ಕೀಳರಿಮೆ ತೊರೆದು ಬದುಕು ರೂಪಿಸಿ’
ಮದ್ಯವರ್ಜನ ಶಿಬಿರ ಸಂಪನ್ನ
Team Udayavani, Mar 28, 2019, 2:59 PM IST
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು.
ಬೆಳ್ತಂಗಡಿ : ಒತ್ತಡಗಳು ಸ್ವಾಭಾವಿಕವಾಗಿ ಮನುಷ್ಯನನ್ನು ಗೊಂದಲ ಕ್ಕೀಡು ಮಾಡುತ್ತವೆ. ಇಂತಹ ಸಂದರ್ಭ ಗಟ್ಟಿ ಮನಸ್ಸು ಮಾಡಿ ಮತಿಭ್ರಷ್ಠರಾಗದಂತೆ ವ್ಯಕ್ತಿತ್ವ ರೂಪಿಸುವುದು ಅತ್ಯವಶ್ಯ. ಪರಿವರ್ತನೆಗೆ ಒಳಪಟ್ಟ ಮದ್ಯವ್ಯಸನಿಗಳು ಮುಂದಿನ ದಿನಗಳಲ್ಲಿ ಸ್ನೇಹಿತರ ಒತ್ತಡಕ್ಕೆ ಬಲಿಯಾಗದೆ ಕೀಳರಿಮೆ ಬಿಟ್ಟು, ಸಜ್ಜನರ ಸಹವಾಸದೊಂದಿಗೆ ಕಠಿನ ಪರಿಶ್ರಮದಿಂದ ಬದುಕು ರೂಪಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡ 132ನೇ ಮದ್ಯವರ್ಜನ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು.
ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಮಾತನಾಡಿ, ವ್ಯಸನ ಜಟಿಲವಾಗಿ ಬಾಧಿಸುವ ಸಮಸ್ಯೆ. ಮನುಕುಲದ ಯಕ್ಷಪ್ರಶ್ನೆ. ಅಷ್ಟದಿಕ್ಕಿನಲ್ಲಿ ನೋಡಿದರೂ
ಇದು ಯಾವುದೇ ಸಂತೋಷ ಕೊಡುವ ವಸ್ತು ಅಲ್ಲ. ಮನಸ್ಸು ಕೆಡಿಸುವ ಮದ್ಯಪಾನ ದಾಸರಾಗದಿರಿ ಎಂದು ಸಲಹೆ ನೀಡಿದರು.
ನಿರ್ದೇಶಕ ವಿವೇಕ್ ವಿ. ಪಾಯಿಸ್ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ, ಗಣೇಶ್ ಆಚಾರ್ಯ, ಶಿಬಿರಾಧಿ ಕಾರಿಗಳಾದ ನಾಗೇಶ್ ಎನ್.ಪಿ., ನಾಗರಾಜ್, ಆರೋಗ್ಯ ಸಹಾಯಕಿಯರಾದ ಸೌಮ್ಯಾ, ರಂಜಿತಾ ಉಪಸ್ಥಿತರಿದ್ದರು. ರಾಜ್ಯದ ವಿವಿಧೆಡೆಗಳಿಂದ 90 ಮಂದಿ ಮದ್ಯವ್ಯಸನಿಗಳು ಪಾಲ್ಗೊಂಡಿದ್ದರು. ಮುಂದಿನ ಶಿಬಿರವು ಎ. 1ರಿಂದ ನಡೆಯಲಿದೆ ಎಂದು ವೇದಿಕೆ ತಿಳಿಸಿದೆ.