Friendship: ವಿಶ್ವದ ಸುಂದರ ಸಂಬಂಧ ಗೆಳೆತನ
Team Udayavani, Jan 9, 2025, 3:53 PM IST
ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹ ಎಂಬುದು ಅತ್ಯಂತ ಮಹತ್ವವಾದುದು. ಇಡೀ ಪ್ರಪಂಚದಲ್ಲಿ ಅತೀ ಸುಂದರವಾದ ಸಂಬಂಧ ಎನಿಸಿಕೊಂಡಿರುವುದು ಗೆಳೆತನದ ಬೆಸುಗೆ. ಒಬ್ಬ ನಿಜವಾದ ಗೆಳೆಯ/ಗೆಳತಿ ಕಷ್ಟ ಕಾಲದಲ್ಲಿ ನಮ್ಮನ್ನು ಕೈ ಬಿಡದೇ ಸದಾ ನಮ್ಮೊಂದಿಗೆ ಇದ್ದು ಎಲ್ಲ ರೀತಿಯ ಕಷ್ಟ- ಸುಖದಲ್ಲಿ ಭಾಗಿಯಾಗಿರುತ್ತಾರೆ. ಅಂತಹ ಗೆಳೆತನದ ಬಂಧಕ್ಕೆ ಪುಣ್ಯ ಮಾಡಿರಬೇಕು. ಗೆಳೆತನವೆಂಬುದು ಯಾವುದೇ ರೀತಿಯ ಹಣ-ಅಂತಸ್ತು, ಜಾತಿ-ಧರ್ಮ, ಕಪ್ಪು ಬಿಳುಪು ನೋಡಿ ಬರುವ ಸಂಬಂಧವಲ್ಲ.
ಪ್ರತಿಯೊಬ್ಬರ ಬಾಳಿನಲ್ಲಿ ಗೆಳೆಯರು ಇದ್ದೇ ಇರುತ್ತಾರೆ. ಹದಿಹರೆಯದ ಪ್ರಾಯದಲ್ಲಿ ಗೆಳೆಯರ ಪಾತ್ರ ತುಂಬಾ ಮುಖ್ಯವಾದದ್ದು. ಸಜ್ಜನರ ಸಂಗ ಹೆಜ್ಜೆàನು ಸವಿದಂತೆ ಎಂಬ ಮಾತಿನಂತೆ ನಾವು ಯಾರ ಜತೆ ಗೆಳೆತನ ಮಾಡಿದ್ದೇವೋ ಅವರ ಗುಣಗಳು ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಸಮಾಜವು ನಾವು ಯಾವ ವ್ಯಕ್ತಿಗಳ ಜತೆ ಇದ್ದೇವೆ ಎಂಬುದರ ಮೇಲೆ ನಮ್ಮನ್ನು ನೋಡಲಾರಂಭಿಸುತ್ತದೆ.
ಕಾಲೇಜು ಜೀವನದಲ್ಲಿ ನಾವು ಗೆಳೆಯರೊಂದಿಗೆ ಮಾಡುವ ತರಲೆಗಳು, ತಮಾಷೆಗಳು, ಕಳೆಯುವ ಸಮಯ,ಸಂಭ್ರಮಿಸುವ ದಿನಗಳನ್ನು ನಾವು ಜೀವನದಲ್ಲಿ ಮರೆಯಲಾರೆವು. ಅದು ನಮ್ಮ ವಿದ್ಯಾರ್ಥಿ ಜೀವನದ ಸುಮಧುರ ಸಮಯವಾಗಿ ಉಳಿದುಬಿಡುತ್ತದೆ. ನಮ್ಮ ಈ ಜೀವನದಲ್ಲಿ ಅನೇಕ ತರಹದ ವ್ಯಕ್ತಿಗಳ ಜತೆ ನಾವು ಸ್ನೇಹ ಬೆಳೆಸಿಕೊಳ್ಳುತ್ತೇವೆ. ಕೆಲವರು ನಮ್ಮ ಜೀವನದಲ್ಲಿ ಅತೀ ಮುಖ್ಯವಾದ ವ್ಯಕ್ತಿಗಳು ಎನ್ನುವ ರೀತಿ ಹತ್ತಿರವಾಗುತ್ತಾರೆ.
ನಮ್ಮ ಎಲ್ಲ ರೀತಿಯ ವಿಷಯಗಳು ಅವರಿಗೆ ತಿಳಿದಿರುತ್ತದೆ. ಅಪ್ಪ ಅಮ್ಮನ ಬಳಿ ಹೇಳುವ ವಿಷಯಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೇವೆ. ಜೀವನದಲ್ಲಿ ಮಾಡುವಂತಹ ತಪ್ಪುಗಳನ್ನು ತಿದ್ದುತ್ತಾ, ಕಾಳಜಿ ತೋರಿಸುತ್ತಾ, ಸಹಾಯ ಹಸ್ತಗಳಾದ ಗೆಳೆತನದ ಕೊಂಡಿಯು ಜೀವನದಲ್ಲಿ ಸದಾ ಬೆಸೆದುಕೊಂಡಿರುತ್ತದೆ. ಒಂದು ಗೆಳೆತನ ನಮ್ಮ ಜೀವನದಲ್ಲಿ ಜೀವನವನ್ನೇ ಬದಲಾಯಿಸಬಲ್ಲುದು. ಸದಾ ನಮ್ಮ ಒಳಿತನ್ನೇ ಬಯಸುವ ಗೆಳೆಯ/ಗೆಳತಿಯರನ್ನು ನಾವು ನಮ್ಮ ಜೀವನದಲ್ಲಿ ಕಳೆದುಕೊಳ್ಳದಿರೋಣ.
- ಸಂಧ್ಯಾ ಎನ್.
ಮಣಿನಾಲ್ಕೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.