ತೆರೆಗೆ ಬರಲು ಅಣಿಯಾಗಿದೆ ಪಿಂಗಾರ
Team Udayavani, Mar 12, 2020, 4:57 AM IST
ಅತ್ಯುತ್ತಮ ಏಷಿಯನ್ ಚಲನಚಿತ್ರ ಪ್ರಶಸ್ತಿ ಪಡೆದ ತುಳುವಿನ “ಪಿಂಗಾರ’ ಈಗ ರಿಲೀಸ್‌ಗೆ ಅಣಿಯಾಗಿದೆ. ಸಿನೆಮಾ ಬಿಡುಗಡೆಗೂ ಮುನ್ನವೇ ಪ್ರಶಸ್ತಿಯ ಮೂಲಕ ಗಮನಸೆಳೆದಿರುವುದು ವಿಶೇಷ.
1960ರಿಂದ 2019ರವರೆಗೆ ತುಳುನಾಡಿನಲ್ಲಿ ಆಗಿರುವ ಬದಲಾವಣೆಯ ಚಿತ್ರಣಗಳನ್ನು ಬಿಂಬಿಸುವ ಹೊಸ ಸಿನೆಮಾ “ಪಿಂಗಾರ’ ಸದ್ಯ ಕೋಸ್ಟಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ. ಬೀಡಿ ಉದ್ಯಮ, ಉಳುವವನೇ ಹೊಲದೊಡೆಯ ಮುಂತಾದವುಗಳೆಲ್ಲ ತುಳುನಾಡಿನ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಹಾಗೂ ದೈವದ ಕಾರಣಿಕ ಮುಂತಾದ ಕಥಾನಕಗಳನ್ನೇ ತುಂಬಿರುವ ಪಿಂಗಾರ ಸಾಕಷ್ಟು ವಿಚಾರಗಳೊಂದಿಗೆ ಪ್ರಸ್ತುತ ಚರ್ಚೆಗೆ ಬಂದಿದೆ. ಗುರುಪುರದ ಆರ್. ಪ್ರೀತಮ್ ಶೆಟ್ಟಿ ಎಂಬ ಉತ್ಸಾಹಿ ಯುವಕನ ನಿರ್ದೇಶನದ ಸಿನೆಮಾ. ಅವಿನಾಶ್ ಯು. ಶೆಟ್ಟಿ ಮತ್ತು ಡಿ.ಎನ್. ಮಂಜುನಾಥ್ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ.
ನೀಮಾ ರೈ, ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸುನೀಲ್ ನೆಲ್ಲಿಗುಡ್ಡೆ, ಸಿಂಚನಾ ಚಂದ್ರಮೋಹನ್, ಪ್ರಶಾಂತ್ ಸಿ.ಕೆ. ಮುಂತಾದವರು ನಟಿಸಿದ್ದಾರೆ. ಶಶಿರಾಜ್ ಕಾವೂರು ಅವರ ಸಂಭಾಷಣೆ ಹೊಂದಿರುವ ಸಿನೆಮಾಕ್ಕೆ ಮೈಮ್ ರಾಮದಾಸ್ ಹಾಗೂ ಶೀನಾ ನಾಡೋಲಿ ಅವರ ಸಾಹಿತ್ಯವಿದೆ. ಛಾಯಾಗ್ರಹಣದಲ್ಲಿ ವಿ. ಪವನ್ ಕುಮಾರ್ ಸಹಕರಿಸಿದ್ದು, ಗಣೇಶ್ ನೀರ್ಚಾಲ್ ಮತ್ತು ಶೇಷಾಚಲ ಕುಲಕರ್ಣಿ ಅವರ ಸಂಕಲನವಿದೆ.