ಬಿಜೆಪಿಯ ಪಾಪ ತೊಳೆಯಲು ಕಾವೇರಿ ಮತ್ತು ಕೃಷ್ಣಾ ನೀರು ಸಾಲದು: ಸಿದ್ದರಾಮಯ್ಯ
ನನ್ನೊಡನೆ ಬಹಿರಂಗ ಚರ್ಚೆಗೆ ಬನ್ನಿ... ಸವಾಲು
Team Udayavani, May 5, 2023, 8:39 PM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾಡಿರುವ ಆರೋಪಗಳಿಗೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿ, ತಿರುಗೇಟು ನೀಡಿದ್ದಾರೆ.
”ಕಾಂಗ್ರೆಸ್ ಪಕ್ಷ ಮಾಧ್ಯಮಗಳ ಸುಳ್ಳು ಸಮೀಕ್ಷೆಗಳನ್ನು ಪ್ರಸಾರ ಮಾಡಿ ಬೆಂಬಲ ಗಳಿಸಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೊಟ್ಟೆ ಉರ್ಕೊಳ್ಳುತ್ತಿರುವುದು ನೋಡಿದಾಗ ಕನಿಕರ ಹುಟ್ಟುತ್ತಿದೆ.ಏನಿದರ ಅರ್ಥ ಮೋದಿಯವರೇ? ನಿಮ್ಮನ್ನು ಹಾಡಿ ಹೊಗಳುತ್ತಿರುವ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ನೀವೇ ಸಂಶಯಿಸುತ್ತಿದ್ದೀರಾ? ಮನುಷ್ಯ ಇಷ್ಟೊಂದು ಕೃತಘ್ನರಾಗಬಾರದು” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ನರೇಂದ್ರ ಮೋದಿಯವರು ರಾಜ್ಯ ಬಿಜೆಪಿಯ ಪ್ರಣಾಳಿಕೆಯನ್ನು ಸಂಕಲ್ಪಪತ್ರ ಎಂದು ಬಣ್ಣಿಸಿದ್ದಾರೆ.2018ರ ತನ್ನ ಪ್ರಣಾಳಿಕೆಯ ಶೇಕಡಾ 90ರಷ್ಟು ಭರವಸೆಗಳನ್ನು ಬಿಜೆಪಿ ಸರ್ಕಾರ ಈಡೇರಿಸಿಲ್ಲ. 2013ರ ಕಾಂಗ್ರೆಸ್ ಪ್ರಣಾಳಿಕೆಯ 165 ಭರವಸೆಗಳಲ್ಲಿ 158 ಭರವಸೆಗಳನ್ನು ನಮ್ಮ ಸರ್ಕಾರ ಈಡೇರಿಸಿದೆ.ನಿಮ್ಮ ಸಂಕಲ್ಪ ಪ್ರಾಮಾಣಿಕವಾದುದಾಗಿದ್ದರೆ 2013ರ ನಮ್ಮ ಪ್ರಣಾಳಿಕೆ ಮತ್ತು 2018ರ ನಿಮ್ಮ ಪ್ರಣಾಳಿಕೆಯನ್ನು ಮುಂದಿಟ್ಟು ಈಡೇರಿಸಿದ ಭರವಸೆಗಳ ಬಗ್ಗೆ ನನ್ನೊಡನೆ ಬಹಿರಂಗ ಚರ್ಚೆಗೆ ಬನ್ನಿ, ಸಿದ್ಧ ಇದ್ದೀರಾ? ನಿಮ್ಮದೇ ಸ್ಥಳ, ನಿಮ್ಮದೇ ಸಮಯ, ಉತ್ತರಕ್ಕಾಗಿ ಕಾಯುತ್ತಿರುವೆ ಎಂದು ಸವಾಲೆಸೆದಿದ್ದಾರೆ.
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಮೂರುವರೆ ವರ್ಷಗಳ ಅಧಿಕಾರವಧಿಯಲ್ಲಿ ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸವುದರಲ್ಲಿಯೇ ಕಳೆದುಹೋಯಿತು ಎಂದು ನರೇಂದ್ರ ಮೋದಿಯವರು ನೊಂದುಕೊಂಡಿದ್ದಾರೆ.ಮೂರುವರೆ ವರ್ಷಗಳಲ್ಲಿ ಡಬಲ್ ಎಂಜಿನ್ ಸರ್ಕಾರದ ಸಾಧನೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಕೋಮುದ್ವೇಷವನ್ನಷ್ಟೇ ಡಬಲ್ ಮಾಡಿದೆ. ಬಿಜೆಪಿ ಮಾಡಿಟ್ಟ ಪಾಪವನ್ನು ತೊಳೆಯಲು ಕಾವೇರಿ ಮತ್ತು ಕೃಷ್ಣಾ ನದಿಗಳ ನೀರು ಸಾಲದು ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿರುವುದು ಡಬಲ್ ಎಂಜಿನ್ ಸರ್ಕಾರ ಅಲ್ಲ, ಟ್ರಿಪಲ್ ಎಂಜಿನ್ ಸರ್ಕಾರ. ಒಂದು ರಾಜ್ಯದಲ್ಲಿ, ಇನ್ನೊಂದು ದೆಹಲಿಯಲ್ಲಿ ಮತ್ತೊಂದು ನಾಗಪುರದಲ್ಲಿ. ಪ್ರಧಾನಿಯಿಂದ ಹಿಡಿದು ಮುಖ್ಯಮಂತ್ರಿ ಮತ್ತು ಸಚಿವರ ವರೆಗೆ ಎಲ್ಲರೂ ನಾಗಪುರದ ಗೊಂಬೆಯಾಟದವರ ಕೈಯಲ್ಲಿರುವ ಗೊಂಬೆಗಳು ಅಷ್ಟೆ. ಝಂಡಾ ಮಾತ್ರ ಪಕ್ಷದ್ದು ಅಜೆಂಡಾ ಆರ್.ಎಸ್.ಎಸ್ ನದ್ದು ಎಂದಿದ್ದಾರೆ.
ಡಬಲ್ ಎಂಜಿನ ಸರ್ಕಾರ ಇದ್ದರೂ ಅರ್ಧ ಕರ್ನಾಟಕ ನೆರೆನೀರಿನಲ್ಲಿ ಮುಳುಗಿರುವಾಗ ನೆರವು ಹರಿದುಬರಲಿಲ್ಲ.ಕೇಂದ್ರಕ್ಕೆ ಕೊಟ್ಟ ಒಂದು ರೂಪಾಯಿಯಲ್ಲಿ ವಾಪಸ್ ರಾಜ್ಯಕ್ಕೆ ಬಂದದ್ದು ಕೇವಲ 16ಪೈಸೆ.ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿಪ್ರದೇಶಕ್ಕೆ ಅತಿಕ್ರಮಣ ಮಾಡಿದರೂ ಮಧ್ಯೆ ಪ್ರವೇಶ ಮಾಡಲಿಲ್ಲ. ಇಂಥ ಡಬ್ಬಲ್ ಇಂಜಿನ್ ಸರ್ಕಾರ ಯಾಕೆ ಬೇಕಿದೆ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದ ಕೆಲವು ಶಬ್ದಗಳನ್ನು ತಪ್ಪುತಪ್ಪಾಗಿಯಾದರೂ ಆಡುತ್ತಿರುವುದು ಸ್ವಾಗತಾರ್ಹ. ಆದರೆ ಈ ನಾಟಕದ ಮಾತುಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಮಾಡಿರುವ ಅನ್ಯಾಯವನ್ನು ಮುಚ್ಚಿಡಲಾಗದು.ನಿಜವಾದ ಕನ್ನಡಿಗನಾಗುವುದೆಂದರೆ ನಾಡಭಾಷೆ, ನಾಡಗೀತೆ ಮತ್ತು ನಾಡಧ್ವಜವನ್ನು ಒಪ್ಪಿಕೊಳ್ಳುವುದು. ಕರ್ನಾಟಕದ ನಾಡಧ್ವಜಕ್ಕೆ ಅಂಗೀಕಾರ ನೀಡಿ ನೀವು ನಿಜವಾದ ಕನ್ನಡಿಗರಾಗುವಿರಾ ಮೋದಿಯವರೇ ಎಂದು ಪ್ರಶ್ನಿಸಿದ್ದಾರೆ.
ಭಯೋತ್ಪಾದನೆ ತಡೆಯಲು ಕಾಂಗ್ರೆಸ್ ಸರ್ಕಾರ ಸೋತಿತ್ತು ಎಂದು ಹೇಳಿರುವ ಪ್ರಧಾನಿ ಮೋದಿಯವರೇ,ಭಯೋತ್ಪಾದನೆಯನ್ನು ದಿಟ್ಟತನದಿಂದ ಎದುರಿಸಿ ಹುತಾತ್ಮರಾದ ಇಬ್ಬರು ಪ್ರಧಾನಿಗಳು ಯಾವ ಪಕ್ಷದವರು ಎನ್ನುವುದನ್ನು ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಕೇಳಿ ನೋಡಿ, ಉತ್ತರ ಸಿಗಬಹುದು.ಕಳೆದ ಕೆಲವು ದಿನಗಳಿಂದ ಇಡೀ ಮಣಿಪುರ ಹೊತ್ತಿ ಉರಿಯುತ್ತಿದೆ. ದೇಶದ ಪ್ರಧಾನಮಂತ್ರಿ ಮತ್ತು ಗೃಹಸಚಿವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಆರಾಮಾಗಿದ್ದಾರೆ, “ರೋಮ್ ಹೊತ್ತಿ ಉರಿಯುವಾಗ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದನಂತೆ”, ಹಾಗಾಯಿತು ನಿಮ್ಮ ಕತೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಚೀನಾದ ಗಡಿ ಅತಿಕ್ರಮಣವನ್ನು ಹಿಮ್ಮೆಟ್ಟಿಸಲಾಗಲಿಲ್ಲ, ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಿಸಿ ಶಾಂತಿ ಸ್ಥಾಪಿಸಲಾಗಲಿಲ್ಲ. ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ಯಾವ ನೈತಿಕತೆ ನಿಮಗಿದೆ ನರೇಂದ್ರ ಮೋದಿಯವರೇ? ಎಂದು ಕಿಡಿಕಾರಿದ್ದಾರೆ.
ದುನಿಯಾ ವಿಜಿ ಪ್ರಚಾರ
ನಟ ದುನಿಯಾ ವಿಜಿ, ನಟಿ ನಿಶ್ವಿಕಾ ನಾಯ್ಡು ಅವರು ಇಂದು ವರುಣಾ ವಿಧಾನಸಭೆ ಕ್ಷೇತ್ರದ ಚಿಕ್ಕಹಳ್ಳಿ, ಬುಗತಗಳ್ಳಿ ಹಾಗೂ ವಾಜಮಂಗಲ ಗ್ರಾಮಗಳಲ್ಲಿ ನನ್ನೊಂದಿಗೆ ರೋಡ್‌ಶೋ ನಲ್ಲಿ ಪಾಲ್ಗೊಂಡು, ಪ್ರಚಾರದ ರಂಗೇರಿಸಿದರು.”ಸಿದ್ದರಾಮಯ್ಯ ಗೆಲ್ಲಬೇಕು, ಅವರು ನಮ್ಮವರು” ಎಂಬ ನನ್ನ ಮೇಲಿರುವ ಪ್ರೀತಿ ಅಭಿಮಾನದ ಕಾರಣಕ್ಕೆ ಇಷ್ಟುದೂರ ಬಂದು ಹಲವು ಗಂಟೆಗಳ ಕಾಲ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ವಿಜಿಗೆ ಧನ್ಯವಾದಗಳು. ನಿಮ್ಮ ಈ ಕೋರಿಕೆಯನ್ನು ವರುಣಾದ ನನ್ನ ಜನ ಖಂಡಿತಾ ಈಡೇರಿಸುತ್ತಾರೆ.” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.