ಹಳೆಮುಖ, ಹೊಸಮುಖ: ಈ ಬಾರಿಯ ಸ್ಪರ್ಧೆಗೂ ತ್ರಿಮುಖ
Team Udayavani, May 6, 2023, 6:50 AM IST
ಮಂಗಳೂರು: ಬಂದರು, ಪ್ರಮುಖ ಕೈಗಾರಿಕೆಗಳಾದ ಎಂಆರ್‌ಪಿಎಲ್, ಒಎನ್‌ಜಿಸಿ, ಎಂಸಿಎಫ್ ಹಾಗೂ ಪ್ರವಾಸೋದ್ಯಮ ತಾಣಗಳನ್ನೂ ಹೊಂದಿರುವ ಕ್ಷೇತ್ರ ಮಂಗಳೂರು ನಗರ ಉತ್ತರ. ಮಂಗಳೂರು ಪಾಲಿಕೆ ಮತ್ತು ಗ್ರಾಮ ಪಂಚಾಯತ್ ಆಳ್ವಿಕೆಯ ವ್ಯಾಪ್ತಿಯನ್ನು ಹೊಂದಿದೆ. ನಗರ ಮತ್ತು ಹಳ್ಳಿಗಳ ಸಂಗಮ ಈ ಕ್ಷೇತ್ರದ ವೈಶಿಷ್ಟé.
ಪ್ರಸ್ತುತ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿಯಂತೆ ತೋರುತ್ತಿದ್ದರೂ ಜೆಡಿಎಸ್‌ಗೂ ಇಬ್ಬರ ತಲೆಶೂಲೆ ಹೆಚ್ಚಿಸುವ ಸಾಮರ್ಥ್ಯ ಇದೆ. ಯಾಕೆಂದರೆ ಈ ಹಿಂದೆ ಕಾಂಗ್ರೆಸ್‌ನಿಂದ ಶಾಸಕರಾಗಿದ್ದವರು, ಈ ಬಾರಿಯೂ ಟಿಕೆಟ್‌ಗೆ ವಿನಂತಿಸಿದರೂ ಬೇರೆಯವರ ಪಾಲಾಯಿತು. ಆಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಅದೇ ಕುತೂಹಲದ ಕೇಂದ್ರ ಬಿಂದು. ಕಾಂಗ್ರೆಸ್ ಹೊಸ ಮುಖಕ್ಕೆ ಆದ್ಯತೆ ನೀಡಿದೆ. ಹಾಗಾಗಿ ಕಾಂಗ್ರೆಸ್‌ನಿಂದ ಇನಾಯತ್ ಅಲಿ, ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಡಾ| ವೈ. ಭರತ್ ಶೆಟ್ಟಿ, ಜೆಡಿಎಸ್ ನಿಂದ ಮೊದಿನ್ ಬಾವ ಸ್ಪರ್ಧಿಸಿದ್ದಾರೆ.
ಕಣದಲ್ಲಿ ಬಿಜೆಪಿಗೆ ಕಳೆದ ಬಾರಿಯ ಅಭಿವೃದ್ಧಿ ಕೆಲಸಗಳ ಜತೆಗೆ ಕೆಲವು ಭಾವನಾತ್ಮಕ ವಿಷಯಗಳೂ ಪ್ರಾಮುಖ್ಯ ಪಡೆದಿತ್ತು. ಅದೇ ರೀತಿ, ಈ ಬಾರಿಯೂ ಬಿಜೆಪಿ ಅಭಿವೃದ್ಧಿ, ಹಿಂದುತ್ವ ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ಇಳಿದಿದೆ. ಕಾರ್ಯಕರ್ತರ ಜತೆ ಉತ್ತಮ ಒಡನಾಟ ಹೊಂದಿರುವ ಭರತ್ ಶೆಟ್ಟಿ ಅವರು ಸಂಘ ಪರಿವಾರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ಅವಧಿ ಬಿಜೆಪಿ ಪರವಾಗಿದ್ದ ಒಲವನ್ನು ಮತ್ತೆ ನಗದೀಕರಿಸಿಕೊಳ್ಳಲು ಬಿಜೆಪಿ ತಂಡ ಶ್ರಮಿಸುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಬಜರಂಗದಳ ಕುರಿತ ಪ್ರಸ್ತಾವವೂ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲೂ ಬಹುದು.
ಅದೇ ರೀತಿ, ಕಾಂಗ್ರೆಸ್ “ಯುವ ಟ್ರಂಪ್ ಕಾರ್ಡ್’ ಇಟ್ಟು ಜನರ ಬಳಿ ಹೋಗಿದೆ. ಬಿಜೆಪಿ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಿನ್ನಡೆಯಾಗಿದೆ ಎಂದು ಮನವರಿಕೆ ಮಾಡಲು ಪ್ರಯತ್ನಿಸುತ್ತಿದೆ. ಅಲಿ ಅವರು ಕೋವಿಡ್ ಅವಧಿಯಲ್ಲಿ ಜನರಿಗೆ ಸ್ಪಂದಿಸಿ ಸಂಬಂಧ ಸ್ಥಾಪಿಸಿಕೊಂಡವರು. ಮೊದಿನ್ ಬಾವ ಅವರ ಜತೆ ಕಾಂಗ್ರೆಸ್‌ನಲ್ಲಿದ್ದ ಹೆಚ್ಚಿನ ಕಾರ್ಯಕರ್ತರು ಕಾಂಗ್ರೆಸ್‌ನಲ್ಲೇ ಇದ್ದಂತೆ ತೋರುತ್ತಿದೆ. ಆದರೂ ಜೆಡಿಎಸ್‌ನಿಂದ ಮೊದಿನ್ ಬಾವ ಅವರ ಸ್ಪರ್ಧೆ ಕಾಂಗ್ರೆಸ್‌ಗೆ ಮಗ್ಗುಲ ಮುಳ್ಳಾಗಿದೆ. ಜತಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಇಬ್ಬರೂ ಅಭ್ಯರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಹೀಗಾಗಿ ಆ ಸಮುದಾಯದ ಮತ ವಿಭಜನೆಯ ಪ್ರಮಾಣ ಫಲಿತಾಂಶದ ಏರುಪೇರಿಗೆ ಕಾರಣವಾಗಲೂಬಹುದು.
ಕಾಂಗ್ರೆಸ್‌ನಿಂದ ಕೊನೆಯ ಕ್ಷಣದಲ್ಲಿ ಟಿಕೆಟ್ ವಂಚಿತರಾದ ಮಾಜಿ ಶಾಸಕ ಮೊದಿನ್ ಬಾವ ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬಾವ ಅವರ ಪರವಾಗಿ ಪ್ರಚಾರ ಸಭೆ ನಡೆಸಿದರು. ಮೇ 6ರಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಬರುವ ನಿರೀಕ್ಷೆ ಇದೆ. ಶಾಸಕರಾಗಿದ್ದಾಗ ತಾವು ಮಾಡಿದ ಅಭಿವೃದ್ಧಿ ಕೆಲಸಗಳು ಮೊದಿನ್ ಬಾವ ಆವರಿಗೆ ಆನುಕೂಲಕರ ವಾತಾವರಣ ನಿರ್ಮಿಸಬಹುದು. ಇದರೊಂದಿಗೆ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತ ಎಂಬುದೂ ಒಂದಿಷ್ಟು ಅನುಕಂಪದ ಮತಗಳನ್ನೂ ತಂದುಕೊಡಬಹುದು.
ಜಿಲ್ಲೆಯಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಮಂದಿ ಸ್ಪರ್ಧಿಗಳಿದ್ದಾರೆ. ಆಮ್‌ಆದ್ಮಿ ಪಕ್ಷ, ಹಿಂದೂ ಮಹಾಸಭಾ ಮತ್ತಿತರ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದು, ಕುತೂಹಲ ಮೂಡಿಸಿದೆ.
ಕಣದಲ್ಲಿರುವ ಅಭ್ಯರ್ಥಿಗಳು 10
- ಡಾ| ಭರತ್ ಶೆಟ್ಟಿ ವೈ (ಬಿಜೆಪಿ)
- ಇನಾಯತ್ ಅಲಿ (ಕಾಂಗ್ರೆಸ್)
- ಮೊದಿನ್ ಬಾವ (ಜೆಡಿಎಸ್)
- ಸಂದೀಪ್ ಪಿ.ಶೆಟ್ಟಿ (ಎಎಪಿ)
- ಧರ್ಮೇಂದ್ರ (ಅ.ಭಾ.ಹಿಂ.ಮಹಾಸಭಾ)
- ಬಿ. ಪ್ರವೀಣ್‌ಚಂದ್ರ ರಾವ್ (ಎಚ್‌ಜೆಪಿ)(ಎಸ್)
- ಪ್ರಶಾಂತ (ಉತ್ತಮ ಪ್ರಜಾಕೀಯ ಪಾರ್ಟಿ)
- ಯಶೋದಾ (ಕರ್ನಾಟಕ ರಾಷ್ಟ್ರ ಸಮಿತಿ)
– ಮೆಕ್ಸಿಂ ಪಿಂಟೋ (ಪಕ್ಷೇತರ)
– ಎಚ್. ವಿನಯ ಆಚಾರ್ಯ (ಪಕ್ಷೇತರ)
ಲೆಕ್ಕಾಚಾರ ಏನು?
ಮುಖ್ಯವಾಗಿ ತ್ರಿಕೋನ ಸ್ಪರ್ಧೆಯ ಲಕ್ಷಣಗಳಿವೆ. ಅಭಿವೃದ್ಧಿ ಮತ್ತು ಭಾವನಾತ್ಮಕ ವಿಷಯಗಳಲ್ಲಿ ಯಾವುದು ಮುನ್ನೆಲೆಗೆ ಬರುತ್ತದೆ ಎನ್ನುವುದು ಇಲ್ಲಿ ಮುಖ್ಯ. ಫಲಿತಾಂಶ ನಿರ್ಧಾರವಾಗುವುದೂ ಈ ಅಂಶಗಳ ನೆಲೆಯಲ್ಲೇ.
– ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.