ಹಳ್ಳಿ ತಿರುಗಾಟಕ್ಕೆ ರೆಡಿಯಾದ ದೇಯಿ ಬೈದೆತಿ !
Team Udayavani, May 30, 2019, 6:01 AM IST
ಕೋಸ್ಟಲ್‌ವುಡ್‌ನಲ್ಲಿ ಗಟ್ಟಿಕಥೆಯ ಮೂಲಕ ಮನೆಮಾತಾದ ಐತಿಹಾಸಿಕ ಸಿನೆಮಾ ‘ದೇಯಿ ಬೈದೆತಿ’ ಕರಾವಳಿ ಭಾಗವಲ್ಲದೆ, ಮುಂಬಯಿ, ಪೂನಾ, ಬೆಂಗಳೂರು ವ್ಯಾಪ್ತಿಯಲ್ಲಿಯೂ ಸಾಕಷ್ಟು ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಸೇರ್ಪಡೆ ಎಂಬಂತೆ ತುಳುನಾಡಿನ ಈ ಕಥೆಯನ್ನು ತುಳುನಾಡಿನ ಹಳ್ಳಿ ಹಳ್ಳಿಯಲ್ಲಿ ಪ್ರದರ್ಶಿಸಬೇಕು ಎಂಬ ಉದ್ದೇಶದಿಂದ ಸಿನೆಮಾ ಹಳ್ಳಿ ತಿರುಗಾಟಕ್ಕೆ ಮುಂದಾಗಿದೆ.
ಈಗಾಗಲೇ ಕರಾವಳಿಯ ಹಳ್ಳಿ ಹಳ್ಳಿಗಳಲ್ಲಿ ಹಲವಾರು ಪ್ರದರ್ಶನಗಳನ್ನು ಎಲ್ಇಡಿ ಸ್ಕ್ರೀನ್‌ಗಳ ಮುಖಾಂತರ ‘ದೇಯಿ ಬೈದೆತಿ’ ಪ್ರದರ್ಶನ ಕಾಣಲು ಹಲವಾರು ಮುಂಗಡ ಪ್ರದರ್ಶನಗಳು ಬುಕ್ ಆಗಿವೆ. ಸೂರ್ಯೋದಯ ಅವರ ನಿರ್ದೇಶನದಲ್ಲಿ ಈ ಸಿನೆಮಾ ದೇಯಿಬೈದೆತಿಯ ಬದುಕಿನ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಕೋಸ್ಟಲ್‌ವುಡ್ ಸಿನೆಮಾ ರಂಗದಲ್ಲಿ ಕೇವಲ ಹಾಸ್ಯವನ್ನೇ ಪ್ರದಾನ ವಸ್ತುವಾಗಿ ಇಟ್ಟು ಸಿನೆಮಾ ನಿರ್ಮಾಣವಾಗುವ ಈ ಕಾಲಘಟ್ಟದಲ್ಲಿ ಗಟ್ಟಿ ಕಥೆಯನ್ನು ಹೆಣೆದು ಸಿನೆಮಾ ತಯಾರಾದ ಉದಾಹರಣೆಗಳೇ ಅಪರೂಪ ಎನ್ನಬಹುದು. ಅಮೂಲ್ಯ ಕಥಾನಕವನ್ನು ಕರಾವಳಿಯ ಹಳ್ಳಿ ಮನಸ್ಸುಗಳು ಸ್ವಾಗತಿಸಲು ಸಿದ್ಧತೆ ನಡೆಯುತ್ತಿದೆ.
ಸುಮಾರು ವರ್ಷಗಳ ಹಿಂದೆ ಕೋಟಿ ಚೆನ್ನಯರೆಂಬ ಎರಡು ಅಮೂಲ್ಯ ಮುತ್ತುಗಳನ್ನು ಸಮಾಜಕ್ಕೆ ನೀಡಿದ ದೇಯಿ ಬೈದ್ಯೆತಿಯ ಜೀವನ ಕಥೆ ಆಧರಿಸಿದ ಚಿತ್ರ ಇದಾಗಿದೆ. ಸೂರ್ಯೊದಯ ಪೆರಂಪಳ್ಳಿ ಈ ಚಿತ್ರದ ನಿರ್ದೇಶನ ಹಾಗೂ ನಿರ್ಮಾಪಕರು. ಈಗಾಗಲೇ ಈ ಸಿನೆಮಾ ಕರಾವಳಿಯಾದ್ಯಂತ ಯಶಸ್ವಿ ಪ್ರದರ್ಶನ ಕೂಡ ಕಂಡಿತ್ತು. ಚೇತನ್ ರೈ ಮಾಣಿ, ರವಿ ಭಟ್, ಸೌಜನ್ಯಾ ಹೆಗ್ಡೆ ಸೇರಿದಂತೆ ಪ್ರಬುದ್ಧ ಕಲಾವಿದರ ದೊಡ್ಡ ತಂಡ ಈ ಚಿತ್ರದಲ್ಲಿದೆ.
ಅಂದಹಾಗೆ 5ನೇ ಶತಮಾನದ ಅವಧಿಯಲ್ಲಿ ತುಳುನಾಡಿನಲ್ಲಿ ನಡೆದ ಐತಿಹಾಸಿಕ ಕಥೆಯಾದ, ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಕಾರಣಿಕ ಕಥೆಯನ್ನು ವಿಶು ಕುಮಾರ್ ‘ಕೋಟಿ ಚೆನ್ನಯ’ ಎಂಬ ಹೆಸರಿನಲ್ಲಿ ತುಳು ನಾಟಕ ಬರೆದಿದ್ದರು.
1973ರಲ್ಲಿ ಇದು ಕೆ. ಮುದ್ದು ಸುವರ್ಣ ಅವರಿಂದ ಸಿನೆಮಾವಾಯಿತು. ವಿಶು ಕುಮಾರ್ ಅವರೇ ಇದರ ನಿರ್ದೇಶನ ಮಾಡಿದ್ದರು. 4 ಹಾಡುಗಳಿದ್ದ ಈ ಚಿತ್ರಕ್ಕೆ ವಿಜಯ ಭಾಸ್ಕರ್ ಸಂಗೀತ ಒದಗಿಸಿದ್ದಾರೆ. ಎಕ್ಕ ಸಕ.. ಎಕ್ಕ ಸಕ.. ಎಕ್ಕ ಸಕ್ಕಲಾ… ಸೇರಿದಂತೆ ಎಲ್ಲ ಹಾಡುಗಳು ಇಂದಿಗೂ ಉತ್ತಮ ಹಾಡುಗಳ ಪಟ್ಟಿಯಲ್ಲಿದೆ. ಈ ಚಿತ್ರವು ತುಳುನಾಡ ಐತಿಹಾಸಿಕ ಕಥೆಯ ಪ್ರಥಮ ಚಿತ್ರ ಎಂಬ ಮಾನ್ಯತೆ ಪಡೆಯುವುದರ ಜತೆಗೆ, 1973-74ನೇ ವರ್ಷದ ರಾಜ್ಯದ ನಾಲ್ಕನೇ ಅತ್ಯುತ್ತಮ ಚಲನಚಿತ್ರ ಪುರಸ್ಕಾರವನ್ನು ಪಡೆದಿತ್ತು.
ಆ ಬಳಿಕ 2006ರಲ್ಲಿ ಆರ್.ಧನ್‌ರಾಜ್ ನಿರ್ಮಾಣದಲ್ಲಿ ಆನಂದ್ ಪಿ.ರಾಜು ನಿರ್ದೇಶನದಲ್ಲಿ ‘ಕೋಟಿ ಚೆನ್ನಯ’ ಚಿತ್ರ ಮತ್ತೂಮ್ಮೆ ತೆರೆಮೇಲೆ ಮೂಡಿಬಂತು. ಯಕ್ಷಗಾನದ ಎರಡು ಹಾಡುಗಳು ಸೇರಿ ಒಟ್ಟು 6 ಹಾಡುಗಳಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದರು. ಈ ಸಿನೆಮಾಕ್ಕೆ 2007ರ ರಾಷ್ಟ್ರೀಯ ಉತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿ ಕೂಡ ಲಭ್ಯವಾಗಿತ್ತು.
-ದಿನೇಶ್ ಇರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.