ಭುವನೇಶ್ವರ ಧಾರ್ಮಿಕ ಕ್ಷೇತ್ರಗಳ ಸುಂದರ ತಾಣ
Team Udayavani, Apr 28, 2017, 8:03 PM IST
ಒರಿಸ್ಸಾದ ರಾಜಧಾನಿ ಭುವನೇಶ್ವರದ ಸಮೀಪದಲ್ಲೇ ಸಾಕಷ್ಟು ದೇವಾಲಯಗಳಿವೆ. ಪ್ರತಿಯೊಂದು ಕ್ಷೇತ್ರವೂ ತನ್ನದೇ ಆದ ವೈಶಿಷ್ಯದಿಂದ ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲಿನ ಕೆತ್ತನೆಗಳು, ನಿರ್ಮಾಣದ ಶೈಲಿ ಎಲ್ಲವೂ ವಿಭಿನ್ನ, ನಯನಮನೋಹರ. ಕೆಲವೊಂದು ಭಗ್ನಗೊಂಡಿದ್ದರೂ ತನ್ನ ಇತಿಹಾಸದ ನೆನಪಿನ ಛಾಪನ್ನು ಇನ್ನೂ ಉಳಿಸಿಕೊಂಡಿದೆ ಮಾತ್ರವಲ್ಲ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಲೇ ಇದೆ.
ಸಂಗೀತ ಗುರು ಬಸ್ತಿ ಕವಿತಾ ಶೆಣೈ ಅವರ ನೇತೃತ್ವದಲ್ಲಿ ನಾನು ಸಹಿತ ಹನ್ನೊಂದು ಜನರ ತಂಡವು ಈಶಾನ್ಯ ಭಾರತದ ಒರಿಸ್ಸಾ ರಾಜ್ಯದ ಭುವನೇಶ್ವರ, ಪುರಿ, ಕೋನಾರ್ಕ್ ಮೊದಲಾದ ಸ್ಥಳಗಳಿಗೆ ಪ್ರವಾಸ ಹೋಗಲು ನಿರ್ಣಯಿಸಿದೆವು. ಅದರಂತೆ ನಮ್ಮ ತಂಡವು ವಿಮಾನ ಮಾರ್ಗವಾಗಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳಿ ಅಲ್ಲಿಂದ ಭುವನೇಶ್ವರಕ್ಕೆ ತಲುಪಿತು. ಭುವನೇಶ್ವರದ ವಿಮಾನ ನಿಲ್ದಾಣದಲ್ಲಿ ಇಳಿದಾಕ್ಷಣ 14 ಸೀಟ್‌ಗಳ ವ್ಯಾನೊಂದನ್ನು ನಿಗದಿಪಡಿಸಿ, ಅದರಲ್ಲೇ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಪ್ರಯಾಣ ಆರಂಭಿಸಿದೆವು. ದಾರಿಯುದ್ದಕ್ಕೂ ಸುತ್ತಮುತ್ತಲಿನ ಪರಿಸರ, ಸುಂದರ ನೋಟಗಳನ್ನು ಕಣ್ತುಂಬಿಸಿಕೊಳ್ಳುತ್ತಾ ಸಾಗಿದೆವು. ಅಚ್ಚರಿಯೆಂಬಂತೆ ಭುವನೇಶ್ವರ ನಗರವು ಎರಡು ವಿಭಾಗಗಳಿಂದ ಕೂಡಿರುವುದು ಗಮನಕ್ಕೆ ಬಂತು. ಒಂದು ಭಾಗದಲ್ಲಿ ಪ್ರಾಚೀನ ಮಂದಿರಗಳು, ಧರ್ಮಶಾಲೆಗಳು ಇದ್ದರೆ ಮತ್ತೂಂದು ಭಾಗದಲ್ಲಿ ಸರಕಾರಿ ಕಟ್ಟಡಗಳು, ಆಧುನಿಕ ಮಳಿಗೆಗಳು ಇದ್ದವು.
ಲಿಂಗರಾಜ ಮಂದಿರ
ಮೊದಲು ನಾವು ಭೇಟಿ ನೀಡಿದ್ದು ಇಲ್ಲಿನ ಪ್ರಸಿದ್ಧ ಲಿಂಗರಾಜ ಮಂದಿರಕ್ಕೆ. ಇದು 11ನೇ ಶತಮಾನದಲ್ಲಿ ನಿರ್ಮಾಣವಾಗಿತ್ತು ಎನ್ನಲಾಗಿದೆ. ಸಿಂಹದ್ವಾರದ ಮೂಲಕ ಪ್ರವೇಶ ಪಡೆದ ಕೂಡಲೇ ನಮಗೆ ಬಲಭಾಗದಲ್ಲಿ ಕಾಣಸಿಗುವುದು ಗಣೇಶನ ಮಂದಿರ. ಇಲ್ಲಿನ ವೃಷಭ ಸ್ತಂಭ, ನೃತ್ಯ ಮಂಟಪ, ಜಗಮೋಹನ ಅನಂತರ ಗರ್ಭಗೃಹ ನೋಡಸಿಗುತ್ತದೆ. ಸುಂದರವಾದ ಕೆತ್ತನೆಗಳು ಕಣ್ಮನ ಸೆಳೆಯುತ್ತವೆೆ. ಇಲ್ಲಿ ಚಪ್ಪಟೆಯಾಕಾರದ ಲಿಂಗವು ಇಬ್ಭಾಗವಾಗಿ ಒಂದು ಭಾಗ ವಿಷ್ಣು, ಇನ್ನೊಂದು ಭಾಗ ಶಿವಸ್ವರೂಪಿಯಾಗಿದೆ. ಹರಿಹರ ಮಂತ್ರದಿಂದ ಪೂಜೆಗೈಯಲ್ಪಡುವ ಈ ಲಿಂಗವನ್ನು ಪರಿಹಾರಾತ್ಮಕ ಲಿಂಗವೆಂದೇ ಕರೆಯಲಾಗುತ್ತದೆ. ಅಲ್ಲಿಂದ ಹತ್ತಿರದಲ್ಲೇ ಇರುವ ಪರಶುರಾಮ ಮಂದಿರ, ಮುಕ್ತೇಶ್ವರ, ಕೇದಾರೇಶ್ವರ, ರಾಜಾರಾಣಿ ಮಂದಿರಗಳಿಗೆ ಭೇಟಿ ನೀಡಿದೆವು. ಮಂಗಳೂರಿನಲ್ಲಿ ಸಮುದ್ರ ತೀರ, ಕೆರೆ, ನದಿಗಳನ್ನು ನೋಡಿ ಆನಂದಿಸಿದ್ದರೂ ಇಲ್ಲಿನ ಬೃಹತ್ ಸರೋವರವನ್ನು ಕಂಡು ಮೂಕವಿಸ್ಮಿತರಾದೆವು. ಬಳಿಕ ಒರಿಸ್ಸಾ ಶಿಲ್ಪಕಲೆಯ ಅತ್ಯುದ್ಭುತ ವೈಭವವನ್ನು ಕಂಡು ಆನಂದಿಸಿದೆವು.
ಪುರಿ ಕ್ಷೇತ್ರ
ಅಲ್ಲಿಂದ ಮುಂದೆ ಪುರಿ ಕ್ಷೇತ್ರಕ್ಕೆ ನಮ್ಮ ಪ್ರಯಾಣ ಸಾಗಿತು. ಪುರುಷೋತ್ತಮ ವಾಟಿಕಾ ಎಂಬ ವಸತಿಗೃಹದಲ್ಲಿ ವಾಸ್ತವ್ಯ ಹೂಡಿದ ನಮಗೆ ನಮ್ಮ ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮಿಗಳು ಅಲ್ಲಿ ಮೊಕ್ಕಾಂ ಹೂಡಿರುವುದು ತಿಳಿದು ಬಂತು. ಕೂಡಲೇ ಅವರನ್ನು ಭೇಟಿಯಾದೆವು. ಅವರ ಜತೆ ಜಗದೊಡೆಯ ಅನ್ನಬ್ರಹ್ಮ ಜಗನ್ನಾಥನ ದರುಶನವೂ ಆಯಿತು.
ಚತುರ್ಧಾಮಗಳಲ್ಲೊಂದಾದ ಪುರಿ ಕ್ಷೇತ್ರದ ಜಗನ್ನಾಥ ಮಂದಿರದ ಕಲಾ ವೈಭವ ಅಭೂತಪೂರ್ವವಾಗಿದೆ. ಮೊದಲು ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿ, ಮಂದಿರದ ಪ್ರಾಂಗಣದಲ್ಲಿರುವ ಏಕಾದಶಿ ದೇವಿ ಮಂದಿರ, ಲಕ್ಷ್ಮೀ ಮಂದಿರ, ಸೂರ್ಯ ಮಂದಿರ, ನರಸಿಂಹ ದೇವರ ಮಂದಿರವನ್ನೆಲ್ಲ ನೋಡಿ, ಕೈಮುಗಿದು ಜಗನ್ನಾಥ ಮಂದಿರದೊಳಗೆ ಪ್ರವೇಶಿಸಿದೆವು. ಅಲ್ಲಿ ಪೂಜಿಸಲ್ಪಡುವ ಕೃಷ್ಣ, ಬಲರಾಮ, ಸುಭದ್ರಾರನ್ನು ನೋಡಿದಷ್ಟು ಮನತಣಿಯಲಿಲ್ಲ. ಮೂರು ಪರಿಕ್ರಮ ಬಂದು ಜಗನ್ನಾಥನನ್ನು ನೋಡಿ ಅನಂದಪಟ್ಟೆವು. ಇಲ್ಲಿನ ಅಗ್ರಹಾರವನ್ನು ಕಂಡು ಚಕಿತರಾದೆವು. ಲಂಬಾಕೃತಿಯ 212 ಅಡಿ ಎತ್ತರದ ದೇವಾಲಯದ ತುತ್ತ ತುದಿಯಲ್ಲಿ ಧ್ವಜ ಹಾರಿಸುವ ದೃಶ್ಯವನ್ನು ಕಂಡು ಅಚ್ಚರಿಪಟ್ಟೆವು.
ಕೋನಾರ್ಕ್
ಮುಂದೆ ನಮ್ಮ ಪ್ರಯಾಣ ಕೋನಾರ್ಕ್ ನ ಸೂರ್ಯ ದೇವಾಲಯದ ಕಡೆಗೆ ಸಾಗಿತು. ದೇವಾಲಯದಲ್ಲಿ ಸೂರ್ಯನ ವಿಗ್ರಹವಿಲ್ಲ. ಭಗ್ನಗೊಂಡ ಅಶ್ವಗಳು, ವಿದೇಶೀಯರ ದಾಳಿಗೆ ತುತ್ತಾದ ಈ ದೇವಾಲಯ ಈಗ ಸ್ಮಾರಕದಂತಿತ್ತು. ಅಲ್ಲಿಂದ ರಘುರಾಜಪುರದಲ್ಲಿ ಪಟ್ಟಾ ಚಿತ್ರಕಲೆಯನ್ನು ವೀಕ್ಷಿಸಿದೆವು. ಅನಂತರ ಗೋಲ್ಡನ್ ಬೀಚ್‌ಗೆ ತೆರಳಿ ಅಲ್ಲಿ ಸಂಜೆಯ ಹೊತ್ತು ಕಳೆದವು. ಜತೆಗೆ ದೌಲಗಿರಿಯ ಶಾಂತಿಸ್ತೂಪದ ಸೌಂದರ್ಯವನ್ನು ಕಣ್ಮನದಲ್ಲಿ ತುಂಬಿಕೊಂಡೆವು. ಒರಿಸ್ಸಾಕ್ಕೆ ಪ್ರವಾಸ ತೆರಳುವ ಮುಂಚೆಯೇ ಅಲ್ಲಿನ ಪ್ರತಿಯೊಂದು ಕ್ಷೇತ್ರದ ಮಹಿಮೆ, ವೈಶಿಷ್ಟಗಳ ಬಗ್ಗೆ ಮೊದಲೇ ಹೆಚ್ಚಾಗಿ ಅಧ್ಯಯನ ಮಾಡಿ ತೆರಳಿದ್ದರಿಂದ ಅಲ್ಲಿ ನಮ್ಮ ತಂಡದಲ್ಲಿರುವವರೆಲ್ಲರಿಗೂ ನಾನೇ ಗೈಡ್ ಆಗಬೇಕಾಯಿತು. ಒಂದು ವಾರದ ಪ್ರವಾಸ ಮುಗಿಸಿ ನೂರಾರು ಸಂಭ್ರಮದ ಕ್ಷಣಗಳು, ಸುಂದರ ನೋಟಗಳು, ದೃಶ್ಯಗಳನ್ನು ಮನದಲ್ಲಿ ತುಂಬಿಕೊಂಡು, ಮತ್ತೆ ಮತ್ತೆ ಬರಬೇಕು, ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಎಂಬ ಬಯಕೆಯನ್ನು ಹೊತ್ತು ಮರಳಿ ಹೈದರಾಬಾದ್‌ಗೆ ತೆರಳಿ ಅಲ್ಲಿಂದ ವಿಮಾನಯಾನದ ಮೂಲಕ ಬೆಂಗಳೂರು ಅನಂತರ ಮಂಗಳೂರಿಗೆ ಬಂದು ತಲುಪಿದೆವು.
ರೂಟ್‌ಮ್ಯಾಪ್
ಸಾಕಷ್ಟು ದೂರದ ಪ್ರಯಾಣವಾದ್ದರಿಂದ ಮಂಗಳೂರಿನಿಂದ ನೇರವಾಗಿ ಭುವನೇಶ್ವರಕ್ಕೆ ವಿಮಾನ ಅಥವಾ ರೈಲಿನ ಮೂಲಕ ತೆರಳಬಹುದು.
ಭುವನೇಶ್ವರದಲ್ಲೂ ಖಾಸಗಿ ವಾಹನ ಸೌಲಭ್ಯಗಳು ಸಾಕಷ್ಟಿವೆ.
ಸಾಕಷ್ಟು ಧರ್ಮಶಾಲೆಗಳು, ದೇವಸ್ಥಾನಗಳಿರುವುದರಿಂದ ಊಟ, ವಸತಿಗೆ ಸಮಸ್ಯೆಯಿಲ್ಲ.
ರೇಖಾ ಬಾಳಿಗಾ ಬಿ., ಕೊಡಿಯಾಲ್‌ಗುತ್ತು (ಪೂರ್ವ), ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.