ಅಭಿನಯದಿಂದ ಆ್ಯಕ್ಷನ್ ಕಟ್‌ನತ್ತ!
Team Udayavani, May 2, 2019, 11:07 AM IST
ಎಲ್ಲರ ಚಿತ್ತ ಕೋಸ್ಟಲ್‌ವುಡ್‌ನತ್ತ ನೆಟ್ಟಿದೆ. ತಿಂಗಳಿಗೆ ಒಂದು ಎರಡರಂತೆ ಬರುತ್ತಿರುವ ತುಳು ಸಿನೆಮಾಗಳು ಅಷ್ಟರ ಮಟ್ಟಿಗೆ ತುಳು ಫಿಲ್ಮ್ ಇಂಡಸ್ಟ್ರಿಯಲ್ಲಿ ಸೌಂಡ್ ಮಾಡಿದೆ. ಹೀಗಾಗಿ ಸ್ಯಾಂಡಲ್‌ವುಡ್‌ನವರು ಕೂಡ ಕೋಸ್ಟಲ್‌ವುಡ್‌ನತ್ತ ದೃಷ್ಟಿ ಇಟ್ಟಿದ್ದಾರೆ. ಇಲ್ಲಿ ತುಳುವಿನ ಕಾಮಿಡಿ ಸ್ಟಾರ್‌ಗಳು ಇರುವ ಜತೆಗೆ ಹೊಸಬರ ಎಂಟ್ರಿ ಕೂಡ ಆಗುತ್ತಿದೆ. ಹೊಸ ಕಥೆ, ಹೊಸ ಯೋಚನೆಯೊಂದಿಗೆ ಹೊಸ ನಿರ್ದೇಶಕರು ಕೂಡ ಇಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ. ಈ ವಿಶೇಷದ ಮಧ್ಯೆಯೇ ಕೋಸ್ಟಲ್‌ವುಡ್‌ನ ಯುವ ನಟರು ನಿರ್ದೇಶನ ಪಟ್ಟ ಅಲಂಕರಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ. ನಾವೂ ಆ್ಯಕ್ಷನ್ ಕಟ್ ಹೇಳುತ್ತೇವೆ ಎಂದು ಅಭಿನಯ ಚತುರರು ನಿರ್ದೇಶನದತ್ತ ಎಂಟ್ರಿಯಾಗಿದ್ದಾರೆ.
ಕೋಸ್ಟಲ್‌ವುಡ್‌ನಲ್ಲಿ ಭರವಸೆಯ ನಟನಾಗಿ ಮಿಂಚಿರುವವರು ನಟ ರೂಪೇಶ್ ಶೆಟ್ಟಿ. ಹೊಸತನದೊಂದಿಗೆ ಹೊಸ ನಿರೀಕ್ಷೆಯಲ್ಲಿ ಸಿನೆಮಾ ಬರಬೇಕು ಎಂಬ ಲೆಕ್ಕ ಹಾಕಿಕೊಂಡವರು ಅವರು. ಹೀಗಾಗಿಯೇ ತುಳು ಹಾಗೂ ಕನ್ನಡದಲ್ಲಿಯೂ ನಾಯಕ ನಟನಾಗಿ ಮಿಂಚುವ ಅವಕಾಶ ಅವರಿಗೆ ದೊರಕಿದೆ. “ಐಸ್‌ಕ್ರೀಂ’, “ಅಮ್ಮೆರ್ ಪೊಲೀಸಾ’ ಸೇರಿದಂತೆ ಹಲವು ತುಳು ಸಿನೆಮಾ ಮಾಡಿದ ರೂಪೇಶ್ ಈಗ ನೇರವಾಗಿ “ಗಿರಿಗಿಟ್’ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ಆಗಸ್ಟ್ ವೇಳೆಗೆ ಬಿಡುಗಡೆಯ ನಿರೀಕ್ಷೆಯಲ್ಲಿರುವ ಈ ಸಿನೆಮಾ ರೂಪೇಶ್ ಅವರ ಬಹುನಿರೀಕ್ಷೆಯ ಸಿನೆಮಾ.
ತುಳು ರಂಗಭೂಮಿ, ಸಿನೆಮಾ, ಕನ್ನಡ ಸಿನೆಮಾ, ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಶೋಭರಾಜ್ ಪಾವೂರು ಈಗ ಸ್ವತಃ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತುಳುವಿನ “ಏಸ’ ಸೇರಿದಂತೆ ಹಲವು ತುಳು ಸಿನೆಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ಶೋಭರಾಜ್ ಈಗ “ಪೆಪ್ಪೆರೆರೆ ಪೆರೆರೆರೆ’ ಹೇಳುತ್ತಿದ್ದಾರೆ.
ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದ ಅವರು ಕುಡ್ಲದಲ್ಲಿ ಹೊಸ ಜಮಾನಕ್ಕೆ ಹೊಸ ಸಿನೆಮಾ ನೀಡಬೇಕು ಎಂಬ ಯೋಚನೆಯಿಂದ ಹೀರೋಯಿಸಂ ಬಿಟ್ಟು ಕೆಮರಾ ಹಿಂದೆ ಕೂತು ಸಿನೆಮಾ ಮಾಡಿದ್ದಾರೆ. ವಿಶೇಷ ಅಂದರೆ ಅವರೂ ಈ ಸಿನೆಮಾದಲ್ಲಿ ಪಾತ್ರ ಮಾಡಿದ್ದಾರೆ.
“ಪ್ರೀತಿಯಿಂದ’ ಪಾಂಡುರಂಗ ವಿಠಲ, ಜರಾಸಂಧ, ಮಹಾನದಿ, ಕಿಲಾಡಿ ಕಿಟ್ಟಿ ಸಹಿತ ಹಲವು ಸಿನೆಮಾದಲ್ಲಿ ಅಭಿನಯಿಸಿದ ರಜನೀಶ್ ಅವರು ಕನ್ನಡದಲ್ಲಿ “ನಾನು ಹೇಮಂತ್ ಅವಳು ಸೇವಂತಿ’ ಸಿನೆಮಾದಲ್ಲಿ ನಾಯಕ ನಟನಾಗಿ ಮೂಡಿಬಂದಿದ್ದರು. ಬಳಿಕ ಸ್ಯಾಂಡಲ್‌ವುಡ್‌ನ ಕೆಲವು ಸ್ಟಾರ್ ಡೈರೆಕ್ಟರ್‌ಗಳ ಜತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ರಜನೀಶ್ ನೇರವಾಗಿ ಕೋಸ್ಟಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಅದೂ ನಿರ್ದೇಶಕನಾಗಿ. “ಕೋರಿ ರೊಟ್ಟಿ’ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳಿದರು. ಬಳಿಕ “ಬೆಲ್ಚಪ್ಪ’ ರೆಡಿ ಮಾಡಿದರು. ಸದ್ಯ ಬಿಡುಗಡೆಯ ತವಕದಲ್ಲಿರುವ ಈ ಸಿನೆಮಾದಲ್ಲಿ ಹೀರೋ ಕೂಡ ರಜನೀಶ್.
ತುಳು ರಂಗಭೂಮಿ ಹಾಗೂ ತುಳು ಸಿನೆಮಾ ಲೋಕದಲ್ಲಿ ಬಹುದೊಡ್ಡ ಹೆಸರು ಗೌರವ ಪಡೆದ ದೇವದಾಸ್ ಕಾಪಿಕಾಡ್ ಅಭಿನಯದ ಜತೆಗೆ ಸಿನೆಮಾ ನಿರ್ದೇಶನದ ಮೂಲಕವೇ ಮಾನ್ಯತೆ ಪಡೆದಿದ್ದಾರೆ. ಚಂಡಿ ಕೋರಿ, ಬರ್ಸ, ಅರೆಮರ್ಲೆರ್, ಏರಾ ಉಲ್ಲೆರ್‌ಗೆ ಸಿನೆಮಾ ಮಾಡಿದ ಕಾಪಿಕಾಡ್ ಈಗ ಜಬರ್ದಸ್ತ್ ಶಂಕರ ಸಿನೆಮಾ ಮಾಡುತ್ತಿದ್ದರೆ, ಅಭಿನಯದಲ್ಲಿಯೂ ಅವರಿದ್ದಾರೆ. ಜತೆಗೆ ಅರ್ಜುನ್ ಕಾಪಿಕಾಡ್ ಅವರು ಸಹನಿರ್ದೇಶನಾಗಿಯೂ ಕೆಲಸ ಮಾಡಿದ್ದಾರೆ.
“ಒರಿಯರ್ದೊರಿ ಅಸಲ್’ ಮೂಲಕ ತುಳುಚಿತ್ರರಂಗದಲ್ಲಿ ಚಾರಿತ್ರಿಕ ದಾಖಲೆ ಬರೆದ ವಿಜಯ್ ಕುಮಾರ್ ಕೊಡಿಯಲಾಬೈಲ್ ಅವರು ಕೂಡ ಅಭಿನಯದಲ್ಲಿ ಕಾಣಿಸಿಕೊಂಡು ದಾಖಲೆಯ ಸಿನೆಮಾವನ್ನೇ ನೀಡಿದ್ದಾರೆ.
ಅಂದಹಾಗೆ, ರಂಗ್, ಪಿಲಿಬೈಲ್ ಯಮುನಕ್ಕ ಸೇರಿದಂತೆ ಹಲವು ತುಳು ಸಿನೆಮಾದಲ್ಲಿ ಅಭಿನಯದ ಮೂಲಕ ಮೋಡಿ ಮಾಡಿದ ವಿಸ್ಮಯ್ ವಿನಾಯಕ್ ಅವರು ಇದೀಗ “ರಡ್ಡ್ ಎಕ್ರೆ’ ತುಳು ಸಿನೆಮಾದ ನಿರ್ದೇಶನ ಮಾಡಿದ್ದಾರೆ. ಕೋಸ್ಟಲ್‌ವುಡ್‌ನಲ್ಲಿ ವಿಭಿನ್ನ ಮ್ಯಾನರಿಸಂನ ಸಿನೆಮಾ ಎಂಬ ಹೆಗ್ಗಳಿಕೆ ಕೂಡ ಇದರದ್ದಾಗಿದೆ.
ತುಳುರಂಗಭೂಮಿ- ಸಿನೆಮಾ, ಕನ್ನಡ ಸಿನೆಮಾ ಮೂಲಕ ಮನೆಮಾತಾದ ಸಾಯಿಕೃಷ್ಣ ಅವರು ಕೂಡ ತುಳುವಿನಲ್ಲಿ “ಸೂಂಬೆ’ ಸಿನೆಮಾದ ಮೂಲಕ ಆ್ಯಕ್ಷನ್ ಕಟ್ ಹೇಳಿದ್ದಾರೆ. “ಪಕ್ಕಿಲು ಮೂಜಿ’ ಸಿನೆಮಾದ ಮೂಲಕ ಪ್ರಕಾಶ್ ಕಾಬೆಟ್ಟು ಅವರು ಕೂಡ ಗಮನಸೆಳೆದಿದ್ದಾರೆ. ತುಳು-ಕನ್ನಡ ಸಿನೆಮಾದಲ್ಲಿ ಅಭಿನಯಿಸಿದ್ದ ಶಿವಧ್ವಜ್ ಶೆಟ್ಟಿ “ಗಗ್ಗರ’ ಸಿನೆಮಾ ನಿರ್ದೇಶಿಸಿದ್ದರು. ಕನ್ನಡ ತುಳು ಸಿನೆಮಾದಲ್ಲಿ ಅಭಿನಯಿಸಿದ್ದ ರಾಜಶೇಖರ ಕೋಟ್ಯಾನ್ ಅವರು “ಬ್ರಹ್ಮ ಶ್ರೀ ನಾರಾಯಣ ಗುರು’ ಸಿನೆಮಾ ಮಾಡಿದ್ದರು. ಇನ್ನು ಖ್ಯಾತ ನಟ ಎಂ.ಕೆ. ಮಠ ಅವರು ಕೂಡ ಖ್ಯಾತ ನಿರ್ದೇಶಕ ಎಂಬುದು ಉಲ್ಲೇಖನೀಯ.
ತುಳು ರಂಗಭೂಮಿಯಲ್ಲಿ ಅಭಿನಯಿಸುತ್ತಿರುವ ಜೆ.ಪಿ. ತುಮಿನಾಡ್ ಇತ್ತೀಚೆಗೆ ತೆರೆಕಂಡ “ಕಟಪಾಡಿ ಕಟ್ಟಪ್ಪ’ ಸಿನೆಮಾ ನಿರ್ದೇಶಿಸಿದ್ದಾರೆ. ಜತೆಗೆ, ತುಳು ಸಿನೆಮಾರಂಗದಲ್ಲಿ ಅಭಿನಯದ ಮೂಲಕ ಕಾಣಿಸಿಕೊಂಡ ಅಶ್ವಿನಿ ಕೋಟ್ಯಾನ್ ಈಗ ತುಳುವಿನ ಚೊಚ್ಚಲ ಮಹಿಳಾ ನಿರ್ದೇಶಕಿ ಎಂಬ ಹೆಸರು ಪಡೆದಿದ್ದಾರೆ. “ನಮ್ಮ ಕುಡ್ಲ’ ಸಿನೆಮಾ ಮಾಡಿದ ಅವರು ಈಗ “ತಂಬಿಲ’ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.