ಈ ವರ್ಷದಲ್ಲಿ ಪ್ರವಾಸ ಮಾಡಲು ಯೋಚಿಸಿದ್ದೀರಾ? ಇಲ್ಲಿದೆ ನೋಡಿ ಸುಂದರ ಪ್ರವಾಸಿ ತಾಣಗಳು?
Team Udayavani, Jan 1, 2020, 4:10 PM IST
ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗಬೇಕು, ಸುಂದರ ತಾಣಗಳನ್ನು ಸಂದರ್ಶಿಸಬೇಕು ಎಂದುಕೊಂಡಿದ್ದೀರಾ. ಕಳೆದ ವರ್ಷ ಇದೇ ರೀತಿ ಯೋಜನೆ ಹಾಕಿ ಪ್ರವಾಸಕ್ಕೆ ಹೋಗಲು ಹಾಕಿಲ್ಲವೆ? ಹೊಸವರ್ಷದ ಈ ಸಂದರ್ಭದಲ್ಲಿ ಕೆಲವು ಪ್ರವಾಸಿ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ.
ವಾರಾಂಗಲ್ ಕೋಟೆ
ತೆಲಂಗಾಣ ರಾಜ್ಯದ ವಾರಂಗಲ್ ಪಟ್ಟಣದಲ್ಲಿ ಕಾಣ ಸಿಗುವ ಈ ಕೋಟೆಯು ಅದ್ಭುತ ಐತಿಹಾಸಿಕ ತಾಣವಾಗಿದೆ. ಅನೇಕ ಕಂಬಗಳಿಂದ ಆವೃತವಾಗಿರುವ ಈ ಕೋಟೆಯು ಐತಿಹಾಸಿಕ ಕಥೆಯನ್ನು ವರ್ತಮಾನದಲ್ಲಿ ಸಾರುತ್ತಿದೆ. ಇಲ್ಲಿನ ಕಂಬಗಳ ಮೇಲೆ ವಿವಿಧ ಬಗೆಯ ಚಿತ್ತಾರವನ್ನು ಕಾಣಬಹುದು. ಸುತ್ತಲೂ ಹಚ್ಚ ಹಸಿರಿನ ಪರಸರದ ನಡುವೆಯೂ ಈ ಕೋಟೆಯೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಕೋಟೆಯನ್ನು 12ನೇ ಶತಮಾನದಲ್ಲಿ ಕಾಕತೀಯರ ಆಡಳಿತದ ಅವಧಿಯಲ್ಲಿ ಕಟ್ಟಲಾಗಿದೆ ಎಂದು ಇತಿಹಾಸವೂ ತಿಳಿಸುತ್ತದೆ. ಮತ್ತೊಂದು ಸ್ವಾರಸ್ಯಕರ ವಿಷಯವೆಂದರೆ ಕಾಕತೀಯ ಸಾಮ್ರಾಜ್ಯವು ಪ್ರಸ್ತುತ ತೆಲಂಗಾಣ ರಾಜ್ಯದ ಅಧಿಕೃತ ಲಾಂಚನವಾಗಿದೆ. ಹೀಗೆ ವಾರಂಗಲ್ ಕೋಟೆ ಪ್ರವಾಸಪ್ರೀಯರ ನೆಚ್ಚಿನ ತಾಣವಾಗಿ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ.
ಪಾಖಾಲ್ ಕೆರೆ
ವಾರಾಂಗಲ್ ಜಿಲ್ಲೆಯಲ್ಲಿರುವ ಈ ಕೆರೆಯು ಪ್ರಕೃತಿ ಪ್ರಶಾಂತತೆಯ ನಡುವೆ ಕಂಗೊಳಿಸುತ್ತಿದೆ. ಈ ಜಿಲ್ಲೆಯಲ್ಲಿರುವ ಪಾಖಾಲ್ ವನ್ಯಜೀವಿ ಅಭಯಾರಣ್ಯದಲ್ಲಿ ಈ ಸುಂದರವಾದ ಕೆರೆಯನ್ನು ಕಾಣಬಹುದು. ವಿಶಾಲವಾಗಿ ಮೈ ಚಾಚಿ ನಿಂತಿರುವ ಈ ಕೆರೆಯನ್ನುಕಾಕತೀಯರ ದೊರೆಯಾಗಿದ್ದ ಗಣಪತಿ ದೇವನಿಂದ ಸುಮಾರು 1213ರಲ್ಲಿ ನಿರ್ಮಿಸಿಲಾಗಿದೆ. ಇದೊಂದು ಕೃತಕವಾಗಿ ನಿರ್ಮಿಸಿರುವ ಕರೆಯಾಗಿದ್ದು, ತೆಲಂಗಾಣ ರಾಜ್ಯಕ್ಕೆ ಪ್ರವಾಸಕ್ಕೆಂದು ಭೇಟಿ ನೀಡಿದರೆ, ಇನ್ನಿತ್ತರ ಸ್ಥಳಗಳ ಜೊತೆಗೆ ಈ ಸ್ಥಳವೂ ಪ್ರವಾಸಿ ಆಕರ್ಷಣೆಯ ತಾಣವಾಗಿದೆ.
ಪುಲಿಕಟ್
ಕೋರ ಮಂಡಲ ತೀರ ಎಂಬ ಸ್ಥಳದ ಹೆಸರನ್ನು ಎಲ್ಲರೂ ಕೇಳಿರುವುದು ಸಹಜ. ತಮಿಳುನಾಡಿನಲ್ಲಿರುವ ಈ ಕೋರಮಂಡಲ ತೀರ ಪ್ರಕೃತಿಯ ಸೊಬಗನ್ನು ತನ್ನ ಮಡಿಲಿನಲ್ಲಿ ತುಂಬಿಕೊಂಡು ಕಂಗೊಳಿಸುತ್ತಿದೆ. ಇಲ್ಲಿನ ಪುಲಿಕಟ್ ಎರಡು ವಿಷಯಗಳಿಗೆ ಪ್ರಸಿದ್ಧವಾಗಿದೆ. ಒಂದು ಪುಲಿಕಟ್ ಸರೋವರ ಮತ್ತು ಪುಲಿಕಟ್ ಪಕ್ಷಿಧಾಮ. ಭಾರತದ ಎರಡನೇ ಉಪ್ಪುನೀರಿನ ಸರೋವರ ಎಂಬ ಹೆಗ್ಗಳಿಕೆ ಇಲ್ಲಿನ ಸರೋವರವೂ ಪಡೆದಿದೆ. ಅನೇಕ ಪ್ರವಾಸಿಗರನ್ನು ಸ್ಥಳವೂ ಆಕರ್ಷಿಸುತ್ತಿದೆ
ಗೋಕಾಕ್ ಜಲಪಾತ:
ಕರ್ನಾಟಕದ ಬೆಳಗಾವಿ ನಗರದ ಈಶಾನ್ಯ ಭಾಗಕ್ಕೆ ಸುಮಾರು 67 ಕಿ.ಮೀ ದೂರದಲ್ಲಿರುವ ಗೋಕಾಕ್ ಪಟ್ಟಣದಲ್ಲಿ ಈ ಜಲಪಾತವನ್ನು ಕಾಣಬಹುದು. ಪ್ರಕೃತಿಯ ರಮಣೀಯತೆ ನಡುವೆ ಹಾಲಿನ ಕೆನೆಯಂತೆ ಹರಿಯುವ ಈ ಜಲಪಾತವು ಗೋಕಾಕ್ ಫಾಲ್ಸ್ ಎಂದೇ ಪ್ರಸಿದ್ಧವಾಗಿದೆ. ಘಟಪ್ರಭಾ ನದಿಯಿಂದ ಉಂಟಾದ ಈ ಜಲಪಾತಕ್ಕೆ ಅಡ್ಡಲಾಗಿ ಕಟ್ಟಲಾದ ತೂಗು ಸೇತುವೆಯಿದ್ದು, ಅದರ ಮೇಲೆ ಸಾಗುತ್ತಿದ್ದರೆ ಪ್ರಶಾಂತತೆ ನಡುವೆಯೂ ಧುಮ್ಮುಕ್ಕಿ ಹರಿಯುವ ಈ ಜಲಪಾತ ನೋಡುತ್ತಾ ಅಬ್ಬಾ ಎಂಬ ಉದ್ಗಾರದೊಂದಿಗೆ ಈ ರೋಮಾಂಚನಕಾರಿ ಆನಂದವನ್ನು ಪಡೆಯಬಹುದು. ಗೋಕಾಕ್‌ಗೆ ತೆರಳಲು ಬೆಳಗಾವಿಯಿಂದ ಬಸ್ ಮತ್ತು ರೈಲುಗಳು ಲಭ್ಯವಿದೆ.
ಐಹೊಳೆ ಹಾಗೂ ಪಟ್ಟದಕಲ್ಲು
ಬಾಗಲಕೋಟೆ ಜಿಲ್ಲೆಯಲ್ಲಿರುವ ಐಹೊಳೆ ಮತ್ತು ಪಟ್ಟದಕಲ್ಲು ಇತಿಹಾಸ ಪ್ರಸಿದ್ಧ ಸುಂದರ ತಾಣ. ಚಾಲುಕ್ಯರ ವಾಸ್ತುಶೈಲಿಯನ್ನು ನೋಡಬೇಕೆಂಬ ಹಂಬಲವಿದ್ದರೆ ಈ ಸ್ಥಳಕ್ಕೆ ಭೇಟಿ ನೀಡುವುದು ಉತ್ತಮ. ಚಾಲುಕ್ಯರ ಅನೇಕ ಕಲಾಕೃತಿಗಳ, ವಾಸ್ತುಶಿಲ್ಪಗಳ ರಚನೆಯನ್ನುಳ್ಳ ಅನೇಕ ದೇವಾಲಯಗಳನ್ನುಈ ಗ್ರಾಮದಲ್ಲಿ ಕಾಣಬಹುದಾಗಿದೆ.
ಹೀಗೆ ವಿವಿಧ ಬಗೆಯ ಇತಿಹಾಸಗಳನ್ನು ಒಳಗೊಂಡು, ಪ್ರಕೃತಿಯ ಮಡಿಲಿನಲ್ಲಿ ರಾರಾಜಿಸುತ್ತಿರುವ ಈ ಸ್ಥಳಕ್ಕೆ ಪ್ರವಾಸವನ್ನು ಕೈಗೊಳ್ಳಬೇಕೆಂದು ಕೊಂಡವರಿಗೆ ಹೇಳಿ ಮಾಡಿಸಿದ ತಾಣಗಳು. ಹೊಸ ವರ್ಷದ ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯಬೇಕೆಂದುಕೊಳ್ಳುವವರು ಈ ಸ್ಥಳಕ್ಕೆ ಭೇಟಿ ನೀಡುವುದು ಉತ್ತಮ.
ಸಾಯಿನಂದಾ ಚಿಟ್ಪಾಡಿ,
ವಿವೇಕಾನಂದ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.