karnataka polls 2023: ಬೆಳಗಾವಿಯಲ್ಲಿ 305 ಜನ ಸ್ಪರ್ಧಿಸಿದ್ದರು!
ಕಂಗಾಲಾಗಿದ್ದ ಚುನಾವಣ ಆಯೋಗ; ಎಂಇಎಸ್ ಪುಂಡರ ವಿರುದ್ಧ ಸಿಡಿದೆದ್ದಿದ್ದ ಕನ್ನಡಿಗರು
Team Udayavani, Apr 6, 2023, 6:15 AM IST
ಬೆಳಗಾವಿ: ಅದು 38 ವರ್ಷಗಳ ಹಿಂದಿನ ಮಾತು. ಗಡಿ ಭಾಗದ ಬೆಳಗಾವಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಬಹಳ ತೀವ್ರತೆ ಪಡೆದುಕೊಂಡಿತ್ತು. ಪ್ರತಿಭಟನೆ, ಗಲಭೆ, ಹಿಂಸಾಚಾರ ನಡೆಯದ ದಿನಗಳು ಬಹಳ ಕಡಿಮೆ ಎನ್ನುವ ವಾತಾವರಣ ಇತ್ತು. ಕನ್ನಡ ಹೋರಾಟಗಾರರು ಸಹ ಪದೇ ಪದೇ ಗಡಿ ವಿವಾದ ಕೆಣಕುತ್ತಿದ್ದ ಮಹಾರಾಷ್ಟ್ರ ಪರ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುತ್ತಲೇ ಬಂದಿದ್ದರು.
ಕನ್ನಡ ಹೋರಾಟಗಾರರ ಈ ತಿರುಗೇಟು ವಿಧಾನಸಭೆ ಚುನಾವಣೆಯಲ್ಲಿ ಹೊಸ ರೂಪ ಪಡೆದುಕೊಂಡಿತ್ತು. ಚುನಾವಣೆಯ ಸಮಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಮಹಾರಾಷ್ಟ್ರದ ವಿರುದ್ಧದ ತಮ್ಮ ಹೋರಾಟ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯ ಬೇಕು ಎಂಬ ಉದ್ದೇಶದಿಂದ ಕನ್ನಡ ಹೋರಾಟಗಾರರು ಚುನಾವಣೆಯಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳನ್ನು ನಿಲ್ಲಿಸಲು ಒಂದು ವಿನೂತನ ಹಾದಿ ಕಂಡುಕೊಂಡಿದ್ದರು. ಅದರಂತೆ 1985ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್, ಜನತಾಪಕ್ಷ ಸಹಿತ 305 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 303 ಅಭ್ಯರ್ಥಿಗಳು ಕನ್ನಡಿಗರೇ ಇದ್ದರು ಎಂಬುದು ವಿಶೇಷ.
ಅಚ್ಚರಿಯ ಸಂಗತಿ ಎಂದರೆ ಈ ಚುನಾವಣೆ ಹಾಗೂ ಕನ್ನಡಿಗರ ಸ್ಪರ್ಧೆ ಮುಂದೆ ದೇಶದಲ್ಲಿ ಚುನಾವಣೆ ನಿಯ ಮಗಳ ಬದಲಾವಣೆಗೂ ಕಾರಣವಾಯಿತು. ಚುನಾವಣೆ ಯಲ್ಲಿ ಎಂಇಎಸ್‌ನವರು ಯಾವಾಗಲೂ ಖೊಟ್ಟಿ ಮತದಾನ ಮಾಡುತ್ತಲೇ ಗೆಲ್ಲುತ್ತಿದ್ದಾರೆ ಎಂದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವುದು ಇದರ ಉದ್ದೇಶವಾಗಿತ್ತು.
ಗಡಿ ವಿವಾದ ತೀವ್ರ ಸ್ವರೂಪ ಪಡೆದ ಈ ಸಮಯದಲ್ಲಿ ಕೇಂದ್ರ ಹಾಗೂ ಮಹಾರಾಷ್ಟ್ರದ ನಾಯಕರು ಎಂಇಎಸ್ ಪರ ನಿಂತಿರಲಿಲ್ಲ. ಇದರಿಂದ ಅಘಾತಗೊಂಡಿದ್ದ ಎಂಇಎಸ್ ನಾಯಕರು ಗಡಿ ಭಾಗದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲ ರೀತಿಯ ಕಸರತ್ತು ನಡೆಸಿದ್ದರು. ಖೊಟ್ಟಿ ಮತದಾನದ ಮೊರೆ ಹೋಗಿದ್ದರು ಎಂಬ ಆರೋಪ ಸಹ ಆಗ ಕೇಳಿಬಂದಿತ್ತು.
ಸಂಪಾದಕರ ವೇದಿಕೆ ನಿರ್ಮಾಣ: ಆಗ ಗಡಿ ಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದ ಕನ್ನಡ ಪತ್ರಿಕೆಗಳ ಸಂಪಾದಕರು ಒಮ್ಮತದಿಂದ ಸಂಪಾದಕರ ವೇದಿಕೆ ನಿರ್ಮಿಸಿಕೊಂಡು ಎಂಇಎಸ್‌ನ ಖೊಟ್ಟಿ ಮತದಾನ ಹಾಗೂ ದಬ್ಟಾಳಿಕೆಯ ಬಗ್ಗೆ ದೇಶದ ಗಮನ ಸೆಳೆಯಲು 1985ರಲ್ಲಿ ಚುನಾವಣೆ ಚಳವಳಿಗೆ ಚಾಲನೆ ನೀಡಿದರು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗಕ್ಕೆ ಪತ್ರ ಬರೆದರು. ಆದರೆ ಆಯೋಗದಿಂದ ಉತ್ತರ ಬರಲಿಲ್ಲ. ಇದರಿಂದ ಬೇಸರಗೊಂಡಿದ್ದ ಕನ್ನಡ ಪರ, ದಲಿತ ಸಂಘಟನೆ, ಮಹಿಳಾ ಮಂಡಳದ ಸದಸ್ಯರು ಸಹಿತ ಪಕ್ಷಾತೀತ ಬೆಂಬಲ ಹಾಗೂ ಹಣಕಾಸು ಸಹಾಯದೊಂದಿಗೆ ಎಂಇಎಸ್ ವಿರುದ್ಧ ಸ್ಪರ್ಧೆ ಮಾಡಿದರು. ಇದು ದೇಶದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿತು.
1985ರಲ್ಲಿ ನಡೆದ ಚುನಾವಣೆಗೆ ಒಟ್ಟು 314 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆರು ನಾಮಪತ್ರಗಳು ತಿರಸ್ಕೃತವಾದವು. ಮೂವರು ನಾಮಪತ್ರ ವಾಪಸ್ ಪಡೆದುಕೊಂಡರು. ಅಂತಿಮವಾಗಿ ಕಣದಲ್ಲಿ ಉಳಿದವರು 305. ಇದು ಚುನಾವಣ ಆಯೋಗಕ್ಕೆ ಬಹಳ ತಲೆನೋವಾಗಿ ಪರಿಣಮಿಸಿತು. ಯಾರಿಗೆ ಯಾವ ಚಿಹ್ನೆ ಕೊಡಬೇಕು ಎಂಬ ಗಲಿಬಿಲಿ ಉಂಟಾದಾಗ ಸಾಕಷ್ಟು ಪರಾಮರ್ಶೆ ನಡೆಸಿದ ಆಯೋಗ ರಾಷ್ಟ್ರೀಯ ಪಕ್ಷ ಹೊರತುಪಡಿಸಿ ಉಳಿದ 303 ಅಭ್ಯರ್ಥಿಗಳಿಗೆ ಅವರು ಕೇಳಿದ ಚಿಹ್ನೆ ನೀಡಿತು.
ಬದಲಾವಣೆಗೆ ಮುನ್ನುಡಿ: ಇನ್ನೊಂದು ಕಡೆ ಅಭ್ಯರ್ಥಿಗಳು ಮೃತಪಟ್ಟರೆ ಚುನಾವಣೆ ಮುಂದೂಡಬೇಕು ಎಂಬ ಉದ್ದೇಶದಿಂದ 90 ವರ್ಷ ಮೀರಿದ ಕೆಲವರನ್ನು ಕಣ ಕ್ಕಿಳಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಚುನಾವಣ ಆಯೋಗ 1985ರ ಚುನಾವಣೆ ಅನಂತರ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಮೃತಪಟ್ಟರೆ ಮಾತ್ರ ಚುನಾವಣೆ ಮುಂದೂಡುವ ನಿಯಮ ಜಾರಿಗೆ ತಂದಿತು. ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿ ಯಬಾರದು ಎಂಬ ಉದ್ದೇಶದಿಂದ ನಾಮಪತ್ರ ಸಲ್ಲಿಕೆಯ ಶುಲ್ಕವನ್ನು ಹೆಚ್ಚಿಸಿತು. ಮುಂದೆ ಇದೇ ಮತದಾರರ ಗುರುತಿನ ಚೀಟಿ ಕಡ್ಡಾಯಕ್ಕೆ ಆಯೋಗ ಚಿಂತನೆ ಮಾಡುವಂತಾಯಿತು.
ಒಂದೇ ಕ್ಷೇತ್ರದಲ್ಲಿ 300 ಅಭ್ಯರ್ಥಿಗಳ ಸ್ಪರ್ಧೆಯನ್ನು ನಿರೀಕ್ಷೆ ಮಾಡದಿದ್ದ ಚುನಾವಣ ಆಯೋಗಕ್ಕೆ ಇದು ಬಹಳ ತಲೆನೋವಾಗಿ ಕಾಡಿತು. ಅಷ್ಟು ದೊಡ್ಡ ಬ್ಯಾಲೆಟ್ ಪೇಪರ್ ಮಾಡುವಲ್ಲಿ ಅಧಿಕಾರಿಗಳು ಸುಸ್ತಾಗಿ ಹೋಗಿದ್ದರು. ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ಎಸ್.ಮಾನೆ ಎಂಬುವರು ಜಯಗಳಿಸಿದರು. ಅದು ಬೇರೆ ಮಾತು. ಆದರೆ ಇಷ್ಟೊಂದು ಅಭ್ಯರ್ಥಿಗಳ ಸ್ಪರ್ಧೆ ಈಗಲೂ ಸಾರ್ವಕಾಲಿಕ ದಾಖಲೆಯಾಗಿಯೇ ಉಳಿದಿದೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸುತ್ತಿದೆ ಎನ್ನಲಾದ ಅಕ್ರಮಗಳನ್ನು ದೇಶದ ಹಾಗೂ ಚುನಾವಣ ಆಯೋಗದ ಗಮನಕ್ಕೆ ತರುವ ಉದ್ದೇಶದಿಂದ 300ಕ್ಕೂ ಹೆಚ್ಚು ಕನ್ನಡಿಗರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಇದರಲ್ಲಿ ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ, ಅವರ ತಾಯಿ, ಹೆಂಡತಿ ಹಾಗೂ ಭಗಿನಿ ಮಂಡಳದ ಸದಸ್ಯರು ಸ್ಪರ್ಧೆ ಮಾಡಿ ದ್ದರು. ಇವರು ಜಯಗಳಿಸಲಿಲ್ಲ. ಆದರೆ ಒಂದು ಕುಟುಂಬದ ಸದಸ್ಯರ ಸ್ಪರ್ಧೆ ದೇಶದ ತುಂಬಾ ಸುದ್ದಿ ಮಾಡಿತು. ಚುನಾವಣೆ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗೆ ಕಾರಣವಾಯಿತು.
ಸಾಕಷ್ಟು ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ 1985ರ ಚುನಾವಣೆಯಲ್ಲಿ ಎಂಇಎಸ್(ಆಗ ಇನ್ನೂ ಪಕ್ಷದ ಮಾನ್ಯತೆ ಇರಲಿಲ್ಲ)ನ ಆರ್.ಎಸ್.ಮಾನೆ 32,401 ಮತಗಳನ್ನು ಪಡೆದು ತಮ್ಮ ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಎಸ್.ವೈ.ಕಾಕತಕರ (21,477 ಮತಗಳು) ಅವರನ್ನು 10,924 ಮತಗಳಿಂದ ಸೋಲಿಸಿದರು. ಈ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ಜಯ ಸಾಧಿಸಿದರೂ ಚುನಾವಣ ಆಯೋಗದ ನಿಯಮಗಳಿಗೆ ಹೊಸ ರೂಪ ಕೊಡುವಲ್ಲಿ ಹಾಗೂ ಎಂಇಎಸ್ ವಿರುದ್ಧ ಕನ್ನಡಿಗರ ಹೋರಾಟದ ಬಗ್ಗೆ ದೇಶದ ಗಮನ ಸೆಳೆಯುವಲ್ಲಿ ಕನ್ನಡ ಅಭ್ಯರ್ಥಿಗಳು ಯಶಸ್ವಿಯಾದರು. ಬೆಳಗಾವಿಯ ಈ ಚುನಾವಣೆ ಆಯೋಗಕ್ಕೆ ಈಗಲೂ ನೆನಪಾಗುತ್ತಲೇ ಇದೆ.
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.