UV Fusion: ಬಣ್ಣದ ಛತ್ರಿ; ಇಲ್ಲೊಂದು ಕಥೆ
Team Udayavani, Nov 20, 2024, 12:07 PM IST
ಮಳಿ ಅಂದ ಕೂಡಲೇ ನನಗ ಮೊದಲು ನೆಂಪಾಗುದು ಆ ಬಣ್ಣದ ಛತ್ರಿ! ಆ ಸರ್ತಿನೂ ಪ್ರತಿ ವರ್ಷದಂಗ ಸೂಟಿಗಿ ನಮ್ಮೂರಿಗಿ ನಮ್ಮ ಮಿಲಿಟರಿ ಕಾಕಾ ( ಚಿಕ್ಕಪ್ಪ) ಬಂದಿದ್ರು. ಅವರು ಜಮ್ಮು ಕಾಶ್ಮೀರದಾಗ ಡೂಟಿ ಮಾಡ್ತಿದ್ರು. ಅವರು ಬರುವಾಗ ಅಲ್ಲಿಂದ ತರು ಗೊಂಬಿ, ಆಟಗಿ ಸಾಮಾನ, ತಿಂಡಿ ತಿನಸ ಅಲ್ಲಿ ಸಿಗೋ ಬ್ಯಾರೆ, ಬ್ಯಾರೆ ಜಾತಿ ಹೂವಿನ ಬೀಜ, ಗಿಡ ಹಿಂಗ ಅವರ ಬಂದ್ರ ಹಬ್ಬನ ಬಂದಂಗಕ್ಕಿತ್ತು. ಕಾಕಾ ಬಸ್ ಇಳದ ಕೂಡ್ಲೆ ಅವರ ಕೈ ಹಿಡಕೊಂಡು ಊರ ಮುಂದಿನ ಮನಿಗೊಳ ದಾಟಗೊಂದು ಹಣಮಪ್ಪನ ಗುಡಿ ಮುಂದ ಹಾದು ತ್ವಾಟದ ಮನಿಗೆ ಹೋಗುದಂದರ ಅದೊಂದ ಸಂಭ್ರಮ ಇದ್ದಂಗ ಇರ್ತಿತ್ತು. ಕಾಕಾ ಅರ್ಧ ತ್ವಾಟಕ್ಕೆಲ್ಲ ಕೇಳಸುವಂಗ ಟೇಪ್ ರೆಕಾರ್ಡ್‌ದಾಗ ಹಚ್ಚುವ ಹಿಂದಿ ಬಾರ್ಡರ್ ಪಿಚ್ಚರ್‌ದ ‘ಸಂದೇಶಾ ಆತೇ ಹೈ, ಹಮೆ ತಡಪಾತೇ ಹೈ… ಮೈ ವಾಪಸ್ ಆವುಗಾಂ!’ ಆ ಹಾಡಾ ಕೇಳುದಂದರ ಮತ್ತಷ್ಟು ಹುಮ್ಮಸ್ಸ ಬರ್ತಿತ್ತು. ಆ ಸರ್ತಿ ಕಾಕಾ ನಂಗೊಂದ ಸಣ್ಣದೊಂದು ಬಣ್ಣದ ಛತ್ರಿ ತಂದಿದ್ರು. ಯಾವಾಗ್ಲೂ ಕಪ್ಪಗಿರು ದೊಡ್ಡ ದೊಡ್ಡ ಛತ್ರಿ ನೋಡಿದ್ದ ನಂಗ ಕಾಕಾ ಆ ಛತ್ರಿ ನೋಡಿ ಅದೆಷ್ಟು ಆನಂದ ಆತ ಅಂದ್ರ ಅವತ್ತೆಲ್ಲ ಅದನ್ನ ಕೈಯಿಂದ ಕೆಳಗ ಇಟ್ಟಿರಲಿಲ್ಲ.
ಹಿಂಗ ಒಂದ ಎರಡು ವಾರಾ ಕಳದ್ರೂ ನಂಗ ಆ ಬಣ್ಣದ ಛತ್ರಿ ಮ್ಯಾಲಿನ ಮೋಹ ಇನ್ನೂ ಹೋಗಿರ್ಲಿಲ್ಲ. ಅಂದ ಸಂಜಿ ಮುಂದ ಜೋರಾಗಿ ಮಳಿ ಸುರಿಯಾಕ ಚಾಲು ಆತ್. ಪುಸ್ತಕ ತಗೋಳಾಕ ಅಂತ ನಮ್ಮನಿಗಿ ಬಂದ ನನ್ನ ಗೆಳತಿನ ಅವರ ಮನಿ ತನಕ ಬೀಳ್ಕೊಡು ಸಮಾರಂಭಕ ನಾನು ಮತ್ತೆ ನನ್ನ ಬಣ್ಣದ ಛತ್ರಿ ಭಾಳ ಹುರುಪಿಲಿ ಸಜ್ಜಾದ್ವಿ. ಮೊದ್ಲ ಸಣ್ಣ ಛತ್ರಿ ಇನ್ನ ಅವರ ಮನಿನೋ ನಮ್ಮನಿಂದ ದೂರ ಇತ್ತು. ಪುಸ್ತಕ ತೊಯ್ಯಬಾರದು ಅಂತ ಅದನ್ನ ಸಂಭಾಳಿಸಿಕೊಂಡ ಗೆಳತಿ ಮತ್ತ ಪುಸ್ತಕನ್ನ ಅವರ ಬಿಟ್ಟು ನಮ್ಮನಿಗಿ ಬರೋದ್ರಾಗ ನಾ ಮತ ಛತ್ರಿ ತಪ್ಪ ಅಂತ ತೊಸ್ಗೊಂಡು ಥಂಡಿ ಹತ್ತಿ ನಡಗಾಕತ್ತಿದ್ವಿ. ಕತ್ತಲೂ ಆಗಾಕತ್ತಿತ್ತು. ಛವಣಿ ಒಳಗ ಆ ಛತ್ರಿ ತೂಗ ಹಾಕಿದೆ.
ಮಾರನೆ ದಿನ ಮುಂಜಾನಿ ಎದ್ದ ಕೂಡಲೇ ಕಣ್ ತಿಕ್ಕೊಂತ ಛತ್ರಿಗೆ ಭೆಟ್ಟಿ ಆಗಾಕ ಅಂತ ಛಾವಣಿಗೆ ಬಂದೆ. ಅಂಗಳದಾಗ ತಣ್ಣಗ ಬೀಸು ತಂಗಾಳಿಗೆ ಛವಣ್ಯಗ ತೂಗಾಕತ್ತಿದ್ದ ಆ ನನ್ನ ಛತ್ರಿ ನನಗ ಶುಭೋದಯ ಹೇಳಿದಂಗ ಅನ್ನಸ್ತು. ಅದನ್ನೊಮ್ಮಿ ಮುಟ್ಟಿ, ಎದಿಗಿ ಅಮಚಿಕೊಂಡು ಸಾಲಿಗಿ ಹೋಗಾಕ ತಯಾರಾಗಿ ಪಾಟಿ ಚೀಲ ಹೆಗಲಿಗಿ ತಾಗಿಸಿಕೊಂಡು ನನ್ನ ಬಣ್ಣದ ಛತ್ರಿ ಕೈಯಾಗ ಹಿಡಕೊಂಡು ಹೋಗಾಕತ್ತೆ. ಮಳಿ ಇಲ್ಲಂದ್ರು ಛತ್ರಿ ಬಿಚ್ಚಿ ಆಟ ಆಡ್ಕೊಂತ ರಸ್ತೆದಾಗ ನಡಿಯು ಮುಂದ ಒಂದ ಕ್ಷಣ ಅಲ್ಲೇ ನಿಂತು ಆ ಛತ್ರಿ ಹೊಳ್ಳಿಸಿ ನೋಡೀನಿ ಛತ್ರಿ ತುದಿಗಿ ಹಾಕಿರು ಆ ಗುಂಡನ ಪ್ಲಾಸ್ಟಿಕ್ ಬಟನ ಕಾಣತಿದ್ದಿಲ್ಲ. ಅಯ್ಯೋ ಎಲ್ಲಿ ಹೋತು!? ಅಂತ ನಿಂತ ಜಗಾದಾಗನ ನೆಲದ ಮ್ಯಾಲೆಲ್ಲ ಅತ್ತಾಗ, ಇತ್ತಾಗ ಎಲ್ಲ ಕಡೇನೂ ನೋಡಿದೆ ಎಲ್ಲೂ ಅದರ ಸುಳಿವ ಇರ್ಲಿಲ್ಲ. ಮನಸಿಗ್ಯಾಕೋ ಭಾಳ ಬೇಜಾರ ಆತು… ಏನೋ ಕಳಕೊಂಡವರಂಗಾಗಿ ಮತ್ತ ಮನೀ ತನಕ ಹೋಗಿ ದಾರಿ ಉದ್ದಕ್ಕ ಹುಡುಕಿದರೂ ಆ ಸಣ್ಣ ಬಟನ್ ಎಲ್ಲೂ ಸಿಗಲಿಲ್ಲ. ಸಾಲಿಗಿ ಬ್ಯಾರೆ ಟೈಮ್ ಆಗಿತ್ತು ಏನ ಮಾಡುದು ಅಂತ ಗೊತ್ತಾಗದ ಸುಮ್ಮನ ಸಾಲಿ ಕಡೆ ಹೊಂಟನಿ. ಅಂದ ಯಾವಾಗ ಮಧ್ಯಾಹ್ನ ಅಕ್ಕೆತೋ ಮತ್ತ ಆ ಛತ್ರಿ ಬಟನ್ ಹುಡಕಿನೊ ಅಂತ ಬರೇ ಅದ ವಿಚಾರ ತಲ್ಯಾಗಿತ್ತು.
ಢಣ ಢಣ … ಅಂತ ಮಧ್ಯಾಹ್ನ ಸಾಲಿ ಗಂಟಿ ಹೊಡದು ಊಟಕ ಬಿಟ್ಟ ಕೂಡ್ಲೆ ಒಂದ ಉಸಿರಿನ್ಯಾಗ ಓಡಿ ಗೆಳತಿ ಮನಿ ದಾರಿ ಗುಂಟ ಛತ್ರಿ ಬಟನ್ ಹುಡಕೊಂತ ಹೊಂಟನಿ. ಎಲ್ಲೂ ಸಿಗದ ಮತ್ತು ನಿರಾಶೆ ಆತು. ಮಾನಸನ್ಯಾಗ ಗೆಳತಿಗೊಂದಿಷ್ಟು ಬೈಯಬೇಕು ಅನ್ನುವಾಗ “ಛೇ!…ಛೇ… ಇದರಾಗ ಅಕಿದಾರ ಏನ್ ತಪ್ಪ ಐತಿ, ನಾನ್ ನಿಮ್ಮನಿಗಿ ಬಿಟ್ಟ ಬರ್ತಿನಂತ ಹೇಳಿದ್ನಿ’ ಅಂತ ವಾಪಸ್ ಮನಿಗಿ ಬಂದ ಅವ್ವನ ಮುಂದ ಅಳಕೊಂತ ಛತ್ರಿ ಪುರಾಣ ಹೇಳಿದೆ. “ನಿನ್ನಿ ಸಂಜಿ ಮುಂದ ಚಾಲೂ ಆದ ಮಳಿ ನಸಕಿನ ಐದರ ಮಟ ಬಿಟ್ಟೇ ಇಲ್ಲ… ಇನ್ನ ಆ ಛತ್ರಿ ಬಟನ್ ತೇಲಕೋಂತ ಹೊಳಿ ಇಲ್ಲ ಅಂದ್ರ ಹಳ್ಳ ಸೆರ್ಕೊಂಡು ಮತ್ ಬ್ಯಾರೆ ಊರಿಗಿ ಹೋಗಿದ್ರೂ ಹೋಗಿರಬಹುದು’ ಅಂತ ಅಂದ್ರು. ಆದ್ರೂ ನನ್ನ ಮನಸ್ಸ ತಡಿಲಿಲ್ಲ ಹೊಳಿ ದಂಡಿ ಎಲ್ಯಾರ ಸಿಗಬಹುದು ಅಂತೇಳಿ ಓಡಕೊಂತ ಹೊಳಿ ದಂಡಿ ಎಲ್ಲ ಸುತ್ತಿ ಬಂದ್ನಿ ಆದರ ಆ ಬಟನ್ ಮಾತ್ರ ಎಲ್ಲಿಯೂ ಸಿಗಲಿಲ್ಲ. ಮಲಪ್ರಭಾ ತಾಯಿನ ನೆನಸ್ಕೊಂತ ಬಂದ ದಾರಿಗಿ ಸುಂಕ ಇಲ್ಲ ಅಂನ್ನುವಂಗ ಮನಸ ಗಟ್ಟಿ ಮಾಡ್ಕೊಂಡು ಮನಿ ಕಡೆ ಹೆಜ್ಜಿ ಹಾಕಿನಿ. ಊಟ ಮಾಡಾಕು ಮನಸ ಆಗ್ಲಿಲ್ಲ ಅವತ್ತು!
ಆಮ್ಯಾಲ ಆ ಬಣ್ಣದ ಛತ್ರಿ ಒಂದೆರಡ ವರ್ಷದ ತನಕ ನನ್ನ ಹತ್ತಿರ ಇತ್ತು. ಹಳೆದಾದ್ರು ಆ ಬಣ್ಣದ ಛತ್ರಿ ಮತ್ತ ನನ್ನ ನಡುವಿನ ಸ್ನೇಹ ಮಾತ್ರ ಹೊಸಾದ ಇದ್ದಂಗ ಇತ್ತು. ಇವತ್ತೂ ಮಳಿ ಬಂದ್ರ, ಯಾವಾಗಾರ ಮತ್ತ ನಾ ತವರಮನಿಗಿ ಹೋದ್ರ ಬಾಲ್ಯದಾಗಿನ ಆ “ಬಣ್ಣದ ಛತ್ರಿ’ ನೆನಪೆಲ್ಲ ಬಣ್ಣ ಬಣ್ಣದ ಪಾತರಾಗಿತ್ತಿ ಹಂಗ ನನ್ನ ಮನಸಿನ ಹೂ ತ್ವಾಟದಾಗ ಹಾರಕೊಂತನ ಇರತೈತಿ! ಹಿಂಗ ಈ ಮಳಿ ಅನ್ನುದು ಸೃಷ್ಟಿಗೆಲ್ಲ ಸುರುದು ಹಸರಾಗಿ ಚಿಗುರುವಂಗ, ಒಮ್ಮೊಮ್ಮೆ ಹೆಚ್ಚಾಗಿ ಅನಾಹುತ ಮಾಡುವಂಗ ನಮ್ಮ ಹೃದಯದಾಗೂ ಸಿಹಿ, ಕಹಿ ನೆನಪಿನ ಹನಿಗರದು ಮತ್ತ ಮರತ ಆ ದಿನಗಳನ್ನೆಲ್ಲ ಹೊತ್ತ ಬರತೈತಿ! ಮುಖದ ಮ್ಯಾಲ ಮುಗುಳ್ನಗಿನೂ ಹರಸತೈತಿ…. ಮನದಾಗ ದುಃಖ ಆಗಿ ಕಣ್ಣೀರಾಗಿಸಿ ಅಳಸೀನೂ ಬಿಡತೈತಿ.
-ಸರೋಜಾ ಶ್ರೀಕಾಂತ, ಕಲ್ಯಾಣ್, ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.