UV Fusion: ನೂತನ ವರುಷಕ್ಕೆ ನವೀನ ಯೋಚನೆಗಳು
Team Udayavani, Jan 13, 2025, 4:35 PM IST
ಪ್ರತಿ ಕ್ಯಾಲೆಂಡರ್ ವರ್ಷ ಕೊನೆಯಾಗುತ್ತಲೇ ನೂತನ ವರ್ಷದ ಆರಂಭವಾಗುತ್ತದೆ . ಅದರ ಜತೆಗೆ ಸಾಲು-ಸಾಲು ಹಬ್ಬಗಳು ನವ್ಯ ಯೋಜನೆಗಳು ನಮ್ಮನ್ನು ಪ್ರೇರೇಪಿಸುತ್ತವೆ . ಕಳೆದ ವರ್ಷ ಮಾಡಲಾಗದ ಕನಸುಗಳಿಗೆ ಹೊಸ ಹುರುಪು ತುಂಬಿ , ನವೀನ ಆವಿಷ್ಕಾರಗಳಿಗೆ ಹೊಸತಾಗಿ ಆಮಂತ್ರಿಸುತ್ತೇವೆ . ಕೆಲವೊಮ್ಮೆ ನಮ್ಮ ಪರಿಶ್ರಮಕ್ಕೆ ತಕ್ಕಂತೆ ಯೋಜನೆಗಳು ಕಾರ್ಯಗತವಾದರೆ, ಮತ್ತೆ ಕೆಲವೊಮ್ಮೆ ವರುಷದ ಕೊನೆಯವರೆಗೂ ನೆಪವಾಗಿ ಉಳಿದು ಬಿಡುತ್ತವೆ.
ಹೊಸ ವರುಷದ ಜತೆ ಜತೆಗೆ
ಮನದಿ ನವೀನ ಕನಸುಗಳ ಬಿತ್ತನೆ
ಮುನ್ನುಡಿಯಾಗಲಿ ಈ ವರುಷ ಸಾಧನೆಗೆ
ಅಳಿಸಿಬಿಡು ಸೋಲುವ ಯೋಚನೆ
ವರ್ಷಾರಂಭವಾಗುತ್ತಲೇ ಪ್ರಕೃತಿಯ ಮಡಿಲು ಕೂಡ ಹಚ್ಚ ಹಸುರಿನಿಂದ ಸಿಂಗಾರವಾಗಿ ನಿಂತ ಮದುವಣಗಿತ್ತಿಯಾಗಿ, ಫಲ ಪುಷ್ಪಗಳನ್ನು ನೀಡುತ್ತಾ ಸಂಕ್ರಾಂತಿಗೆ ಸಜ್ಜಾದರೆ , ವರುಷದ ಕೊನೆಯ ಪರೀಕ್ಷೆಗಳಿಗಾಗಿ ತಯಾರಾಗುವ ವಿದ್ಯಾರ್ಥಿಗಳು ಈ ವರುಷ ಒಳ್ಳೆಯ ಅಂಕಗಳನ್ನು ಗಳಿಸುತ್ತೇವೆಂಬ ಪ್ರತಿಜ್ಞೆಯೊಂದಿಗೆ ಪ್ರಯತ್ನ ಆರಂಭಿಸುತ್ತಾರೆ . ಹಾಗೆಯೇ ಉದ್ಯೋಗಿಗಳು , ಉದ್ಯಮ ಸಂಸ್ಥೆಗಳು ಭಿನ್ನ ಆಲೋಚನೆಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತಾರೆ.
ಬಣ್ಣದ ರಂಗೋಲಿ, ಸುಡುಮದ್ದುಗಳ ಪ್ರದರ್ಶನದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳುವಂತೆಯೇ , ಸುಂದರ ಆಲೋಚನೆಗಳಿಂದ ಆಮಂತ್ರಿಸಿದಾಗ ವರ್ಷ ಅರ್ಥಪೂರ್ಣವಾಗಬಹುದು. ಪರೋಪಕಾರ , ಸಹಾಯದ ಮನಸ್ಥಿತಿ , ತಾಳ್ಮೆ , ಸಂಯಮ ಇಂತಹ ಸೂಕ್ಷ ವಿಷಯಗಳಿಗೆ ಒಂದಿಷ್ಟು ಪ್ರಾಮುಖ್ಯತೆ ನೀಡಿ ಅನ್ಯರ ನೋವಿಗೆ ಸಹಾಯಹಸ್ತ ನೀಡಿ , ಕಣ್ಣೀರು ಒರೆಸುವ ಕೈಗಳು ನಮ್ಮದಾಗಿರಬೇಕು . ಆಗ ನಮ್ಮ ಈ ಬದುಕು ಸಾರ್ಥಕ ಎನಿಸುತ್ತದೆ .
ವರ್ಷಾಂತ್ಯದಲ್ಲಿ ನೆರವೇರದ ಕನಸುಗಳಿಗಾಗಿ ಪಶ್ಚಾತ್ತಾಪ ಪಡದೆ, ಬರುವ ಸುಂದರ ವರ್ಷವನ್ನು ವ್ಯರ್ಥವಾಗದಂತೆ ಬಳಸಿಕೊಳ್ಳೋಣ. ಶ್ರಮ ವ್ಯರ್ಥವಾಗದೆ, ಕಾರ್ಯಗಳು ನೆರವರಲಿ ಎಂಬ ಆಶಯದೊಂದಿಗೆ 2025ನ್ನು ಬರಮಾಡಿಕೊಳ್ಳೋಣ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.
-ಭಾಗ್ಯಶ್ರೀ ಶೆಟ್ಟಿ, ತೀರ್ಥಹಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.