ಸಂಕ್ರಾಂತಿ ಹಬ್ಬದ ವಿಶೇಷ ಖಾದ್ಯ
Team Udayavani, Jan 4, 2020, 4:54 AM IST
ಮಕರ ಸಂಕ್ರಾಂತಿಯು ಹಿಂದೂಗಳ ವಿಶೇಷ ದಿನವಾಗಿದ್ದು, ಈ ದಿನ ಎಲ್ಲ ಊರುಗಳಲ್ಲೂ ವಿಶೇಷ ತಿಂಡಿಗಳನ್ನು ಮಾಡುತ್ತಾರೆ. ದೇವರ ಪ್ರಸಾದವಾಗಿ ಅಥವಾ ಹಬ್ಬದ ಸಂಭ್ರಮಕ್ಕಾಗಿ ತಿಂಡಿಗಳನ್ನು ಮಾಡುವುದು ಸಾಮಾನ್ಯ ಇದು ರಾಜ್ಯಗಳಿಂದ ರಾಜ್ಯಗಳಿಗೆ ವಿಭಿನ್ನವಾಗಿದ್ದು ಬೇರೆ ಬೇರೆ ರಾಜ್ಯಗಳಲ್ಲಿ ವಿಶೇಷ ತಿಂಡಿ ತಿನಿಸುಗಳನ್ನು ಮಾಡುತ್ತಾರೆ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಕೆಲವು ರೆಸಿಪಿ ಇಲ್ಲಿವೆ.
ತಿಲ್ ಲಾಡು ( ಬಿಳಿ ಎಳ್ಳಿನ ಲಾಡು)
ಬೇಕಾಗುವ ಸಾಮಗ್ರಿಗಳು
ಬಿಳಿ ಎಳ್ಳು1 ಕಪ್
ಬಾದಾಮಿಸ್ವಲ್ಪ
ಬೆಲ್ಲ3/4 ಕಪ್
ನೀರು1/4 ಕಪ್
ತುಪ್ಪ2 ಸ್ಪೂನ್
ಮಾಡುವ ವಿಧಾನ:
ಬಿಳಿ ಎಳ್ಳನ್ನು ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿದುಕೊಳ್ಳಿ. ಅನಂತರ ಬಾದಾಮಿಯನ್ನು ಹುರಿದುಕೊಳ್ಳಿ. ಹುರಿದ ಬಾದಾಮಿಯನ್ನು ಮಿಕ್ಸಿ ಜಾರಿಗೆ ಹಾಕಿ ಜಾಸ್ತಿ ಹುಡಿಯಾಗದಂತೆ ತಿರುಗಿಸಿ. ಅನಂತರ ಒಂದು ಪಾನ್‌ನಲ್ಲಿ ನೀರು ಕುದಿಸಿಕೊಳ್ಳಿ. ಬಳಿಕ ಅದಕ್ಕೆ ಬೆಲ್ಲ ಹಾಕಿ. ಬೆಲ್ಲ ನೀರಿನಲ್ಲಿ ಕರಗಿದ ಮೇಲೆ ಅದಕ್ಕೆ ತುಪ್ಪ ಹಾಕಿ ಸ್ವಲ್ಪ ಹೊತ್ತು ಕುದಿಸಿಕೊಳ್ಳಿ. ಕುದಿಯುತ್ತಿರುವ ಬೆಲ್ಲದ ಪಾಕಕ್ಕೆ ಮೊದಲೇ ಹುರಿದ ಬಿಳಿ ಎಳ್ಳು ಮತ್ತು ಬಾದಾಮಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 30 ಸೆಕೆಂಡುಗಳ ಕಾಲ ಕುದಿಸಿ. ಇದು ಸ್ವಲ್ಪ ತಣಿದ ಅನಂತರ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಸಣ್ಣ ಉಂಡೆಯನ್ನಾಗಿ ಮಾಡಿದರೆ ರುಚಿ ರುಚಿಯಾದ ತಿಲ್ ಲಾಡು ಸವಿಯಲು ಸಿದ್ಧ.
ಮಕರ ಚಾವುಲ
ಒಡಿಸ್ಸಾದಲ್ಲಿ ಮಕರ ಸಂಕ್ರಾಂತಿಗೆ ಮಕರ ಚಾವುಲ ಮಾಡುವುದು ವಿಶೇಷ.
ಬೇಕಾಗುವ ಸಾಮಗ್ರಿಗಳು
ಸೋನಾ ಮಸೂರಿ ಅಕ್ಕಿ 1/2 ಕಪ್
ಹಾಲು ಒಂದು ಕಪ್
ತೆಂಗಿನ ತುರಿಸ್ವಲ್ಪ
ಸೇಬು1
ಬಾಳೆಹಣ್ಣು1
ಕಬ್ಬಿನ ತುಂಡುಸ್ವಲ್ಪ
ಕಾಳುಮೆಣಸಿನ ಪುಡಿ
ಚೆನ್ನಾ ಚೀಸ್2 ಸ್ಪೂನ್
ತುರಿದ ಶುಂಠಿ1 ಸ್ಪೂನ್
ಮಾಡುವ ವಿಧಾನ
ಅಕ್ಕಿಯನ್ನು ಹಿಂದಿನ ರಾತ್ರಿಯೇ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಚೆನ್ನಾಗಿ ತೊಳೆದು ಸ್ವಲ್ಪ ಸಮಯ ಒಣಗಲು ಬಿಡಿ. ಅನಂತರ ಅದನ್ನು ಮಿಕ್ಸಿಗೆ ಹಾಕಿ ಅದಕ್ಕೆ ತೆಂಗಿನ ತುರಿ ಮತ್ತು ಹಾಲು ಹಾಕಿ ತರಿತರಿಯಾಗಿರುವಂತೆ ರುಬ್ಬಿಕೊಳ್ಳಿ. ಬಳಿಕ ಅದಕ್ಕೆ ಕಾಳುಮೆಣಸಿನ ಪುಡಿ, ಚೆನ್ನಾ, ಶುಂಠಿ ಹಾಕಿ ರುಬ್ಬಿಕೊಳ್ಳಿ. ಅನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಬಳಿಕ ಕಬ್ಬಿನ ತುಂಡು, ಬಾಳೆಹಣ್ಣಿನ ಪೇಸ್ಟ್ ಅಥವಾ ಸಣ್ಣದಾಗಿ ಹೆಚ್ಚಿದ ಬಾಳೆಹಣ್ಣು ಮತ್ತು ಆ್ಯಪಲ್ ತುಂಡುಗಳನ್ನು ಸೇರಿಸಿ ಅದಕ್ಕೆ ಮಿಕ್ಸ್ ಮಾಡಿಕೊಂಡರೆ ಮಕರ ಚಾವುಲ ಸವಿಯಲು ಸಿದ್ಧ.
ಖಾರ ಪೊಂಗಲ್
ಬೇಕಾಗುವ ಸಾಮಗ್ರಿಗಳು
ಅಕ್ಕಿ 1 ಕಪ್
ಮೂಂಗ್ ದಾಲ್1/2 ಕಪ್
ಪೆಪ್ಪರ್ ಕಾರ್ನ್1 ಟೀ ಸ್ಪೂನ್
ಶುಂಠಿಸ್ವಲ್ಪ
ಕಾಳುಮೆಣಸು4ರಿಂದ 5
ಕರಿಮೆಣಸುಸ್ವಲ್ಪ
ಗೊಡಂಬಿಸ್ವಲ್ಪ
ತುಪ್ಪಬೇಕಾದಷ್ಟು
ಮಾಡುವ ವಿಧಾನ:
ಒಂದು ಬಾಣಲೆಗೆ ಸ್ವಲ್ಪ ಮೂಂಗ್ ದಾಲ್ ಹಾಕಿ ಅದನ್ನು ಚೆನ್ನಾಗಿ ಹುರಿದುಕೊಳ್ಳಿ. ಅನಂತರ ಒಂದು ಪಾತ್ರೆಯಲ್ಲಿ ಅಕ್ಕಿ ತೆಗೆದುಕೊಂಡು ಚೆನ್ನಾಗಿ ತೊಳೆದುಕೊಂಡು ಕುಕ್ಕರ್‌ಗೆ ಹಾಕಿ. ಅದಕ್ಕೆ 4 ರಿಂದ 5 ಕಪ್ ನೀರು, ಸ್ವಲ್ಪ ಉಪ್ಪು ಮತ್ತು ಶುಂಠಿ ಹಾಕಿ 5 ರಿಂದ 6 ವಿಶಲ್‌ವರೆಗೆ ಬೇಯಿಸಿಕೊಳ್ಳಿ.
ಅನಂತರ ಒಂದು ಪಾನ್‌ನಲ್ಲಿ ತುಪ್ಪ ಹಾಕಿಕೊಂಡು ಬಳಿಕ ಅದಕ್ಕೆ ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಅನಂತರ ಅದನ್ನು ಒಂದು ಪ್ರತ್ಯೇಕ ಪ್ಲೇಟ್‌ನಲ್ಲಿ ತೆಗೆದಿಡಿ. ಅದೇ ತುಪ್ಪ ಹಾಕಿ ಪಾನ್‌ಗೆ ಕಾಳುಮೆಣಸು, ಕರಿಬೇವಿನ ಎಲೆ ಮತ್ತು ಇಂಗು ಹಾಕಿ 10 ನಿಮಿಷಗಳ ಕಾಲ ಫ್ರೈ ಮಾಡಿ. ಬಳಿಕ ಆ ಪಾನ್‌ಗೆ ಬೇಯಿಸಿದ ದಾಲ್ ಮತ್ತು ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ಸವಿಯಾದ ಪೊಂಗಲ್ ತಿನ್ನಲು ಸಿದ್ಧ.
ಅಪ್ಪಲು
ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು 3/4 ಕಪ್
ಗೋಧಿ ಹಿಟ್ಟು ಅಥವಾ ಮೈದಾ1/4 ಕಪ್
ಬೆಲ್ಲ 1 ಕಪ್
ನೀರು1 ಕಪ್
ಎಣ್ಣೆ 1/4 ಕಪ್
ಮಾಡುವ ವಿಧಾನ:
ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಅಕ್ಕಿ ಹಿಟ್ಟು ಮತ್ತು ಗೋಧಿ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ. ಅನಂತರ ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಬೆಲ್ಲ ಹಾಕಿ. ಬೆಲ್ಲ ನೀರಿನಲ್ಲಿ ಕರಗಿದ ಬಳಿಕ ಅದಕ್ಕೆ ಮೊದಲೇ ಮಿಶ್ರಣ ಮಾಡಿದ ಹಿಟ್ಟನ್ನು ಸೇರಿಸಿ. ಅದು ಸ್ವಲ್ಪ ಗಟ್ಟಿಯಾದ ಬಳಿಕ ಅದನ್ನು ಸ್ಟವ್ ಆಫ್ ಮಾಡಿ. ಮಿಶ್ರಣವು ಸ್ವಲ್ಪ ತಣಿದ ಅನಂತರ ಅದನ್ನು ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ. ಬಳಿಕ ಅದನ್ನು ಕೈಯಿಂದ ತಟ್ಟಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಕಂದು ಬಣ್ಣದವರೆಗೆ ಬೇಯಿಸಿಕೊಳ್ಳಿ.
ಸಿಹಿ ಪೊಂಗಲ್
ಬೇಕಾಗುವ ಸಾಮಗ್ರಿಗಳು
ಅಕ್ಕಿ-1/2 ಕಪ್
ಮೂಂಗ್ ದಾಲ್1/4 ಕಪ್
ಬೆಲ್ಲಬೇಕಾದಷ್ಟು
ಏಲಕ್ಕಿಲವಂಗ
ಗೋಡಂಬಿ, ಒಣದ್ರಾಕ್ಷಿ
ಅಕ್ಕಿ ಮತ್ತು ಮೂಂಗ್ ದಾಲ್ ಅನ್ನು ಸ್ವಲ್ಪ ಹುರಿದುಕೊಳ್ಳಿ. ಅನಂತರ ಬೇರೆಯಾಗಿ ಬೇಯಿಸಿಕೊಳ್ಳಬಹುದು. ಅಕ್ಕಿ ಮತ್ತು ಬೇಳೆಯು ಸ್ಮಾಶ್ ಆಗುವ ರೀತಿಯಲ್ಲಿ ಬೇಯಿಸಿಕೊಳ್ಳಿ. ಬೇಯಿಸಿಕೊಳ್ಳುವಾಗ ರುಚಿಗೆ ಸ್ವಲ್ಲ ಉಪ್ಪು ಹಾಕಿಕೊಳ್ಳಿ. ಇದರೊಂದಿಗೆ ಇನ್ನೊಂದು ಕಡೆ ಏಲಕ್ಕಿ, ಲವಂಗವನ್ನು ಪುಡಿಮಾಡಿಕೊಳ್ಳಿ. 1/4 ಕಪ್ ನೀರಿಗೆ 1/4 ಬೆಲ್ಲ ತೆಗೆದುಕೊಂಡು ಹಾಕಿ ಅದನ್ನು ಬಿಸಿ ಮಾಡಿಕೊಳ್ಳಿ. ಕರಗಿದ ಅನಂತರ ಬೆಲ್ಲದ ಪಾಕ ಚೆನ್ನಾಗಿ ಕುದಿಯುವವರೆಗೆ ಹಾಗೆಯೇ ಬಿಡಿ. ನಂತರ ಅದನ್ನು ಸ್ಮಾಶ್ ಮಾಡಿದ ಅಕ್ಕಿ ಮತ್ತು ಬೇಳೆಯ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಅದಕ್ಕೆ ಪುಡಿ ಮಾಡಿದ ಏಲಕ್ಕಿಯನ್ನು ಹಾಕಿ. ಮಿಶ್ರಣ ಗಟ್ಟಿಯಾದರೆ ಅದಕ್ಕೆ 1/4 ಕಪ್‌ನಷ್ಟು ನೀರು ಹಾಕಿಕೊಳ್ಳಿ. ಇನ್ನೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ 2 ಸ್ಪೂನ್ ತುಪ್ಪ ಹಾಕಿ ಗೊಡಂಬಿಯನ್ನು ಹುರಿದುಕೊಳ್ಳಿ. ಬಳಿಕ ಅದಕ್ಕೆ ಒಣದ್ರಾಕ್ಷಿ ಹಾಕಿ. ಕಂದು ಬಣ್ಣಕ್ಕೆ ಬಂದ ಅನಂತರ ಅದನ್ನು ಪೊಂಗಲ್ ಮಿಶ್ರಣಕ್ಕೆ ಹಾಕಿ. ಈಗ ಸಿಹಿ ಪೊಂಗಲ್ ತಿನ್ನಲು ಸಿದ್ಧ.
ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.