ತುಳು ತುಣುಕುಗಳನ್ನೊಳಗೊಂಡ ‘ಅಶೆಂ ಜಲೆಂ ಕಶೆಂ’ ಕೊಂಕಣಿ ಚಿತ್ರ
Team Udayavani, Feb 5, 2017, 10:50 PM IST
ಕೋಸ್ಟಲ್‌ವುಡ್ ಎಂದರೆ ಅಲ್ಲಿ ತುಳು ಹಾಗೂ ಕೊಂಕಣಿ ಚಿತ್ರಗಳು ಕಾಣಸಿಗುತ್ತವೆ. ಈ ಎರಡೂ ಭಾಷೆಗಳ ಚಿತ್ರಗಳಿಗೂ ತುಳುವರೇ ಆದಾಯದ ಮೂಲ. ಹೀಗಾಗಿ ತುಳು ಹಾಗೂ ಕೊಂಕಣಿ ಚಿತ್ರಗಳು ಒಂದಕ್ಕೊಂದು ಅವಿನಾಭಾವ ಸಂಬಂಧಗಳನ್ನು ಹೊಂದಿವೆ. ಕೊಂಕಣಿ ಭಾಷೆಯಲ್ಲೂ ಸಿನೆಮಾಗಳು ನಿರ್ಮಾಣವಾಗುತ್ತಿರುವುದು ಚಿತ್ರನಗರಿಯ ವ್ಯಾಪ್ತಿಯನ್ನು ಹಿಗ್ಗಿಸುತ್ತಿವೆೆ. ಇದಕ್ಕೆ ಪೂರಕವೆಂಬಂತೆ ಕೊಂಕಣಿಯಲ್ಲಿ ಹೊಸತೊಂದು ಚಿತ್ರದ ಸಿದ್ಧತೆ ನಡೆದಿದೆ.
ಬಹುತೇಕ ತುಳು ಕಲಾವಿದರನ್ನೇ ಇಟ್ಟುಕೊಂಡು ಮಧ್ಯೆ ಮಧ್ಯೆ ತುಳು ಭಾಷೆಯನ್ನು ಬಳಸಿ ‘ಅಶೆಂ ಜಲೆಂ ಕಶೆಂ’ ಎಂಬ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದ ಶೀರ್ಷಿಕೆಯ ಅರ್ಥ ತುಳುವಿನಲ್ಲಿ ‘ಇಂಚ ಆಂಡ ಎಂಚ’ ಎಂದು. ಹಾಸ್ಯಪ್ರಧಾನವಾಗಿರುವ ಚಿತ್ರದಲ್ಲಿ ನಾಯಕನಾಗಿ ರೂಪೇಶ್ ಶೆಟ್ಟಿ, ನಾಯಕಿಯಾಗಿ ಸಿನೋಲ್ ಮಿನೇಜಸ್ ಅಭಿನಯಿಸುತ್ತಿದ್ದಾರೆ.
ಉಳಿದಂತೆ ತುಳುವಿನ ಸ್ಟಾರ್‌ಗಳಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಗೋಪಿನಾಥ್ ಭಟ್ ತಾರಾಗಣದಲ್ಲಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ತುಳು ಕಲಾವಿದರು ಕೊಂಕಣಿ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ. ಅದರಲ್ಲೂ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಗೋಪಿನಾಥ್ ಭಟ್ ಅವರು ಚಿತ್ರದಲ್ಲಿ ಬಹುತೇಕ ತುಳುವಿನಲ್ಲೇ ಮಾತಾಡಿದ್ದಾರೆ. ಚಿತ್ರದ ಪ್ರೊಡಕ್ಷನ್ ಕಾರ್ಯ ಪೂರ್ಣಗೊಂಡಿದ್ದು, ಕ್ರೈಸ್ತ ಬಾಂಧವರ ಈಸ್ಟರ್ ಹಬ್ಬದ ವೇಳೆಗೆ ಚಿತ್ರವನ್ನು ಬಿಡುಗಡೆಗೊಳಿಸುವ ಯೋಚನೆ ಚಿತ್ರ ತಂಡದ್ದು.
‘ಕೊಂಕಣಿಯಲ್ಲಿ ಈ ಹಿಂದೆ ಟೆಲಿಫಿಲ್ಮ್ ಮಾಡಿದ್ದೆ. ಆದರೆ ಪೂರ್ಣ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ಚಿತ್ರವೊಂದನ್ನು ಸಿದ್ಧಪಡಿಸಿದ್ದೇನೆ. ಸಿಂಗರ್ ಆಗಿದ್ದು, ಹಲವಾರು ಆಲ್ಬಂ ಸಾಂಗ್‌ಗಳನ್ನು ಮಾಡಿದ್ದೇನೆ. ಚಿತ್ರವು ಸೆನ್ಸಾರ್‌ಗೆ ಹೋಗುವ ಸಿದ್ಧತೆಯಲ್ಲಿದೆ. ಎಪ್ರಿಲ್‌ನಲ್ಲಿ ಸೆನ್ಸಾರ್ ಪ್ರಮಾಣಪತ್ರ ಸಿಗುವ ವಿಶ್ವಾಸವಿದ್ದು, ಈಸ್ಟರ್ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇವೆ’ ಎನ್ನುತ್ತಾರೆ ನಿರ್ದೇಶಕ ಮ್ಯಾಕ್ಸಿಂ ಪಿರೇರಾ.
‘ಬಾರೆರ್ ಮೊಕುಲು ಬೀರೆರ್’
ಅಮರ್ ಬೀರೆರ್ ಎಂದು ಖ್ಯಾತಿ ಗಳಿಸಿರುವ ಕಾಂತಬಾರೆ-ಬೂದಬಾರೆಯವರ ಕಥೆ ಪೌರಾಣಿಕ ಶೈಲಿಯಲ್ಲಿ ‘ಬಾರೆರ್ ಮೊಕುಲು ಬೀರೆರ್’ ಎಂಬ ಹೆಸರಿನಲ್ಲಿ ರೂಪುಗೊಳ್ಳುತ್ತಿದೆ. ಬಹಳ ದೊಡ್ಡ ಬಜೆಟ್‌ನ ನಿರೀಕ್ಷೆಯಲ್ಲಿರದ ಚಿತ್ರತಂಡ, ಚೊಕ್ಕದಾದ ಟೆಲಿಫಿಲ್ಮ್ ನ್ನು ಜೂನ್ ವೇಳೆಗೆ ಸಿದ್ಧಗೊಳಿಸಲಿದೆ. ತುಳುವಿನಲ್ಲಿ ಹಾಸ್ಯಪ್ರಧಾನ ಚಿತ್ರಗಳೇ ಸೆಟ್ಟೇರುತ್ತಿದ್ದು, ಇದರ ಮಧ್ಯೆ ಪೌರಾಣಿಕ ಶೈಲಿಯ ಚಿತ್ರ ನಿರ್ಮಿಸುತ್ತಿರುವುದು ವಿಶೇಷ. ಚಿತ್ರದ ಹಾಡುಗಳು ಈಗಾಗಲೇ ಸಿದ್ಧವಾಗಿದ್ದು, ಫೆಬ್ರವರಿಯಲ್ಲಿ ಆಡಿಶನ್ ನಡೆಸಿ ಅದರ ಬೆನ್ನಿಗೆ ಆಡಿಯೋ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ಮಾಪಕ ಚರಣ್ ಆಳ್ವ.
ಆಳ್ವಾಸ್ ಸಿನಿ ಕ್ರಿಯೇಶನ್ಸ್ ಬ್ಯಾನರ್‌ನಡಿ ಸಿದ್ಧಗೊಳ್ಳುವ ಚಿತ್ರಕ್ಕೆ ಹೆಚ್ಚಾಗಿ ಅತಿಥಿ ಕಲಾವಿದರನ್ನೇ ಬಳಸುತ್ತಿದ್ದೇವೆ. ಸುಮಾರು 2.30 ರಿಂದ 3 ಗಂಟೆಯ ಚಿತ್ರವನ್ನು ಯೂಟೂಬ್ ಹಾಗೂ ಕ್ಯಾಸೆಟ್‌ಗಳ ಮೂಲಕ ಜನರಿಗೆ ತಲುಪಿಸಲಾಗುವುದು. ಪರಮಾನಂದ ಸಾಲ್ಯಾನ್ ನಿರ್ದೇಶನದಲ್ಲಿ ರಾಜೇಶ್ ಹಳೆಯಂಗಡಿ ಶೂಟಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎನ್ನುತ್ತಾರೆ ನಿರ್ಮಾಪಕರು.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.