UV Fusion: ಚಿಮ್ಮಿದ ಸೇವಾಹನಿಗಳು ಮತ್ತೆ ಸಾಗರವ ಸೇರಿತು…
ಸುವರ್ಣ ಸಮ್ಮಿಲನ - ಇದು ಸುವರ್ಣ ಹೆಜ್ಜೆಗಳ ಅವಲೋಕನ
Team Udayavani, Nov 20, 2024, 12:18 PM IST
ಅಂದು ಇಡೀ ಕಾಲೇಜು ಆವರಣದ ಎಲ್ಲೆಂದರಲ್ಲಿ ಸಂಭ್ರಮವೇ ಆವರಿಸಿತ್ತು. ಹೃದಯಗಳು ತುಂಬಿ, ಮೌತು ಮೌನವಾಗಿತ್ತು. ತಾವು ಕಲಿಸಿದ ಹಳೆ ವಿದ್ಯಾರ್ಥಿಗಳನ್ನು ಕಂಡ ಗುರುಗಳ ಕಣ್ಣಾಲಿಗಳು ತುಂಬಿತ್ತು. ಬದುಕು ರೂಪಿಸಲು ನೆರವಾದ ಎನ್ನೆಸ್ಸೆಸ್ ಹೆಸರಲ್ಲಿ ಮತ್ತೆ ಎಲ್ಲರೂ ಒಟ್ಟು ಸೇರಬೇಕೆಂಬ ಹಲವರ ಬಹುದಿನದ ಕನಸು ಆ ದಿನ ಕೈಗೂಡಿತ್ತು.
ಈ ಸುಂದರ ಚಿತ್ರಣಕ್ಕೆ ಸಾಕ್ಷಿಯಾಗಿದ್ದು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಪದವಿ (ಎಸ್‌ಡಿಎಂ) ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ (ಎನ್ನೆಸ್ಸೆಸ್) ಘಟಕದ 50 ವರ್ಷಗಳ ಮೆಲುಕು ಹಾಕುವ ‘ಸುವರ್ಣ ಸಮ್ಮಿಲನ – ಇದು ಸುವರ್ಣ ಹೆಜ್ಜೆಗಳ ಅವಲೋಕನ’ ಅನ್ನುವ ಅರ್ಥಪೂರ್ಣವಾದ ಕಾರ್ಯಕ್ರಮ.
‘ನನಗಲ್ಲ ನಿನಗೆ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ದೇಶಾದ್ಯಂತ ಕಾರ್ಯಾಚರಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯಾದ ಎನ್ನೆಸ್ಸೆಸ್ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ಶತಮಾನೋತ್ಸವ ವರ್ಷವಾದ 1969ರಲ್ಲಿ ಆರಂಭಗೊಂಡಿತು. ಅದಾಗಿ 3 ವರ್ಷದ ತರುವಾಯ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲೂ ಎನ್ನೆಸ್ಸೆಸ್ ಘಟಕ ಆರಂಭಗೊಂಡಿತು. ಆ ಹಿನ್ನೆಲೆಯಲ್ಲಿ ಈ 50 ವರ್ಷಗಳ ಸುದೀರ್ಘವಾದ ನೆನಪುಗಳನ್ನು ಮತ್ತೆ ನೆನಪು ಮಾಡಿಕೊಳ್ಳುವ ನೆಪದಲ್ಲಿ ಹಿರಿಯ- ಕಿರಿಯ ಎನ್ನೆಸ್ಸೆಸ್ ಸ್ವಯಂ ಸೇವಕರೆಲ್ಲ ಅ.5 ರಂದು ಕಾಲೇಜಿನಲ್ಲಿ ಸಮಾಗಮಗೊಂಡು, ನಲಿದು, ಕುಣಿದು, ಸಂಭ್ರಮಿಸಿದರು.
ಕಾಲೇಜಿನ ಪ್ರಾಂಶುಪಾಲರು, ಯೋಜನಾಧಿಕಾರಿಗಳು, ಸ್ವಯಂ ಸೇವಕರ ಸರಿ ಸುಮಾರು ಎರಡು ತಿಂಗಳ ನಿರಂತರ ತಯಾರಿ, ಪರಿಶ್ರಮದ ಫಲವಾಗಿ ಈ ಸುವರ್ಣ ಸಮ್ಮಿಲನ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಕಾರ್ಯಕ್ರಮಕ್ಕಾಗಿ ನಡೆದ ಸಿದ್ಧತೆಯೇ ಸ್ವಯಂಸೇವಕರಿಗೆ ಹಲವಾರು ಜೀವನ ಪಾಠಗಳನ್ನು ಕಲಿಸಿದೆ. ಬೆಳಗ್ಗಿನಿಂದ ಪ್ರಾರಂಭವಾಗುತ್ತಿದ್ದ ಸಿದ್ಧತೆಯ ಹುರುಪು ಸಂಜೆಯವರೆಗೂ ಕಡಿಮೆಯಾಗುತ್ತಿರಲಿಲ್ಲ. ಒಂದಿಷ್ಟು ಹರಟೆ, ತಮಾಷೆಯ ಪ್ರಸಂಗಗಳು, ಒತ್ತಡದ ಸನ್ನಿವೇಶಗಳು, ಹೊಸ ಹೊಸ ಯೋಚನೆಗಳು, ಯೋಜನೆಗಳು ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟು ನೆನಪುಗಳು ಬದುಕಿನ ಮರೆಯಲಾರದ ಪುಟಗಳಿಗೆ ಸೇರಿಕೊಂಡಿದೆ.
ಆ ಸಂಭ್ರಮದ ದಿನ ಅದೆಷ್ಟೋ ಮನಸುಗಳ ಕನಸಿನ ದಿನವದು. ಅದೆಷ್ಟೋ ಹಿರಿಯ ಸ್ವಯಂಸೇವಕರ ಉತ್ಸಾಹದ ಪಾಲ್ಗೊಳ್ಳುವಿಕೆ ಎಲ್ಲರ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಕಳೆದ 50 ವರ್ಷಗಳಿಂದ ಕಾಲೇಜಿನಲ್ಲಿ ಕಲಿತು, ಎನ್ನೆಸ್ಸೆಸ್‌ನಲ್ಲಿ ಬೆರೆತು ಪ್ರಸ್ತುತ ಬೇರೆ ಬೇರೆ ಊರುಗಳಲ್ಲಿ ಬದುಕು ಕಟ್ಟಿಕೊಂಡಿರುವ ನೂರಾರು ಮಂದಿ ಹಿರಿಯ ಸ್ವಯಂಸೇವಕರು ಮತ್ತೆ ಎನ್ನೆಸ್ಸೆಸ್ ಹಾಗೂ ಕಾಲೇಜು ದಿನಗಳನ್ನು ತಿದ್ದಿ ತೀಡಿದ ಗುರುಗಳೊಂದಿಗೆ ನೆನೆದು, ಖುಷಿಪಟ್ಟರು.
ಸಂವಾದದಲ್ಲಿ ಅದೆಷ್ಟೋ ಹಳೆಯ ನೆನಪುಗಳಿಗೆ ಹಿರಿಯ ವಿದ್ಯಾರ್ಥಿಗಳು ಮತ್ತೆ ಬಣ್ಣ ತುಂಬಿದರು. ಎನ್ನೆಸ್ಸೆಸ್ ಕುಟುಂಬವೇ ಹಾಗೆ, ಇಲ್ಲಿ ಕಲಿತ ಪಾಠ ನಮ್ಮನ್ನು ವ್ಯಕ್ತಿಯಾಗಿ ರೂಪಿಸುತ್ತದೆ. ನಗುವಿಗೆ ಜತೆಯಾಗುವ ಮನಗಳು, ನೋವಿಗೆ ಹೆಗಲು ನೀಡುವ ಸ್ನೇಹ, ಜೀವನದಲ್ಲಿ ಎಡವಿದರೂ, ಗೆದ್ದರೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯುವ ಭಾವನೆಯನ್ನು ನಮಗೆ ಕಲಿಸಿಕೊಡುತ್ತದೆ. ಸಭಾ ಕಾರ್ಯಕ್ರಮವು ಸಮ್ಮಿಲನದ ಘನತೆಯನ್ನು ಹೆಚ್ಚಿಸಿದರೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನೂ ರಂಜಿಸಿದವು. ಮತ್ತೂಬ್ಬರ ಸಂಕಷ್ಟಕ್ಕೆ ನೆರವಾಗಿ, ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡು, ಪ್ರಚಾರ, ಪ್ರಶಸ್ತಿಗಳಿಗೆ ಹಪಾಹಪಿಸದೇ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೇಷ ಧರಿಸಿ, ಅಶಕ್ತ ಮಕ್ಕಳಿಗೆ ಕೋಟ್ಯಾಂತರ ರೂ. ನೆರವು ಸಂಗ್ರಹಿಸಿರುವ ರವಿ ಕಟಪಾಡಿ, ಬದುಕು ಕಟ್ಟೋಣ ಸಂಘಟನೆಯ ಮೂಲಕ ನೆರೆ ಸಂತ್ರಸ್ತರಿಗೆ ನೆರವಾಗುತ್ತ, ಅದೆ ಸೇವಾ ಕೈಂಕರ್ಯವನ್ನು ಮುಂದವರಿಸುತ್ತಿರುವ ಉಜಿರೆಯ ಮೋಹನ್ ಕುಮಾರ್ ಅವರಿಗೆ ಸುವರ್ಣ ಸೇವಾ ರತ್ನ ಪ್ರಶಸ್ತಿ ನೀಡಿ, ಗೌರವಿಸಿರುವುದು ಸಮಾರಂಭಕ್ಕೆ ಮತ್ತಷ್ಟು ಮೆರುಗು ತುಂಬಿತು. ಕೊನೆಯಲ್ಲಿ ನಡೆದ ಶಿಬಿರ ಜ್ಯೋತಿಯು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಒಟ್ಟಿನಲ್ಲಿ ಇಡೀ ದಿನ ನಡೆದ ಈ ಸಮ್ಮಿಲಿನವು ಸಾವಿರಾರು ಮಂದಿಗೆ ತಮ್ಮ ಗೆಳೆತನ, ಸುಂದರ ದಿನದ ಅವಲೋಕನ, ಅದೆಷ್ಟೋ ಹಳೆಯ ನೆನಪುಗಳ ಸವಿಯನ್ನು ಸವಿಯಲು ಕಾರಣವಾಯಿತು. ‘ಇರಲಿ ನೆನಪಿರಲಿ, ನಮ್ಮ ಗೆಳೆತನದ ಸವಿ ನೆನಪಿರಲಿ’ ಎನ್ನುವ ಸಾಲಿನಂತೆ ಈ ಎಲ್ಲ ನೆನಪುಗಳು, ಅನುಭವಗಳು ನಮ್ಮ ಬದುಕಿನ ಸುಂದರ ಅಧ್ಯಾಯ. ಎನ್ನೆಸ್ಸೆಸ್ ಎನ್ನುವ ವಿಶಾಲ ಆಕಾಶದಲ್ಲಿ ತಾರೆಯರಂತೆ ಮಿನುಗಿದ ಎಲ್ಲ ಸ್ವಯಂಸೇವಕರ ಬದುಕು ಹಸನಾಗಲಿ…
-ಸಿಂಚನ ಕಲ್ಲೂರಾಯ, ಎಸ್‌ಡಿಎಂ, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.