ಬೆಳ್ಳಿಪರದೆಯಲ್ಲಿ ಮಿನುಗಿ!
Team Udayavani, Jun 19, 2019, 5:00 AM IST
ಬೆಳ್ಳಿ ಪರದೆಯಲ್ಲಿ ಮಿಂಚುವ ಆಸೆ ಯಾರಿಗಿಲ್ಲ ಹೇಳಿ? ಒಮ್ಮೆಯಾದರೂ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಇರುವಿಕೆ ಹಾಗೂ ಪ್ರತಿಭೆ ತೋರಿಸಬೇಕು ಎಂಬ ಹಂಬಲ ತುಂಬ ಜನರಿಗೆ ಇದ್ದೇ ಇದೆ. ಹೀಗಾಗಿಯೇ ಸಿನೆಮಾ ಕ್ಷೇತ್ರದ ಬಗ್ಗೆ ಬಹುಜನರಿಗೆ ಆಸಕ್ತಿ-ಕುತೂಹಲ.
ಸಿನೆಮಾ ಕ್ಷೇತ್ರದಲ್ಲಿ ಆಸಕ್ತಿ ಮಾತ್ರ ಇದ್ದರೆ ಸಾಲದು; ಪ್ರತಿಭೆ ಕೂಡ ಇರಬೇಕು. ಪ್ರತಿಭೆ ಇದ್ದರೆ ಸಾಲದು; ಅದು ಕ್ಯಾಮರಾ ಮುಂದೆ ಪ್ರತಿಫಲಿಸಬೇಕು. ಪ್ರತಿಫಲಿಸಿದರೆ ಮಾತ್ರ ಸಾಲದು; ಅದು ವೀಕ್ಷಕರಿಗೆ ಇಷ್ಟವಾಗಬೇಕು. ಹೀಗೆ ಇಷ್ಟವಾಗುವ ಕೊಂಡಿ ಬೆಳೆಯುತ್ತಾ ಹೋಗುತ್ತದೆ. ಅಂದಹಾಗೆ, ಎಲ್ಲರನ್ನು ಎಲ್ಲ ಕಾಲದಲ್ಲಿಯೂ ಇಷ್ಟ ಪಡಿಸಲು ಸಾಧ್ಯವಿಲ್ಲದಿದ್ದರೂ, ಇಷ್ಟಪಡಿಸುವ ಪ್ರಯತ್ನವಾದರೂ ನಡೆಯಬೇಕು. ಇದಕ್ಕಾಗಿಯೇ ಬಹುತೇಕ ಜನರಿಗೆ ಇಷ್ಟದ ಕ್ಷೇತ್ರವಾದರೂ, ಸಿನೆಮಾ ಕ್ಷೇತ್ರ ಕೂಡಿಬರುವುದಿಲ್ಲ.
ಸಿನೆಮಾ ಕ್ಷೇತ್ರದಲ್ಲಿ ಆಸಕ್ತಿ, ಪ್ರತಿಭೆ ಹಾಗೂ ಅವಕಾಶಗಳ ಮೂಲಕ ನಟನೆ-ನಿರ್ದೇಶನದ ಅವಕಾಶ ಪಡೆಯುವವರು ಒಂದೆಡೆಯಾದರೆ, ಇನ್ನೂ ಕೆಲವರು ಪ್ರತಿಭೆಯಿದ್ದೂ, ಮಾರ್ಗದರ್ಶನವಿಲ್ಲದೆ- ಅವಕಾಶವಿಲ್ಲದೆ ದಾರಿ ದೊರಕದೆ ಕಂಗಾಲಾಗುತ್ತಾರೆ. ಇನ್ನೂ ಕೆಲವರಿಗೆ ಹಾದಿ ಗೊತ್ತಿದ್ದರೂ, ಅದರ ಅನುಷ್ಠಾನದ ಬಗ್ಗೆ ಸೂಕ್ತ ದಿಕ್ಕು-ದೆಸೆ ಗೊತ್ತಿಲ್ಲದೆ ಪರಿತಪಿಸುತ್ತಾರೆ. ಇಂತಹ ಕಾಲದಲ್ಲಿ ಹಲವು ಪ್ರತಿಭೆಗಳಿಗೆ ಮಾರ್ಗದರ್ಶಕವಾಗಿರುವುದೇ ಸಿನೆಮಾಟೋಗ್ರಫಿ ಕೋರ್ಸ್‌ಗಳು.
ಸಿನೆಮಾ ವೀಕ್ಷಿಸುವವರಿಗೆ ತೆರೆ ಮುಂದೆ ಬರುವ ನಟರಷ್ಟೇ ಕಾಣುತ್ತಾರೆ. ತೆರೆಯ ಹಿಂದೆ ಅದೆಷ್ಟೋ ಕೈಗಳು ದುಡಿದಿರುತ್ತವೆ. ಇದರಲ್ಲಿ ಎಲ್ಲರೂ ಯಾರಧ್ದೋ ಕೈ ಹಿಡಿದು ಮೇಲೆ ಬಂದವರಲ್ಲ. ಈ ಕ್ಷೇತ್ರದಲ್ಲಿ ಪಳಗಲು ಅವುಗಳಿಗೆ ಸಂಬಂಧಿಸಿ ಕೋರ್ಸ್ ಗಳನ್ನು ಅಭ್ಯಸಿಸಿ ಮುಂದೆ ಬಂದವರಿದ್ದಾರೆ. ಸಿನೆಮಾಟೋಗ್ರಫಿ, ನಿರ್ದೇಶನ ಮೊದಲಾದ ಕೋರ್ಸ್‌ಗಳಿವೆ. ತಾಂತ್ರಿಕ ನಿಪುಣತೆ ಬಗ್ಗೆಯೂ ಕೋರ್ಸ್‌ಗಳಿವೆ.
ಸಿನೆಮಾ ಉದ್ಯಮ ಇದೀಗ ಕಾರ್ಪೊರೇಟರ್ ವಲಯವಾಗಿ ಬದಲಾಗುತ್ತಿದೆ. ಕಾರ್ಪೊರೇಟ್ ಕ್ಷೇತ್ರದ ಪ್ರಮುಖರೇ ಈಗ ಸಿನೆಮಾಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಇಂತಹ ಕಾರ್ಪೊರೇಟ್ ಉದ್ಯಮಿಗಳಿಗೆ ವೃತ್ತಿಪರರು ಬೇಕು ಎಂಬ ಕಾರಣದಿಂದ ವೃತ್ತಿ ತರಬೇತಿ ಕುರಿತಂತೆ ಬಹುತೇಕ ಖಾಸಗಿ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿದೆ.
ಮಲ್ಟಿ ಮೀಡಿಯಾ
ಈ ಮಧ್ಯೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನೀಡುತ್ತಿರುವ ಕ್ಷೇತ್ರಗಳ ಪೈಕಿ ಮಲ್ಟಿ ಮೀಡಿಯಾ ಕೂಡ ಒಂದಾಗಿದೆ ಎಂಬುದು ಉಲ್ಲೇಖನೀಯ. ಇದರಲ್ಲಿ ಸಿನೆಮಾ ಮಾತ್ರವಲ್ಲ; ಉಳಿದ ಅಂಶಗಳೂ ಇವೆ. ಮುದ್ರಣ, ಇಂಟರ್‌ನೆಟ್, ಆಡಿಯೋ ಹಾಗೂ ವೀಡಿಯೋ ಮಾಧ್ಯಮಗಳ ಮ್ಮಿಶ್ರಣವಾದ ಮಲ್ಟಿಮೀಡಿಯಾವು ಸಿನೆಮಾ, ಗೇಮ್, ಎಂಜಿನಿಯರಿಂಗ್ ಕ್ಷೇತ್ರದ ಅಟೋಮೋಟಿವ್, ವಾಸ್ತುಶಿಲ್ಪ, ಸಿವಿಲ್ ಇ-ಕಾಮರ್ಸ್, ಪ್ಯಾಕೆಜಿಂಗ್, ಬ್ರಾಂಡಿಂಗ್, ಮೆಡಿಕಲ್ ಸೇರಿದಂತೆ ಹಲವು ಕ್ಷೇತ್ರಗಳ ಅವಿಭಾಜ್ಯ ಅಂಗವಾಗಿ ಬೆಳೆದಿದೆ.
ಅನೇಕ ಕೋರ್ಸ್‌ಗಳಿವೆ
ಪೋಸ್ಟ್ ಗ್ಯಾಜ್ಯುವೇಟ್ ಡಿಪ್ಲೊಮಾ ಇನ್ ಸಿನೆಮಾಟೊಗ್ರಫಿ, ಡಿಪ್ಲೊಮಾ ಆಫ್ ಫೈನ್ ಆರ್ಟ್ಸ್ ಇನ್ ಸಿನೆಮಾಟೊಗ್ರಫಿ, ಡಿಪ್ಲೊಮಾ ಇನ್ ಡಿಜಿಟಲ್ ಸಿನೆಮಾಟೊಗ್ರಫಿ ಸೇರಿದಂತೆ ಹಲವು ಕೋರ್ಸ್‌ಗಳಿವೆ. ಆಸಕ್ತಿ ಯಾವುದಿದೆ ಎಂಬುದನ್ನು ನೋಡಿಕೊಂಡು, ಅವಕಾಶಗಳು ಹೇಗಿವೆ ಎಂಬುದನ್ನು ತಿಳಿದುಕೊಂಡು ಅಭ್ಯರ್ಥಿಯೇ ಸೂಕ್ತ ಕೋರ್ಸ್ ಆಯ್ಕೆ ಮಾಡಬೇಕು. ಇಲ್ಲಿ ಇನ್ನೊಬ್ಬನ ಮಾತು ಕೇಳಿ-ಒತ್ತಾಯಕ್ಕೆ ಮಣಿದು ಕೋರ್ಸ್ ಗೆ ಸೇರಿದರೆ ಭವಿಷ್ಯಕ್ಕೆ ಕಷ್ಟವಾಗಬಹುದು. ಹೀಗಾಗಿ ಏನು?ಎತ್ತ? ಹೇಗೆ? ಎಂಬಿತ್ಯಾದಿ ಸ್ವಪ್ರಶ್ನೆಗಳಿಗೆ ಉತ್ತರ ಹುಡುಕಿದ ನಂತರ ಕೋರ್ಸ್‌ಗೆ ಸೇರುವುದು ಉತ್ತಮ.
ತಾಂತ್ರಿಕ ಶಿಕ್ಷಣ ಇಲಾಖೆಯ ಸರಕಾರಿ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆಯಿಂದ ಡಿಪ್ಲೊಮಾ ಸಿನೆಮಾಟೋಗ್ರಫಿ ಹಾಗೂ ಸೌಂಡ್ ರೆಕಾರ್ಡಿಂಗ್ ಆ್ಯಂಡ್ ಎಂಜಿನಿಯರಿಂಗ್ ಅವಕಾಶವಿದೆ. ಎಸ್‌ಎಸ್ ಎಲ್‌ಸಿ ಪಾಸ್ ಆದ ಹಾಗೂ ರಾಜ್ಯದಲ್ಲಿ ಕನಿಷ್ಠ 5 ವರ್ಷ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಇಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.
ಇದೆಲ್ಲದರ ಮಧ್ಯೆ ಸ್ವ ಪ್ರತಿಭೆ ಇದ್ದರೆ ಕಲಿಯುವ ಆಸಕ್ತಿ ಇದ್ದರೆ ಸದ್ಯ ಎಲ್ಲಾದರೂ ಸಿನೆಮಾ ಶೂಟಿಂಗ್ ನಡೆಯುತ್ತಿದ್ದರೆ ಅಲ್ಲಿ ಹೋಗಿ ಆಸಕ್ತಿಯಿಂದ ತೊಡಗಿಸಿಕೊಂಡರೆ ಬಹಳಷ್ಟು ಜ್ಞಾನ ಸಂಪಾದನೆ ಸಾಧ್ಯ. ಈ ಕುರಿತು ವಿಶೇಷ ಆಸ್ಥೆ ವಹಿಸಬೇಕು.
ಅಂದಹಾಗೆ, ಮಂಗಳೂರು ಸುತ್ತಮುತ್ತ ಸಣ್ಣ-ಪುಟ್ಟ ರೀತಿಯಲ್ಲಿ ಸಿನೆಮಾ ಸಂಬಂಧಿ ತರಬೇತಿಗಳನ್ನು ನೀಡುವುದನ್ನು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಸಿನೆಮಾಟೊಗ್ರಫಿ ಕೋರ್ಸ್‌ಗಳಿಲ್ಲ. ಅದಕ್ಕೆ ಬೆಂಗಳೂರು-ಮೈಸೂರನ್ನೇ ನೆಚ್ಚಿಕೊಳ್ಳಬೇಕು.
ಪುಣೆ, ಚೆನ್ನೈನಲ್ಲಿ ಕಲಿಕಾ ಸಂಸ್ಥೆಗಳು
ಪುಣೆ, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್ ಮತ್ತಿತರ ಕಡೆಗಳಲ್ಲಿ ಸಿನೆಮಾ ನಿರ್ಮಾಣ/ಅಭಿನಯ ಸಂಬಂಧಿಸಿದ ಸಂಸ್ಥೆಗಳಿದ್ದರೂ, ಸಿನೆಮಾದ ಪೂರ್ಣ ಅಧ್ಯಯನಕ್ಕೆ ಪೂರ್ಣ ಪ್ರಮಾಣದ ಶಾಲೆ ಇಲ್ಲ. ಬೆಂಗಳೂರಿನಲ್ಲಿ ಸಿನೆಮಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ನುರಿತ ತಜ್ಞರಿದ್ದಾರೆ. ಅವರ ಸಲಹೆ ಮಾರ್ಗದರ್ಶನದೊಂದಿಗೆ ಸಿನೆಮಾ ಅಧ್ಯಯನ ಶಾಲೆ ಆರಂಭಿಸುವ ನೆಲೆಯಲ್ಲಿ ಬೆಂಗಳೂರು ಸೆಂಟ್ರಲ್ ವಿ.ವಿ.ಯ ಕಾರ್ಯ ಪ್ರಗತಿಯಲ್ಲಿದೆ.
- ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.