Success: ಯಶಸ್ವಿ ಜೀವನಕ್ಕೆ ಸೂತ್ರಗಳು
Team Udayavani, Dec 18, 2024, 3:48 PM IST
ಮಾನವ ಜನ್ಮ ಎನ್ನುವುದು ಅತ್ಯಂತ ಅಮೂಲ್ಯ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ತಮ್ಮ ಪ್ರಥಮ ಪ್ರಯತ್ನದಲ್ಲಿ ಸೋತರೆ ಇನ್ನು ಕೆಲವಷ್ಟು ಮಂದಿ ಹಲವಾರು ಪ್ರಯತ್ನಗಳಿಂದ ಯಶಸ್ವಿಯಾಗುತ್ತಾರೆ. ಇನ್ನು ಒಂದು ವರ್ಗ ನಿರಂತರವಾಗಿ ಸೋಲುಗಳಿಂದ ಕಂಗೆಟ್ಟುತನ್ನ ಬದುಕೇ ಇಲ್ಲಿಗೆ ಮುಗಿದು ಹೋಯಿತು ಎಂದು ತೀರ್ಮಾನಿಸುವ ಹಂತಕ್ಕೆ ಬರುತ್ತಾರೆ.
ಮನುಷ್ಯನ ಜೀವನದಲ್ಲಿ ಉತ್ಸರ್ಪಣಿ ಕಾಲ ಎಂದರೆ ಅತ್ಯಂತ ಹೆಚ್ಚಿನ ಯಶಸ್ಸನ್ನು ಗಳಿಸುವಂಥ ಒಂದು ಸಂದರ್ಭ ಹಾಗೂ ಅವಸರ್ಪಿಣಿ ಕಾಲ ಎಂದರೆ ಬದುಕಿನಲ್ಲಿ ಮೇಲಿಂದ ಮೇಲೆ ಸೋಲನ್ನು ಕಾಣುವಂತಹ ಸಂದರ್ಭಗಳು ಬರುತ್ತಿದ್ದು ಇವುಗಳು ಶಾಶ್ವತವಲ್ಲ.
ಮಾಡುವ ತಪ್ಪುಗಳಿಂದ ಹೊಸ ಪಾಠವನ್ನುಕಲಿಯುವ ಮನೋಭಾವವನ್ನು ಬೆಳೆಸಿಕೊಳ್ಳ ಬೇಕು. ಜೀವನದಲ್ಲಿ ಪ್ರಾಮಾಣಿಕತೆಯನ್ನು ಪ್ರತಿಯೊಬ್ಬ ಮನುಷ್ಯನ ಧ್ಯೇಯ ವಾಕ್ಯವಾಗಬೇಕು ನಿಜ. ಆದರೆ ಅತಿ ಪ್ರಾಮಾಣಿಕತೆಯೂ ವ್ಯಕ್ತಿಯೊಬ್ಬನಿಗೆ ಮುಳುವಾಗುವ ಸಾಧ್ಯತೆಗಳೂ ಇರುತ್ತದೆ. ನಾನೇಕೆ ಈ ಕೆಲಸವನ್ನು ಮಾಡುತ್ತಿದ್ದೇನೆ, ನಾನು ಮಾಡುತ್ತಿರುವ ಕೆಲಸದ ಫಲವೇನು ಹಾಗೂ ಈ ಕೆಲಸದಲ್ಲಿ ನಾನು ಯಶಸ್ವಿಯಾಗುತ್ತೇನೆಯೇ ಎಂಬ ಈ ಮೂರು ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಮತ್ತು ಆತ್ಮಸಾಕ್ಷಿ ಸಹಿತವಾದ ಸ್ಪಷ್ಟ ಉತ್ತರ ಸಿಕ್ಕರೆ ಮಾತ್ರ ಆ ನಿರ್ದಿಷ್ಟ ಕೆಲಸವನ್ನು ಮುಂದುವರಿಸುವ ಪ್ರಯತ್ನವನ್ನು ಮಾಡುವುದು ಒಳಿತು.
ಸ್ವಭಾವತಃ ನಾವು ಅತ್ಯಂತ ಸಾಧು ಮನಸ್ಥಿತಿಯವರಾಗಿದ್ದರೂ ಕೆಲವೊಂದು ಕ್ಲಿಷ್ಟಕರ ಸನ್ನಿವೇಶವನ್ನು ಎದುರಿಸುವ ಸಂದರ್ಭದಲ್ಲಿ ಕಠಿನ ಮನೋಭಾವದವರಿಗೆ ಹಾವಿನಂತೆ ಬುಸುಗುಡುವ ಅಥವಾ ನಿರ್ದಾಕ್ಷಿಣ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ಕೋಪವೇ ಇಲ್ಲದಂತ ಮನುಷ್ಯನು ಯಾವುದೇ ಆಡಳಿತಾತ್ಮಕ ವಿಚಾರಗಳಲ್ಲಿ ಗೆಲ್ಲಲಾರ ಎಂಬ ಮಾತು ಎಷ್ಟು ಸತ್ಯವೂ ಹಾಗೆಯೇ ಅನಿವಾರ್ಯ ಸಂದರ್ಭಗಳಲ್ಲಿ ಕೋಪಗೊಂಡ ಹಾಗೂ ಶಿಕ್ಷಿಸಬಲ್ಲೆನೆಂಬ ಮನೋಭಾವವನ್ನು ಪ್ರದರ್ಶಿಸುವುದೂ ಅನಿವಾರ್ಯವಾಗುತ್ತದೆ ಇದರಿಂದ ಕೆಲವೊಂದು ವಿಚಾರಗಳಲ್ಲಿ ಗೆಲುವನ್ನು ಶೀಘ್ರವಾಗಿ ಸಾಧಿಸಬಹುದು.
ಯಾವುದೇ ಕಾರಣಕ್ಕೂ ನಿಮ್ಮ ಅಜ್ಞಾತ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರನ್ನು ಎಲ್ಲಿ, ಯಾವಾಗ, ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬ ವಿವೇಚನೆಯೂ ಪ್ರತಿಯೊಬ್ಬ ವ್ಯಕ್ತಿಯೂ ತಿಳಿದಿರುವುದು ಅತ್ಯಂತ ಅವಶ್ಯಕ.
ಯಾವುದೋ ಒಂದು ನಿರ್ದಿಷ್ಟ ವಿಚಾರದ ಕುರಿತಾಗಿ ನಮ್ಮ ಮನಸ್ಸಿನಲ್ಲಿ ಭಯ ಮೂಡುತ್ತಿದೆ ಎಂದಾದಾಗ ಆ ಭಯವನ್ನು ಹತ್ತಿರವೂ ಸುಳಿಯದಂತೆ ಆ ಭಯದ ಮೇಲೆ ನಿರ್ದಾಕ್ಷಿಣ್ಯವಾಗಿ ಆಕ್ರಮಣ ಮಾಡಿ ಭಯವನ್ನು ನಾಶಗೊಳಿಸಿಬಿಡಬೇಕು.
ಯಾವುದೇ ಒಂದು ಕೆಲಸವನ್ನು ಕೈಗೆತ್ತಿಕೊಂಡ ಬಳಿಕ ಆ ಕೆಲಸ ವಿಫಲವಾಗುವುದೇ ಎಂಬ ಭಯದಿಂದ ಅರ್ಧದಲ್ಲೇ ಕೆಲಸವನ್ನು ನಿಲ್ಲಿಸಬೇಡಿ. ಕೈಗೆತ್ತಿಕೊಂಡಿರುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅದಕ್ಕಿಂತ ಖುಷಿಯ ವಿಚಾರ ಇನ್ಯಾವುದೂ ಇರಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು.
ಯಾವಾಗಲೂ ನಿಮ್ಮ ಅಂತಸ್ತಿಗಿಂತ ಒಂದು ಹಂತ ಮೇಲಿರುವ ವ್ಯಕ್ತಿಗಳೊಂದಿಗೆ ನೀವು ಗೆಳೆತನವನ್ನು ಸಾಧಿಸುವ ಪ್ರಯತ್ನವನ್ನು ಮಾಡುವುದು ಉತ್ತಮ. ಏಕೆಂದರೆ ನಮ್ಮ ವಿಚಾರಧಾರೆಗಳು ಮತ್ತು ಗೆಳೆತನ ಯಾವಾಗಲೂ ಉನ್ನತವಾಗಿ ಎಂದರೆ ನಮ್ಮ ಅಂತಸ್ತಿಗಿಂತ ಮೇಲಿನ ಅಂತಸ್ತಿನ ವ್ಯಕ್ತಿಗಳೊಂದಿಗೆ ಹೊಂದಿದ್ದಾಗ ಇದನ್ನು ಸುಲಭವಾಗಿ ಸಾಧಿಸಬಹುದು. ಇದರಿಂದ ಯಶಸ್ಸು ನಮ್ಮನ್ನು ಅತ್ಯಂತ ವೇಗವಾಗಿ ಅಪ್ಪಿಕೊಳ್ಳಬಹುದು.
ಪ್ರತಿಯೊಬ್ಬ ವ್ಯಕ್ತಿಯೂ ಈ ಮೇಲ್ಕಂಡ ಅಂಶಗಳ ಕುರಿತು ಚಿಂತನೆಯನ್ನು ಮಾಡಿದಾಗ ಖಂಡಿತವಾಗಿಯೂ ಆತನ ಬದುಕಿನ ಹತಾಶೆ ಸೋಲು ಹಾಗೂ ಕಠಿನ ಸಂದರ್ಭಗಳನ್ನು ಗೆದ್ದು ನಿಲ್ಲುವ ಮನೋಧರ್ಮವನ್ನು ಬೆಳೆಸಿಕೊಳ್ಳಲು ಸಾಧ್ಯವಾಗಬಹುದು. ಖುಷಿಯಾದಾಗ ಆರಕ್ಕೇರದೆ ದುಃ ಖವಾದಾಗ ಮೂರಕ್ಕಿಳಿಯದೇ ಸಮಚಿತ್ತದಿಂದ ಬದುಕನ್ನು ಸಂಭಾಳಿಸಿಕೊಂಡು ಹೋದಾಗ ಖಂಡಿತವಾಗಿ ಬದುಕಿನಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಬಹುದು. ಜೀವನವೆಂಬುದು ಅತ್ಯಂತ ಸಣ್ಣ ಅವಧಿಯದ್ದಾಗಿದ್ದು, ಈ ಸಣ್ಣ ಅವಧಿಯಲ್ಲಿ ಬದುಕನ್ನು ಇನ್ನಷ್ಟು ಹೆಚ್ಚು ಅರ್ಥಪೂರ್ಣವಾಗಿಸುವುದು ಪ್ರತಿಯೊಬ್ಬ ವ್ಯಕ್ತಿಯ ಗುರಿಯಾಗಬೇಕು ಎನ್ನುವುದನ್ನು ಮರೆಯಬಾದು.
ಸಂತೋಷ್ ರಾವ್
ಬೆಳ್ತಂಗಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.