ಮಲ್ಲಳ್ಳಿ ಜಲಧಾರೆ ವೈಭವ
Team Udayavani, Aug 15, 2019, 5:37 AM IST
ಸಂಗಾತಿಯ ಸಾಂಗತ್ಯವಿಲ್ಲದೆ ನೊಂದು ಬೆಂದಿದ್ದ ಇಳೆಯ ಸಕಲ ಬಯಕೆಗಳನ್ನು ಪೂರೈಸುವಂತೆ ಮಳೆ ಧಾರೆಯಾಗಿ ಸುರಿಯುತ್ತಿತ್ತು. ಮುಂಗಾರಿನ ಅಭಿಷೇಕದಿಂದ ಪ್ರೀತಿಯಂಥ ಹಸಿರು ಕಣ್ಣಿಗೆ ಮುತ್ತಿಡುತ್ತಿತ್ತು. ವರ್ಷಧಾರೆಗೆ ಮೈದುಂಬಿದ ಜಲಧಾರೆಗಳು ಪ್ರವಾಸಿಗರನ್ನು ಹರ್ಷದ ಹೊನಲಿನಲ್ಲಿ ಮೀಯಿಸುತ್ತಿದ್ದವು.
ದಕ್ಷಿಣದ ಕಾಶ್ಮೀರ ಎಂದೇ ಹೆಸರಾದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಬಳಿಯಿರುವ ಮಲ್ಲಳ್ಳಿ ಜಲಪಾತ ನಯನ ಮನೋಹರವಾಗಿದೆ. ದೂರದಲ್ಲಿ ಮುಗಿಲನ್ನು ಚುಂಬಿಸಲೋ ಎನ್ನುವಂತೆ ನಿಂತ ಪುಷ್ಪಗಿರಿ ಬೆಟ್ಟದ ಶ್ರೇಣಿಗಳು, ಅವುಗಳ ನಡುವಿನ ಕಂದಕದಲ್ಲಿ ಒತ್ತೂತ್ತಾಗಿ ಬೆಳೆದು ನಿಂತ ವೃಕ್ಷರಾಶಿಗಳು, ಏಲಕ್ಕಿ ಹಾಗೂ ಕಾಫಿ ತೋಟಗಳು ಕಣ್ಣು ಹಾಯಿಸಿದ್ದುದ್ದಕ್ಕೂ ಹಸುರು ಹಚ್ಚವನ್ನು ಹೊದ್ದ ನಿಸರ್ಗ. ಇಂತಹ ದಟ್ಟ ಕಾನನದ ನಡುವಿನ ಸುಂದರ ಪರಿಸರದ ಮಧ್ಯದಲ್ಲಿ ಹೆಬ್ಬಂಡೆಯೊಂದರ ಮೇಲೆ ಬಳ್ಳಿ ಬಳುಕಿದಂತೆ ಗೋಚರಿಸುತ್ತದೆ ಮಲ್ಲಳ್ಳಿ ಜಲಕನ್ಯೆ.
ವಿಹಂಗಮ ದೃಶ್ಯ
ಕೊಡಗಿನ ಬೇರೆ ಜಲಧಾರೆಗಳಿಗೆ ಹೋಲಿಸಿದರೆ ಮಲ್ಲಳ್ಳಿ ಜಲಧಾರೆ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ಗಮನ ಸೆಳೆಯುತ್ತದೆ. ಬೆಟ್ಟಗಳ ನಡುವಿನ ಹೆಬ್ಬಂಡೆಗಳ ಮೇಲಿನಿಂದ ಬೃಹತ್ ಕಂದಕಕ್ಕೆ ಸುಮಾರು ಎಂಬತ್ತು ಅಡಿ ಅಗಲವಾಗಿ ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮ್ಮಿ ಕ್ಕುವ ಜಲರಾಶಿ. ಬಳಿಕ ಚಿಕ್ಕಚಿಕ್ಕ ಜಲಧಾರೆಗಳಾಗಿ ತಳ ಸೇರುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಒಂದು ಹೆಬ್ಬಂಡೆಯಿಂದ ಇನ್ನೊಂದಕ್ಕೆ ಚಿಮ್ಮುವಾಗ ಕಾಣಸಿಗುವ ಸುಂದರದೃಶ್ಯ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಒಂದು ಕ್ಷಣ ಭೂತಾಯಿಯ ಒಡಲ ಬೆಳ್ಳಿಯೆಲ್ಲವೂ ಕರಗಿ ಬಂಡೆಯ ಮೇಲೆ ಹರಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.
ಜಲಪಾತದ ವೈಶಿಷ್ಟ್ಯ
ಕೊಡಗಿನಲ್ಲಿರುವ ಬೇರೆಲ್ಲ ನದಿಗಳು ಪೂರ್ವ ದಿಕ್ಕಿಗೆ ಹರಿದು ಕಾವೇರಿಯೊಂದಿಗೆ ಸೇರಿ ಬಂಗಾಲಕೊಲ್ಲಿಯಲ್ಲಿ ವಿಲೀನವಾದರೆ ಈ ನದಿ ಮಾತ್ರ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ಜಲಧಾರೆಯು ಕುಮಾರಧಾರಾ ನದಿಯಿಂದ ನಿರ್ಮಿತವಾಗಿದ್ದು, ಜಲಪಾತವನ್ನು ಇಲ್ಲಿನ ಜನರು ಕುಮಾರಧಾರಾ ಜಲಧಾರೆ, ಪುಷ್ಪಹಾರಿ ಜಲಧಾರೆ, ಮಲ್ಲಳಿ ಹೊಳೆ, ಹೆಗ್ಗಡೆಮನೆ ಹೊಳೆ – ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.
ಹಾದಿ ಸುಲಭವೇನಿಲ್ಲ
ಮಲ್ಲಳ್ಳಿ ಜಲಧಾರೆ ಸನಿಹಕ್ಕೆ ಹೋಗಿ ಬರುವುದು ಅಷ್ಟು ಸುಲಭದ ಮಾತಲ್ಲ. ಪೇಟೆ ಪಟ್ಟಣದಿಂದ ದೂರವಾಗಿ, ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರದಿಂದ ವಂಚಿತವಾಗಿರುವ ಈ ತಾಣಕ್ಕೆ ಭೇಟಿ ನೀಡಬೇಕೆಂದರೆ ಒಂದಿಡೀ ದಿನವನ್ನು ಮೀಸಲಿಡಬೇಕು. ರಕ್ತ ಹೀರಲು ಬರುವ ಜಿಗಣೆಗಳಿಂದ ತಪ್ಪಿಸಿಕೊಂಡು ಕಲ್ಲು-ಮುಳ್ಳು, ಏರು ತಗ್ಗುಗಳ ಹಾದಿಯನ್ನು ಕ್ರಮಿಸಿ ಶ್ರಮ ಪಡಬೇಕು. ಇದಕ್ಕೆಲ್ಲ ತಯಾರಿದ್ದರೆ ಮಾತ್ರ ನಾವು ಸನಿಹಕ್ಕೆ ತೆರಳಿ ಜಲಧಾರೆಯ ಸೊಬಗನ್ನು ಸವಿಯಲು ಸಾಧ್ಯ.
ಇಲ್ಲಿಗೆ ತಲುಪುವುದು ಹೇಗೆ?
ಮಲ್ಲಳ್ಳಿ ಜಲಧಾರೆಯನ್ನು ವೀಕ್ಷಿಸಲು ತೆರಳುವವರು ಕೊಡಗಿನ ತಾಲೂಕು ಕೇಂದ್ರಗಳಲ್ಲಿ ಒಂದಾದ ಸೋಮವಾರ ಪೇಟೆಗೆ ತೆರಳಿದರೆ ಅಲ್ಲಿಂದ ಶಾಂತಳ್ಳಿ ಮೂಲಕ ಸುಮಾರು ಇಪ್ಪತ್ತು ಕಿ.ಮೀ. ಸಂಚರಿಸಬೇಕು. ಅಲ್ಲಿ ಹಂಚಿನಹಳ್ಳಿ ಗ್ರಾಮ ಸಿಗುತ್ತದೆ. ಇಲ್ಲಿಂದ ಬಲಕ್ಕೆ ಮಣ್ಣುರಸ್ತೆಯಲ್ಲಿ ನಾಲ್ಕು ಕಿ.ಮೀ. ಏರು-ತಗ್ಗುಗಳನ್ನು ದಾಟಿ ಮುನ್ನಡೆಯಬೇಕು. ಹೀಗೆ ನಡೆಯುವಾಗ ಆಯಾಸವಾಗುವುದು ಸಹಜ. ಆದರೆ ಸುತ್ತಲಿನ ನಿಸರ್ಗ ಸೌಂದರ್ಯ ನಮ್ಮ ಆಯಾಸವನ್ನು ಮರೆಸಿ, ಹೊಸ ಉಲ್ಲಾಸವನ್ನು ತುಂಬುತಿರುತ್ತದೆ. ಕಾಲ್ನಡಿಗೆಯ ಹಾದಿ ಮುಗಿಯುತ್ತಿದ್ದಂತೆಯೇ ವಿಶಾಲವಾದ ಮೈದಾನ ಎದುರಾಗುತ್ತದೆ. ಇಲ್ಲಿಂದ ನಿಂತು ನೋಡಿದರೆ ದೂರದಲ್ಲಿ ಹೆಬ್ಬಂಡೆಗಳ ನಡುವೆ ಶ್ವೇತಧಾರೆಯಾಗಿ ನಾಟ್ಯಾಂಗಿಯಂತೆ ಜಲಧಾರೆ ಕಂಗೊಳಿಸುತ್ತದೆ. ಸೋಮವಾರಪೇಟೆ ತನಕ ಹಾಗೂ ಅಲ್ಲಿಂದ ಶಾಂತಳ್ಳಿ ಮೂಲಕ ಹಂಚಿನಹಳ್ಳಿ ಗ್ರಾಮದ ವರೆಗೆ ಬಸ್ಸು ಸಿಗುತ್ತದೆ. ಮುಂದೆ ನಾಲ್ಕು ಕಿ.ಮೀ.ಗಳಷ್ಟು ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದ ದಾರಿ ಇದೆ. ಅಬ್ಬಿ ಜಲಪಾತವೂ ಸಮೀಪದಲ್ಲೇ ಇದೆ.
•ಕವಿತಾ ಎಂ.ಎಲ್., ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.