ಸವಿಯಿರಿ ಬಗೆ ಬಗೆಯ ದೇಸಿ ಸೂಪ್
Team Udayavani, Mar 1, 2020, 5:01 AM IST
ಸೂಪ್ ಎಂದ ಕೂಡಲೇ ಎಲ್ಲರ ಬಾಯಲ್ಲೂ ನೀರೂರುತ್ತದೆ. ರೆಸ್ಟೋರೆಂಟ್‌ಗಳಲ್ಲಿ, ಪ್ರಮುಖ ಹೊಟೇಲ್‌ಗಳಲ್ಲಿ ಒಂದು ಒಳ್ಳೆಯ ಊಟಕ್ಕೆ ಅದ್ಭುತವಾದ ಪ್ರಾರಂಭ ನೀಡುವ ಈ ಖಾದ್ಯ ಆಧುನಿಕ ಆಹಾರ ಪದ್ಧತಿಯತ್ತ ವಾಲುತ್ತಿದೆ. ಈ ಹಿನ್ನೆಲೆಯಲ್ಲಿ ಹಸಿವನ್ನು ಹೆಚ್ಚಿಸುವ ಜತೆಗೆ ಜೀರ್ಣಕ್ರಿಯೆಯನ್ನು ಸರಾಗವಾಗಿಸುವ ಮತ್ತು ಕ್ಯಾಲರಿಗಳನ್ನು ಶೀಘ್ರವಾಗಿ ದಹಿಸಲೂ ನೆರವಾಗುವ ದೇಶೀ ಸೂಪ್‌ಗ್ಳ ವಿವರಣೆಯನ್ನು ಇಲ್ಲಿ ನೀಡಿದ್ದು, ಈ ಸ್ವಾದಿಷ್ಟಕರ ಸೂಪ್ ಅನ್ನು ಪ್ರತಿನಿತ್ಯ ಸೇವಿಸುವ ಸೊಪ್ಪು, ತರಕಾರಿಗಳಿಂದಲೇ ಮನೆಯಲ್ಲಿಯೇ ತಯಾರಿಸಬಹುದು.
ಮಸಾಲೆ ಸೂಪ್
ಬೇಕಾಗುವ ಸಾಮಗ್ರಿಗಳು
1 ಚಮಚ ಜೀರಿಗೆ, 1 ಚಮಚ ಕಾಳುಮೆಣಸು, 1 ಚಮಚ ಕೊತ್ತಂಬರಿ ಬೀಜ, 1 ಚಮಚ ಸೋಂಪು, 1 ಚಮಚ ಮೆಂತ್ಯೆ ಕಾಳು, 1 ಟೊಮೆಟೊ, ಕಾಲು ಕಪ್ ತೊಗರಿಬೇಳೆ, 3 ಬೆಳ್ಳುಳ್ಳಿ , ಅರ್ಧ ಇಂಚು ಶುಂಠಿ, 1 ಚಮಚ ಎಣ್ಣೆ , ಅರ್ಧ ಚಮಚ ಸಾಸಿವೆ, 1 ಚಮಚ ಹುಣಸೆ ಹಣ್ಣಿನ ರಸ, ರುಚಿಗೆ ಉಪ್ಪು, ಸ್ವಲ್ಪ ಕೊತ್ತಂಬರಿಸೊಪ್ಪು.
ಮಾಡುವ ವಿಧಾನ
ಮೊದಲಿಗೆ ಜೀರಿಗೆ, ಕಾಳುಮೆಣಸು, ಕೊತ್ತಂಬರಿ ಬೀಜ, ಸೋಂಪು, ಮೆಂತ್ಯೆ ಕಾಳು, ಮೆಣಸು ಎಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿಕೊಳ್ಳಿ. ಅನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಒಗ್ಗರಣೆ ಸಾಸಿವೆ ಹಾಕಿ ಬಳಿಕ ಇದಕ್ಕೆ ಕತ್ತರಿಸಿದ ಟೊಮೆಟೊ ಹಾಗೂ ಜಜ್ಜಿಟ್ಟುಕೊಂಡ ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ಹುರಿದುಕೊಳ್ಳಿ. ಅನಂತರ ಹುಣಸೆಹಣ್ಣಿನ ರಸ ಮತ್ತು ಪುಡಿ ಮಾಡಿಕೊಂಡ ಮಸಾಲೆಯನ್ನು ಸೇರಿಸಿ. ಕೊನೆಯಲ್ಲಿ ಬೇಯಿಸಿಟ್ಟು ಕೊಂಡಿರುವ ತೊಗರಿಬೇಳೆ ಮತ್ತು ಉಪ್ಪು ಹಾಕಿ ಕುದಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ಸ್ಪೈಸಿ ಸ್ಪೈಸಿ ಮಸಾಲೆ ಸೂಪ್ ಸವಿಯಲು ರೆಡಿ.
ಕೊತ್ತಂಬರಿ ಪರಿಮಳದ ಈರುಳ್ಳಿ ಸೂಪ್
ಬೇಕಾಗುವ ಪದಾರ್ಥಗಳು
ಕತ್ತರಿಸಿದ ಈರುಳ್ಳಿ (250 ಗ್ರಾಂ), ಕತ್ತರಿಸಿದ ಬೆಳ್ಳುಳ್ಳಿ (5 ಗ್ರಾಂ), ಈರುಳ್ಳಿ ದಿಂಡು (10 ಗ್ರಾಂ), ಒಂದು ಲವಂಗದ ಎಲೆ, ನೀರು (700 ಮಿ.ಲೀ.), ಕ್ರೀಂ (40 ಎಂ.ಎಲ….), ಬೆಣ್ಣೆ (50 ಗ್ರಾಂ), ಮೈದಾ (30 ಗ್ರಾಂ), ಉಪ್ಪು ರುಚಿಗೆ ತಕ್ಕಷ್ಟು,
ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ
ಮೊದಲು ಬಾಣಲಿಗೆ ಬೆಣ್ಣೆ ಹಾಕಿ ಬೆಳ್ಳುಳ್ಳಿಯನ್ನು ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ. ಅನಂತರ ಅದೇ ಬೆಣ್ಣೆ ಜಿಡ್ಡಿನಲ್ಲಿಯೇ ಈರುಳ್ಳಿ, ಈರುಳ್ಳಿ ದಿಂಡು ಮತ್ತು ಲವಂಗದ ಎಲೆಯನ್ನು ಹಾಕಿ ಬಾಣಲೆಯನ್ನು ಮುಚ್ಚಿ ಹಳದಿ ಬಣ್ಣಕ್ಕೆ ತಿರುಗವವರೆಗೆ ಹದವಾಗಿ ಬೇಯಿಸಿ. ಆಮೇಲೆ ಅದರಲ್ಲಿನ ಲವಂಗದ ಎಲೆಯನ್ನು ತೆಗೆದುಹಾಕಿ. ಈಗ ಮತ್ತೂಂದು ಬಾಣಲೆಗೆ ಸ್ವಲ್ಪ ಬೆಣ್ಣೆ ಹಾಕಿ ಬೇಯಿಸಿಕೊಂಡಿರುವ ಮಿಶ್ರಣವನ್ನು ಸುರಿದುಕೊಂಡು ಅದಕ್ಕೆ ನೀರು ಮತ್ತು ಎರಡು ಚಮಚ ಮೈದಾ ಹಿಟ್ಟನ್ನು ಹಾಕಿ ಕುದಿಸಿಕೊಳ್ಳಿ. ಬಳಿಕ ಒಂದು ಚಮಚ ಕ್ರೀಂ ಮತ್ತು ಬೆಣ್ಣೆ ಹಾಕಿ ಹದವಾಗಿ ಕುದಿಸಿಕೊಂಡ ಬಳಿಕ ಕೊತ್ತಂಬರಿ ಸೊಪ್ಪು ಉದರಿಸಿದ್ದರೆ ರುಚಿ ರುಚಿಯಾದ ಸೂಪ್ ಸವಿಯಲು ಸಿದ್ಧ.
ಸಿಹಿಕುಂಬಳಕಾಯಿ ಸೂಪ್
ಸಾಮಗ್ರಿ: ಒಂದು ಚಿಕ್ಕ ಸಿಹಿ ಕುಂಬಳಕಾಯಿ, ಒಂದು ದೊಡ್ಡ ಟೊಮೆಟೊ, ಎರಡು ಕ್ಯಾರೆಟ್, ಒಂದು ಚಮಚ ತುಪ್ಪ, ಒಂದು ಚಮಚ ಕಾಳುಮೆಣಸಿನ ಪುಡಿ, ಒಂದು ಕಪ್ ನೀರು, ರುಚಿಗೆ ಉಪ್ಪು, ಅರ್ಧ ಚಮಚ ಸಕ್ಕರೆ.
ವಿಧಾನ: ಪ್ಯಾನ್‌ಗೆ ತುಪ್ಪ ಹಾಕಿ ಅದಕ್ಕೆ ಕತ್ತರಿಸಿದ ಕುಂಬಳಕಾಯಿ ಮತ್ತು ಟೊಮೆಟೊ ಹಾಕಿ ಬಾಡಿಸಿಟ್ಟುಕೊಳ್ಳಿ. ಅದಕ್ಕೆ ನೀರು ಹಾಕಿ ಕುದಿಸಿ. ಚೆನ್ನಾಗಿ ಕುದಿ ಬಂದ ನಂತರ ಉಪ್ಪು ಮತ್ತು ಸಕ್ಕರೆ ಹಾಕಿ ತಣ್ಣಗಾಗಲು ಬಿಡಿ. ಅನಂತರ ಈ ಮಿಶ್ರಣವನ್ನು ಮಿಕ್ಸಿಯಲ್ಲಿ ರುಬ್ಬಿ. ಅಗತ್ಯ ಎನಿಸಿದರೆ ಸ್ವಲ್ಪ ನೀರು ಹಾಕಿ. ಕೊನೆಯದಾಗಿ ಇದಕ್ಕೆ ಕಾಳುಮೆಣಸಿನ ಪುಡಿಯನ್ನು ಉದುರಿಸಿ ಸವಿಯಿರಿ.
ಪುದೀನಾ ಸೂಪ್
ಬೇಕಾಗುವ ಸಾಮಗ್ರಿಗಳು
ಒಂದು ಕಪ್ ಪುದೀನಾ ಎಲೆ, ಒಂದು ಚಮಚ ಬೆಲ್ಲದ ಪುಡಿ, ಒಂದು ಚಮಚ ಜೀರಿಗೆ ಪುಡಿ, ಒಂದು ಚಮಚ ಕೊತ್ತಂಬರಿ, ಒಂದು ಚಮಚ ಹುಣಸೆ ಹಣ್ಣಿನ ರಸ, ಒಂದು ಚಮಚ ಸಾಸಿವೆ, ಅರ್ಧ ಚಮಚ ಶುಂಠಿ ಪೇಸ್ಟ್, ಒಂದು ಚಿಕ್ಕ ಒಣ ಮೆಣಸು, ರುಚಿಗೆ ಉಪ್ಪು, ಮೂರು ಕಪ್ ನೀರು.
ವಿಧಾನ:
ಪ್ಯಾನ್‌ಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಸಾಸಿವೆ, ಪುದೀನಾ, ಶುಂಠಿ ಪೇಸ್ಟ್, ಕೊತ್ತಂಬರಿ ಮತ್ತು ಒಣ ಮೆಣಸಿನಕಾಯಿ ಹಾಕಿ ಎರಡು ನಿಮಿಷ ಅದು ಚೆನ್ನಾಗಿ ಮಿಶ್ರಣ ಆಗುವವರೆಗೂ ಕೈಯಾಡಿಸಿಕೊಳ್ಳಿ. ಅನಂತರ ಅದಕ್ಕೆ ಮೂರು ಕಪ್ ನೀರು, ಹುಣಸೆ ಹಣ್ಣಿನ ರಸ, ಬೆಲ್ಲ, ಉಪ್ಪು ಸೇರಿಸಿ ಕುದಿಸಿದರೆ ಆರೋಗ್ಯಕರ ಪುದೀನಾ ಸೂಪ್ ಸವಿಯಲು ಸಿದ್ಧ.
ಟೊಮೆಟೊ ಸೂಪ್
ಬೇಕಾದ ಪದಾರ್ಥಗಳು
ಕತ್ತರಿಸಿದ ಈರುಳ್ಳಿ (15 ಗ್ರಾಂ), ಕತ್ತರಿಸಿದ ಬೆಳ್ಳುಳ್ಳಿ (5 ಗ್ರಾಂ), ಕತ್ತರಿಸಿದ ಈರುಳ್ಳಿ ದಿಂಡು (10 ಗ್ರಾಂ), ಬೇಯಿಸಿ ಸಿಪ್ಪೆ ಸುಲಿದ ಟೊಮೆಟೊ (400 ಗ್ರಾಂ), ಬ್ಯಾಸಿಲ್ ಎಲೆ (50 ಗ್ರಾಂ), ತರಕಾರಿ ಮಿಶ್ರಣ (300 ಗ್ರಾಂ), ಆಲೀವ್ ಎಣ್ಣೆ (20 ಎಂಎಲ…), ಕತ್ತರಿಸಿದ ಸೆಲರಿ ಸೊಪ್ಪು (10 ಗ್ರಾಂ), ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಬಾಣಲೆಗೆ ಒಂದು ಚಮಚ ಆಲೀವ್ ಎಣ್ಣೆ ಹಾಕಿ ಬೆಳ್ಳುಳ್ಳಿ ಯನ್ನು ಕಂದು ಬಣ್ಣ ಬರುವವರೆಗೂ ಹುರಿಯಿರಿ. ಬಳಿಕ ಇದಕ್ಕೆ ಈರುಳ್ಳಿ, ಈರುಳ್ಳಿ ದಿಂಡು, ಸೆಲರಿ ಸೊಪ್ಪು ಹಾಗೂ ಒಂದು ಲವಂಗದ ಎಲೆಯನ್ನು ಸೇರಿಸಿ ಮಿಶ್ರಣ ವನ್ನು ಎಣ್ಣೆಯಲ್ಲಿ ಮೆತ್ತಾಗಾಗುವವರೆಗೆ ಹುರಿಯಿರಿ. ಬಳಿಕ ಸಿಪ್ಪೆ ಸುಲಿದ ಟೊಮೆಟೊ ಮತ್ತು ತರಕಾರಿ ಮಿಶ್ರಣ ಮಸಾಲೆಯೊಂದಿಗೆ ಬೆರೆಯುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ಅನಂತರ ಅದಕ್ಕೆ ಸರಿ ಹೊಂದುವಷ್ಟು ನೀರು, ಉಪ್ಪು, ಮಸಾಲೆ ಮತ್ತು ಕತ್ತರಿಸಿಟ್ಟುಕೊಂಡ ಬ್ಯಾಸಿಲ್ ಎಲೆಯನ್ನು ಹಾಕಿದರೆ ಘಮಘಮಿಸುವ ಟೊಮೆಟೊ ಸೂಪ್ ಸವಿಯಲು ರೆಡಿ.
ಕ್ಯಾಪ್ಸಿಕಂ ಸೂಪ್
ಬೇಕಾದ ಸಾಮಗ್ರಿಗಳು
1 ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ), 1 ಚಮಚ ಬೆಣ್ಣೆ, 1 ಈರುಳ್ಳಿ, 2 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಹಾಲು, ಟೊಮೆಟೊ ಸಾಸ್,1 ಚಮಚ ಕಾಳುಮೆಣಸಿನ ಪುಡಿ, ರುಚಿಗೆ ಉಪ್ಪು.
ವಿಧಾನ
ಪ್ಯಾನ್‌ನಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಜಜ್ಜಿದ ಬೆಳ್ಳುಳ್ಳಿ ಹಾಗೂ ಕ್ಯಾಪ್ಸಿಕಂ ಹಾಕಿ ಕೈಯಾಡಿಸಿ. ಚೆನ್ನಾಗಿ ಫ್ರೈ ಮಾಡಿದ ಅನಂತರ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ. ರುಬ್ಬಿಟ್ಟ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಹಾಲು, ಉಪ್ಪು, ಟೊಮೆಟೊ ಸಾಸ್ ಮತ್ತು ಕಾಳುಮೆಣಿಸನ ಪುಡಿಯನ್ನು ಹಾಕಿ. ಎಲ್ಲವನ್ನೂ ಸೇರಿಸಿ ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿದರೆ ಕ್ಯಾಪ್ಸಿಕಂ ಸೂಪ್ ಸವಿಯಲು ಸಿದ್ಧ.
ತರಕಾರಿ ಸೂಪ್
ಬೇಕಾದ ಸಾಮಗ್ರಿಗಳು
ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು, 1 ದೊಡ್ಡ ಈರುಳ್ಳಿ, 1 ಚಿಕ್ಕ ಶುಂಠಿ, 2 ಎಸಳು ಬೆಳ್ಳುಳ್ಳಿ, 1 ಸ್ಪ್ರಿಂಗ್ ಓನಿಯನ್, 3 ಚಮಚ ನಿಂಬೆ ಹಣ್ಣಿನ ರಸ, ಮೂರ್ನಾಲ್ಕು ಕಪ್ ಇಷ್ಟಪಟ್ಟ ತರಕಾರಿ, 4 ಕಾಳುಮೆಣಸು, ರುಚಿಗೆ ಉಪ್ಪು, 1 ಚಮಚ ಬೆಣ್ಣೆ ಅಥವಾ ತುಪ್ಪ.
ವಿಧಾನ:
ಬಾಣಲೆಯಲ್ಲಿ ಬೆಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ಕತ್ತರಿಸಿದ ಈರುಳ್ಳಿ, ಸ್ಪ್ರಿಂಗ್ ಓನಿಯನ್, ಜಜ್ಜಿದ ಶುಂಠಿ ಹಾಕಿ ಕೈಯಾಡಿಸಿ. ಚೆನ್ನಾಗಿ ಫ್ರೈ ಆಗಿ ಅದು ಕೆಂಪಗಾದ ಮೇಲೆ ಕತ್ತರಿಸಿಟ್ಟುಕೊಂಡಿರು ವ ಇಷ್ಟು ತರಕಾರಿಯನ್ನು ಹಾಕಿ ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಹಾಕಿ ಕುದಿಸಿ. ಕುದಿ ಬಂದ ಮೇಲೆ ಕೊತ್ತಂಬರಿ ಸೊಪ್ಪು, ಉಪ್ಪು, ಕಾಳುಮೆಣಸು, ನಿಂಬೆರಸ ಸೇರಿಸಿ ಕೈಯಾಡಿಸಿ. ಇಷ್ಟು ಮಾಡಿದರೆ ತರಕಾರಿ ಸೂಪ್ ಸಿದ್ಧ.
ಸುಶ್ಮಿತಾ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.