ಅಬ್ಬಾ ಅಬ್ಬಿ !
ಮಡಿಕೇರಿ ಮಂಜಲ್ಲಿ ಮಿಂದ ಸುಂದರಿ
Team Udayavani, Aug 8, 2019, 5:00 AM IST
ಪ್ರಕೃತಿ ಮಾತೆಗೆ ಮೆರುಗು ನೀಡುವ ಸೌಂದರ್ಯರಾಶಿ. ಜುಳು ಜುಳು ಹರಿಯುವ ನೀರಿನ ಶಬ್ದವು ಕಿವಿಗೆ ಇಂಪಾದ ಸಂಗೀತದಂತೆ ಕೇಳಿಸುತ್ತದೆ. ಬೇಂದ್ರೆಯವರ ಇಳಿದು ಬಾ ತಾಯೇ ಹಾಡಿಗೆ ಮರುಳಾಗಿ ಹರನ ಜಡೆಯಿಂದ ಗಂಗೆಯೇ ಭೂರಮೆಗೆ ಇಳಿದುಬಂದಂತಹ ಅನುಭವ. ಕಣ್ಣಿಗೆ ಮುದ ನೀಡುವ ಬೆಳ್ನೊರೆಯ ಈ ಜಲಪಾತ ಕಾಣಸಿಗುವುದು ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿಯಲ್ಲಿ.
ಮಡಿಕೇರಿಯಿಂದ 7ರಿಂದ 8 ಕಿ.ಮೀ. ದೂರ ಸಾಗಿದರೆ ಪ್ರಕೃತಿಯ ಚಂದವನ್ನು ಸವಿಯುವ ಜತೆಗೆ ಧರೆಗೆ ಇಳಿಯುವ ನೀರಿನ ಸಪ್ಪಳಕ್ಕೆ ಕಿವಿಯಾಗಬಹುದು. ಮಳೆಗಾಲದ ಅವಧಿಯಲ್ಲಿ ಅದೊಂದು ಅದ್ಭುತ ಅನುಭವ. ಅಬ್ಟಾ! ಎಂಬ ಉದ್ಗಾರ ನಮ್ಮ ಬಾಯಿಯಿಂದ ತಾನಾಗಿಯೇ ಹೊಮ್ಮುತ್ತದೆ. ಅಷ್ಟು ಸೊಗಸಾಗಿದೆ ಅಬ್ಬಿ ಜಲಪಾತ.
ಸುತ್ತ ಹಸುರು ಉಟ್ಟ ಕಾಡಿನ ಸೊಬಗು. ನಡುವೆ ನಡೆಯುತ್ತ ಸಾಗಿದರೆ ಆಯಾಸವೂ ಗಮನಕ್ಕೆ ಬಾರದು. ಜಲಪಾತದ ಮೊರೆಯುವ ಸದ್ದು ಜೋರಾಗುತ್ತ ಸಾಗಿ, ನಮ್ಮನ್ನು ಬೇಗ ಬಾ ಎಂದು ಕರೆಯುತ್ತದೆ. ದಾರಿಯಲ್ಲಿ ಹಕ್ಕಿಗಳ ಇಂಚರ, ಪ್ರಾಣಿಗಳ ಕೂಗು ಮುದ ನೀಡುತ್ತದೆ.
ಕೊಡಗು ಹಲವು ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಕೆ. ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಅಬ್ಬಿ ಜಲಪಾತ ಮಡಿಕೇರಿ ಪ್ರವಾಸಕ್ಕೆಂದು ತೆರಳುವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಅಬ್ಬಿ ಜಲಪಾತ ನೋಡದಿದ್ದರೆ ಕೊಡಗಿನ ಪ್ರವಾಸ ಪೂರ್ತಿಯಾಗುವುದಿಲ್ಲ. ಮಡಿಕೇರಿಯ ಮಂಜು, ದಟ್ಟ ಕಾಡುಗಳು, ಕಾಫಿ ತೋಟಗಳು ನಿಸರ್ಗದ ರಮಣೀಯತೆಯನ್ನು ವೃದ್ಧಿಸಿವೆ. ಚುಮು ಚುಮು ಚಳಿಯಲ್ಲಿ ಬೆಚ್ಚನೆಯ ಕಾಫಿ ಸವಿಯುವ ಸುಖ ಸ್ವರ್ಗಕ್ಕೇ ಕಿಚ್ಚು ಹಚ್ಚುವಂತಿರುತ್ತದೆ. ಇಂತಹ ಸೌಂದರ್ಯಕ್ಕೆ ಕಲಶವಿಟ್ಟಂತೆ ಜಲಪಾತಗಳು!
ಮಡಿಕೇರಿಯಲ್ಲಿ ಮಳೆಯಾಯಿತೆಂದರೆ ಅಬ್ಬಿ ಜಲಪಾತವು ಹೆಬ್ಬಂಡೆಯ ಮೇಲಿಂದ ಮೇಲೆ ಧುಮುಕಿ ಹರಿಯುತ್ತಿರುತ್ತದೆ. ಝರಿಯ ನರ್ತನದಲ್ಲಿ ಮೀಯುವ ಹೆಬ್ಬಂಡೆಗಳ ಚೆಲುವನ್ನು ನೋಡುವುದರಲ್ಲೇ ನಾವು ಮೈಮರೆಯುತ್ತೇವೆ.
ಅಬ್ಬಿ ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೇಸಗೆಯಲ್ಲಿ ಮಾತ್ರ ಇದು ಸೊರಗುತ್ತದೆ. ಮಳೆಗಾಲದಲ್ಲಿ ರುದ್ರ ರಮಣೀಯವಾಗುತ್ತದೆ. ವಯ್ನಾರದಿಂದ ಧುಮುಕುವ ಜಲಧಾರೆ ನೋಡುಗರ ಕಣ್ಮನವನ್ನು ತಣಿಸುತ್ತದೆ. ಈ ಸ್ಥಳಕ್ಕೆ ಭೇಟಿ ನೀಡಿದರೆ ಮೈಮರೆಯುವ ಪ್ರಕೃತಿ ಸೌಂದರ್ಯದ ಆರಾಧಕರಾಗಿ ಸಮಯ ಕಳೆಯಬಹುದು.
ಸುಮಾರು 70 ಅಡಿ ಎತ್ತರದಿಂದ ಧುಮುಕುವ ಈ ಜಲಪಾತದ ನೀರು ಮುಂದೆ ಕಾವೇರಿ ನದಿಯನ್ನು ಸೇರುತ್ತದೆ. ಇದು ಪ್ರವಾಸಿ ತಾಣವಾಗಿಯೂ ಹೆಸರಾಗಿದೆ. ವಿಶಾಲವಾದ ಜಾಗ ಪಾರ್ಕಿಂಗ್‌ಗೆ ಲಭ್ಯವಿದೆ. ಇಲ್ಲಿ ಸಿಗುವ ಆಹಾರದ ಗುಣಮಟ್ಟವೂ ಉತ್ತಮವಾಗಿದೆ. ಬೆಳಗ್ಗೆ 8ರಿಂದ ಸಂಜೆ 5.30ರ ತನಕ ಜಲಪಾತ ವೀಕ್ಷಣೆಗೆ ಅವಕಾಶವಿದೆ. ಜಲಪಾತದ ಮುಂಭಾಗದಲ್ಲಿ ಒಂದು ತೂಗುಸೇತುವೆ ಇದ್ದು, ಅಲ್ಲಿಂದ ಜಲಪಾತದ ಸೌಂದರ್ಯವನ್ನು ಮನದಣಿಯೆ ಸವಿಯಬಹುದು.
ಅಬ್ಬಿ ಫಾಲ್ಸ್ ಮಂಗಳೂರಿನಿಂದ 144 ಕಿ.ಮೀ. ದೂರದಲ್ಲಿದೆ. ಮಡಿಕೇರಿಯಿಂದ ಕೇವಲ 8 ಕಿ.ಮೀ. ಅಂತರ. ಮಡಿಕೇರಿಯಿಂದ ಆಟೋಗಳು ಸಿಗುತ್ತವೆ. ಪ್ರವೇಶದ್ವಾರದಿಂದ ಸುಮಾರು 200 ಅಡಿ ದೂರಕ್ಕೆ ಕಾಫಿ ತೋಟಗಳ ನಡುವೆ ಕೆಳಗಿಳಿದು ಸಾಗಬೇಕು. ವೃದ್ಧರಿಗೆ ಇದು ಸ್ವಲ್ಪ ಕಷ್ಟದ ದಾರಿ. ವಾಹನಗಳ ನಿಲುಗಡೆಗೆ 30 ರೂ., ಪ್ರವೇಶಕ್ಕೆ 15 ರೂ. ಶುಲ್ಕ ವಿಧಿಸಲಾಗುತ್ತದೆ.
ರೂಟ್ ಮ್ಯಾಪ್
- ಮಂಗಳೂರಿನಿಂದ ಮಡಿಕೇರಿಗೆ 137.8 ಕಿ.ಮೀ.
- ಪುತ್ತೂರಿನಿಂದ ಮಡಿಕೇರಿ 87.1 ಕಿ.ಮೀ.
- ಮಡಿಕೇರಿಯಿಂದ ಅಬ್ಬಿಗೆ ಕೇವಲ 8 ಕಿ.ಮೀ. ಆಟೋ ಮಾಡಿಕೊಂಡು ಹೋಗಬಹುದು
- ಸಾಯಿನಂದಾ ಚಿಟ್ಪಾಡಿ, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.