ಚಿರಕಾಲವಿರಲಿ ಈ ಸ್ಫೂರ್ತಿ
Team Udayavani, Nov 18, 2019, 5:00 AM IST
ಬಹಳಷ್ಟು ಸಲ ನಿಮ್ಮ ರೋಲ್ ಮಾಡಲ್ ಯಾರೆಂದು ಕೇಳಿದಾಗ ಕಲ್ಪನಾ ಚಾವ್ಲಾ, ಸಚಿನ್ ತೆಂಡುಲ್ಕರ್, ಪಿ.ಟಿ. ಉಷಾ ಹೀಗೆ ನಾನಾ ಹೆಸರುಗಳು ಕೇಳಿಬರುವುದನ್ನು ನೀವು ಗಮನಿಸಿರಬಹುದು. ಅವರ ಸಾಧನೆಗಳನ್ನು ಕಂಡು ನಾವು ಕೂಡ ಅವರಂತೆ ಆಗಬೇಕೆಂಬ ಕನಸು ಕಾಣುವುದು ಕೂಡ ಸಹಜ. ಅಂತೆಯೇ ಆ ಹುಮ್ಮಸ್ಸು, ಉತ್ಸಾಹವನ್ನು ಕೂಡ ಬೆಳೆಸಿಕೊಳ್ಳುತ್ತೇವೆ. ಕೆಲವರು ಇಂತಹ ಸ್ಫೂರ್ತಿಯಿಂದ ಯಶಸ್ಸನ್ನು ಪಡೆದರೆ, ಇನ್ನು ಕೆಲವರು ತಾವಂದುಕೊಂಡ ಗುರಿತಲುಪಲಾಗದೆ, ಬಯಸಿದ ಕೆಲಸವೂ ಸಿಗದೆ, ಸಾಧಿಸಬೇಕಾದ ಗುರಿಯನ್ನು ಅರ್ಧದಲ್ಲಿ ಬಿಟ್ಟುಬಿಡುತ್ತಾರೆ. ಬಾಳ ಪಯಣ ಹಲವು ಆಯಾಮಗಳನ್ನು ಪಡೆಯುತ್ತಾ ನಮ್ಮ ರೋಲ್ ಮಾಡೆಲ್‌ಗಳ ಕಥೆ ಕೇವಲ ಕ್ಷಣಿಕ ಸ್ಫೂರ್ತಿಯಾಗಿತ್ತು ಎಂಬುವುದನ್ನು ಮರೆತು ಬಿಡುತ್ತೇವೆ.
ಹೀಗೆ+ಯಾಕೆ=ಹೀಗೇಕೆ
ಚಿಕ್ಕ ವಯಸ್ಸಿನಲ್ಲಿ ಅಂದುಕೊಂಡ ಆ ಕನಸು ಯಾಕೆ ಇಂದು ವ್ಯತಿರಿಕ್ತವಾಯಿತು ಎಂಬ ಪ್ರಶ್ನೆಗೆ ಕಾರಣಗಳು ಹಲವಾರಿದ್ದರೂ, ನಮ್ಮನ್ನು ನಾವು ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಳ್ಳದಿರುವುದೇ ಇದಕ್ಕೆ ಮುಖ್ಯ ಕಾರಣ. ಬೇರೆಯವರ ಯಶಸ್ಸನ್ನು ಕಂಡು ಅಸೂಯೆ ಪಡುತ್ತಾರೆ. ಆದರೆ ಸಾಧನೆ, ಯಶಸ್ಸಿನ ಹಿಂದೆ ಅದೇಷ್ಟೋ ವರ್ಷಗಳ ಪರಿಶ್ರಮ ಅಡಗಿರುತ್ತದೆ ಎಂಬುವುದನ್ನು ನಾವು ಮರೆಯಬಾರದು. ವೇದಿಕೆಯ ಮೇಲೆ ಸಾಧನೆ ಮಾಡಿದ ವ್ಯಕ್ತಿಯ ಭಾಷಣ ಕೇಳಿದೊಡನೆ ನಮ್ಮ ಮೈಮನ ರೋಮಾಂಚನವಾಗುತ್ತದೆ. ಒಮ್ಮೆ ಆ ವ್ಯಕ್ತಿಯಂತೆ ಮಿಂಚಬೇಕು ಎನಿಸುತ್ತದೆ. ಆದರೆ ಅದರ ಹಿಂದಿನ ಪರಿಶ್ರಮವನ್ನು ಅನುಸರಿಸಲು ಸೋಮಾರಿಗಳಾಗುತ್ತೇವೆ. ಇದು ಕೆಲವರಲ್ಲಿ ಕಂಡುಬರುವ ಸಹಜಗುಣವಾಗಿ ಬಿಟ್ಟಿದೆ. ಇದಕ್ಕೆ ನಮಗೆ ನಾವೇ ಪ್ರಶ್ನೆ ಕೇಳಿಕೊಳ್ಳಬೇಕಿದೆ, ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
ಸ್ಫೂರ್ತಿಯನ್ನು, ಆದರ್ಶವನ್ನು ಓರ್ವ ಸಿನೆಮಾ ನಟ, ಪ್ರಖ್ಯಾತ ಆಟಗಾರರಿಂದಲೇ ಪಡೆಯುತ್ತೇವೆ ಎಂಬ ತಪ್ಪು ಕಲ್ಪನೆ ಬೇಡ. ಬಡತನ, ಹಸಿವು, ಅವ್ಯವಸ್ಥೆ ಇವುಗಳೂ ಕೂಡ ನಿಮ್ಮನ್ನು ಉತ್ತಮ ನಡೆಯತ್ತ ಕೊಂಡೊಯ್ಯಲು ಸ್ಫೂರ್ತಿಯಾಗಬಹುದು. ಅಬ್ದುಲ್ ಕಲಾಂ ಬೀದಿ ದೀಪದಿಂದ ಓದಿ ಜಗತ್ತಿನ ಮಹಾನ್ ವ್ಯಕ್ತಿಯಾದದ್ದು ತನ್ನಂತೆ ಇತರರೂ ಕಷ್ಟವನ್ನು ನಾಚಿಸುವಂತೆ ಬದುಕಬೇಕೆಂಬ ಸ್ಫೂರ್ತಿಯೂ ಇಂದಿಗೂ ಅಜರಾಮರ. ಕಾದಷ್ಟು ಕಬ್ಬಿಣ ಹದವಾಗುತ್ತಾ ಹೋಗುತ್ತದೆ ಎಂಬ ಮಾತಿದೆ. ಅದನ್ನು ನಮ್ಮ ಜೀವನದಲ್ಲಿ ಅನುಸರಿಸಿದರೆ ಎಲ್ಲ ಎಲ್ಲೆ ಮಿಟಿದವರಾಗಲು ಸಾಧ್ಯವಾಗುತ್ತದೆ. ಜೀವನದ ಭವ ಸಾಗರವನ್ನು ಮೇಲ್ನೋಟಕ್ಕೆ ಕಣ್ಣಾಯಿಸಿದರೆ ಸಾಲದು ಅದಕ್ಕೂ ಮಿಗಿಲಾಗಿ ಗುರಿ ತಲುಪಲು ನಿರ್ದಿಷ್ಟ ಛಲವು ಅತ್ಯಗತ್ಯ. ನಾವು ಸಾಧಿಸಬೇಕೆಂದು ಕೊಂಡದ್ದು ನಮ್ಮ ಕನಸ್ಸನ್ನು ಆಕ್ರಮಿಸುವಷ್ಟು ದೃಢವಾಗಿ ಮನಸ್ಸಲ್ಲಿ ಉಳಿದುಬಿಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಬಹುದು.
-ರಾಧಿಕಾ,ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.