ಅನಿರೀಕ್ಷಿತ ಪಯಣ ಊಟಿ ಕಡೆಗೆ
Team Udayavani, Jan 2, 2020, 4:24 AM IST
ಕೆಲವೊಂದು ಅನಿರೀಕ್ಷಿತ ಪ್ರಯಾಣಗಳೇ ಜೀವನದಲ್ಲಿ ಅತೀ ಹೆಚ್ಚು ಖುಷಿ ಕೊಡುವುದು. ಅವುಗಳೇ ಹೆಚ್ಚಾಗಿ ನೆನಪಿನ ಬುತ್ತಿಯಲ್ಲಿ ಉಳಿಯುವಂತಹದ್ದು. ನಮ್ಮದೂ ಕೂಡ ಯಾವುದೇ ಪೂರ್ವ ತಯಾರಿಯಿಲ್ಲದೆ ಹೊರಟ ಅನಿರೀಕ್ಷಿತ ಪ್ರಯಾಣ. ಸ್ನೇಹಿತರೆಲ್ಲರೂ ಬೆಂಗಳೂರಿಗೆ ಬಂದ ಕೆಲಸ ಮುಗಿಸಿ ಬಿಡುವಿನ ವೇಳೆ ಹೊರಟದ್ದು ಸಾಂಸ್ಕೃತಿಕ ನಗರಿಗೆ. ಆದರೆ ಮೈಸೂರಿಗೆಂದು ಹೊರಟ ನಮಗೆ ಅಂದುಕೊಳ್ಳದೇ ಇರುವ ಊಟಿ ಪಯಣ ಇನ್ನಷ್ಟೂ ಖುಷಿ ಕೊಟ್ಟಿದ್ದು ಮಾತ್ರ ಸುಳ್ಳಲ್ಲ. ಅದಕ್ಕಿಂತಲೂ ಹೆಚ್ಚಿನ ಖುಷಿ, ಪ್ರೀತಿ ದೊರೆತದ್ದು ಸ್ನೇಹಿತನ ಮನೆಯಲ್ಲಿ. ಅದಂತೂ ಮರೆಯಲಾಗದ ದಿನಗಳು.
ಕಾಲೇಜ್ ಲೈಫ್ ಮುಗಿದಿರೋದ್ರಿಂದ ಮತ್ತೆ ಸ್ನೇಹಿತರು ಸಿಗೋದಿಲ್ಲ ಅಂದುಕೊಂಡು ಮೈಸೂರಿಗೆ ತೆರಳಲು ನಿರ್ಧರಿಸಿದೆವು. ಬೆಂಗಳೂರಿನಿಂದ 3 ಗಂಟೆಗೆ ಹೊರಡುವ ರೈಲಿನಲ್ಲಿ ನಾವು 8 ಜನ ಸ್ನೇಹಿತರು ಹೋಗುವುದು ತೀರ್ಮಾನವಾಯಿತು. ಆದರೆ 8 ಜನರಲ್ಲಿ ನಾವು ನಾಲ್ಕು ಜನ ಸ್ನೇಹಿತರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಲುಪಿದ್ದೇ ಅಪರಾಹ್ನ 3.20ಕ್ಕೆ. ಮತ್ತೆ 3.30ಕ್ಕೆ ಮೈಸೂರಿಗೆ ಇನ್ನೊಂದು ರೈಲು ಇದೆ ಎಂದು ತಿಳಿದು ಕೇವಲ 5 ನಿಮಿಷದಲ್ಲಿ ರೈಲ್ವೇ ನಿಲ್ದಾಣ ತಲುಪುವಂತೆ ಓಟ ಶುರು ಮಾಡಿದೆವು. ಇನ್ನೇನೋ ರೈಲು ಹೊರಟಿತು ಎನ್ನುವುದರೊಳಗಡೆ ಮೈಸೂರಿಗೆ ಹೊರಡುವ ರೈಲು ಹತ್ತಿದೆವು. ಓಡಿದ ಸುಸ್ತಿನ ಜತೆಗೆ ಗೆಳೆಯರ ಸಹಸ್ರ ನಾಮಾರ್ಚನೆ ಪ್ರಯಾಣದುದ್ದಕ್ಕೂ ಜತೆಯಾಯಿತು. ಆದ್ರೂ ಒಳ್ಳೆಯ ಅನುಭವದೊಂದಿಗೆ ಪ್ರಯಾಣ ಶುರು ಮಾಡಿದೆವು. ನಗು, ಹರಟೆ, ಸುಸ್ತು ಜೊತೆಗೆ ಮದ್ದೂರು ವಡೆ ರುಚಿ ಅನುಭವಿಸುತ್ತಾ ಮೈಸೂರು ತಲುಪಿದ್ದೆ ಗೊತ್ತಾಗಲಿಲ್ಲ.
ವಾಸ್ತುಶಿಲ್ಪದ ಸೌಂದರ್ಯ
ಮೈಸೂರಿನಲ್ಲಿ ಆ ದಿನ ಉಳಿದುಕೊಂಡು ಮರುದಿನ ಫಿಲೋಮಿನಾ ಚರ್ಚ್ ನೋಡಿ ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡು, ಸೆಲ್ಫಿ ತೆಗೆದು ಮೈಸೂರು ಅರಮನೆಯತ್ತ ಹೊರಟೆವು. ರಾಜಮನೆತನದ ವೈಭವದ ಕುರಿತು ಚರ್ಚಿಸುತ್ತಾ, ಅಲ್ಲಿನ ವಾಸ್ತುಶಿಲ್ಪದ ಸೌಂದರ್ಯವನ್ನು ಸವಿಯುತ್ತಾ ಹೊರಬಂದಿದ್ದು ಮಧ್ಯಾಹ್ನದ ಹೊತ್ತಿಗೆ. ಅಲ್ಲಿಂದ ಚಾಮುಂಡಿ ಬೆಟ್ಟ ನೋಡಿಕೊಂಡು ಅಲ್ಲೇ ದೇವಸ್ಥಾನದಲ್ಲಿ ಮಧ್ಯಾಹ್ನದ ಊಟ ಮುಗಿಸಿಕೊಂಡೆವು. ಅಲ್ಲಿಂದ ನಮ್ಮ ಪಯಣ ಹೊರಟದ್ದು ಮೈಸೂರಿನಿಂದ ಸುಮಾರು 50 ಕಿ.ಮೀ. ದೂರ ಇರುವ ಗುಂಡ್ಲುಪೇಟೆಗೆ. ಅಲ್ಲಿಂದ ನಮಗೆ ಸಿಕ್ಕಿದ್ದು ವಿಭಿನ್ನ ಅನುಭವಗಳು.
ಸೂರ್ಯಕಾಂತಿ, ಚೆಂಡುಹೂವುಗಳು
ಸುತ್ತಮುತ್ತಲೂ ಹಚ್ಚಹಸುರು, ಜತೆಗೆ ತುಂತುರು ಮಳೆ, ತಣ್ಣಗಿನ ಗಾಳಿಯೊಂದಿಗೆ ಚಳಿ ತುಂಬಿದ ಗುಂಡ್ಲುಪೇಟೆಗೆ ನಾವು ತಲುಪಿದ್ದು ಇಳಿಸಂಜೆ. ಸುಮಾರು ಒಂದೂವರೆ ತಿಂಗಳು ಬೆಂಗಳೂರಿನಲ್ಲಿದ್ದ ನಮಗೆ ಅಲ್ಲಿನ ಟ್ರಾಫಿಕ್, ಬ್ಯುಸಿ ಲೈಫ್ಗಿಂತ ಭಿನ್ನವಾಗಿರುವ ಹಳ್ಳಿಗಳು ಮನಸ್ಸಿಗೆ ಮುದ ನೀಡಿದ್ದವು. ನಮ್ಮೂರಿನ ಹಳ್ಳಿಗಳಿಗಿಂತ ಭಿನ್ನವಾಗಿದ್ದ ಆ ಊರಿನ ಹಳ್ಳಿಗಳು ನಮಗೆ ಹೊಸ ಅನುಭವ ನೀಡಿದವು. ಮೈಸೂರಿನಿಂದ ಗುಂಡ್ಲುಪೇಟೆಯ ಮಾರ್ಗದ ಮಧ್ಯ ಇಳಿದುಕೊಂಡ ನಾವು ಆಟೋ ಹಿಡಿದು ಪಾಳ್ಯ ಎಂಬ ಹಳ್ಳಿಯತ್ತ ಹೊರಟೆವು. ದಾರಿಯುದ್ದಕ್ಕೂ ಸೂರ್ಯಕಾಂತಿ, ಚೆಂಡು ಹೂವುಗಳು ರಸ್ತೆ ಬದಿಯಲ್ಲಿ ನಿಂತು ಸ್ವಾಗತಿಸಿದಂತಿತ್ತು. ಸೂರ್ಯಕಾಂತಿ ಹೂ ಕಂಡ ನಾವು ಆಟೋ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡೆವು. ಅದನ್ನು ನೋಡಿದ ನಮ್ಮ ಸ್ನೇಹಿತ “ನಮ್ಮೂರಿನ ಸೂರ್ಯಕಾಂತಿ ಹೂ ಎಷ್ಟು ಫೇಮಸ್ಸು ಅಂತ ಗೊತ್ತಿರಲಿಲ್ಲ’ ಎಂದದ್ದು ಮತ್ತೆ ಮತ್ತೆ ನಗು ತರಿಸಿತ್ತು. ಆಟೋದಲ್ಲಿ ಹೊಗುತ್ತಿದ್ದ ನಮಗೆ ಟಿಪಿಕಲ್ ಹಳ್ಳಿ ಕಾಣಸಿಕ್ಕಿತು.
ಹೊಸ ಅನುಭವ
ಹಳ್ಳಿಯ ಜನರು ಬಡವರಾಗಿದ್ದರೂ ಪ್ರೀತಿ, ವಿಶ್ವಾಸದಲ್ಲಿ ಅವರು ಶ್ರೀಮಂತರು. ಪ್ರೀತಿ ತುಂಬಿದ ಅವರ ಮಾತುಗಳ ಜತೆಗೆ ಚಳಿಗೆ ಅವರು ಕೊಟ್ಟ ಬಿಸಿ ಬಿಸಿ ಕಾಫಿ, ಸಮಯ ಕಳೆಯಲು ಕೊಟ್ಟ ಹುರಿದ ಶೇಂಗಾ ನಮಗೆಲ್ಲರಿಗೂ ಹೊಸ ಅನುಭವ. ಒಂದು ರಾತ್ರಿ ಅಲ್ಲೇ ಕಳೆದು ಮರುದಿನ ನಾವು ಹೊರಟದ್ದು ನಾವು ಅಂದುಕೊಳ್ಳದೇ ಇರುವ ಊಟಿ ಕಡೆಗೆ. ಗೊಂದಲ, ಆತಂಕ, ಚರ್ಚೆಗಳಾಗಿ ಊಟಿಗೆ ಹೊಗುವುದೆಂದಾಯಿತು. ಊಟಿಗೆ ಹೊರಟ ನಮಗೆ ಒಂದೆಡೆ ಖುಷಿ.. ಇನ್ನೊಂದೆಡೆ ಆತಂಕ. ಅಂತೂ ಭಯ, ಆತಂಕ, ಖುಷಿ ಜತೆ ಹೊರಟ ನಮಗೆ ದಾರಿ ಯುದ್ದಕ್ಕೂ ಜತೆಯಾಗಿದ್ದು ಪ್ರಕೃತಿ ಸೌಂದರ್ಯ. ಯಾಕೆಂದರೆ ನಾವು ಹೊರಟದ್ದು ಬನ್ನೇರು ಘಟ್ಟದಿಂದಾಗಿ. ಹಾಗಾಗಿ ನಮಗೆ ಪ್ರಕೃತಿ ಸೌಂದರ್ಯದ ಜತೆಗೆ ಜಿಂಕೆ, ನವಿಲು, ಆನೆಗಳು ಕಾಣಸಿಗತೊಡಗಿದವು.
ಚಳಿಯ ಅನುಭವ
ಬನ್ನೇರುಘಟ್ಟದ ಅನಂತರ ಘಾಟ್ ಸೆಕ್ಷನ್ ಆರಂಭವಾದಂತೆ ನಮಗೆಲ್ಲ ಊಟಿಯ ಚಳಿಯ ಅನುಭವವಾಗಲು ಆರಂಭವಾಯಿತು. ಎತ್ತರದ ಪ್ರದೇಶಗಳು, ಅಲ್ಲೊಂದು ಇಲ್ಲೊಂದು ಎನ್ನುವಂತಿದ್ದ ಮನೆಗಳು, ಆಕಾಶಕ್ಕೆ ತಾಕುವಂತೆ ಇರುವ ಗುಡ್ಡಗಳು ಮಂಜಿನಲ್ಲಿ ಮುಚ್ಚಿಹೋಗಿರುವುದು ಕಾಣಸಿಗತೊಡಗಿತು. ರಸ್ತೆ ಬದಿಯುದ್ದಕ್ಕೂ ಪ್ರವಾಸಿಗರ ಮನಮುಟ್ಟುವಂತೆ ಬರೆದ ಎಚ್ಚರಿಕೆಯ ವಾಕ್ಯಗಳನ್ನು ಓದುತ್ತಾ, ಊಟಿಯ ಪ್ರಕೃತಿ ಸೌಂದರ್ಯ ಸವಿಯುತ್ತಾ, ಸ್ನೇಹಿತರೊಡೆಗೆ ಹಾಡು, ತಮಾಷೆಗೆ ಜತೆಯಾಗುತ್ತಿದ್ದ ನನಗೆ ಊಟಿ ತಲುಪಿದ್ದು ಗೊತ್ತಾದದ್ದೇ ಅಲ್ಲಿನ ಮೈಕೊರೆಯುವ ಚಳಿಗೆ.
ಉದ್ಯಾನವನ ಸುತ್ತಾಟ
ಊಟಿ ತಲುಪಿದ ನಮ್ಮ ಗುಂಪು ಚಳಿಗೆ ನಡುಗುತ್ತಾ ಉದ್ಯಾನವನನ್ನು ಸುತ್ತಾಡಲು ಹೊರಡಿತು. ಅದನ್ನು ಮುಗಿಸಿ ಬಂದು, ನಾವು ತಂದ ತಿಂಡಿಯನ್ನು ಕಾರಿನಲ್ಲೇ ಕುಳಿತು ತಿಂದು ರೋಸ್ ಗಾರ್ಡನ್, ಬೋಟಿಂಗ್ ನೋಡಿಕೊಂಡು ಬಂದೆವು. ಊಟಿಯಲ್ಲಿ ನಾನು ತುಂಬಾ ಖುಷಿ ಪಟ್ಟ ಸ್ಥಳ ಎಂದರೆ ಸಿನಿಮಾ ಚಿತ್ರೀಕರಣ ನಡೆಯುವ ಪ್ರದೇಶ. ಸ್ವಲ್ಪ ಎತ್ತರವಾಗಿ ಹಚ್ಚ ಹಸುರಿನಿಂದ ಕೂಡಿದ ಆ ಪ್ರದೇಶ ನಿಜಕ್ಕೂ ಸುಂದರವಾಗಿತ್ತು. ನಾವು ಅಲ್ಲಿ ತಲುಪಿದಾಗ ಮಳೆ ಗಾಳಿ ಆರಂಭವಾಗಿದ್ದರಿಂದ ನಮ್ಮ ಖುಷಿ ಇನ್ನಷ್ಟೂ ಹೆಚ್ಚಿತು. ಆದರೆ ಆಗಲೇ ಸೂರ್ಯ ಮುಳುಗುವ ಹೊತ್ತಾದ್ದರಿಂದ ಅಲ್ಲಿಂದ ಬೇಗನೆ ಕಾಲ್ಕಿತ್ತೆವು.
ಪಯಣದ ಖುಷಿ
ನಾವು ಊಟಿಯಲ್ಲಿ ಅಲ್ಲಿನ ಸ್ಥಳಗಳನ್ನು ನೋಡಿ ಖುಷಿ ಪಡುವುಕ್ಕಿಂತ ಹೆಚ್ಚು ಖುಷಿ ಪಟ್ಟದ್ದು ಪ್ರಯಾಣಿಸುವಾಗಲೇ. ಕಾರಿನಲ್ಲಿ ಹೋಗಿದ್ದರಿಂದ ನಮ್ಮ ನಗು, ಹಾಡು, ತಮಾಷೆಗಳಿಗೆ ಯಾವುದೇ ಅಡ್ಡಿಯಿರಲಿಲ್ಲ. ಹೊರಡುವಾಗ ಇದ್ದಷ್ಟೇ ಎನರ್ಜಿ ಮನೆ ತಲುಪುವವರೆಗೂ ಎಲ್ಲರಲ್ಲಿತ್ತು. ಹಾಗಾಗಿ ದಾರಿಯುದ್ದಕ್ಕೂ ಹಾಡು, ತಮಾಷೆಗಳಿಗೆ ಬರ ಇರಲಿಲ್ಲ.
ಹುಟ್ಟುಹಬ್ಬ ಆಚರಣೆ
ಮನೆಗೆ ವಾಪಸ್ಸಾದ ನಾವು ಆ ದಿನ ಗೆಳತಿಯೊಬ್ಬಳ ಹುಟ್ಟುಹಬ್ಬ ಆಚರಿಸಿ ತಡರಾತ್ರಿ ನಿದ್ದೆಗೆ ಜಾರಿದೆವು. ಮರುದಿನ ಎದ್ದು ಇನ್ನೊಬ್ಬ ಗೆಳೆಯನ ಮನೆಗೆ ಹೋಗಿ ಅವರ ಗದ್ದೆಯಲ್ಲಿ ಸುಸ್ತಾಗುವವರೆಗೂ ಸುತ್ತಾಡಿ ಸ್ನೇಹಿತನೊಬ್ಬನ ನೇತೃತ್ವಲ್ಲಿ ಬಿರಿಯಾನಿ ತಯಾರಿಸಿದೆವು. ಸ್ನೇಹಿತನ ಮನೆಯವರಿಗೂ ಕೊಟ್ಟು ನಾವು ತಿಂದು ಮತ್ತೆ ಸುತ್ತಾಡಲು ಹೊರಟೆವು. ಅವರ ಗದ್ದೆ ಕಳೆದು ಮುಂದೆ ಹೋದರೆ ಒಂದು ದೊಡ್ಡ ಗುಡ್ಡ ಕಾಣಿಸಿತು. ಅದನ್ನು ಸ್ವಲ್ಪ ಹತ್ತಿ ಮತ್ತೆ ಮನೆಗೆ ಹಿಂತಿರುಗಿದೆವು. ಸಾಕಷ್ಟು ಹೊಸ ಅನುಭವದೊಂದಿಗೆ ಮರುದಿನ ಬೆಂಗಳೂರಿಗೆ ವಾಪಸ್ಸಾಗಲು ಮನಸ್ಸು ಮಾಡಿದೆವು.
ರೂಟ್ ಮ್ಯಾಪ್
ಮೈಸೂರಿನಿಂದ ಊಟಿಗೆ 125 ಕಿ.ಮೀ., ಸುಮಾರು 3 ಗಂಟೆಯ ಪಯಣ.
ಗುಂಡ್ಲುಪೇಟೆಯಿಂದ 67 ಕಿ.ಮೀ, ಸುಮಾರು 2 ಗಂಟೆಯ ಪ್ರಯಾಣ.
– ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್ ಇರಾನಿವರೆಗೆ
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.