ಸಾಹಿತ್ಯ ಕಲಿಕೆಯ ಭಾಗವಾಗಲಿ
Team Udayavani, Sep 25, 2019, 5:00 AM IST
ಸಾಹಿತ್ಯ ಎಂಬುದು ಕೇವಲ ಕಲಾ ಶಿಕ್ಷಣಕ್ಕೆ ಮೀಸಲಾದುದು ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ ಅದು ಹೆಚ್ಚಿನ ವೇಳೆಗಳಲ್ಲಿ ನಿಜವಾಗಿರುವುದಿಲ್ಲ. ಉತ್ತಮ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದ ಕವಿಗಳಲ್ಲಿ ಹೆಚ್ಚಿನವರು ಕಲಾಶಿಕ್ಷಣವನ್ನು ಪಡೆದವರಲ್ಲ. ಅವರೆಲ್ಲಾ ವಿಜ್ಞಾನ, ವಾಣಿಜ್ಯ ಶಿಕ್ಷಣಗಳನ್ನು ಪಡೆದವರು. ಸಾಹಿತ್ಯ ಎಂಬುದು ವ್ಯಕ್ತಿಗಳ ಪ್ರತಿಭೆಗಳನ್ನು ಆಧರಿಸಿದೆಯೇ ಹೊರತು ಯಾವುದೇ ಶಿಕ್ಷಣದಿಂದಲ್ಲ. ಅಕ್ಷರಗಳ ಮೇಲೆ ಆಸಕ್ತಿ ಇರುವ ಪ್ರತಿಯೊಬ್ಬರೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಹುದು.
ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಪಠ್ಯೇತರ ಚಟುವಟಿಕೆಗಳು ಹೆಚ್ಚು ಮಹತ್ವ ಪಡೆಯುತ್ತವೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲದವರು ಸಾಹಿತ್ಯ ಕ್ಷೇತ್ರವನ್ನು ಆಯ್ದುಕೊಳ್ಳಬಹುದು. ಸಾಹಿತ್ಯ ಕ್ಷೇತ್ರದ ವ್ಯಾಪ್ತಿ ವಿಶಾಲವಾದುದು. ಪ್ರಬಂಧ, ಕಥೆ, ಕಾದಂಬರಿ, ಹನಿಗವನ, ಹಾಸ್ಯ ಕಥೆ ಹೀಗೆ ಹಲವು ವೈವಿಧ್ಯತೆಗಳು ಸಾಹಿತ್ಯ ಕ್ಷೇತ್ರದಲ್ಲಿವೆ. ಈ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಸಾಹಿತ್ಯದಲ್ಲಿ ಗುರುತಿಸಿಕೊಳ್ಳಬಹುದು.
ವಿದ್ಯಾರ್ಥಿಗಳು ಕೇವಲ ಓದಿಗೆ ಸೀಮಿತವಾಗದೇ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಬರವಣಿಗೆಯಲ್ಲಿ ತೊಡಗಿಸಿಕೊಂಡಾಗ ಜ್ಞಾನದೊಂದಿಗೆ ಭಾಷೆಯ ಮೇಲಿನ ಹಿಡಿತ ದೊರೆಯುವುದು. ಯೋಚನಾಲಹರಿ ಉತ್ತಮವಾಗುವುದು. ವಿದ್ಯಾರ್ಥಿಯಾಗಿದ್ದಾಗ ದೊಡ್ಡ ದೊಡ್ಡ ಗ್ರಂಥಗಳನ್ನು ಬರೆಯಬೇಕೆಂದಿಲ್ಲ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಣ್ಣಕತೆ, ಕವನ, ಹನಿಗವನ ಹೀಗೆ ನಿಮಗೆ ಹಿಡಿತ ಇರುವ ಭಾಷೆಯಲ್ಲಿ ಬರೆದು ಸಾಹಿತ್ಯದ ರುಚಿಯನ್ನು ಹೆಚ್ಚಿಸಿಕೊಳ್ಳಬಹುದು. ಕೆಲವು ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೇ ಕಥೆ, ಕಾದಂಬರಿ ಓದುವ ಹವ್ಯಾಸವಿರುತ್ತದೆ. ಈ ಹವ್ಯಾಸದಿಂದ ಅವರು ಉತ್ತಮ ಬರಹಗಾರರಾಗಿ ಬೆಳೆಯಬಹುದು. ವಿದ್ಯಾರ್ಥಿಯಾಗಿದ್ದಾಗಲೇ ಕಥೆ, ಕಾದಂಬರಿ, ಕವನಸಂಕಲನಗಳನ್ನು ಬರೆದು ಸಾಧನೆ ಮಾಡಿರುವ ಅನೇಕ ಯುವಜನಾಂಗ ನಮ್ಮ ಮುಂದಿದ್ದಾರೆ. ಹೀಗಾಗಿ ಅಂಥವರನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಸಾಹಿತ್ಯ ಕ್ಷೇತ್ರದಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬಹುದು.
ಬರವಣಿಗೆ ಒಂದು ಅದ್ಭುತ ಪ್ರಕ್ರಿಯೆ. ಮನಸ್ಸಿನ ಭಾವನೆಗಳಿಗೆ ಅಕ್ಷರದ ರೂಪ ನೀಡುವ ಈ ಕಲೆ ದೇವರ ಕೊಡುಗೆ. ಬರಹದ ಮೂಲಕ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಬಹುದು. ಹೀಗೆ ಬರವಣಿಗೆ ಕಾಲೇಜಿನಲ್ಲಿ ಆರಂಭವಾದರೆ ಜೀವನದುದ್ದಕ್ಕೂ ನಿರಂತರವಾಗಿರುತ್ತದೆ,
ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ಪಾಲ್ಗೊಳ್ಳಬೇಕಾದರೆ
ಇಲ್ಲಿದೆ ಕೆಲವು ಉಪಾಯಗಳು
· ನಿರಂತರವಾಗಿ ಓದು ಅಗತ್ಯ: ಟಿ.ವಿ., ಮೊಬೈಲ್‌ಗಳಿಂದ ದೂರವಿದ್ದು ಪುಸ್ತಕಗಳನ್ನು ಓದಬೇಕು. ಹೊಸ ಹೊಸ ಪುಸ್ತಕ, ಪ್ರಸಿದ್ಧ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು.
· ಬ್ಲಾಗ್ ಆರಂಭಿಸಿ: ಸಾಮಾಜಿಕ ಜಾಲತಾಣಗಳಲ್ಲಿ ನೀವು ಬರೆದ ಬರಹಗಳನ್ನು ಹಾಕಬಹುದು ಅಥವಾ ಬ್ಲಾಗ್ ನಿರ್ಮಿಸಿ ಅಲ್ಲಿ ಹಾಕಬಹುದು. ನಿಮ್ಮ ಸಾಹಿತ್ಯಕ ಬರವಣಿಗೆಗಳಿಗೆ ಇದೊಂದು ಉತ್ತಮ ವೇದಿಕೆಯಾಗಿರುತ್ತದೆ.
· ಪ್ರತಿನಿತ್ಯ ಬರೆಯಬೇಕು: ಯಾವುದೇ ಒಂದು ಕೆಲಸವಾದರೂ ಒಂದೇ ಪ್ರಯತ್ನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಅದರಂತೇ ಬರವಣಿಗೆಯು ಕೂಡಾ. ಪ್ರತಿನಿತ್ಯ ನಿರಂತರವಾಗಿ ಬರೆಯುತ್ತಿರಬೇಕು. ಇದರಿಂದ ಶೈಲಿ ಉತ್ತಮವಾಗುತ್ತದೆ.
· ಪಂಡಿತರೊಂದಿಗೆ ಚರ್ಚೆ: ಮಾತುಗಳು ನಮ್ಮ ಆಲೋಚನಾ ಶೈಲಿಯನ್ನು ಬದಲಾಯಿಸುತ್ತವೆ. ಈ ಕಾರಣದಿಂದ ಪಂಡಿತರು, ವಿದ್ವಾಂಸರ ಜತೆ ಮಾತುಕತೆ ಮಾಡುವುದರಿಂದ ಬರವಣಿಗೆಯ ಶೈಲಿ ಉತ್ತಮವಾಗುತ್ತದೆ.
– ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.