪ್ಪ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡದಿರುವುದು ಇತರ ಆಕಾಂಕ್ಷಿತರಲ್ಲಿ ಆಸೆ ಮೂಡಿಸಿದೆ. ಮೊದಲಿನಿಂದಲೂ ಟಿಕೆಟ್ ನೀಡುವುದು ಅನುಮಾನ ಎಂಬುದು ಖಚಿತವಾದಂತಾಗಿದೆ. ಹೊನ್ನಾಳಿ ಕ್ಷೇತ್ರದಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಚನ್ನಗಿರಿಯಲ್ಲಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಜಗಳೂರಿನಲ್ಲಿ ಎಚ್.ಪಿ. ರಾಜೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮೊದಲ ಪಟ್ಟಿಯಲ್ಲಿ ಇವರ್ಯಾರ ಹೆಸರು ಘೋಷಣೆ ಆಗಿಲ್ಲ. ಹೊನ್ನಾಳಿ ಯಲ್ಲಿ ಕೈ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಅವರಿಗೇ ಟಿಕೆಟ್ ಎಂಬ ಮಾತು ಕೇಳಿ ಬರುತ್ತಿದೆ. ವಡ್ನಾಳ್ ರಾಜಣ್ಣ, ಎಚ್.ಪಿ. ರಾಜೇಶ್ ಟಿಕೆಟ್ ಘೋಷಣೆಯಾಗುವ ನಿರೀಕ್ಷೆಯಲ್ಲಿದ್ದಾರೆ.
ಉಡುಪಿ ;ಬಾಕಿ ಕ್ಷೇತ್ರ: 02
ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಅನಂತರ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಬೆಳೆಸುವಲ್ಲಿ ತುಸು ಹಿನ್ನಡೆಯಾಗಿದೆ. ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸಹಿತ 8 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ಬಣ್ಣದಲ್ಲಿ ಗುರುತಿಸಿಕೊಂಡವರೂ ಇದ್ದಾರೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿಕಟ ಸಂಪರ್ಕದಲ್ಲಿರುವ ವರೂ ಇದ್ದಾರೆ. ಬಿಜೆಪಿ ಇಲ್ಲಿ ಅಭ್ಯರ್ಥಿ ಬದಲಿಸಬಹುದು ಎಂಬ ವದಂತಿಯೂ ಇರುವುದರಿಂದ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿರುವುದನ್ನೂ ತಳ್ಳಿ ಹಾಕುವಂತಿಲ್ಲ. ಕಾರ್ಕಳದಲ್ಲಿ ನಾಲ್ವರು ಈಗಾಗಲೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮುನಿಯಾಲು ಉದಯ ಕುಮಾರ್ ಶೆಟ್ಟಿಯವರ ಹೆಸರೂ ಈಗ ಹೆಚ್ಚೆಚ್ಚು ಕೇಳಿ ಬರುತ್ತಿದೆ. ಈ ಕ್ಷೇತ್ರದ ಮಟ್ಟಿಗೆ ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿಯವರ ಪ್ರಭಾವವೂ ಇರುವುದರಿಂದ ಅವರು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಹೈಕಮಾಂಡ್ ಜತೆಗೆ ನೇರ ಸಂಪರ್ಕ ಹೊಂದಿರುವುದರಿಂದ ರಾಜ್ಯ ಕಾಂಗ್ರೆಸ್ ಕೂಡ ಅವರ ಅಭಿಪ್ರಾಯ ಅವಗಣಿಸಲು ಸಾಧ್ಯವಿಲ್ಲ. ಡಿ.ಕೆ. ಶಿವಕುಮಾರ್ ಅವರ ಆಪ್ತರೊಬ್ಬರು ಅರ್ಜಿ ಸಲ್ಲಿಸದೆಯೇ ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯಿಂದ ಪ್ರಭಾವಿಯೊಬ್ಬರನ್ನು ಪಕ್ಷಕ್ಕೆ ಆಹ್ವಾನಿಸಿ, ಟಿಕೆಟ್ ನೀಡುವ ಪ್ರಯತ್ನವೂ ಕೆಪಿಸಿಸಿ ಮಟ್ಟದಲ್ಲಿ ಚಾಲ್ತಿಯಲ್ಲಿದೆ.
ಯಾದಗಿರಿ ; ಬಾಕಿ ಕ್ಷೇತ್ರ: 02
ಯಾದಗಿರಿಯಲ್ಲಿ ಎಐಸಿಸಿ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಖರ್ಗೆ ಕಟ್ಟಾಭಿಮಾನಿ, ಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ತುನ್ನೂರ ಅವರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಕೈ ನಾಯಕರ ಲೆಕ್ಕಾಚಾರ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಪ್ತ, ಮಾಜಿ ಸಚಿವ ಡಾ| ಎ.ಬಿ.ಮಾಲಕರೆಡ್ಡಿ ಪುತ್ರಿ ಅನುರಾಗ ಮಾಲಕರೆಡ್ಡಿಗೆ ಟಿಕೆಟ್ ಸಿಗುವುದು ಖಚಿತ ಎನ್ನಲಾಗುತ್ತಿದೆ. ಅವರಿಗೆ ಟಿಕೆಟ್ ಘೋಷಣೆ ಯಾದಲ್ಲಿ ಖರ್ಗೆ ಬೆಂಬಲಿಗ ಚೆನ್ನಾರೆಡ್ಡಿ ತುನ್ನೂರ ಬಂಡಾಯ ವೇಳುವುದು ಖಚಿತ ಎನ್ನಲಾಗುತ್ತಿದೆ. ಗುರುಮಠಕಲ್‌ನಲ್ಲಿ ಇದುವರೆಗೆ ಬಂಡಾಯ ಇರಲಿಲ್ಲ. ಆದರೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆದಂದಿನಿಂದ ಒಳಗೊಳಗೆ ಅಸಮಾಧಾನವಿದ್ದರೂ ಖರ್ಗೆ ಕಟ್ಟಪ್ಪಣೆಯಿಂದ ಯಾರು ಚಿಂಚನಸೂರ ವಿರುದ್ಧ ಧ್ವನಿ ಎತ್ತುವ ಗೋಜಿಗೆ ಹೋಗಿಲ್ಲ. ಆದರೆ ಚಿಂಚನಸೂರ ಗೆಲುವಿಗೆ ಮಗ್ಗಲು ಮುಳ್ಳಾಗುವ ಲಕ್ಷಣಗಳಂತೂ ಇವೆ.
ಬೆಳಗಾವಿ; ಬಾಕಿ ಕ್ಷೇತ್ರ: 09ಕಿತ್ತೂರಿನಲ್ಲಿ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಡಿ.ಬಿ.ಇನಾಂದಾರ ಮತ್ತು ಬಾಬಾಸಾಹೇಬ ಪಾಟೀಲ ಅರ್ಜಿ ಸಲ್ಲಿಸಿದ್ದು ಬಾಬಾಸಾಹೇಬ ಅವರ ಹೆಸರು ಮುಂಚೂಣಿಯಲ್ಲಿದೆ. ಅಲ್ಲದೆ
ಇನಾಮದಾರ ಇಲ್ಲದಿದ್ದರೆ ಅವರ ಸೊಸೆ ಲಕ್ಷ್ಮೀ ಅವರಿಗೆ ಟಿಕೆಟ್ ನೀಡಬೇಕು ಎಂದು ಸಭೆ ನಡೆಸಿರುವುದು ಕಗ್ಗಂಟಾಗಿದೆ. ಇನಾಮದಾರ ದಿಲ್ಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರೆ, ಬಾಬಾಸಾಹೇಬ ಪಾಟೀಲ ಡಿ.ಕೆ.ಶಿವಕುಮಾರ ಬಲದಿಂದ ಟಿಕೆಟ್‌ಗೆ ಪ್ರಯತ್ನ ಮಾಡುತ್ತಿ ದ್ದಾರೆ. ಇವರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ಬೆಂಬಲವಾಗಿ ನಿಂತಿದ್ದಾರೆ. ಬೆಳಗಾವಿ ಉತ್ತರ ಕ್ಷೇತ್ರಕ್ಕೆ ಮಾಜಿ ಶಾಸಕ ಫಿರೋಜ್ ಸೇಠ್ ಸಹಿತ ಹಲವರು ರೇಸಿನಲ್ಲಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಒಬ್ಬರು ಅಲ್ಪಸಂಖಾಕ ಸಮುದಾಯವರಿಗೆ ಟಿಕೆಟ್ ನೀಡಬೇಕಿರುವುದರಿಂದ ಫಿರೋಜ್ ಸೇಠ್ ಹೆಸರು ಮುಂಚೂಣಿಯಲ್ಲಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಈ ಬಾರಿ ಜೈನ, ಮರಾಠಾ ಅಥವಾ ಲಿಂಗಾಯತ ಸಮಾಜದ ವ್ಯಕ್ತಿಗೆ ಟಿಕೆಟ್ ಕೊಡಬೇಕು ಎಂಬ ಲೆಕ್ಕಾಚಾರದಲ್ಲಿ ಪಕ್ಷದ ನಾಯಕರಿದ್ದಾರೆ. ಈಗಾಗಲೇ ಜಿ.ಪಂ. ಮಾಜಿ ಸದಸ್ಯ ರಮೇಶ ಗೋರಲ್, ಚಂದ್ರಹಾಸ ಅರ್ಜಿ ಸಲ್ಲಿಸಿ ದ್ದಾರೆ. ಇವರ ನಡುವೆ ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಪ್ರಭು ಯತ್ನಟ್ಟಿ ಮತ್ತು ಪ್ರಭಾವತಿ ಚಾವಡಿ ಹೆಸರು ಮುಖ್ಯ ವಾಗಿ ಪ್ರಸ್ತಾವವಾಗಿದೆ.
ಅರಭಾವಿ ಕ್ಷೇತ್ರದಲ್ಲಿ ಮೂಲಗಳ ಪ್ರಕಾರ ಸತೀಶ್ ಜಾರಕಿಹೊಳಿ ತಮ್ಮ ಬೆಂಬಲಿಗರಾದ ಅರವಿಂದ ದಳವಾಯಿ ಇಲ್ಲವೇ ಬಿ.ಬಿ.ಹಂದಿಗುಂದ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹಾಕಿದ್ದಾರೆ. ಇನ್ನೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣಕ್ಕೆ ಹತ್ತಿರವಾಗಿರುವ ಸಮಾಜ ಸೇವಕ ಭೀಮಪ್ಪ ಗಡಾದ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಗೋಕಾಕದಲ್ಲಿ ಟಿಕೆಟ್ ನೀಡುವ ಖಚಿತ ಭರವಸೆ ಮೇರೆಗೆ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವ ಅಶೋಕ ಪೂಜಾರಿ ತಮ್ಮ ಹೆಸರು ಬದಲಾಗುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ. ಮೇಲಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಹ ಪೂಜಾರಿಗೆ ಟಿಕೆಟ್ ಅಭಯ ನೀಡಿದ್ದಾರೆ. ಪೂಜಾರಿ ಹೊರತುಪಡಿಸಿ ಚಂದ್ರಶೇಖರ ಕೊಣ್ಣೂರ, ಮಹಾಂತೇಶ ಕಡಾಡಿ, ಪ್ರಕಾಶ ಬಾಗೋಜಿ, ಗೌಡಪ್ಪ ಹೊಳೆಯಾಚಿ ಸಹ ಅರ್ಜಿ ಸಲ್ಲಿಸಿದ್ದಾರೆ. ಸವದತ್ತಿಯಲ್ಲಿ ಕಳೆದ ಡಿ. ಕೆ. ಶಿವಕುಮಾರ್ ಮತ್ತು ಹೆಬ್ಬಾಳ್ಕರ್ ಅವರಿಗೆ ಬೇಕಾಗಿರುವ ಪಂಚನಗೌಡ ದ್ಯಾಮನಗೌಡರ ಪ್ರಮುಖ ಆಕಾಂಕ್ಷಿಯಾಗಿ ದ್ದರೆ ಸತೀಶ್ ಜಾರಕಿಹೊಳಿ ಗುಂಪಿ ನಿಂದ ವಿಶ್ವಾಸ ವೈದ್ಯ ಮುಂಚೂಣಿಯಲ್ಲಿದ್ದಾರೆ.
ಇನ್ನೊಂದು ಕಡೆ ಸೌರಭ ಛೋಪ್ರಾ ಸಹ ಪ್ರಬಲ ಆಕಾಂಕ್ಷಿಯ ಪಟ್ಟಿಯಲ್ಲಿದ್ದಾರೆ. ಅಥಣಿಯಲ್ಲಿ ಹಿರಿಯ ಕಾರ್ಯಕರ್ತರಾದ ಗಜಾನನ ಮಂಗಸೂಳಿ, ಎಸ್.ಕೆ.ಬುಟಾಳೆ ಮತ್ತು ಧರೆಪ್ಪ ಠಕ್ಕನವರ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ನಿಪ್ಪಾಣಿಯಲ್ಲಿ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಮುಂಚೂ ಣಿಯಲ್ಲಿದ್ದಾರೆ. ಆದರೆ ಅವರಲ್ಲಿ ಕೆಲವು ಸಮಸ್ಯೆಗಳಿರು ವುದರಿಂದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮತ್ತು ಮರಾಠಿ ಸಮುದಾಯದ ರೋಹನ್ ತಾಳ್ವೆ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿವೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ರಾಯಬಾಗ ಕ್ಷೇತ್ರವನ್ನು ಸತೀಶ್ ಜಾರಕಿ ಹೊಳಿ ಈ ಬಾರಿ ಪ್ರತಿಷ್ಠೆ ಯನ್ನಾಗಿ ತೆಗೆದುಕೊಂಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಮಹಾವೀರ ಮೋಹಿತೆ ಹೆಸರು ಬಹುತೇಕ ಅಂತಿಮವಾಗಿದೆ. ಇನ್ನೊಂದು ಕಡೆ ತಮಿಳುನಾಡು ಸರಕಾರದಲ್ಲಿ ಉನ್ನತ ಸ್ಥಾನದಲ್ಲಿದ್ದ ಹಿರಿಯ ಐಎಎಸ್ ಅಧಿಕಾರಿ ಶಂಭು ಕಲ್ಲೊಳಕರ ಚುನಾವಣ ಕಣಕ್ಕೆ ಇಳಿಯು ತ್ತಿರುವದು ಮತ್ತು ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವುದು ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.