ಮೇಲ್ಸೇತುವೆ ಸಂಚಾರಕ್ಕೊಂದು ಪರ್ಯಾಯ ಮಾರ್ಗ
Team Udayavani, Jul 1, 2018, 3:48 PM IST
ಮಂಗಳೂರು ನಗರ ವ್ಯಾಪ್ತಿಯಲ್ಲಿ ವಾಹನಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ. ಟ್ರಾಫಿಕ್ ಕಿರಿಕಿರಿ ನಿತ್ಯ ತಪ್ಪಿದ್ದಲ್ಲ. ಮುಖ್ಯವಾಗಿ ಬಳ್ಳಾಲ್‌ಬಾಗ್‌ನಿಂದ ಪಿವಿಎಸ್ ವರೆಗಿನ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟ ಎಂಬಂತಾಗಿದೆ. ಇಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿದ್ದು, ಶಾಲೆ, ಕಾಲೇಜುಗಳಿಗೆ ತೆರಳುವ ಮತ್ತು ಮರಳಿ ಮನೆಗೆ ಹೋಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇದರಿಂದ ತೊಂದರೆ ಅನುಭವಿಸುವಂತಾಗಿದೆ.
ಮುಂದಿನ ದಿನಗಳಲ್ಲಿ ನಗರವು ಇನ್ನೂ ಬೆಳೆಯುವುದರಿಂದ ಇಲ್ಲಿನ ಸಮಸ್ಯೆ ಮತ್ತಷ್ಟು ಬಿಗಾಡಾಯಿಸುವ ಸಾಧ್ಯತೆ ಇದೆ. ಹೀಗಾಗಿ ಈ ನಿಟ್ಟಿನಲ್ಲಿ ಈಗಲೇ ತುರ್ತು ಕ್ರಮಕೈಗೊಂಡರೆ ಇಲ್ಲಿನ ಸಮಸ್ಯೆಗೊಂದು ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ. ಎಂ.ಜಿ. ರಸ್ತೆಯನ್ನು ಲಾಲ್‌ಬಾಗ್‌ನಿಂದ ಪಿವಿಎಸ್‌ವರೆಗೆ ಈಗ ದ್ವಿಪಥ ರಸ್ತೆಯಿದ್ದು, ಇದನ್ನು ಮೂರು ಪಥವನ್ನಾಗಿ ಮಾಡಿದರೆ ವಾಹನಗಳ ಓಡಾಟಕ್ಕೆ ಅನುಕೂಲವಾಗಬಹುದು ಮತ್ತು ಇದರಿಂದ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಸಂಪೂರ್ಣ ಮುಕ್ತಿ ಸಿಗಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮೂರು ಸಾಲುಗಳ ರಸ್ತೆ ನಿರ್ಮಾಣ ಕಷ್ಟ. ಹೀಗಾಗಿ ಎರಡು ಪಥಗಳ ಮೇಲೆ ಎರಡೆರಡು ಸಾಲುಗಳ ಅಂದರೆ ಒಟ್ಟು ನಾಲ್ಕು ಸಾಲಿನ ಮೇಲ್ಸೇತುವೆ ನಿರ್ಮಿಸಬಹುದು. ಇದರಿಂದ ಲಾಲ್‌ಬಾಗ್‌ನಿಂದ ಹಂಪನಕಟ್ಟೆ ಪ್ರದೇಶಗಳಿಗೆ ಹೋಗುವ ವಾಹನಗಳು ಯಾವುದೇ ಅಡೆತಡೆ ಇಲ್ಲದೆ ಸಾಗಲು ಸಾಧ್ಯವಾಗುತ್ತದೆ. ಒಂದು ವೇಳೆ ಎರಡು ಪಥಗಳ ಮೇಲ್ಸೆತುವೆ ಮಾಡಲು ಸಾಧ್ಯವಿಲ್ಲವೆಂದಾದರೆ ಅದನ್ನು ಏಕಪಥದ ಸೇತುವೆಯನ್ನು ನಿರ್ಮಿಸಬಹುದು.
ಇದರೊಂದಿಗೆ ಪಿವಿಎಸ್ ನಿಂದ ಬಂಟ್ಸ್ ಹಾಸ್ಟೆಲ್ ರಸ್ತೆಯ ಅಭಿವೃದ್ಧಿಯ ಬಗ್ಗೆಯೂ ಚಿಂತನೆ ನಡೆಯಬೇಕಿದೆ. ಲಾಲ್‌ಬಾಗ್- ಬಳ್ಳಾಲ್‌ಬಾಗ್‌ನ ಮಧ್ಯದ ಪ್ರದೇಶ ಅಂದರೆ ಮಹಾನಗರ ಪಾಲಿಕೆಯ ಕಟ್ಟಡದಿಂದ ಬದಿಯ ರಸ್ತೆಯ ಅನಂತರದ ಪ್ರದೇಶ ಮತ್ತು ಪಿವಿಎಸ್ ಪ್ರದೇಶಗಳು ಎತ್ತರದಲ್ಲಿವೆ. ಹೀಗಾಗಿ ಇಲ್ಲಿ ಮೇಲ್ಸೇತುವೆ ಮಾಡುವುದರಿಂದಾಗಿ ರಸ್ತೆ ಮತ್ತು ಮೇಲ್ಸೆತುವೆ ಸಮಾನಾಂತರವಾಗಿರುತ್ತದೆ. ಮೇಲ್ಸೆತುವೆಗೆ ಬೆಂಗಳೂರಿನಲ್ಲಿ ಕಟ್ಟಿದಂತಹ ವೃತ್ತಾಕಾರದ ಕಂಬಗಳನ್ನು ಜೋಡಿಸಿದರೆ ರಸ್ತೆಯಲ್ಲಿ ಸಾಕಷ್ಟು ಜಾಗವೂ ಸಿಗುತ್ತದೆ.
ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ರಸ್ತೆಯನ್ನು ಹೊರತುಪಡಿಸಿ ಸಂಚಾರಕ್ಕೆ ಇರುವ ಇತರ ಅವಕಾಶಗಳನ್ನೂ ಪರಿಗಣಿಸಬೇಕಿದೆ. ಹೀಗಾದರೆ ಮಾತ್ರ ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ಎದುರಾಗುವ ಬೃಹತ್ ಮಟ್ಟದ ಟ್ರಾಫಿಕ್ ಸಮಸ್ಯೆಯಿಂದ ಮುಕ್ತವಾಗಬಹುದು.
ವಿಶ್ವನಾಥ ಕೋಟೆಕಾರ್,
ಕೋಡಿಕಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.