ಕ್ರಿಸ್ಮಸ್ ಹಬ್ಬಕ್ಕೆ ವಿಶೇಷ ತಿಂಡಿ ತಿನಿಸು
Team Udayavani, Dec 21, 2019, 4:32 AM IST
ಕ್ರಿಸ್ಮಸ್ ಹಬ್ಬ ಬಂತೆಂದರೆ ಸಾಕು ವಿಶೇಷ ಅಡುಗೆಗಳು ತಯಾರಾಗುತ್ತವೆ. ಅದರಲ್ಲಿಯೂ ವಿವಿಧೆಡೆ ತಿನಿಸುಗಳು ಬೇರೆ ಬೇರೆಯಾಗಿರುತ್ತವೆ. ವಿಭಿನ್ನ ಅಡುಗೆಗಳನ್ನು ಮಾಡಿ ಸವಿಯುವುದು ಈ ಹಬ್ಬದ ವಿಶೇಷ. ಅದರಲ್ಲಿಯೂ ಈ ಎಲ್ಲ ಅಡುಗೆಗಳನ್ನು ಮನೆಯಲ್ಲಿ ಮಾಡುವುದು ವಿಶೇಷ. ಅಂಗಡಿಗಳಲ್ಲಿ ಬೇಕಾದ ರೀತಿಯ ತಿಂಡಿಗಳು ಲಭ್ಯವಿದ್ದರೂ ಕೆಲವು ಕುಟುಂಬಗಳು ಇದನ್ನೂ ಮನೆಯಲ್ಲಿ ಮಾಡಿ ನೆರೆಕರೆಯವರಿಗೆ ಹಂಚುವುದು ರೂಢಿ. ಅಂತಹ ಕೆಲವು ಅಡುಗೆಗಳ ರೆಸಿಪಿ ಇಲ್ಲಿದೆ.
ಕಿಡಿಯೊ
ಬೇಕಾಗುವ ಸಾಮಗ್ರಿಗಳು
ತೆಂಗಿನಕಾಯಿ -1
ಮೈದಾ ಹಿಟ್ಟು – 1 ಕೆ.ಜಿ
ಸಕ್ಕರೆ -1 ಕೆ.ಜಿ
ಕೋಳಿ ಮೊಟ್ಟೆ – 1 ಕೆ.ಜಿ
ತೆಂಗಿನ ಎಣ್ಣೆ – 1ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೈದಾ ಹಿಟ್ಟನ್ನು ತೆಂಗಿನ ದಪ್ಪ ಹಾಲಿನಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಚೆನ್ನಾಗಿ ಕಲಸಿಕೊಳ್ಳಬೇಕು. 3 ಮೊಟ್ಟೆಗಳನ್ನು ಪ್ರತ್ಯೇಕವಾಗಿ ಕಲಸಿ ಹಿಟ್ಟಿಗೆ ಸೇರಿಸಬೇಕು. ಇದು ಚಪಾತಿ ಹಿಟ್ಟಿನ ಹದದಲ್ಲಿರಲಿ. ಕಿಡಿಯೊ ತಯಾರಿಸುವ ಅಚ್ಚಿಗೆ ಹಿಟ್ಟು ಹಾಕಿ ಕಿಡಿಯೊ ತಯಾರಿಸಬೇಕು. ಇನ್ನೊಂದು ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಕುದಿ ತರಿಸಿ, ಎಣ್ಣೆ ಕುದಿ ಬರುವಾಗ ಅದಕ್ಕೆ ತಯಾರಿಸಿದ ಕಿಡಿಯೋಗಳನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಮಗುಚಬೇಕು. ಇದು ಕಂದು ಬಣ್ಣಕ್ಕೆ ತಿರುಗಿದಾಗ ಎಣ್ಣೆಯಿಂದ ತೆಗೆದು ಪಾತ್ರೆಯಲ್ಲಿ ಹಾಕಿ. ಮೊದಲೇ ಮಾಡಿಟ್ಟುಕೊಂಡ ಸಕ್ಕರೆ ಪಾಕಕ್ಕೆ ಅದನ್ನು ಹಾಕಿ ಒಂದಕ್ಕೊಂದು ತಾಗದಂತೆ ಅದನ್ನು ಕಲಕಿ ಸ್ವಲ್ಪ ಹೊತ್ತಿನ ಅನಂತರ ಇನ್ನೊಂದು ಪಾತ್ರೆಗೆ ಹಾಕಿದರೆ ರುಚಿ ರುಚಿಯಾದ ಕಿಡಿಯೊ ಸವಿಯಲು ಸಿದ್ಧ.
ಕ್ರಿಸ್ಮಸ್ ಗೋಲಿಗಳು
ಬೇಕಾಗುವ ಸಾಮಗ್ರಿಗಳು
ಕುಚ್ಚಲಕ್ಕಿ -ಅರ್ಧ ಕಪ್
ಬೆಳ್ತಿಗೆ ಅಕ್ಕಿ-ಅರ್ಧ ಕಪ್
ಬೆಲ್ಲ- ಅರ್ಧ ಕಪ್
ಉಪ್ಪು -ರುಚಿಗೆ ತಕ್ಕಷ್ಟು
ತೆಂಗಿನ ಹಾಲು- 1 ಕಪ್
ಏಲಕ್ಕಿ -3-4
ಎಣ್ಣೆ ಕರಿಯಲು -ಸ್ವಲ್ಪ
ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು ಮೂರು ಗಂಟೆಗಳ ಕಾಲ ನೆನೆಹಾಕಿ. ಬಳಿಕ ಅಕ್ಕಿ, ತೆಂಗಿನಹಾಲು, ಏಲಕ್ಕಿ, ಹಾಗೂ ಬೆಲ್ಲದ ಪುಡಿ, ಉಪ್ಪು ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಈ ಅರೆದ ಹಿಟ್ಟನ್ನು ಸೇರಿಸಿ, ಅದರ ಹೆಚ್ಚುವರಿ ನೀರು ಆರಿ ಉಂಡೆ ಕಟ್ಟುವ ಹದಕ್ಕೆ ಬರುವವರೆಗೆ ತಿರುವುತ್ತಾ ಇರಿ. (ಬೆಳ್ತಿಗೆ ಅಕ್ಕಿಯನ್ನು ಅರೆದು ಸೇರಿಸುವ ಬದಲು ಅಕ್ಕಿ ಪುಡಿಯನ್ನು ಉಳಿದ ಮಿಶ್ರಣಕ್ಕೆ ಸೇರಿಸಿ ಕಲಸಿದರೆ ಈ ರೀತಿ ಬಿಸಿ ಮಾಡಿ ನೀರು ಆರಿಸಬೇಕಾಗಿಲ್ಲ) ಆ ಹಿಟ್ಟು ತಣಿದ ಬಳಿಕ ಸಣ್ಣ ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನು ಕಟ್ಟಿ. ಉಂಡೆ ಮಾಡುವಾಗ ಗಟ್ಟಿಯಾಗಿ ಒತ್ತಿ ಕಟ್ಟಿದರೆ/ ಮಾಡಿದರೆ ಎಣ್ಣೆಯಲ್ಲಿ ಕಾಯಿಸುವಾಗ ಅವು ಬಿರಿದು ಒಡೆಯುವುದಿಲ್ಲ. ಈಗ ಕಾದ ಎಣ್ಣೆಗೆ ಉಂಡೆಗಳನ್ನು ಹಾಕಿ ಕಂದು ಬಣ್ಣ ಬರುವ ತನಕ ಹುರಿದು ತೆಗೆಯಿರಿ. ಸ್ವಲ್ಪ ತಣಿದ ನಂತರ ಗಾಳಿಯಾಡದ ಡಬ್ಬಿಗಳಲ್ಲಿ ಶೇಖರಿಸಿಡಿ.
ನೆಮ್ರ್ಯೂ
ಬೇಕಾಗುವ ಸಾಮಗ್ರಿಗಳು
ಬಿಳಿ ಎಳ್ಳು -50 ಗ್ರಾಂ
ಗೇರು ಬೀಜ -50 ಗ್ರಾಂ
ಕಸಕಸೆ – 2 ಚಮಚ
ಅರ್ಧ ಒಣಗಿದ ತೆಂಗಿನಕಾಯಿ- 1
ಒಣದ್ರಾಕ್ಷಿ – 40 ಗ್ರಾಂ
ಸಕ್ಕರೆ ಹುಡಿ – 25 ಗ್ರಾಂ
ಏಲಕ್ಕಿ ಹುಡಿ – ಸ್ವಲ್ಪ
ಎಣ್ಣೆ -1 ಲೀ.
ಮಾಡುವ ವಿಧಾನ:
ಕಾವಲಿಯಲ್ಲಿ ಎಳ್ಳು, ಗೇರು ಬೀಜದ ತುಂಡು, ಒಣ ತೆಂಗಿನ ಕಾಯಿ ತುರಿ ಇವುಗಳನ್ನು ಪ್ರತ್ಯೇಕವಾಗಿ ಸಣ್ಣ ಬೆಂಕಿಯಲ್ಲಿ ಹುರಿದು ಇಟ್ಟುಕೊಳ್ಳಬೇಕು. ಹುರಿಯುವಾಗ ಹೆಚ್ಚು ಹುರಿದುಕೊಳ್ಳದೆ ಹದವಾಗಿ ಹುರಿದುಕೊಳ್ಳಿ. ಅನಂತರ ಬೇಕಾದಷ್ಟು ಸಕ್ಕರೆ ಹುಡಿಯನ್ನು ಸೇರಿಸಿ ಅದನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಇದು ಹುರಿದುಕೊಳ್ಳುತ್ತಲೇ ಅಂಟು ಅಂಟಾಗತ್ತದೆ ಅನಂತರ ಅದನ್ನು ಬದಿಯಲ್ಲಿರಿಸಿ. ಮೈದಾ ಹಿಟ್ಟನ್ನು ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ಬಂದ ಅನಂತರ ಸಣ್ಣ ಸಣ್ಣ ಚಪಾತಿ ತಯಾರಿಸಿ, ಅದಕ್ಕೆ ಒಂದರಿಂದ 2 ಚಮಚ ಹಾಕಿ ಅದನ್ನು ಅರ್ಧ ಚಂದ್ರಾಕಾರದಲ್ಲಿ ಮಡಚಿ, ಬೆರಳಿಗೆ ಸ್ವಲ್ಪ ನೀರು ಮುಟ್ಟಿಸಿ, ಸೀಲ್ ಮಾಡಿಕೊಳ್ಳಿ. ಹೀಗೆ ತಯಾರಾದ ನೆಮ್ರ್ಯೂವನ್ನು ಕುದಿತುವ ಎಣ್ಣೆಯಲ್ಲಿ ಹಾಕಿ ಕರಿದುಕೊಂಡರೆ ಬಿಸಿ ಬಿಸಿಯಾದ ನೆವ್ರೊé ಸವಿಯಲು ಸಿದ್ಧ.
ಕೊಕ್ಕಿಸ್
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ -1 ಕೆ.ಜಿ
ಮೈದಾ ಹಿಟ್ಟು- ಅರ್ಧ ಕೆ.ಜಿ
ತೆಂಗಿನ ಹಾಲು- 2 ಕಾಯಿ
ಉಪ್ಪು- ರುಚಿಗೆ ತಕ್ಕಷ್ಟು
ಸಕ್ಕರೆ -ಸ್ವಲ್ಪ
ಮಾಡುವ ವಿಧಾನ:
ತೆಂಗಿನ ದಪ್ಪ ಹಾಲಿನಲ್ಲಿ ಹಿಟ್ಟನ್ನು ಕಲಿಸಬೇಕು. ಹಿಟ್ಟನ್ನು ತಯಾರಿಸಿದ ಮೇಲೆ ಬಾಣಲೆಯಲ್ಲಿ ತೆಂಗಿಎಣ್ಣೆ ಕಾಯಿಸಿ, ಎಣ್ಣೆ ಕುದಿ ಬಂದ ಅನಂತರ ಶುಚಿಗೊಳಿಸಿದ ಕೊಕ್ಕಿಸ್ ಅಚ್ಚಿಯನ್ನು ಬಿಸಿ ಎಣ್ಣೆಯಲ್ಲಿ ಇಟ್ಟು ಬಿಸಿ ಇರುವ ಅಚ್ಚನ್ನು ಹಿಟ್ಟಿನಲ್ಲಿ ನಾಲ್ಕನೇ ಮೂರು ಭಾಗ ಹಿಟ್ಟು ಹಿಡಿಯುವಂತೆ ಮುಳುಗಿಸಿ ಆ ಬಳಿಕ ಬಿಸಿ ಎಣ್ಣೆಯಲ್ಲಿ ಇಡಬೇಕು. ಅಚ್ಚಿಯ ಹಿಡಿಯನ್ನು ಮೆಲ್ಲ ಮೆಲ್ಲನೆ ಅಲ್ಲಾಡಿಸಿ ಕೊಕ್ಕಿಸ್ ಎಣ್ಣೆಯಲ್ಲಿ ಹಿಡಿಯುವಷ್ಟು ಕೊಕ್ಕಿಸ್‌ಗಳನ್ನು ಎಣ್ಣೆಯಲ್ಲಿ ಬಿಟ್ಟು ಮಗುಚುತ್ತಾ ಇರಬೇಕು. ಕಂದು ಬಣ್ಣಕ್ಕೆ ಬರುವಾಗ ಕೊಕ್ಕಿಸ್‌ಗಳನ್ನು ಎಣ್ಣೆಯಿಮದ ಹೊರಗೆ ತೆಗೆದು ಅಗಲವಾದ ಪಾತ್ರೆಯಲ್ಲಿ ಹಾಕಿದರೆ ರುಚಿ ರುಚಿಯಾದ ಕೊಕ್ಕಿಸ್ ಸವಿಯಲು ಸಿದ್ಧ.
ಹುರಿಗಡಲೆ ಕರ್ಜಿಕಾಯಿ
ಬೇಕಾಗುವ ಸಾಮಗ್ರಿ:
ಹುರಿಗಡಲೆ-ಕಾಲು ಕೆ.ಜಿ,
ಸಕ್ಕರೆ-2 ಕಪ್,
ಒಣ ಕೊಬ್ಬರಿ ತುರಿ-1 ಕಪ್,
ಬಿಳಿ ಎಳ್ಳು-2 ಚಮಚ,
ಗಸಗಸೆ-2 ಚಮಚ,
ಏಲಕ್ಕಿ ಪುಡಿ-ಸ್ವಲ್ಪ,
ಚಿರೋಟಿ ರವೆ-1 ಕಪ್,
ಮೈದಾ ಹಿಟ್ಟು-2 ಚಮಚ,
ಉಪ್ಪು-1 ಚಿಟಿಕೆ,
ಕರಿಯಲು ಎಣ್ಣೆ.
ಮಾಡುವ ವಿಧಾನ:
ಚಿರೋಟಿ ರವೆಗೆ ಅಗತ್ಯ ಸಾಮಗ್ರಿ ಬೆರೆಸಿ ಸ್ವಲ್ಪ ಗಟ್ಟಿಯಾಗಿ ಹಿಟ್ಟು ನಾದಿಡಿ. ಹುರಿಗಡಲೆಗೆ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಮಿಕ್ಸಿಯಲ್ಲಿ ರುಬ್ಬಿ. ಅನಂತರ ಇದಕ್ಕೆ ಹುರಿದ ಒಣ ಕೊಬ್ಬರಿ ತುರಿ, ಎಳ್ಳು, ಗಸಗಸೆ ಬೆರೆಸಿ. ನಾದಿಟ್ಟ ಹಿಟ್ಟಿನಿಂದ ಪೂರಿ ತಯಾರಿಸಿ ಅದರಲ್ಲಿ ಹೂರಣ ಹಾಕಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಆ್ಯಪಲ್ ಖೀರು
ಬೇಕಾಗುವ ಸಾಮಗ್ರಿಗಳು
ಆ್ಯಪಲ್ -2
ತುಪ್ಪ- ಸ್ವಲ್ಪ
ಹಾಲು- 3 ಬಟ್ಟಲು
ಕೇಸರಿ- ಸ್ವಲ್ಪ
ಮಿಲ್ಕ… ಮೇಡ್ – ಮುಕ್ಕಾಲು ಬಟ್ಟಲು
ಏಲಕ್ಕಿ- ಸ್ವಲ್ಪ
ಬಾದಾಮಿ ಚೂರುಗಳು- ಸ್ವಲ್ಪ
ಮಾಡುವ ವಿಧಾನ:
ಮೊದಲು ಆ್ಯಪಲ್‌ಅನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು, ತುರಿದಿಟ್ಟುಕೊಳ್ಳಬೇಕು. ಒಲೆಯ ಮೇಲೆ ಬಾಣಲೆಯಿಟ್ಟು ಕಾದ ಅನಂತರ 2-3 ಚಮಚ ತುಪ್ಪ ಹಾಕಿ ತುರಿದ ಆ್ಯಪಲ್‌ಅನ್ನು ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. ಪಾತ್ರೆಯೊಂದಕ್ಕೆ ಹಾಲು ಹಾಕಿ ಚೆನ್ನಾಗಿ ಕಾಯಲು ಬಿಡಬೇಕು. ಹಾಲು ಕೆಂಪಗೆ ಕಾದ ಬಳಿಕ ಕೇಸರಿ ಹಾಗೂ ಮಿಲ್ಕ್ ಮೇಡ್ ಹಾಕಬೇಕು. ಮಿಲ್ಕ… ಮೇಡ್ ಇಲ್ಲದಿದ್ದರೆ, ಅಳತೆಗೆ ತಕ್ಕಷ್ಟು ಸಕ್ಕರೆ ಹಾಕಬಹುದು. ಬಳಿಕ ಏಲಕ್ಕಿ ಪುಡಿ ಹಾಕಿ ಸ್ವಲ್ಪ ಹೊತ್ತು ಕಾಯಿಸಿ, ಆ್ಯಪಲ್ ಹಾಗೂ ಬಾದಾಮಿ ಚೂರುಗಳನ್ನು ಸೇರಿಸಿ, ಕೆಲ ಗಂಟೆಗಳ ಕಾಲ ಫ್ರಿಡ್ಜ್ನ ಲ್ಲಿಟ್ಟು ತೆಗೆದರೆ ರುಚಿಕರವಾದ ಆ್ಯಪಲ್ ಕೀರು ಸವಿಯಲು ಸಿದ್ಧ.
- ಶೆರೆಲ್ ಪಿಂಟೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.