UV Fusion: ನಿಮ್ಮೊಳಗಿರಲಿ ಜೀವಕಳೆ
Team Udayavani, Jan 14, 2025, 5:53 PM IST
ದುಃಖ, ಸಂತೋಷ, ಬಲಹೀನತೆ, ಬಲಾಡ್ಯತೆಗಳು ಪ್ರತಿ ವ್ಯಕ್ತಿಗಳಲ್ಲೂ ಒಂದೇ ತೆರನಾಗಿರುವುದಿಲ್ಲ. ಕೆಲವರಿಗೆ ಚಿಕ್ಕ ಪುಟ್ಟ ವಿಚಾರಗಳಿಂದ ಸಂತೋಷ ಅಥವಾ ದುಃಖವಾಗಬಲ್ಲದು. ದೈಹಿಕವಾಗಿ ಕಟ್ಟು ಮಸ್ತಾಗಿ ಕಾಣುವ ವ್ಯಕ್ತಿಯು ಮಾನಸಿಕವಾಗಿ ಮೃದು ಸ್ವಭಾವದವನು ಆಗಿರಬಹುದು. ಮಾನಸಿಕವಾಗಿ ಸದೃಢನಾಗಿರುವವನು ದೈಹಿಕವಾಗಿ ನರಪೇತಲನಾಗಿರಲೂಬಹುದು.
ಆರ್ಥಿಕವಾಗಿ ಸದೃಢನಾಗಿದ್ದ ಸ್ನೇಹಿತನೊಬ್ಬ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಆರ್ಥಿಕವಾಗಿ ಸಹಾಯವನ್ನು ಮಾಡಿದ್ದ. ಅವರ್ಯಾರು ಇವನ ಸಮಯಕ್ಕೆ ಹಣವನ್ನು ನೀಡದೆ ಸತಾಯಿಸಿದ್ದರು. ಮದುವೆಯಾದ ಅನಂತರ ಸಂಸಾರ ನಡೆಸಲು ಕಷ್ಟವಾಗುತ್ತಾ ಹೋಯಿತು. ಹಣ ಪಡೆದವರು ಸಬೂಬುಗಳನ್ನು ಹೇಳುತ್ತಾ ಹೋದರು. ಮೊದಮೊದಲು ಏನೂ ಪ್ರಶ್ನೆ ಮಾಡದ ಹೆಂಡತಿ, ಆಮೇಲಾಮೇಲೆ ಪ್ರಶ್ನಿಸಸತೊಡಗಿದಳು. ಇವನ ಸ್ನೇಹಿತರಂತಿದ್ದ ಕೆಲವರು ಇವನನ್ನು ನೋಡಿ ಇವನ ಹಿಂದೆ ಆಡಿಕೊಳ್ಳಲು ಪ್ರಾರಂಭಿಸಿದರು. ತಪ್ಪೇ ಮಾಡದವನಿಗೆ ಇದೆಂತಹ ಮಾನಸಿಕ ಶಿಕ್ಷೆ?
ಈ ತೆರನಾದ ಹಲವಾರು ಸಮಸ್ಯೆಗಳು ನಮ್ಮ ಮನೆಯ ಸುತ್ತಲೂ ಓಡಾಡುತ್ತಿರುತ್ತವೆ. ಸಮಯ ಸಿಕ್ಕಾಗ ಹೊಸ್ತಿಲು ದಾಟಿಕೊಂಡು ಮನೆಯೊಳಗೇ ನುಗ್ಗಿಬಿಡುತ್ತವೆ. ಇವುಗಳನ್ನು ಹೊರಗೆ ಕಳುಹಿಸಲು ಆಗದೆ, ಮನೆಯೊಳಗೆ ಬಿಟ್ಟುಕೊಂಡಿರಲು ಆಗದೆ ಒದ್ದಾಡುವ ಪರಿಸ್ಥಿತಿ ನಮ್ಮೆಲ್ಲರದು. ಆದರೆ ಕಷ್ಟವಾದರೂ ಸರಿಯೇ ಕೆಲವೊಂದು ಮಾರ್ಪಾಡುಗಳನ್ನು ನಮ್ಮ ಜೀವನಕ್ಕೆ ಮಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ತ್ರಿಶಂಕುವಿನಲ್ಲಿಯೇ ನರಳಬೇಕಾಗುತ್ತದೆ.
ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು?/
ಸಾವಿರದ ನಿಯಮ ಯುಕ್ತಿಗಳನೊರೆದೊಡೆಯು/
ಆವುದೋ ಕುಶಲತೆಯದೊಂದಿರದೆ ಜಯವಿರದು/
ಆ ವಿವರ ನಿನ್ನೊಳಗೆ- ಮಂಕುತಿಮ್ಮ
ಈ ಜಗತ್ತಿನಲ್ಲಿ ಎಲ್ಲ ಕಲೆಗಳಿಗಿಂತ ಒಳ್ಳೆಯ ಜೀವನವನ್ನು ನಡೆಸುವುದೇ ಒಂದು ಕಲೆ. ಈ ಕಲೆಯನ್ನು ಕಲಿಸುವುದು ಹೇಗೆ? ಸಾವಿರಾರು ನೀತಿ ನಿಯಮಗಳನ್ನು ತಿಳಿಸಿ ಹೇಳಿಸಿಕೊಂಡರೂ, ಯಾವುದಾದರೂ ಒಂದು ಕುಶಲತೆ ನಿನ್ನಲ್ಲಿ ಇಲ್ಲದಿದ್ದರೆ ಗೆಲುವು ಅಸಾಧ್ಯ. ಆ ಕುಶಲತೆಯ ವಿವರ ನಿನ್ನೊಳಗಿರಬೇಕು.
ಭೂತಕಾಲದ ತಪ್ಪು ಹಾಗೂ ಭವಿಷ್ಯತ್ಕಾಲದ ಯೋಜನೆಗಳ ನೆಪದಲ್ಲಿ ವರ್ತಮಾನದ ಖುಷಿಯನ್ನು ಮರೆಯಬಾರದು. ನಮ್ಮ ಬಲ ಹಾಗೂ ಬಲಹೀನತೆಗಳ ಬಗ್ಗೆ ಹೇಳಿಕೊಳ್ಳಬಾರದು. ನಮಗೆ ಮಸಿ ಬಳಿಯುವವರು ಬೇರೆಲ್ಲೋ ಇರುವುದಿಲ್ಲ, ನಿಕಟವರ್ತಿಗಳೇ ಆಗಿರುತ್ತಾರೆ. ನಮ್ಮ ಬಲ ಹಾಗೂ ಬಲ ಹೀನತೆಗಳ ಬಗ್ಗೆ ಗೊತ್ತಿರುವವರು ನಮ್ಮನ್ನು ಬೇಗನೆ ಹಳಿ ತಪ್ಪಿಸಬಲ್ಲರು. ಎಲ್ಲರೂ ಎಲ್ಲ ವಿಚಾರಗಳಲ್ಲಿ ಬುದ್ಧಿವಂತರಾಗಿರುವುದಿಲ್ಲ. ಸಹಾಯ ಪಡೆದವರೇ ಬೆನ್ನ ಹಿಂದೆ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಸಿದ್ಧರಾಗುತ್ತಿರುವುದನ್ನು ನಾವು ಮರೆಯಬಾರದು.
ಮನೆಯ ವಿಚಾರಗಳನ್ನು ಹೊರಗೆಡವದಿರಿ. ಮುನಿಸು ಮನಸ್ತಾಪಗಳಿಲ್ಲದ ಮನೆ ಇರುವುದಿಲ್ಲ. ಗಂಡ ಹೆಂಡತಿ, ತಂದೆ ತಾಯಿ- ಮಕ್ಕಳು, ಅಣ್ಣ ತಮ್ಮಂದಿರು, ಅಕ್ಕತಂಗಿಯರ ಕೌಟುಂಬಿಕತೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ. ನಾಲ್ಕು ಗೋಡೆಗಳ ಆಚೆ ಈ ವಿಚಾರಗಳು ಹೊರಬಿದ್ದರೆ ಮುಗಿದೆ ಹೋಯಿತು, ಬೇರೆ ಮನೆಯ ಸುದ್ದಿಗಳು ಹಲವರಿಗೆ ಮಸಾಲೆ ದೋಸೆ ಇದ್ದಂತೆ. ಜಗಿದು ಜಗಿದು ರುಚಿ ನೋಡುತ್ತಾ ಆನಂದಿಸಿ ಬಿಡುತ್ತಾರೆ. ಸಮಸ್ಯೆಗಳು ಮನೆಯಲ್ಲಿ ಸರಿ ಹೋದರೂ, ಇವರು ಮಾತ್ರ ಆ ಸಮಸ್ಯೆಗಳಿಂದ ಹೊರ ಬಂದಿರುವುದಿಲ್ಲ. ಬೆಂಕಿ ಹಚ್ಚುತ್ತಲೇ ಇರುತ್ತಾರೆ.
ಹಿಂದೆ ಆದ ಅವಮಾನಗಳನ್ನು ಈಗ ಹೇಳಿಕೊಳ್ಳಬಾರದು. ಮೆಟ್ಟಿ ನಿಲ್ಲಬೇಕಷ್ಟೆ. ಇಲ್ಲವಾದರೆ ನಿಮ್ಮ ಸುತ್ತಲಿರುವವರು ಇವುಗಳಿಂದಲೆ ನಿಮ್ಮನ್ನು ಬಂಧಿಸಿ ಬಿಡುತ್ತಾರೆ.
ಆರ್ಥಿಕ ವಿಚಾರಗಳು ಗೌಪ್ಯವಾಗಿದ್ದಷ್ಟು ಒಳ್ಳೆಯದು. ಆದಾಯ ಹಾಗೂ ಉಳಿತಾಯಗಳನ್ನು ಬೇರೆಯವರಿಗೆ ಹೇಳದಿದ್ದರೆ ಚೆನ್ನ. ಸಾಲಗಾರರ ಸಂಖ್ಯೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಹಣ ಕೊಟ್ಟರೂ ಕಷ್ಟ ಕೊಡದಿದ್ದರೂ ಕಷ್ಟ. ಉಳಿತಾಯ ಒಳ್ಳೆಯದೆ ಆದರೆ ನಿಮ್ಮ ಇಂದಿನ ಜೀವನಮಟ್ಟವನ್ನು ಮುಚ್ಚಿಟ್ಟು, ಮುಂದಿನ ಪೀಳಿಗೆಗೆ ಸೋಂಬೇರಿಯಾಗುವಷ್ಟು ಬೇಡ.
ಮೇಲಿನ ಎಲ್ಲ ಸಂಗತಿಗಳು ಎಲ್ಲ ಸಂದರ್ಭದಲ್ಲಿಯೂ ಸರಿ ಎನ್ನುವಂತಿಲ್ಲ. ಎಂತಹದ್ದೇ ಸಂದರ್ಭದಲ್ಲಿಯೂ ಕೈಬಿಡದೆ ಕಾಪಾಡುವವರ ಸಂಖ್ಯೆಯು ಹೆಚ್ಚಿದೆ. ಬೆನ್ನುತೊಟ್ಟುತ್ತಾ, ಏಳಿಗೆಗೆ ಏಣಿಯಾಗುವವರು ಇದ್ದಾರೆ. ಕಷ್ಟ ಸುಖ ದುಃಖ ದುಮ್ಮಾನಗಳಿಗೆ, ಸಮೀಪ ವರ್ತಿಗಳು ನೇರ ಕಾರಣವಾಗಿರುವುದರಿಂದ ಅವರೊಂದಿಗಿನ ಸಂಬಂಧಗಳನ್ನು ಜತನವಾಗಿ ಕಾಪಿಟ್ಟುಕೊಳ್ಳುವುದರ ಜತೆಗೆ ನಿರ್ದಿಷ್ಟ ಅಂತರವು ಒಳ್ಳೆಯದು.
ಕೆ.ಟಿ. ಮಲ್ಲಿಕಾರ್ಜುನಯ್ಯ, ಶಿಕ್ಷಕರು ಸೀಗಲಹಳ್ಳಿ , ಶಿರಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.