ತುಳು ಸಿನೆಮಾದಲ್ಲಿ ರಾಜಕೀಯದ ಬಣ್ಣ !
Team Udayavani, Apr 4, 2019, 12:12 PM IST
ಮಾಜಿ ಮುಖ್ಯಮಂತ್ರಿ ಇದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ; ಬದಲಾಗಿ ಸಿನೆಮಾಕ್ಕೆ ಮಾತ್ರ ಅನ್ವಯ! ಮುಂದೆ ಬರಲಿರುವ ತುಳು ಸಿನೆಮಾ “ಮಾಜಿ ಮುಖ್ಯಮಂತ್ರಿ’ಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಬಣ್ಣ ಹಚ್ಚಿದ್ದಾರೆ. ಇದರ ಶೂಟಿಂಗ್ ಕೂಡ ಈಗಾಗಲೇ ಬಜಪೆ ವ್ಯಾಪ್ತಿಯಲ್ಲಿ ಮುಕ್ತಾಯ ಕಂಡಿದೆ. ಅಂದಹಾಗೆ, ರೈ ಮಾತ್ರವಲ್ಲದೆ, ಇನ್ನೂ ಕೆಲವು ರಾಜಕೀಯ ನಾಯಕರು ಈ ಸಿನೆಮಾದಲ್ಲಿ ಇದ್ದಾರೆ. ಆದರೆ ಯಾರೆಲ್ಲ ರಾಜಕೀಯ ನಾಯಕರು ಇರಲಿದ್ದಾರೆ ಎಂಬ ಬಗ್ಗೆ ಇನ್ನೂ ಚಿತ್ರತಂಡ ಮಾಹಿತಿ ನೀಡುತ್ತಿಲ್ಲ.
ಅಂದಹಾಗೆ, ಮಾಜಿ ಮುಖ್ಯಮಂತ್ರಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಇದೆ. ಖುದ್ದು ರಾಜಕಾರಣಿಯೇ ಮಾಜಿ ಮುಖ್ಯಮಂತ್ರಿಯಾಗುತ್ತಾರೆಯೇ ಅಥವಾ ಖ್ಯಾತ ನಿರ್ದೇಶಕರೊಬ್ಬರಾ ಎಂಬುದಕ್ಕೆ ಚಿತ್ರತಂಡ ಸದ್ಯ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಅಂತೂ, ರಾಜಕೀಯ ಫ್ಲೆàವರ್‌ನೊಂದಿಗೆ ರೆಡಿಯಾಗುತ್ತಿರುವ ಸಿನೆಮಾ ಲೋಕಸಭಾ ಚುನಾವಣೆಯ ಈ ಕಾಲದಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿಸಿದೆ.
1972ರಲ್ಲಿ ತೆರೆಕಂಡ “ಮಕ್ಕಳ ಭಾಗ್ಯ’ ಕನ್ನಡ ಸಿನೆಮಾದಲ್ಲಿ ರಮಾನಾಥ ರೈ ಅವರು ಚಿಕ್ಕ ಪಾತ್ರದಲ್ಲಿ ಕಾಣಿಸಿದ್ದರು. ಈ ಸಿನೆಮಾದಲ್ಲಿ ವಿಷ್ಣುವರ್ಧನ್, ಭಾರತೀ ಮುಖ್ಯ ಪಾತ್ರಧಾರಿಗಳಾಗಿದ್ದರು. ಕೋಸ್ಟಲ್‌ವುಡ್‌ನಲ್ಲಿ ಈಗಾಗಲೇ ಸಾಕಷ್ಟು ಸೌಂಡ್ ಮಾಡುತ್ತಿರುವ “ಕಟಪಾಡಿ ಕಟ್ಟಪ್ಪ’ ಸಿನೆಮಾದ ನಿರ್ಮಾಪಕ ಹಾಗೂ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ ಅವರ ನಿರ್ಮಾಣದಲ್ಲಿ “ಮಾಜಿ ಮುಖ್ಯಮಂತ್ರಿ’ ಸಿನೆಮಾ ರೆಡಿಯಾಗುತ್ತಿದೆ.
ಈ ಹಿಂದೆ ಅವರು “ದೊಂಬರಾಟ’ ಸಿನೆಮಾ ಮಾಡಿದ್ದರು. ಹಲವು ಸಿನೆಮಾಗಳಲ್ಲಿ ಸಹನಿರ್ದೇಶನ ಮಾಡಿರುವ ತ್ರಿಶೂಲ್ ಶೆಟ್ಟಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಈ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
“ಕೃಷ್ಣ ತುಳಸಿ’ ಧಾರವಾಹಿಯಲ್ಲಿ ನಟಿಸಿದ್ದ ಸ್ವರಾಜ್ ಶೆಟ್ಟಿ, ಭೋಜರಾಜ್ ವಾಮಂಜೂರು ಸಹಿತ ಹಲವು ಕಲಾವಿದರು ಈ ಸಿನೆಮಾದಲ್ಲಿದ್ದಾರೆ. ಸಿನೆಮಾಕ್ಕೆ ಕೆಮರಾ ಉದಯ್ ಬಳ್ಳಾಲ್ ನಡೆಸಲಿದ್ದು, ಸಂಗೀತ ಪ್ರಕಾಶ್, ಸಾಹಿತ್ಯ ಸುರೇಶ್ ಬಲ್ಮಠ ಅವರದ್ದು. ಮಯೂರ್ ಶೆಟ್ಟಿ ಸಹ ನಿರ್ದೇಶಕರಾಗಿದ್ದಾರೆ. ಈ ಸಿನೆಮಾದ ಶೂಟಿಂಗ್ ಮುಗಿದ ಬಳಿಕ ರಾಜೇಶ್ ಬಂದ್ಯೋಡು ನಿರ್ದೇಶನದಲ್ಲಿ “ಜ್ಯೋತಿ ಸರ್ಕಲ್’ ಸಿನೆಮಾ ಶೂಟಿಂಗ್ ಆರಂಭವಾಗಲಿದೆ.
ಅಂದಹಾಗೆ ತುಳುವಿನ ಹಲವು ಸಿನೆಮಾದಲ್ಲಿ ರಾಜಕೀಯ ನಾಯಕರು ಬಣ್ಣ ಹಚ್ಚಿದ್ದಾರೆ ಎಂಬುದು ವಿಶೇಷ. ತುಳುವಿನ ಮೊದಲ ಚಿತ್ರ 1971ರ “ಎನ್ನ ತಂಗಡಿ’ಯಲ್ಲಿ ಮಾಜಿ
ಶಾಸಕ ಲೋಕಯ್ಯ ಶೆಟ್ಟಿ, “ಪಗೆತ ಪುಗೆ’ ಚಿತ್ರದಲ್ಲಿ ಅಂದಿನ ಶಾಸಕ ಅಮರನಾಥ ಶೆಟ್ಟಿ ಅವರು ಅಭಿನಯಿಸಿದ್ದರು. ದೈವಾರಾಧನೆಯ ಪರಂಪರೆಯನ್ನು ಬಿಂಬಿಸಿದ 2011ರಲ್ಲಿ ತೆರೆಕಂಡ ಕುಂಬ್ರ ರಘುನಾಥ ರೈ ಅವರ “ಕಂಚಿಲ್ದ ಬಾಲೆ’ ಸಿನೆಮಾದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರಧಾನ ಭೂಮಿಕೆಯಲ್ಲಿದ್ದರು.
ನಾರಾಯಣ ಗುರುಸ್ವಾಮಿ ಜೀವನ ಚರಿತ್ರೆಯ ರಾಜಶೇಖರ್ ಕೋಟ್ಯಾನ್ ಅವರ “ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ಚಿತ್ರದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಬಣ್ಣಹಚ್ಚಿದ್ದರು. ಇದೇ ಚಿತ್ರ ಹಾಗೂ ಇತ್ತೀಚೆಗೆ ಬಂದ “ಚಾಲಿಪೋಲಿಲು’, “ಎಕ್ಕಸಕ’ ಸಹಿತ ಕೆಲವು ಸಿನೆಮಾದಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್ ಅಭಿನಯಿಸಿದ್ದಾರೆ. ಜಗದೀಶ್ ಅಧಿಕಾರಿ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಜಿ ಶಾಸಕ ವಸಂತ ಬಂಗೇರ ಅವರು 1978ರಲ್ಲಿ “ಸಂಗಮ ಸಾಕ್ಷಿ’ ಎಂಬ ತುಳು ಸಿನೆಮಾ ನಿರ್ಮಾಪಕರಾಗಿದ್ದರು. ಪ್ರೌಢ ಮಕ್ಕಳು ನಾಯಕ- ನಾಯಕಿಯರಾಗಿ ಇದೇ ಚಿತ್ರದಲ್ಲಿ ಅಭಿನಯಿಸಿದ್ದರು. 2006ರಲ್ಲಿ ತೆರೆಗೆ ಬಂದ ಸಾಧನಾ ಎನ್. ಶೆಟ್ಟಿ ನಿರ್ಮಾಪಕರಾಗಿರುವ “ಕಡಲ ಮಗೆ’ ಚಿತ್ರವನ್ನು ಮಾಜಿ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ನಾಗರಾಜ ಶೆಟ್ಟಿ ಅವರು ನಿರ್ಮಿಸಿದ್ದಾರೆ.
24 ಗಂಟೆಯಲ್ಲಿ ಚಿತ್ರೀಕರಣವಾದ 1994ರ ಡಾ| ರಿಚರ್ಡ್ ಕ್ಯಾಸ್ಟಲಿನೋ ಅವರ “ಸಪ್ಟೆಂಬರ್ 8′ ಚಿತ್ರದಲ್ಲಿ ಡಾ| ಶಿವರಾಮ ಕಾರಂತರು (ಕಾರವಾರ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದವರು)ಅಭಿನಯಿಸಿದ್ದಾರೆ. ಮಾಜಿ ಸಚಿವೆ ಉಮಾಶ್ರೀ ಕೂಡ ಇದೇ ಚಿತ್ರದಲ್ಲಿ ಬಣ್ಣಹಚ್ಚಿದ್ದರು.
ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.