ವನಸಿರಿಯ ನಡುವೆ ಬೆಳ್ನೋರೆಗಳ ಲಾಸ್ಯ
Team Udayavani, Aug 17, 2017, 8:00 PM IST
ನಿತ್ಯ ಹರಿದ್ವರ್ಣದ ಮಲೆನಾಡಿನಲ್ಲಿ ಮುಂಗಾರು ಮಳೆಯದ್ದೇ ರಾಗ, ತಾಳ, ಪಲ್ಲವಿ. ಇದಕ್ಕೆಲ್ಲ ಪುಟವಿಟ್ಟಂತೆ ಹಚ್ಚ ಹಸಿರಿನ ಹಿನ್ನೆಲೆಗೆ ಜಲಪಾತಗಳ ಬೆಳ್ನೋರೆಗಳ ಚೆಲುವಿನ ಚಿತ್ತಾರ. ಈ ಸೊಬಗನ್ನೆಲ್ಲ ಕಣ್ತುಂಬಿಕೊಳ್ಳಲು ಕವಿ ಮನಸ್ಸು ನಮ್ಮದಾಗಬೇಕು.
ಜಲಪಾತಗಳ ನಾಡು ಭೂರಮೆಯ ದೇವ ಸನ್ನಿಧಿ ಕೊಡಗು ಮತ್ತು ಸುಳ್ಯದ ಸುತ್ತಮುತ್ತ ಮಳೆಗಾಲದಿಂದ ಚಳಿಗಾಲ ಮುಗಿಯುವವರೆಗೆ ಜಲಲ ಜಲಧಾರೆಗಳ ಬ್ಯಾಲೆ. ಹಾಲ್ನೊರೆಯಂತೆ ಬಳಕುವ ನರ್ತಿಸುವ, ಪುಟಿಯುವ, ಇನ್ನೊಂದೆಡೆ ಬಂಡೆಗಳೆಡೆಯಿಂದ ಧುಮುಕುವ, ಅಪ್ಪಳಿಸುವ ರುದ್ರ ರಮಣೀಯ ನೋಟ, ಜಲ ಸಿಂಚನ ವರ್ಣಿಸಲದಳ. ಈ ಜಲಪಾತಗಳ ಸೌಂದರ್ಯ ಸವಿಯಬೇಕಾದರೆ ಸ್ವಲ್ಪ ಸಾಹಸವನ್ನು ಮಾಡಬೇಕು. ರಸ್ತೆ ಅಂಚು ಬಿಟ್ಟು ಒಂದಷ್ಟು ಚಾರಣ ಮಾಡಿ ಪ್ರಯಾಸಪಡಲೂ ಬೇಕು.ಎಲ್ಲಿಯೂ ಜಲಪಾತಗಳ ಎದುರು ಚೆಲ್ಲಾಟ ಮಾಡದಿರುವುದು ಒಳ್ಳೆಯದು.
ಸುಳ್ಯ ಮತ್ತು ಕೊಡಗು ಮಲೆನಾಡಿನ ಸೆರಗಿನಂಚಿನಲ್ಲಿರುವ ಜಲಪಾತಗಳ ಪಟ್ಟಿ ಮಾಡುತ್ತಾ ಹೋದಂತೆ ಲೈನ್ಕಜೆ, ಅಬ್ಬಿ, ಇರ್ಪು, ನಿಡ್ಯಮಲೆ, ಕಾಂತಬೈಲು, ದೇವರಕೊಲ್ಲಿ, ಕಲ್ಯಾಳ, ಚಾಮಡ್ಕ, ಮೂಕಮಲೆ, ಹೊಸಗದ್ದೆ, ಜಾಕೆ, ಪಳಂಗಾಯ, ಬಿಳಿಮಲೆ ,ಉರುಂಬಿ ಹೀಗೆ … ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಕಲ್ಯಾಳ ಜಲಪಾತ
ಸುಳ್ಯ ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಕೊಯನಾಡು ಸೇತುವೆ ಹತ್ತಿರದ ಮಸೀದಿ ಬಳಿಯಿಂದ ಸಾಗುವ ಹಾದಿ ಹಿಡಿದು ಮೂರು ಕಿ.ಮೀ. ಪಯಣಿಸಬೇಕು. ಯಾವುದೇ ದಾರಿ ಸೂಚಕಗಳು ಇಲ್ಲದೇ ಇರುವುದರಿಂದ ಅವರಿವರನ್ನು ಕೇಳಿಕೊಂಡೇ ದಾರಿ ಕಂಡುಹಿಡಿಯಬೇಕು.
ಕಾಂತಬೈಲು
ಭಾಗಮಂಡಲದಿಂದ ಶೆಟ್ಟಿ ಮನೆಯಾಗಿ 10 ಕಿ.ಮೀ. ಸುಳ್ಯ- ಸಂಪಾಜೆ ರಸ್ತೆಯಲ್ಲಿ ಕಲ್ಲುಗುಂಡಿಯಿಂದ ಚೆಂಬು ಮಾರ್ಗವಾಗಿ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗಬೇಕಾಗುತ್ತದೆ. ಕಾಂತಬೈಲು ಮಹೇಶ್ವರ ಭಟ್ ಅವರ ಮನೆ ಗೇಟು ರಸ್ತೆಯ ಎಂಡ್ ಪಾಯಿಂಟ್. ಬಳಿಕ ಅನತಿ ದೂರ ಕಾಲ್ನಡಿಗೆ. ಪುಟ್ಟ ಜಲಪಾತ, ಸೌಂದರ್ಯಕ್ಕೆ ಕೊರತೆ ಇಲ್ಲ.
ಲೈನ್ಕಜೆ ಜಲಪಾತ
ಇಲ್ಲಿ ಒಂದಲ್ಲ ಎರಡಲ್ಲ ಮೂರು ಜಲಪಾತದ ಸೊಬಗು ಕಣ್ತುಂಬಿಕೊಳ್ಳಬಹುದು. ಸಂಪಾಜೆ ಗೇಟು ಬಳಿಯಿಂದ (3- 4 ಕಿ.ಮಿ.) ಅರೆಕಲ್ಲು ರಸ್ತೆ ಹಿಡಿದು ಸಾಗಬೇಕು. ಲೈನ್ಕಜೆ ಸಿದ್ಧಿ ಗಣಪತಿ ಭಟ್ ಅವರ ಮನೆ ಅಂಗಳ ದಾಟಿ ಮತ್ತೆ ಮುಂದುವರಿಯಬೇಕು. ಇಲ್ಲಿಗೆ ನೀವೇ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗಬೇಕಾಗುತ್ತದೆ.
ಇರ್ಪು ಜಲಪಾತ
ಮಡಿಕೇರಿಯಿಂದ 60 ಕಿ.ಮೀ., ಗೋಣಿಕೊಪ್ಪಲಿನಿಂದ 25 ಕಿ.ಮೀ. ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ 8 ಕಿ.ಮೀ ದೂರದಲ್ಲಿದೆ ಇರ್ಪು ಜಲಪಾತ. ಸುಮಾರು 160 ಅಡಿ ಎತ್ತರದಿಂದ, ಎರಡನೇ ಹಂತದಲ್ಲಿ 70 ಅಡಿ ಎತ್ತರದಿಂದ ಜಿಗಿಯುವ ಲಕ್ಷ್ಮಣ ತೀರ್ಥ ನದಿ ಬಳಕುತ್ತಾ ಸಾಗುವ ದೃಶ್ಯವಂತು ನಯನ ಮನೋಹರವಾಗಿದೆ. ಪ್ರಕೃತಿಯ ನಡುವೆ ಪ್ರಶಾಂತವಾದ ಪರಿಸರದಲ್ಲಿರುವ ಈ ಜಲಪಾತಗಳ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ನಗರದ ಒತ್ತಡದಿಂದ ಮುಕ್ತರಾಗಲು, ಒಂದು ಕ್ಷಣ ಪ್ರಶಾಂತ ವಾತಾವರಣದ ನಡುವೆ ಸಮಯಕಳೆಯಲು ಹೇಳಿಮಾಡಿಸಿದಂತಿದೆ ಈ ತಾಣಗಳು.
ದೇವರಗುಂಡಿ
ದೇವಲೋಕದ ಸೌಂದರ್ಯವೆಲ್ಲ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಇಲ್ಲಿ. ಸುಳ್ಯ ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಸಿಗುವ ಅರಂತೋಡು ಪೇಟೆಯಿಂದ ತೊಡಿಕಾನ ದೇವಸ್ಥಾನದ ಸ್ವಾಗತ ಗೋಪುರದಿಂದ ಒಳ ಹೊಕ್ಕು, ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಸ್ಥಾನ ದಾಟಿ, ಭಾಗಮಂಡಲ ಸಾಗುವ ಕಚ್ಚಾ ರಸ್ತೆಯಲ್ಲಿ ಒಂದೆರಡು ಕಿ.ಮೀ. ಸಾಗಿದಾಗ ಕಾಡಿನೊಳಗೆ ಈ ಜಲಪಾತದ ದರ್ಶನವಾಗುತ್ತದೆ. ಸುಳ್ಯದಿಂದ ತೊಡಿಕಾನ ದೇವಾಲಯದವರೆಗೆ ಬಸ್‌ನ ವ್ಯವಸ್ಥೆ ಇದೆ. ಸುಳ್ಯದಿಂದ ತೊಡಿಕಾನಕ್ಕೆ 18 ಕಿ.ಮೀ. ಬಳಿಕದ ಒಂದೆರಡು ಕಿ.ಮೀ. ಚಾರಣ ಇಲ್ಲವೇ ಜೀಪಿನ ವ್ಯವಸ್ಥೆ ಮಾಡಿಕೊಂಡರೆ ಅನುಕೂಲ. ದೇವಾಲಯದ ಬಳಿ ಇರುವ ಮತ್ಸ್ಯ ತೀರ್ಥದಲ್ಲಿರುವ ದೇವರ ಮೀನುಗಳನ್ನು ನೋಡಲು ಮರೆಯದಿರಿ.
ಚಾಮಡ್ಕ ಜಲಪಾತ
ಸುಳ್ಯ ತಾಲೂಕಿನ ಬಂಟಮಲೆ ಪರಿಸರದ ಡಾ| ಶಿವರಾಮ ಕಾರಂತರ ಬೆಟ್ಟದ ಜೀವ, ಚಿಗುರಿದ ಕನಸು ಕಾದಂಬರಿಗೆ ಸ್ಫೂರ್ತಿ ನೀಡಿದ ತಾಣ ಚಾಮಡ್ಕ. ಸುಳ್ಯದಿಂದ ಬೇಂಗಮಲೆ- ಅಜ್ಜನಗದ್ದೆಗಾಗಿ ಕುಕ್ಕುಜಡ್ಕಕ್ಕೆ 13 ಕಿ.ಮೀ. ಇತ್ತ ಪುತ್ತೂರು ನಿಂತಿಕಲ್ಲು, ಕಲ್ಮಡ್ಕಕ್ಕೆ ಬಂದು ಕುಕ್ಕುಜಡ್ಕದ ಹಾದಿಯಲ್ಲೂ ಬರಬಹುದು. ಪುತ್ತೂರು, ಬೆಳ್ಳಾರೆ, ಕಲ್ಮಡ್ಕದಿಂದಲೂ ಕುಕ್ಕುಜಡ್ಕ ದಾರಿಯಲ್ಲೂ ಬರಬಹುದು. ಇಲ್ಲಿಯವರೆಗೆ ಬಸ್, ವ್ಯಾನ್‌ನ ಸೌಲಭ್ಯವಿದೆ. ಇಲ್ಲಿಂದ ಜಲಪಾತದ ಹಾದಿಯನ್ನು ದಾರಿಯಲ್ಲಿ ಸಿಕ್ಕವರನ್ನು ಕೇಳಿಕೊಂಡು ಹೋಗಬೇಕು. ಮಳೆಗಾಲದ ಮೂರು ತಿಂಗಳು ಜಲಪಾತ ಸೊಬಗು ನಯನ ಮನೋಹರ.
– ಗಂಗಾಧರ ಮಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.