ಉಡುಪಿ ಜಿಲ್ಲೆಯ ರಾಜಕೀಯ ಚರಿತ್ರೆಯೇ ಹಾಗೆ.. ಪಕ್ಷಗಳಿಗೂ ಮಣೆ, ಸ್ವತಂತ್ರರಿಗೂ ಮನ್ನಣೆ
ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಸರಳಾ ಕಾಂಚನ್ ಅವರನ್ನು ಸೋಲಿಸಿದ ಇತಿಹಾಸವಿದೆ...
Team Udayavani, Mar 20, 2023, 10:01 AM IST
ಉಡುಪಿ: ಜಿಲ್ಲೆಯಲ್ಲಿ ಕಾಂಗ್ರೆಸ್, ಜನತಾ ಪಕ್ಷ, ಬಿಜೆಪಿ ಪ್ರವರ್ಧಮಾನದಲ್ಲಿದ್ದ ಸಂದರ್ಭದಲ್ಲೂ ವೈಯಕ್ತಿಕ ವರ್ಚಸ್ಸಿನೊಂದಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜೈ ಎನಿಸಿಕೊಂಡವರು ಹಲವರು. ನಿರ್ದಿಷ್ಟ ಪಕ್ಷದಲ್ಲಿದ್ದು, ಆ ಪಕ್ಷದಲ್ಲಿ ಟಿಕೆಟ್ ಕೈತಪ್ಪಿದಾಗ, ಕೆಲವೊಮ್ಮೆ ಪಕ್ಷ ಬೇಡವೆನಿಸಿ ಹೊರಬಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಉದಾಹರಣೆಗಳು ಇವೆ.
ಜತೆಗೆ ಬಂಡಾಯವೆದ್ದು ಗೆದ್ದವರನ್ನೇ ಪಕ್ಷಗಳೂ ವಾಪಸು ಸೇರಿಸಿಕೊಂಡು ಮನ್ನಣೆ ನೀಡಿದ ಪರಂಪರೆಯೂ ಇದೆ. ಹಾಗಾಗಿ ಉಡುಪಿ ಜಿಲ್ಲೆಯಲ್ಲಿ ಪಕ್ಷಕ್ಕೂ ಮಣೆ ಹಾಕಿದ ಹಾಗೂ ವ್ಯಕ್ತಿಗಳನ್ನೂ ಹೊತ್ತು ಮೆರವಣಿಗೆ ಮಾಡಿದ ವಿಶಿಷ್ಟ ಜಿಲ್ಲೆ ಉಡುಪಿ.
ಸ್ವತಂತ್ರ
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ. ಜಯಪ್ರಕಾಶ್ ಹೆಗ್ಡೆಯವರು ಬ್ರಹ್ಮಾವರ ಕ್ಷೇತ್ರವಿದ್ದ ಸಂದರ್ಭದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದು, ಅನಂತರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸಿದ್ದರು. ಅನಂತರ ಕಾಂಗ್ರೆಸ್ ಸೇರಿ ಲೋಕಸಭಾ ಸದಸ್ಯರಾಗಿದ್ದರು. ತದನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಸರಳಾ ಕಾಂಚನ್ ಅವರನ್ನು ಸೋಲಿಸಿದ ಇತಿಹಾಸವಿದೆ. ಬ್ರಹ್ಮಾವರ ಕ್ಷೇತ್ರವಿರುವವರೆಗೂ ಪಕ್ಷದಿಂದಾದರೂ ಹೆಗ್ಡೆ, ಸ್ವತಂತ್ರವಾದರೂ ಹೆಗ್ಡೆ ಎಂಬ ಅಭಿಪ್ರಾಯವಿತ್ತು. ಇಂದಿಗೂ ಅದೇ ರೀತಿಯ ಅಭಿಪ್ರಾಯ ಜಿಲ್ಲೆಯಲ್ಲಿದೆ.
ಹಾಗೆಯೇ ಕುಂದಾಪುರದಲ್ಲಿ ನಿರಂತರವಾಗಿ ಬಿಜೆಪಿ ಅಭ್ಯರ್ಥಿಯಾಗಿ ಜಯ ಸಾಧಿಸುತ್ತಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು 2013ರಲ್ಲಿ ಪಕ್ಷ ಬಿಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸುಮಾರು 40 ಸಾವಿರ ಮತಗಳ ಅಂತರದ ಜಯ ಸಾಧಿಸಿ, ತಮ್ಮ ಶಕ್ತಿ ಪ್ರದರ್ಶಿಸಿದ್ದರು. ಅನಂತರ 2018ರಲ್ಲಿ ಪುನಃ ಪಕ್ಷದ ಚಿನ್ಹೆಯಡಿ ಸ್ಪರ್ಧಿಸಿ ಶಾಸಕರಾದರು. ಇಂದಿಗೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಜಯ ಸಾಧಿಸಬಲ್ಲರು ಎಂಬ ಮಾತು ಚಾಲ್ತಿಯಲ್ಲಿದೆ.
ಮನೋರಮಾ ಮಧ್ವರಾಜರಿಗೂ ಸೋಲು
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದ ಯು. ಆರ್. ಸಭಾಪತಿಯವರು ಉಡುಪಿ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವವನ್ನು ಹೊಂದಿರುವವರು. 1989ರಲ್ಲಿ ಮನೋರಮಾ ಮಧ್ವರಾಜ್ ಅವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 785 ಮತಗಳ ಅಂತರದಲ್ಲಿ ಸೋತಿದ್ದರು. 1994ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಕರ್ನಾಟಕ ಕಾಂಗ್ರೆಸ್ ಪಕ್ಷ(ಕೆಸಿಪಿ)ಕ್ಕೆ ಸೇರಿ ಉಡುಪಿಯಲ್ಲಿ ಕಾಂಗ್ರೆಸ್‌ನ ಮನೋರಮಾ ಅವರ ವಿರುದ್ಧವೇ ಸ್ಪರ್ಧಿಸಿದ್ದರು. ಆಗ ಬಿಜೆಪಿಯಿಂದ ಡಾ| ವಿ.ಎಸ್.ಆಚಾರ್ಯ ಕಣದಲ್ಲಿದ್ದರು. ಇಬ್ಬರು ಘಟಾನುಘಟಿಗಳ ಮಧ್ಯೆ ಸಭಾಪತಿಯವರು ಶೇ.37.78ರಷ್ಟು ಮತ ಪಡೆಯುವ ಮೂಲಕ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 1999 ರ ಚುನಾವಣೆಯಲ್ಲಿ ಮನೋರಮಾ ಅವರ ಬದಲಿಗೆ ಕಾಂಗ್ರೆಸ್ ಪಕ್ಷ ಸಭಾಪತಿಯವರನ್ನೇ ಪಕ್ಷಕ್ಕೆ ಸೇರಿಸಿ ಕೊಂಡು ಕಣಕ್ಕಿಳಿಸಿತ್ತು. ಆಗಲೂ ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸಿ ಶಾಸಕರಾಗಿದ್ದರು.
ಗೆದ್ದಿಲ್ಲ, ಆದರೆ ವರ್ಚಸ್ಸಿತ್ತು
1980ರ ದಶಕದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ರಾಜಕೀಯ ನಾಯಕರಲ್ಲಿ ಮಾಣಿ ಗೋಪಾಲ್ ಕೂಡ ಒಬ್ಬರಾಗಿದ್ದರು. 1978ರಲ್ಲಿ ಕಾಂಗ್ರೆಸ್ ನಿಂದ ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಇವರು ಜನತಾ ಪಾರ್ಟಿಯ ಅಭ್ಯರ್ಥಿ ವಿರುದ್ಧ 2,454 ಮತಗಳ ಅಂತರದಲ್ಲಿ ಸೋತರು.
1983ರಲ್ಲಿ ಜನತಾ ಪಾರ್ಟಿಯಿಂದಲೇ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತರು. 1985ರಲ್ಲಿ ಬೈಂದೂರು ಕ್ಷೇತ್ರದಿಂದ ಜನತಾ ಪಾರ್ಟಿಯಿಂದ ಕಣಕ್ಕೆ ಇಳಿದರು, 414 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತರು. 1989ರಲ್ಲಿ ಜನತಾ ದಳದಿಂದ
ಬೈಂದೂರಿನಲ್ಲಿ ಸ್ಪರ್ಧಿಸಿ 519 ಮತಗಳ ಅಂತರದಲ್ಲಿ ಸೋಲುಂಡರು. 1994ರಲ್ಲಿ ಪುನರ್ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿದರೂ ಜಯ ಕಾಣಲಿಲ್ಲ.
ಉದ್ಯಮಿ ಬಿ. ಸುಧಾಕರ ಶೆಟ್ಟಿಯವರು ಕೂಡ 1999ರಲ್ಲಿ ಬಿಜೆಪಿಯಿಂದ ಉಡುಪಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. 710 ಮತಗಳಲ್ಲಿ ಸೋತರು. 2004ರಲ್ಲಿ ಪಕ್ಷ ಟಿಕೆಟ್ ನೀಡದೇ ಇದ್ದ ಸಂದರ್ಭದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿಸಿದ್ದರು. 2013ರಲ್ಲಿ ಬಿಜೆಪಿಯೇ ಅವರಿಗೆ ಪುನಃ ಟಿಕೆಟ್ ನೀಡಿದರೂ ಅವರಿಗೆ ಜಯ ದಕ್ಕಲಿಲ್ಲ. ಹೀಗೆ ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದು, ಪಕ್ಷ ಬದಲಿಸಿದರೂ ಮತದಾರರ ಮನ್ನಣೆ ಗಳಿಸಿರುವುದು ವಿಶೇಷ.
*ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.