ವಾಣಿಜ್ಯ ಉಜ್ವಲ ಭವಿಷ್ಯಕ್ಕೆ ಲಗ್ಗೆ
Team Udayavani, Apr 27, 2017, 12:19 AM IST
ಎಸೆಸೆಲ್ಸಿ ಮುಗಿದ ತತ್‌ಕ್ಷಣ ಕಾಡುವ ಸಮಸ್ಯೆಯೆಂದರೆ, ಪಿಯುಸಿಯಲ್ಲಿ ಯಾವ ಕೋರ್ಸ್ ತಗೋಬೇಕು. ಈ ಗೊಂದಲದಲ್ಲೇ ಹಲವಾರು ಅವಕಾಶಗಳು ಕೈಚೆಲ್ಲಿ ಹೋಗುತ್ತವೆ. ಇದನ್ನು ತಪ್ಪಿಸಬೇಕಾದರೆ ಮುಂದಿರುವ ಅವಕಾಶಗಳ ಬಗ್ಗೆ ತಿಳಿದುಕೊಳ್ಳಬೇಕು. ಲೆಕ್ಕಚಾರದಲ್ಲಿ ಆಸಕ್ತಿ ಹಾಗೂ ಪಕ್ಕಾ ಇದ್ದರೆ ಸಾಕು ಪಿಯುಸಿಯಲ್ಲಿ ತೆಗೆದುಕೊಳ್ಳುವ ಕಾಮರ್ಸ್ ಕೋರ್ಸ್ ಮುಂದೆ ಸಾಕಷ್ಟು ಅವಕಾಶಗಳನ್ನು ತೆರೆದಿಡುತ್ತದೆ. ವಿಜ್ಞಾನ ವಿಭಾಗಕ್ಕೆ ಪೈಪೋಟಿ ನೀಡುವಂತೆ ಬೆಳೆದಿರುವ ವಾಣಿಜ್ಯ ವಿಭಾಗವು ಇಂದು ತನ್ನ ಬೇಡಿಕೆಯನ್ನು ಸಾಕಷ್ಟು ಹೆಚ್ಚಿಸಿಕೊಂಡಿದೆ. ಮಾತ್ರವಲ್ಲ ಉದ್ಯೋಗಾವಕಾಶವೂ ಇಲ್ಲಿ ಸಾಕಷ್ಟಿದೆ.
ಶೈಕ್ಷಣಿಕ ರಂಗ ಎನ್ನುವುದು ವರ್ಷ ಕಳೆದಂತೆ ಬದಲಾಗುತ್ತಿರುತ್ತದೆ. ಒಂದೊಂದು ವರ್ಷ ಒಂದೊಂದು ಕೋರ್ಸ್‌ಗಳು ಜನಪ್ರಿಯತೆಯನ್ನು ಗಳಿಸಿಕೊಂಡಿರುತ್ತವೆ. ಪ್ರಸಕ್ತ ಸಾಲಿನಲ್ಲಿ ಪಿಯುಸಿಯಲ್ಲಿ ಕಾಮರ್ಸ್ (ವಾಣಿಜ್ಯ) ಕೋರ್ಸ್‌ಗಳು ಹೆಚ್ಚು ಬೇಡಿಕೆಯ ಕೋರ್ಸ್ ಎನಿಸಿಕೊಂಡಿವೆ. ಒಂದು ಕಾಲದಲ್ಲಿ ಪಿಯುಸಿಯ ಸೈನ್ಸ್ ಹೆಚ್ಚು ಜನಪ್ರಿಯವಾಗಿದ್ದರೆ, ಇಂದು ಕಾಮರ್ಸ್ ಅದಕ್ಕಿಂತಲೂ ಮುಂದಿದೆ. ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡರೆ ಮುಂದೆ ವಿಪುಲ ಅವಕಾಶಗಳಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಕಾಮರ್ಸನ್ನು ಇಷ್ಟಪಡುತ್ತಾರೆ. ಲೆಕ್ಕಾಚಾರದಲ್ಲಿ ಪಕ್ಕಾ ಇರುವ ವಿದ್ಯಾರ್ಥಿಗೆ ಕಾಮರ್ಸ್ ಹೇಳಿ ಮಾಡಿಸಿದ ಕೋರ್ಸ್ ಎನಿಸಿದೆ. ಹೀಗಾಗಿ ಕಾಮರ್ಸ್ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಂದು ತುಂಬಿ ತುಳುಕುತ್ತಿರುತ್ತದೆ.
ಪದವಿಗಿದೆ ಉತ್ತಮ ಬೇಡಿಕೆ
ಪಿಯುಸಿಯಲ್ಲಿ ಕಾಮರ್ಸ್ ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿ ಬಿ.ಕಾಂ. ಅಥವಾ ಬಿಬಿಎ (ಹಿಂದಿನ ಬಿಬಿಎಂ)ಯಲ್ಲಿ ಪದವಿ ಪಡೆಯುತ್ತಾರೆ. ಬಳಿಕ ಉತ್ತಮ ಅವಕಾಶಗಳಿರುವುದರಿಂದ ಪಿಯುಸಿ ಕಾಮರ್ಸ್ ಮುಗಿಸಿದ ಬಳಿಕ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅನೇಧಿಕರು ಪದವಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಪದವಿ ಮಾಡಿದ ಬಳಿಕ ತಮ್ಮ ಉದ್ಯೋಗದ ಬಗ್ಗೆ ಚಿಂತಿಸುತ್ತಾರೆ. ಹೀಗಾಗಿ ಪದವಿಗೆ ಉತ್ತಮ ಬೇಡಿಕೆ ಇದೆ. ಪದವಿ ಮುಗಿಸಿದ ಬಳಿಕ ಒಂದಷ್ಟು ಮಂದಿ ಉದ್ಯೋಗದ ದಾರಿ ಹಿಡಿದರೆ, ಇನ್ನೊಂದಷ್ಟು ಮಂದಿ ಸಿಎ ಕಲಿಯಲು, ಸ್ನಾತಕೋತ್ತರ ಪದವಿಗೋ ತೆರಳುತ್ತಾರೆ. ಹೀಗಾಗಿ ಕಾಮರ್ಸ್ ಕೋರ್ಸ್‌ಗೆ ಇಂದು ಹೆಚ್ಚಿನ ಬೇಡಿಕೆ ಇದೆ.
ವೃತ್ತಿಪರ ಕೋರ್ಸ್‌ಗಳು
ಕಾಮರ್ಸ್ ಕಲಿತವರಿಗೆ ಕಾಮರ್ಸ್‌ಗೆ ಸಂಬಂಧಪಟ್ಟ ಹಲವು ವೃತ್ತಿಪರ ಕೋರ್ಸ್‌ಗಳಿವೆ. ಅವುಗಳು ಇಂದು ಸಾಕಷ್ಟು ಬೇಡಿಕೆಯ ಕೋರ್ಸ್‌ಗಳು ಎನಿಸಿಕೊಂಡಿವೆ. ಹೀಗಾಗಿ ಅದನ್ನು ಕಲಿಯುವವರ ಸಂಖ್ಯೆ ಹೆಚ್ಚಿದ್ದು, ಉದ್ಯೋಗಾವಕಾಶಗಳು ಕೂಡ ಸಾಕಷ್ಟಿವೆ. ಪ್ರಮುಖವಾಗಿ ಸಿಎ ಕೋರ್ಸ್ ಬೇಡಿಕೆಯಲ್ಲಿಂದು ಎಲ್ಲ ವೃತ್ತಿಪರ ಕೋರ್ಸ್‌ಗಳಿಗಿಂತಲೂ ಒಂದು ಹೆಜ್ಜೆ ಮುಂದಿದೆ. ಜತೆಗೆ ಸಿಎಸ್, ಸಿಎಫ್‌ಎ, ಸಿಪಿಎ, ಹೊಸದಾಗಿ ಆರಂಭವಾಗಿರುವ ಎಸಿಸಿಎ ಕೋರ್ಸ್‌ಗಳು ಬೇಡಿಕೆಯ ಕೋರ್ಸ್‌ಗಳಾಗಿವೆ. ಪ್ರತಿ ಕಂಪೆನಿಗಳಲ್ಲೂ ಇದಕ್ಕಾಗಿ ಅನೇಕ ಹುದ್ದೆಗಳಿದ್ದು, ಕೆಲವೊಂದು ಪ್ರಮುಖ ಹಣಕಾಸು ತಜ್ಞರು ತಮ್ಮ ಸಂಸ್ಥೆಗಳಲ್ಲಿ ಇಂತಹ ಹುದ್ದೆಗಳನ್ನು ನಿರ್ವಹಿಸುವವರಿಗೆ ಮಾತ್ರ ಅವಕಾಶ ನೀಡಿರುತ್ತಾರೆ.
ಬ್ಯಾಂಕಿಂಗ್ ಅವಕಾಶ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ಸಾಕಷ್ಟು ಉದ್ಯೋಗಾವಕಾಶಗಳಿವೆ. ಬ್ಯಾಂಕಿಂಗ್ ಕ್ಷೇತ್ರದತ್ತ ಎಲ್ಲರಿಗೂ ಹೋಗುವ ಅವಕಾಶಗಳಿದ್ದರೂ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾಮರ್ಸ್ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಿರುವುದರಿಂದ ಪಿಯುಸಿಯಲ್ಲಿ ಕಾಮರ್ಸ್ ಮಾಡಿದವರೇ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಣ ತಜ್ಞರು.
ಶಿಕ್ಷಕರಿಗೂ ಬೇಡಿಕೆ
ಎಲ್ಲ ರೀತಿಯ ಕಾಮರ್ಸ್ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಅದನ್ನು ಕಲಿಸುವವರಿಗೂ ಉತ್ತಮ ಬೇಡಿಕೆ ಇದೆ. ಜತೆಗೆ ಕಾಮರ್ಸ್ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಬೇರೆ ಕ್ಷೇತ್ರಗಳತ್ತ ಹೊರಡುತ್ತಿರುವುದರಿಂದ ಶಿಕ್ಷಕರ ಕೊರತೆ ಈ ಕ್ಷೇತ್ರದಲ್ಲಿ ತುಸು ಹೆಚ್ಚಾಗಿಯೇ ಇದೆ. ಹೀಗಾಗಿ ಕಾಮರ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಉತ್ತಮ ಅವಕಾಶಗಳಿವೆ. ಪ್ರತಿಯೊಂದು ಕಾಲೇಜುಗಳಲ್ಲಿ ಪಿಯುಸಿಯಲ್ಲಿ ಕಾಮರ್ಸ್ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಎ, ಬಿ, ಸಿ ವಿಭಾಗಗಳನ್ನು ಆರಂಭಿಸುತ್ತಿದೆ. ಹೀಗಾಗಿ ಕಾಮರ್ಸ್ ಕಲಿಸುವ ಉಪನ್ಯಾಸಕರಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಕಾಮರ್ಸ್‌ಗೆ ಸಂಬಂಧಪಟ್ಟಂತೆ ಸ್ನಾತಕೋತ್ತರ ಅಧ್ಯಯನ ಮಾಡುವವರ ಸಂಖ್ಯೆಯೂ ಹೆಚ್ಚಿದೆ.
ಇತರ ಅವಕಾಶಗಳು
ಶಿಕ್ಷಣ ತಜ್ಞರ ಅಭಿಪ್ರಾಯದ ಪ್ರಕಾರ ಕಾಮರ್ಸ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಇಂತಹ ಸಾಕಷ್ಟು ಅವಕಾಶಗಳಿವೆ. ಪಿಯುಸಿಯಲ್ಲಿ ಕಾಮರ್ಸ್ ಮಾಡಿ ಎಲ್‌ಎಲ್‌ಬಿ ಶಿಕ್ಷಣ ಪಡೆದವರಿಗೆ ಉತ್ತಮ ಬೇಡಿಕೆ ಇದೆ. ಪ್ರಮುಖ ಕಂಪೆನಿಗಳು ತಮ್ಮ ಕಾನೂನು ಸಲಹೆಗಾರರನ್ನಾಗಿ ಇಂತಹ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲ ಕಂಪೆನಿಗಳು ತಮ್ಮ ಲೆಕ್ಕಾಚಾರಗಳ ತೆರಿಗೆ ನಿರ್ವಹಣೆಗಾಗಿ ಟ್ಯಾಕ್ಸ್ ಕನ್ಸಲ್ಟೆಂಟ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಈ ರೀತಿಯಲ್ಲಿ ಟ್ಯಾಕ್ಸ್ ಕನ್ಸಲ್ಟೆಂಟ್‌ಗಳಾಗಿ ಖಾಸಗಿಯಾಗಿಯೂ ಉದ್ಯೋಗ ಮಾಡಬಹುದಾಗಿದೆ.
ಪ್ರತಿ ಸಂಸ್ಥೆಗಳಿಗೂ ಕೂಡ ಅಕೌಂಟೆಂಟ್ ಅಗತ್ಯವಾಗಿದ್ದು, ಕಾಮರ್ಸ್ ಪಿಯುಸಿ, ಪದವಿ ಪಡೆದ ವಿದ್ಯಾರ್ಥಿಗಳಿಗೆ ಈ ಹುದ್ದೆಗೆ ಉತ್ತಮ ಬೇಡಿಕೆ ಇದೆ. ಕಾಮರ್ಸ್ ಪಡೆದು ಕಂಪ್ಯೂಟರ್ ಕಲಿತವರಿಗೆ ತತ್‌ಕ್ಷಣ ಉದ್ಯೋಗ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಎಲ್ಲ ದೃಷ್ಟಿಕೋನಗಳಿಂತಲೂ ಕಾಮರ್ಸ್ ಎನ್ನುವುದು ಬಹುಬೇಡಿಕೆಯ ಶಿಕ್ಷಣವಾಗಿದ್ದು, ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.