ಸಾತೊಡ್ಡಿ ಮನವೊಡ್ಡಿ ಕುಳಿತರೆ ಬರಲು ಮನಸ್ಸೇ ಆಗದು
Team Udayavani, Feb 14, 2017, 11:02 PM IST
ಇಲ್ಲಿ ನಿಂತರೆ ಇಡೀ ಉತ್ತರ ಕನ್ನಡದ ಕಾನನದ ವಿಹಂಗಮ ದೃಶ್ಯ ಲಭ್ಯವಾಗುತ್ತದೆ. ಇಲ್ಲಿಯ ಸೂರ್ಯಾಸ್ತದ ಸೊಬಗೂ ಚೆಂದ. ಒಮ್ಮೆ ಸಾತೊಡ್ಡಿಗೆ ಮೈಯೊಡ್ಡಿ ನಿಂತರೆ ವಾಪಸು ಬರಲು ಮನಸ್ಸು ಬರುವುದೇ ಇಲ್ಲ..
ಮಳೆಗಾಲ ಹತ್ತಿರವಾಗುತ್ತಿದೆ. ಮೂರು ತಿಂಗಳು ಕಳೆದರೆ ಮಳೆಗಾಲ ಬಂದಂತೆಯೇ,. ಪ್ರತಿ ಬಾರಿ ಮಳೆಗಾಲ ಬಂದಾಗಲೂ ಸಾತೊಡ್ಡಿ ಜಲಪಾತ ಧುತ್ತನೆ ನನಗೆ ನೆನಪಾಗುತ್ತದೆ. ನಮ್ಮ ಕುಟುಂಬ ಸಾತೊಡ್ಡಿಗೆ ಹೋಗಬೇಕೆಂದು ಹಲವು ತಿಂಗಳಿಂದ ಯೋಚಿಸುತ್ತಿತ್ತು. ಅದು ಈಡೇರಿದ್ದು ಕಳೆದ ಮಳೆಗಾಲದಲ್ಲಿ. ಅಂದರೆ ಜೋರು ಮಳೆ ಸುರಿಯುವ ಸಮಯದಲ್ಲಲ್ಲ. ಒಂದು ಜೋರು ಮಳೆ ಬಂದು, ತಣ್ಣಗಾದ ಸಂದರ್ಭ. ಅಂದರೆ ಆಗಸ್ಟ್ ಸಮಯದಲ್ಲಿ. ಮಂಗಳೂರಿನಿಂದ ಹೊರಟದ್ದು ಬೆಳಗ್ಗೆಯೇ. ಕುಮಟಾಕ್ಕೆ ಹೋಗುವ ದಾರಿಯಲ್ಲಿ ಮರವಂತೆ ಬಳಿ ಸಮುದ್ರ ತೀರಕ್ಕೆ ಮೊರೆ ಹೋದೆವು. ಜಾಸ್ತಿ ಹೊತ್ತು ಅಲ್ಲಿ ನಿಲ್ಲಲು ಮನಸ್ಸು ಬಿಡಲಿಲ್ಲ. ಸಾತೊಡ್ಡಿ ಜಲಪಾತ ಕೂಗಿ ಕರೆಯುತ್ತಿತ್ತು.
ಗೆಳೆಯ ಅಕ್ಷಯ ಬೇರೆ ಅದರ ಬಗ್ಗೆ ಹಿಂದಿನ ಸಾರಿ ಮನೆಗೆ ಬಂದಾಗ ಬಹಳ ವರ್ಣಿಸಿದ್ದ. ಅವೆಲ್ಲವೂ ಯಾವ ತೆರನಾದ ಒತ್ತಡ ಹೇರಿತ್ತೆಂದರೆ ಈ ಮಳೆ ಮುಗಿಯುವ ಮೊದಲು ಸಾತೊಡ್ಡಿ ಜಲಪಾತವನ್ನು ನೋಡಿಯೇ ಮುಗಿಸಬೇಕೆಂದು ತೀರ್ಮಾನಿಸಿದ್ದೆವು. ಆದರೂ ಮಕ್ಕಳಿದ್ದರೆ ಬಹಳ ತೊಂದರೆ. ಈ ಆಗ್ರಹದ ಮಧ್ಯೆಯೂ ಮರವಂತೆಯಲ್ಲಿ ಅರ್ಧ ಗಂಟೆ ಸಮುದ್ರ ತೀರದಲ್ಲಿ ಮಕ್ಕಳು ಆಡದೇ ಬಿಡಲಿಲ್ಲ. ಕೊನೆಗೂ ಏನೇನೋ ನೆವ ಹೇಳಿ ಮಕ್ಕಳನ್ನು ಎಬ್ಬಿಸುವಷ್ಟರಲ್ಲಿ ಗಂಟೆ ಹತ್ತಾಗಿತ್ತು. ಮನೆಯಿಂದಲೇ ಇಡ್ಲಿ ಮತ್ತು ಚಟ್ನಿ ತಂದಿದ್ದರಿಂದ ತಿಂಡಿಗೆಂದು ಪ್ರತ್ಯೇಕವಾಗಿ ಎಲ್ಲೂ ನಿಲ್ಲಿಸಲಿಲ್ಲ.
ಮರವಂತೆಯಿಂದ ಹೊರಟು ಹೋಗುವಾಗ ಮುರುಡೇಶ್ವರ ಹತ್ತಿರ ಬರುತ್ತಿದ್ದಂತೆ ಶಿವನ ಪ್ರತಿಮೆ ಕಂಡ ಕೂಡಲೇ ನಮ್ಮ ಪುಟ್ಟಿ, ‘ಅದೇನು ಶಿವನ ಸ್ಟಾಚೂ ಕಾಣುತ್ತೆ. ಅಲ್ಲಿಗೆ ಹೋಗಬೇಕು’ ಎಂದು ರಾಗ ಆರಂಭಿಸಿದಳು. ಬರುವಾಗ ಅದಕ್ಕೆಲ್ಲಾ ಹೋಗೋಣ ಎಂದರೂ ಕೇಳಲಿಲ್ಲ. ಆಗಲೂ ಮತ್ತೂಂದು ಸುಳ್ಳು ಹೇಳಿ ಎಳೆದುಕೊಂಡು ಹೋದೆವು. ಶಿರಸಿಯಿಂದ ಯಲ್ಲಾಪುರಕ್ಕೆ ಹೋಗುವ ರಸ್ತೆ ಸ್ವಲ್ಪ ದುರಸ್ತಿಯ ಅವಸ್ಥೆಯಲ್ಲಿತ್ತು. ಆದರೂ ಸಾತೊಡ್ಡಿಯ ಸೌಂದರ್ಯ ಎಳೆಯುತ್ತಿತ್ತು. ಅಷ್ಟರಲ್ಲಿ ಶಿರಸಿಯ ಮಧ್ಯ ಭಾಗದಲ್ಲಿ ಅಕ್ಷಯನೂ ಸೇರಿಕೊಂಡ. ಅವನು ಸ್ಥಳೀಯನೇ ಆಗಿದ್ದರಿಂದ ನಮಗೆ ಅನುಕೂಲವಾಯಿತು. ಅಷ್ಟರಲ್ಲಿ ನಾನು ಜೇನುಕಲ್ಲು ಗುಡ್ಡ ನೋಡಿ ಹೋಗೋಣ ಎಂದು ಹೇಳಿದೆ. ಆಗಲೇ ಸಮಯವಾಗಿದ್ದರಿಂದ ಮತ್ತು ಬಿಸಿಲಲ್ಲಿ ಗುಡ್ಡವನ್ನು ನೋಡುವುದಕ್ಕಿಂತ ಬೆಳಗ್ಗೆ ಅಥವಾ ಸಂಜೆ ಚೆಂದ ಎಂಬ ಸಲಹೆಯನ್ನು ಅಕ್ಷಯ ಕೊಟ್ಟ. ಹಾಗಾಗಿ ಅದನ್ನು ಬರುವಾಗ ನೋಡಲು ನಿಗದಿಪಡಿಸಿ ಸಾತೊಡ್ಡಿಯನ್ನು ಕೊನೆಗೂ ಮುಟ್ಟಿದೆವು.
ಅಕ್ಷಯ ಮನೆಯಿಂದ ಒಂದಿಷ್ಟು ತಿಂಡಿ ತಂದಿದ್ದ. ಹೊಟ್ಟೆಯೂ ಹಸಿಯುತ್ತಿತ್ತು. ಬೆಳಗ್ಗೆಯ ಇಡ್ಲಿಯನ್ನು ಮಕ್ಕಳಿಗೆ ಕೊಟ್ಟು ಮುಗಿಸಿದೆವು. ನಾವು ಚಪಾತಿ ತಿಂದು ನೀರಿಗೆ ಇಳಿದೆವು. ಸಾತೊಡ್ಡಿ ಜಲಪಾತ ನೋಡಲು ನಿಜಕ್ಕೂ ಚೆಂದ. ಎಲ್ಲೋ ಟಿಸಿಲೊಡೆದು ಧುಮುಕುವಂತೆ ಕಾಣುವ ಜಲಪಾತ ಹತ್ತಿರಕ್ಕೆ ಹೋದಂತೆ ವಿಭಿನ್ನವಾಗಿ ತೋರುತ್ತದೆ. ಕಲ್ಲಿನ ಮೇಲೆ ಸ್ವಲ್ಪ ನಡೆದುಕೊಂಡು ನೀರಿನಲ್ಲಿ ಇಳಿಯಬೇಕಾಗಿದ್ದರಿಂದ ಪುಟ್ಟಿ ಹೆದರಿಕೆಯಿಂದ ತಕರಾರು ತೆಗೆದಳು. ಅವಳನ್ನು ಹತ್ತಿರವೇ ಬಂಡೆಯ ಮೇಲೆ ಕುಳ್ಳಿರಿಸಿ, ನಾವು ನೀರಿಗೆ ಇಳಿದೆವು.
ಎಂಥಾ ನೀರು, ಎಂಥಾ ಸಂಭ್ರಮ. ಮಳೆ ಬಂದು ನಿಂತದ್ದರಿಂದ ಸುತ್ತಲೂ ಹಸಿರು ಕಣ್ಣಿಗೆ ರಾಚುತ್ತಿತ್ತು. ನೀರಿಗೆ ಇಳಿದರೆ ಎದ್ದು ಬರಲಿಕ್ಕೇ ಮನಸ್ಸಿರಲಿಲ್ಲ. ಅದು ಸುಮಾರು ಆರು ಧಾರೆಯಾಗಿ ಧುಮುಕುತ್ತದೆ. ಅದರಲ್ಲಿ ಎಲ್ಲ ಧಾರೆಯ ಕೆಳಗೆ ಹೋಗಿ ನಿಲ್ಲುವುದು ಸ್ವಲ್ಪ ಕಷ್ಟ. ಆದರೆ ಬಲ ಬದಿಯಲ್ಲಿ ಬರುವ ಧಾರೆಯ ಕೆಳಗೆ ನಿಲ್ಲಬಹುದು. ತುಸು ಪ್ರಯಾಸ ಪಡಬೇಕು. ಮಳೆಗಾಲವಾದ್ದರಿಂದ ಅಲ್ಲಿಗೆ ಸಾಗುವ ಕಲ್ಲುಗಳ ಮೇಲೆ ಪಾಚಿ ಇದ್ದು, ಕಾಲು ಜಾರುವ ಸಂಭವವೂ ಇದೆ. ಬಹಳ ಎಚ್ಚರದಿಂದ ಸಾಗಬೇಕು. ಹಾಗೆ ಸಾಗಿ ಧುಮುಕುವ ಧಾರೆಯ ಕೆಳಗೆ ನಿಂತರೆ ಸಿಗುವ ಖುಷಿಯೇ ಬೇರೆ. ನನ್ನ ಮಗನೂ ಸೇರಿದಂತೆ ಎಲ್ಲರೂ ಕಷ್ಟಪಟ್ಟು ಆ ಧಾರೆಯ ಕೆಳಗೆ ಹೋದೆವು. ಮಗನನ್ನು ಅಕ್ಷಯ ಹೊತ್ತುಕೊಂಡು ಬಂದ.
ಸುಮಾರು ಎರಡು ಗಂಟೆ ಅಲ್ಲಿ ಕಳೆದರೂ ಸಾಕೆನಿಸಲಿಲ್ಲ. ಸಂಜೆಯಾಗತೊಡಗಿತ್ತು. ಅಕ್ಷಯನು ಜೇನುಕಲ್ಲು ಗುಡ್ಡದ ನೆನಪು ಮಾಡಿದ. ಗತ್ಯಂತರವಿಲ್ಲದೇ ಅಲ್ಲಿಂದ ಹೊರಟು ಜೇನುಕಲ್ಲುಗುಡ್ಡಕ್ಕೆ ಬಂದೆವು. ಅಲ್ಲಿ ಮೆಟ್ಟಿಲು ಹತ್ತುವಾಗಲೇ ಸುಸ್ತಾಗಿತ್ತು. ಇದು ಒಂದು ರೀತಿಯಲ್ಲಿ ಇಡೀ ಉತ್ತರ ಕನ್ನಡದ ಕಣಿವೆಗಳಿಗೆ ಕಣ್ಣು ಇದ್ದ ಹಾಗೆ. ಅಂದರೆ, ಇಲ್ಲಿ ನಿಂತರೆ ಇಡೀ ಉತ್ತರ ಕನ್ನಡದ ಕಾನನದ ವಿಹಂಗಮ ದೃಶ್ಯ ಲಭ್ಯವಾಗುತ್ತದೆ. ಇಲ್ಲಿಯ ಸೂರ್ಯಾಸ್ತದ ಸೊಬಗೂ ಚೆಂದ. ಅವೆಲ್ಲವನ್ನೂ ಮುಗಿಸಿ ವಾಪಸು ಅಕ್ಷಯನ ಮನೆಗೆ ವಾಪಸಾದೆವು. ರಾತ್ರಿಯೆಲ್ಲಾ ಕಾಲುಗಳು ಸೋತಿದ್ದವು. ಬೆಳಗ್ಗೆ ಏಳುವಾಗ ಸುಂದರವಾದ ಕನಸಿನ ಲೋಕದಿಂದ ಬಂದಂತೆ ಅನಿಸುತ್ತಿತ್ತು.
ರೂಟ್ ಮ್ಯಾಪ್
– ಮಂಗಳೂರಿನಿಂದ ಸಾತೊಡ್ಡಿಗೆ ದೂರ ಸುಮಾರು 325 ಕಿ.ಮೀ.
– ಸ್ವಂತ ವಾಹನದಲ್ಲಾದರೆ ತಗಲುವ ಅವಧಿ ಸುಮಾರು 6 ಗಂಟೆ
– ಯಲ್ಲಾಪುರ ಸಮೀಪ ದಾರಿ ಮಧ್ಯೆ ಜೇನುಕಲ್ಲು ಗುಡ್ಡವೂ ಲಭ್ಯ
– ಶಿರಸಿ ಯಲ್ಲಾಪುರ ಮಧ್ಯೆ ಬರುವಂಥ ತಾಣ
– ಸುಧಾ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.