ಮನೆ ಕಟ್ಟಿ ನೋಡು ತೆರಿಗೆ ಪಾವತಿಸಿ ನೋಡು..
Team Udayavani, Feb 4, 2019, 7:08 AM IST
ಕೇಂದ್ರ ಸರಕಾರ ಮಂಡಿಸಿದ ಬಜೆಟ್ ನಲ್ಲಿ ಮಧ್ಯಮವರ್ಗದ ಜನತೆಗೆ ಪೂರಕವಾಗುವಂತಹ ಯೋಜನೆಗಳನ್ನು ತಂದಿದ್ದು ತೆರಿಗೆಯಲ್ಲಿ ಕಡಿತ, ಸೇವಿಂಗ್ಸ್‌ಗೆ ಅವಕಾಶ, ಮನೆ ನಿರ್ಮಾಣದ ಕನಸನ್ನು ನನಸಾಗಿಸುವಂತಹ ಆಸೆಯನ್ನು ಹುಟ್ಟಿಸಿದೆ.
ಕೇಂದ್ರ ಸರಕಾರದ ಹೊಸ ಬಜೆಟ್ ಹೊಸ ನಿರೀಕ್ಷೆ ಮೂಡಿಸಿದೆ. ಮನೆ ನಿರ್ಮಾಣ ಕ್ಷೇತ್ರಕ್ಕಂತು ಹೊಸ ಆಶಾಭಾವನೆ ತರಿಸಿದೆ. ಹೊಸ ಮನೆಯ ನಿರೀಕ್ಷೆಯಲ್ಲಿರುವವರು ಹಾಗೂ ಮನೆ ಮಾರಾಟ ಮಾಡುವವರಿಗೂ ಈ ಬಜೆಟ್‌ನಲ್ಲಿ ಸಿಹಿ ಸುದ್ದಿ ಬಂದಿದೆ.
ಎರಡನೇ ಮನೆ ಖರೀದಿಸುವವರಿಗೆ ತೆರಿಗೆ ರಿಯಾಯ್ತಿ, ಕೈಗೆಟಕುವ ಮನೆಗಳನ್ನು ನಿರ್ಮಿಸುವ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪ್ರೋತ್ಸಾಹ ಹಾಗೂ ಮಾರಾಟವಾಗದೆ ಉಳಿಯುವ ಫ್ಲ್ಯಾಟ್‌ಗಳಿಗೆ ಎರಡು ವರ್ಷದವರೆಗೆ ಬಾಡಿಗೆಯ ಮೇಲೆ ತೆರಿಗೆ ವಿಧಿಸದಿರುವ ಹೀಗೆ ಹಲವು ಘೋಷಣೆಗಳನ್ನು ಕೇಂದ್ರ ವಿತ್ತಮಂತ್ರಿ ಪೀಯೂಷ್ ಗೋಯಲ್ ಮಾಡಿದ್ದಾರೆ. ಜತೆಗೆ, ಇಷ್ಟು ದಿನ ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿರುವವರು ಎರಡನೇ ಮನೆಗೆ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಭಾವಿಸಿ ಆ ಬಾಡಿಗೆಯ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಎರಡನೆಯ ಮನೆಯ ಮೇಲೆ ವಿಧಿಸುತ್ತಿದ್ದ ಬಾಡಿಗೆ ತೆರಿಗೆಯಿಂದ ಮಾಲಕರಿಗೆ ವಿನಾಯ್ತಿ ನೀಡಲಾಗಿದೆ. ಆದರೆ, ಆ ಮನೆಯಲ್ಲಿ ಕುಟುಂಬಸ್ಥರೇ ವಾಸಿಸುತ್ತಿರಬೇಕು.
ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ
ಕೈಗೆಟಕುವ ದರದಲ್ಲಿ ಹೆಚ್ಚು ಮನೆಗಳ ನಿರ್ಮಾಣವಾಗಬೇಕು ಎಂಬ ಕನಸಿನೊಂದಿಗೆ ಆದಾಯ ತೆರಿಗೆ ಕಾಯ್ದೆಯಡಿ ಘೋಷಿಸಿರುವ ಸೆಕ್ಷನ್ 80-1 ಬಿಎ ಅಡಿ ಸೌಲಭ್ಯದ ಅವಧಿಯನ್ನು ಮತ್ತೂಂದು ವರ್ಷ ವಿಸ್ತರಿಸಲಾಗಿದೆ. ಅಂದರೆ ಈ ಸೌಲಭ್ಯದಡಿ ಬರುವ ಎಲ್ಲ ವಸತಿ ಯೋಜನೆಗಳಿಗೆ 2020ರ ಮಾರ್ಚ್ 31ರ ವರೆಗೂ ಅನುಮತಿ ನೀಡಲಾಗುವುದು. ಪರಿಣಾಮ ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದ ಕಂಪೆನಿಗಳಿಗೆ ಇದು ಪ್ರಯೋಜನ ಉಂಟು ಮಾಡಲಿದೆ ಎಂಬುದು ನಿರೀಕ್ಷೆ.
ಉಳಿತಾಯ ಹೆಚ್ಚು
ಮಾಧ್ಯಮವೊಂದಕ್ಕೆ ಕೈಗಾರಿಕಾ ವಲಯದ ಪರಿಣತರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಹೀಗೆ.. ‘ಆದಾಯ ತೆರಿಗೆ ಪಾವತಿ ಕೈಬಿಟ್ಟ ಕಾರಣದಿಂದ ಆರು ಲಕ್ಷ ರೂ. ಆದಾಯ ಹೊಂದಿರುವ ಯಾವುದೇ ವ್ಯಕ್ತಿ ವಾರ್ಷಿಕ 28,000 ರೂ. ಉಳಿತಾಯ ಮಾಡಬಹುದು. ಮನೆಯಲ್ಲಿ ಇಬ್ಬರು ದುಡಿಯುವ ವ್ಯಕ್ತಿಗಳಿದ್ದರೆ ಅವರ ಉಳಿತಾಯದ ಪ್ರಮಾಣ 56,000 ರೂ. ಆಗುತ್ತದೆ. ಹೀಗೆ ದೊಡ್ಡ ಪ್ರಮಾಣದ ಹಣ ಖರೀದಿದಾರರ ಬಳಿ ಇರುತ್ತದೆ. ಸಾಮಾನ್ಯವಾಗಿ 10 ಲಕ್ಷ ರೂ. ಗೃಹಸಾಲ ಪಡೆಯುವವರು 10 ಸಾವಿರ ರೂ.ಗಳಷ್ಟು ಇಎಂಐ ಕಟ್ಟಬೇಕಾಗುತ್ತದೆ. ಆದರೆ ಇನ್ನು ಮುಂದೆ 56,000 ರೂ. ಉಳಿಯುತ್ತದೆ. ಇದು ಮನೆ ಕಟ್ಟಿಸಲು ಮುಂದಾಗಲು ಅನುವು ಮಾಡಿದಂತೆ. ಹೀಗೆ ಕೈಗೆಟಕುವ ಮನೆಗಳನ್ನು ನಿರ್ಮಾಣ ಮಾಡಿಕೊಡುವ ವಲಯಕ್ಕೆ ಪ್ರಯೋಜನ ವಾಗಬಹುದು’ ಎಂಬುದು ಅವರ ಅಭಿಪ್ರಾಯ.
ಅಂದಹಾಗೆ, ರಿಯಲ್ ಎಸ್ಟೇಟ್ ವಲಯಕ್ಕೂ ಬಜೆಟ್ ಅನುಕೂಲ ಕಲ್ಪಿಸಿದೆ. ಕೆಲವು ತೆರಿಗೆ ವಿನಾಯಿತಿಗಳನ್ನು ಮತ್ತಷ್ಟು ವರ್ಷ ಕಾಲಕ್ಕೆ ವಿಸ್ತರಿಸಲಾಗಿದೆ.
ಟಿಡಿಎಸ್ ಕಡಿತ
ಮನೆಯನ್ನು ಬಾಡಿಗೆಗೆ ನೀಡಿದ್ದರೆ ಅದಕ್ಕೆ ಬಾಡಿಗೆ ಪಾವತಿಸುವವರು ಟಿಡಿಎಸ್ ಕಡಿತ ಮಾಡಿಕೊಳ್ಳುವ ವಾರ್ಷಿಕ ಮಿತಿಯನ್ನು 1.8 ಲಕ್ಷ ರೂ.ಗಳಿಂದ 2.4 ಲಕ್ಷ ರೂ.ಗೆ ಏರಿಸಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಈ ಬದಲಾವಣೆ ಮಾಡಲಾಗಿದ್ದು, ಮನೆ ಬಾಡಿಗೆ ಪಾವತಿಸುವವರು ವರ್ಷಕ್ಕೆ 2.4 ಲಕ್ಷ ರೂ.ಗಳಿಗಿಂತ ಹೆಚ್ಚು ಪಾವತಿಸಿದರೆ ಮಾತ್ರ ಟಿಡಿಎಸ್ ಕಡಿತ ಮಾಡಿಕೊಂಡು ಮಾಲೀಕರಿಗೆ ಪಾವತಿ ಮಾಡಬೇಕು.
‘ನೋಷನಲ್ ರೆಂಟ್’ ವಿನಾಯಿತಿ
ಈಗ ಮಧ್ಯಮ ವರ್ಗದ ಜನತೆಯೂ ಕುಟುಂಬ ಸದಸ್ಯರ ಉದ್ಯೋಗ, ಮಕ್ಕಳ ಶಿಕ್ಷಣ, ಪೋಷಕರ ಪಾಲನೆ ಇತ್ಯಾದಿಗಳಿಗೆ ಎರಡು ಸ್ಥಳಗಳಲ್ಲಿ ಮನೆಗಳನ್ನು ಹೊಂದುತ್ತಿರುವುದು ಸಾಮಾನ್ಯ. ಇಂತಹ ಜನರ ಪಾಲಿಗೆ ಈ ಬಾರಿಯ ಬಜೆಟ್ ಹೊಸ ನಿರೀಕ್ಷೆ ಮೂಡಿಸಿದೆ. ಎರಡನೇ ಮನೆ ಹೊಂದಿರುವವರಿಗೆ ಅಥವಾ ಖರೀದಿಸಲು ಬಯಸುವವರಿಗೂ ಈ ಬಜೆಟ್‌ನಲ್ಲಿ ಸಿಹಿ ಸುದ್ದಿ ನೀಡಲಾಗಿದೆ. ಬಜೆಟ್ ಪ್ರಕಾರ ಎರಡನೇ ಮನೆಯ ‘ನೋಷನಲ್ ರೆಂಟ್’ ಮೇಲೆ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿನ ಮೇಲ್ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ ಜನತೆಗೆ ತೆರಿಗೆ ಉಳಿತಾಯಕ್ಕೆ ಸುಲಭವಾದಂತಾಯಿತು.
ಕ್ಯಾಪಿಟಲ್ ಗೇನ್ ಸೇವಿಂಗ್
ಈ ಮಧ್ಯೆ ಕ್ಯಾಪಿಟಲ್ ಗೇನ್ ತೆರಿಗೆ ಉಳಿಸಲು 2 ಮನೆ ಖರೀದಿಗೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54ರ ಪ್ರಕಾರ ಮನೆ ಮಾರಾಟದಿಂದ ಬರುವ ಆದಾಯಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಆ ಹಣವನ್ನು ಮತ್ತೂಂದು ಮನೆ ಕೊಳ್ಳಲು ಬಳಸಬೇಕು. ಹಳೆಯ ಮನೆ ಮಾರಾಟವಾದ 2 ವರ್ಷದೊಳಗೆ ಮತ್ತೂಂದು ಮನೆ ಖರೀದಿಸಬೇಕು ಅಥವಾ 3 ವರ್ಷದೊಳಗೆ ಹೊಸ ಮನೆ ಮಾಡಬೇಕು. ಆದರೆ, ಈಗ ಪೀಯೂಷ್ ಗೋಯಲ್ ಅವರು ಒಂದರ ಬದಲು ಮನೆ ಖರೀದಿಸುವ ಮೂಲಕ ಕ್ಯಾಪಿಟಲ್ ಗೇನ್ ಉಳಿಸಲು ಬಜೆಟ್‌ನಲ್ಲಿ ದಾರಿ ತೋರಿಸಿದ್ದಾರೆ. ಹಳೆಯ ಮನೆ ಮಾರಾಟ ಮಾಡಿದ ಒಂದು ವರ್ಷ ಮೊದಲೇ ಮತ್ತೂಂದು ಖರೀದಿಸಿದ್ದರೆ ಅಥವಾ ಮನೆ ಮಾರಾಟವಾದ ಎರಡು ವರ್ಷದೊಳಗೆ ಮತ್ತೂಂದು ಮನೆ ಕೊಂಡುಕೊಂಡರೆ ಅಥವಾ 3 ವರ್ಷದೊಳಗೆ ಹೊಸ ಮನೆ ಕಟ್ಟಿಸಿದರೆ ಕ್ಯಾಪಿಟಲ್ ಗೇನ್ ಉಳಿತಾಯವಾಗಲಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ಹೊಸ ಮನೆ ಖರೀದಿಸಲು ಅಥವಾ ಕಟ್ಟಲು ಸಾಧ್ಯವಾಗದೇ ಇದ್ದರೆ ತೆರಿಗೆ ರಿಟರ್ನ್ ಸಲ್ಲಿಕೆ ಅಥವಾ ಮನೆ ಮಾರಾಟವಾದ ಒಂದು ವರ್ಷದೊಳಗೆ ಸರಕಾರಿ ಸ್ವಾಮ್ಯದ ಬ್ಯಾಂಕ್‌ನಲ್ಲಿ ಮಾರಾಟದಿಂದ ಬಂದ ಹಣವನ್ನು ಠೇವಣಿ ಇಡಬೇಕು.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.