UV Fusion: ಎಲ್ಲೆಲ್ಲೂ ಹ್ಯಾಪಿ ನ್ಯೂ ಇಯರ್
Team Udayavani, Jan 13, 2025, 4:44 PM IST
‘ಹೊಸ ವರ್ಷ ಬಂದೇ ಬಿಡ್ತು ಗುರು, ಇವತ್ತು 12 ಗಂಟೆಗೆ ಪಾರ್ಟಿ ಶುರು ಮಾಡೋದೇ’ ಎಂದು ಡಿಸೆಂಬರ್‌ಗೆ ಟಾಟಾ ಮಾಡುತ್ತಾ ಜನವರಿ 1ಕ್ಕೆ ಹಲೋ ಹೇಳಲು ನಮ್ಮ ಯುವಜನರ ಫೋನ್ ಸ್ಟೇಟಸ್‌ನಲ್ಲಿ ಡಿಸೆಂಬರ್ 31 ರ ರಾತ್ರಿಯೇ ಪ್ರಾರಂಭವಾಗುತ್ತದೆ. ಹೊಸ ವರ್ಷ ಮತ್ತೆ ಬಂದಿದೆ. ಹೊಸ ಹುರುಪಿನೊಂದಿಗೆ ಬರುತ್ತಿರುವ ಹೊಸ ವರ್ಷವನ್ನು ಎಲ್ಲರೂ ಖುಷಿಯಿಂದ ಸ್ವಾಗತಿಸಲು ಕಾತುರತೆಯಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷವೂ ಹೊಸ ವರ್ಷ ಬರುತ್ತದೆ ಆ ದಿನ ಕೇವಲ ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ ಎಂಬುವುದು ಎಲ್ಲರಿಗೂ ಗೊತ್ತಿದ್ದರು ಪ್ರತಿಯೊಬ್ಬರು ಈ ದಿನಕ್ಕಾಗಿ ಕುತೂಹಲದಿಂದ ಕಾಯುತ್ತಾರೆ.
ಪ್ರತಿ ವರ್ಷ ಹೊಸ ವರ್ಷ ಆಗಮಿಸುತ್ತದೆ ಎಂದು ಸುಮ್ಮನೆ ಕುಳಿತಿರುವ ಯುವ ಮನಸ್ಸುಗಳಿಗೆ ಒಂದು ಮಾತು. ವರ್ಷಕ್ಕೊಮ್ಮೆ ಕ್ಯಾಲೆಂಡರ್ ಬದಲಾಗುತ್ತೆ ಆದರೆ ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ ಹಾಗಾಗಿ ಹೊಸ ವರ್ಷದ ಹೊಸ ಕ್ಷಣಗಳನ್ನು ಸ್ವಾಗತಿಸಲು ಸಿದ್ಧರಾಗಿ. ಹೊಸ ವರ್ಷದ ಆಚರಣೆ ಎಂದರೆ ಬರೀ ಮೋಜು ಮಸ್ತಿಯಿಂದ ಕೂಡಿರುವುದಲ್ಲ. ಒಂದಷ್ಟು ವಿಭಿನ್ನ ಗುರಿ ಮತ್ತು ಕನಸುಗಳೊಂದಿಗೆ ಹೆಜ್ಜೆ ಇಡುವುದು ಎಂದರ್ಥ.
ಹೊಸ ಕನಸು… ಹೊಸ ಹುರುಪು… ಹೊಸ ಭರವಸೆ… ಹೊಸ ಗುರಿ… ಹೊಸ ಸಾಹಸ… ಹೀಗೆ ಹೊಸತನವನ್ನು ಹೊತ್ತು ತರುವ ಖುಷಿಯ ಹೊಸ ವರ್ಷ ಮತ್ತೆ ಬಂದಿದೆ. ಇದು 2024ಕ್ಕೆ ವಿದಾಯ ಹೇಳಿ 2025ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವ ಕ್ಷಣ. ಕಳೆದ ವರ್ಷದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಕ್ಷಣ. ನಮ್ಮ ಬದುಕಿನ ಹೊಸ ಹೆಜ್ಜೆಯತ್ತ ಸಾಗುವ ಹೊತ್ತು ಕೂಡಾ ಹೌದು. ಮತ್ತೆ ನಮಗೆ 365 ದಿನಗಳು ಸಿಗುತ್ತವೆ. ಈ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ. ಜತೆಗೆ, ಕಳೆದ ವರ್ಷದತ್ತ ಒಮ್ಮೆ ಹಿಂತಿರುಗಿ ನೋಡಿ ಅವಲೋಕನ ಮಾಡಿಕೊಳ್ಳುವುದು ಕೂಡಾ ಮುಖ್ಯ. ಈ ಅವಲೋಕನವು ಕಳೆದ ವರ್ಷದ ನಮ್ಮ ತಪ್ಪುಗಳನ್ನು ಅರಿತುಕೊಳ್ಳಲು, ಆದ ತಪ್ಪುಗಳನ್ನು ತಿದ್ದಿಕೊಳ್ಳಲು ಅಥವಾ ನಾವು ಭವಿಷ್ಯದಲ್ಲಿ ಇಡಬೇಕಾದ ಹೆಜ್ಜೆಗೆ ದಾರಿಯನ್ನು ತೋರಿಸುವ ಅವಕಾಶದಂತಿರುತ್ತದೆ. ಹೊಸ ವರ್ಷದ ಕುರಿತು ಹೇಳುತ್ತಾ ಹೋದರೆ ಪದಗಳು ಮುಗಿಯುವುದಿಲ್ಲ. ಬರೆದಷ್ಟು ಮೂಡುವ ಆಲೋಚನೆಗಳು ಕಣ್ಣಮುಂದಿವೆ.
4,000 ವರ್ಷಗಳ ಹಿಂದೆ ಬ್ಯಾಬಿಲೋನ್‌ನಲ್ಲಿ ಪಾಶ್ಚಿಮಾತ್ಯ ನಾಗರಿಕತೆಯ ಹೊಸ ವರ್ಷವನ್ನು ಆಚರಿಸಲಾಯಿತು. ಆದರೆ ಆ ಸಮಯದಲ್ಲಿ ಹೊಸ ವರ್ಷವನ್ನು ಮಾರ್ಚ್ 21ರಂದು ಆಚರಿಸಲಾಗಿತ್ತು. ಆದರೆ ಜೂಲಿಯನ್ ಕ್ಯಾಲೆಂಡರ್ ಆಗಮನದ ಅನಂತರ ಪ್ರತಿ ವರ್ಷ ಜನವರಿ 1ರಂದು ಪ್ರಪಂಚದಾದ್ಯಂತ ಹೊಸ ವರ್ಷವನ್ನು ಆಚರಿಸಲಾಗುತ್ತಿದೆ. ಇದು ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವವೂ ಹೌದು.
ಈ ದಿನದಂದು ಸುಂದರವಾದ ಉಡುಗೊರೆಗಳು ಮತ್ತು ಶುಭಾಶಯಗಳನ್ನು ನೀಡುವ ಮೂಲಕ ಮಕ್ಕಳು ಸಂತೋಷಪಡುತ್ತಾರೆ. ಹೊಸ ವರ್ಷದ ಸಂದರ್ಭದಲ್ಲಿ ವರ್ಣರಂಜಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕ್ರಿಸ್ಮಸ್ ದಿನದಿಂದಲೇ ಹೊಸ ವರ್ಷವನ್ನು ಸ್ವಾಗತಿಸಲು ಜನರು ಸೇರುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಹೆಚ್ಚು ಉತ್ಸಾಹದಿಂದ ಸಂಭ್ರಮಿಸುತ್ತಾರೆ.
ಶ್ರೀಮಂತರ ಹ್ಯಾಪಿ ನ್ಯೂ ಇಯರ್
ಈ ದಿನದಂದು ಹೋಟೆಲ್, ಬಾರ್ ಮತ್ತು ಪಬ್‌ಗಳಲ್ಲಿ ಶ್ರೀಮಂತರಿಂದ ದೊಡ್ಡ ಪಾರ್ಟಿಗಳನ್ನು ಆಯೋಜಿಸಲಾ
ಗುತ್ತದೆ. ಅದರಲ್ಲಿ ರುಚಿಕರವಾದ ಭಕ್ಷ್ಯಗಳು, ಪಾನೀಯಗಳು ಮತ್ತು ಸಂಗೀತವನ್ನು ಜೋಡಿಸಲಾಗುತ್ತದೆ. ಕಾರ್ಯಕ್ರಮಗಳಲ್ಲಿ ರಾತ್ರಿಯೆಲ್ಲ ಜನರು ನೃತ್ಯ ಮಾಡುತ್ತಾರೆ, ಹಾಡುತ್ತಾರೆ ಮತ್ತು ಹೊಸ ವರ್ಷವನ್ನು ಭವ್ಯವಾದ ಕಾರ್ಟೆಜ್‌ನೊಂದಿಗೆ ಸ್ವಾಗತಿಸುತ್ತಾರೆ.
ಶಾಲೆಗಳಲ್ಲಿ ಹೊಸ ವರ್ಷ
ಹೊಸ ವರ್ಷದ ಶುಭ ಸಂದರ್ಭದಲ್ಲಿ ಶಾಲೆಯ ಮಕ್ಕಳು ಎಲ್ಲರಿಗೂ ಖುಷಿಯಿಂದ ಚಾಕೊಲೇಟ್‌ಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ ಹೊಸ ವರ್ಷದ ಅಭಿನಂದನೆಯನ್ನು ಮಾಡುವಾಗ ಅವರಲ್ಲಿ ಮೂಡುವ ಖುಷಿಗೆ ವ್ಯಕ್ತ ಪಡಿಸುವ ಪದಗಳು ಇಲ್ಲ. ಶಾಲೆಯಲ್ಲಿ ಗಾಯನ, ನೃತ್ಯ, ಚರ್ಚೆ, ರಂಗೋಲಿ, ಕ್ರೀಡೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ ಮತ್ತು ಮಕ್ಕಳು ವಿಶೇಷ ಪ್ರಾರ್ಥನೆಗಳನ್ನು ಸಹ ಹಾಡುತ್ತಾರೆ. ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮ ಧರ್ಮದ ಪ್ರಕಾರ ವಿವಿಧ ದಿನಗಳಲ್ಲಿ ಹೊಸ ವರ್ಷವನ್ನು ಆಚರಿಸುತ್ತಾರೆ. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಹೆಚ್ಚಿನ ಜನರು ಜನವರಿ 1ನ್ನೇ ಹೊಸ ವರ್ಷವನ್ನಾಗಿ ಆಚರಿಸುತ್ತಿದ್ದಾರೆ.
ತೆಲುಗು ಹೊಸ ವರ್ಷವು ಮಾರ್ಚ್ ಮತ್ತು ಏಪ್ರಿಲ್ ನಡುವೆ ಬರುತ್ತದೆ. ಆಂಧ್ರಪ್ರದೇಶದಲ್ಲಿ ಚೈತ್ರ ಮಾಸದ ಮೊದಲ ಮಾಸದ ಮೊದಲ ದಿನವಾದ ಯುಗಾದಿಯಂದು ಆಚರಿಸಲಾಗುತ್ತದೆ.
ಹೊಸ ವರ್ಷದ ಶುಭ ಸಂದರ್ಭದಲ್ಲಿ ಅನೇಕ ವರ್ಣರಂಜಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ದಿನದಂದು ಪ್ರತಿಯೊಬ್ಬರೂ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಶುಭಾಶಯ ಸಂದೇಶಗಳನ್ನು ಕಳುಹಿಸುತ್ತಾರೆ ಮತ್ತು ಶುಭಾಶಯಗಳನ್ನು ಕೋರುತ್ತಾರೆ.
ಹೊಸ ವರ್ಷದಲ್ಲಿ ನಾವು ಹಿಂದಿನ ವರ್ಷದಲ್ಲಿ ಮಾಡಿದ ತಪ್ಪುಗಳಿಂದ ಕಲಿಯುತ್ತೇವೆ. ಅನಂತರ ಹೊಸ ನಿರ್ಣಯ ಅಥವಾ ಪ್ರತಿಜ್ಞೆ ಮಾಡಿ ಪೂರ್ಣ ಶಕ್ತಿಯಿಂದ ಕೆಲಸವನ್ನು ಪೂರ್ಣಗೊಳಿಸಲು ಪ್ರಾರಂಭಿಸುತ್ತೇವೆ, ಅದು ನಮ್ಮ ಯಶಸ್ಸಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದಾಗಿದೆ. ಇದು ನಮ್ಮಲ್ಲಿ ಹೊಸ ಚೈತನ್ಯವನ್ನು ತರುವ ಹಬ್ಬದಂತಿದೆ. ಇದರಿಂದಾಗಿ ನಮ್ಮ ಜೀವನದಲ್ಲಿ ಹೊಸ ವರ್ಷದ ಮಹತ್ವವು ಹೆಚ್ಚಾಗುತ್ತದೆ.
ಹೊಸ ವರ್ಷವು ಐತಿಹಾಸಿಕ ದಿನವಾಗಿದೆ. ಇದು ನಮ್ಮ ಜೀವನದಲ್ಲಿ ಒಂದು ಪ್ರಮುಖ ದಿನವೆಂದು ಹೇಳಬೇಕು. ಈಗ ಹಿಂದಿನ ವರ್ಷದ ತಪ್ಪುಗಳಿಂದ ಕಲಿಯಬೇಕು ಮತ್ತು ಮುಂದಿನ ಪಯಣವನ್ನು ಹೊಸ ಹೆಜ್ಜೆಗಳೊಂದಿಗೆ ಪ್ರಾರಂಭಿಸಬೇಕು. ಇದು ನಮ್ಮ ಜೀವನಕ್ಕೆ ಹೊಸ ಆಯಾಮಗಳನ್ನು ನೀಡುತ್ತದೆ. ನಾವು ಪ್ರತಿ ವರ್ಷ ಹೊಸ ವರ್ಷವನ್ನು ಹೊಸ ಚೈತನ್ಯ ಮತ್ತು ಉತ್ಸಾಹದಿಂದ ಸ್ವಾಗತಿಸಬೇಕು, ಇದರಿಂದ ನಮ್ಮ ಜೀವನ ಇನ್ನಷ್ಟು ಅಭಿವೃದ್ಧಿ ಕಾಣುತ್ತದೆ.
2025 ಶಾಂತಿ, ನೆಮ್ಮದಿ, ಸುಖ, ಸಂತೋಷ, ಆರೋಗ್ಯ ಮತ್ತು ಸಂಪತ್ತನ್ನು ಹೊತ್ತು ತರಲಿ.
ನಿಮ್ಮ ಬದುಕಿನ ಪ್ರತಿ ಕ್ಷಣವೂ ಆನಂದದಾಯಕವಾಗಿರಲಿ. ‘ಹ್ಯಾಪಿ ನ್ಯೂ ಇಯರ್’.
-ಶಿಲ್ಪಾ ಪವಾರ, ವಿಜಯಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.