ಕಂಬಳಿ ಹುಳುವಿನ ಕಥೆ ನಮಗೂ ಮಾದರಿ
Team Udayavani, Aug 26, 2019, 5:00 AM IST
ಜೀವನ ಎನ್ನುವುದು ನಮ್ಮನ್ನು ನಾವು ಸಾಬೀತು ಪಡಿಸಿಕೊಳ್ಳಲಿರುವ ಉತ್ತಮ ಅವಕಾಶ. ಇಲ್ಲಿ ಸ್ವಲ್ಪ ಕಷ್ಟ ಪಟ್ಟರೆ, ಚಿಕ್ಕ-ಪುಟ್ಟ ತ್ಯಾಗ ಮಾಡಿಕೊಂಡರೆ ಅಂದುಕೊಂಡ ಗುರಿ ಸಾಧಿಸಬಹುದು. ಇನ್ನೊಬ್ಬರಿಗೆ ಮಾದರಿ ಯಾಗಬಹುದು.
ಚೇತೋಹಾರಿ ಕಂಬಳಿ ಹುಳದ ಕಥೆ
ಕಂಬಳಿ ಹುಳ ಚಿಟ್ಟೆಯಾಗಿ ಬದಲಾಗುತ್ತದೆ ಎನ್ನಲಾಗುವ ಕಥೆ ಎಂತಹವರಿಗೂ ಸ್ಫೂರ್ತಿಯಾಗಬಲ್ಲದು. ಪರಿಶ್ರಮದಿಂದ ಯಾವುದೇ ಗುರಿ ಈಡೇರಬಹುದು ಎಂಬುದನ್ನು ಈ ಕಥೆ ಸಾರಿ ಹೇಳುತ್ತದೆ. ಕಂಬಳಿ ಹುಳ ಯಾರಿಗೆ ಗೊತ್ತಿಲ್ಲ ಹೇಳಿ. ಮೈಯೆಲ್ಲ ರೋಮ ಹೊಂದಿರುವ ಅದನ್ನು ನೋಡಿ ಅಸಹ್ಯಪಟ್ಟುಕೊಳ್ಳುವವರೇ ಅಧಿಕ. ನಿಜ ಹೇಳಬೇಕೆಂದರೆ ಪ್ರಕೃತಿಯಲ್ಲಿ ಅಸುಂದರ ಎಂಬ ಕಲ್ಪನೆಯೇ ಇಲ್ಲ. ಆದರೆ ನಮ್ಮ ದೃಷ್ಟಿಕೋನ ಸರಿಯಾಗಿಲ್ಲದಿರುವುದರಿಂದ ಕಂಬಳಿ ಹುಳವನ್ನು ಅಸಹ್ಯ ಎನ್ನುತ್ತೇವೆ. ಅದಿರಲಿ. ಎಲ್ಲರಂತೆ ಕಂಬಳಿ ಹುಳಕ್ಕೂ ಅದರದ್ದೇ ಆದ ಕನಸುಗಳಿರುತ್ತವೆ. ಬಣ್ಣ ಬಣ್ಣದ ರೆಕ್ಕೆ ಕಟ್ಟಿಕೊಂಡು ಸ್ವತ್ಛಂದವಾಗಿ ಹಾರಾಡುತ್ತಿರಬೇಕು ಎಂದು ಕನಸು ಕಾಣುವ ಅದು ಎಷ್ಟೇ ಕಷ್ಟ ಪಟ್ಟಾದರೂ ನನಸು ಮಾಡಲು ಸಿದ್ಧವಾಗುತ್ತದೆ.
ಸಾಧನೆಯ ಮೊದಲ ಭಾಗವಾಗಿ ಕಂಬಳಿ ಹುಳ ಸಿಕ್ಕ ಸಿಕ್ಕ ಎಲೆಗಳನ್ನೆಲ್ಲಿ ತಿನ್ನತೊಡಗುತ್ತದೆ. ಹೊಟ್ಟೆ ತುಂಬಿದರೂ ಹಠಕ್ಕೆ ಬಿದ್ದು ಎಲೆಗಳನ್ನು ಸೇವಿಸುತ್ತದೆ. ಕೊನೆಗೆ ಮೈಯೆಲ್ಲಾ ದಪ್ಪವಾಗುತ್ತದೆ. ಮುಂದಿನ ಹಾದಿಗೆ ಬೇಕಾದ ಪೋಷಣೆಯನ್ನು ಈ ಮೂಲಕ ಸಂಗ್ರಹಿಸುತ್ತದೆ. ಇನ್ನು ಮುಂದೆ ಎರಡನೇ ಮೆಟ್ಟಿಲು ಹತ್ತಬೇಕು. ಅದಕ್ಕಾಗಿ ಎಲ್ಲವನ್ನೂ ತೊರೆದು ಏಕಾಂತಕ್ಕೆ ತೆರಳುತ್ತದೆ. ಸುತ್ತ ಪೊರೆಯೊಂದನ್ನು ನಿರ್ಮಿಸಿಕೊಂಡು ಪೊರೆ ಹುಳವಾಗಿ ಬದಲಾಗುತ್ತದೆ. ಮೂರನೇ ಹಂತವನ್ನು ತಲುಪುವ ಕಂಬಳಿ ಹುಳ ಈಗ ತನ್ನ ಆಕಾರವನ್ನೆಲ್ಲಾ ಕರಗಿಸುತ್ತದೆ. ಅದಕ್ಕೆ ಜೀವ ಇದೆ ಎಂಬುದನ್ನೂ ನಂಬಲಾಗದ ಸ್ಥಿತಿಗೆ ಬಂದು ಬಿಡುತ್ತದೆ.
ಚಿಟ್ಟೆಯಾಗುವ ಪ್ರಕ್ರಿಯೆಯ ಪ್ರಮುಖ ಹಂತ. ಒಂದೊಂದೇ ಅಂಗಗಳು ಬೆಳೆಯಲಾರಂಭಿಸುತ್ತವೆ. ಈ ಹಂತದಲ್ಲಿ ಕಂಬಳಿ ಹುಳ ತುಂಬಾ ನೋವು ಅನುಭವಿಸಬೇಕಾಗುತ್ತದೆ. ಜತೆಗೆ ಹೊರ ಜಗತ್ತಿನೊಂದಿಗಿನ ಸಂಪರ್ಕವೇ ಕಡಿದು ಹೋಗಿರುತ್ತದೆ. ಆಹಾರ ಇಲ್ಲ, ಕೇವಲ ನೋವು ಮಾತ್ರ. ಇದನ್ನು ಹಲ್ಲು ಕಚ್ಚಿ ನುಂಗಿಕೊಂಡರೆ ಸುಂದರ ಚಿಟ್ಟೆಯಾಗಿ ರೂಪಾಂತರವಾಗಿತ್ತದೆ. ಹೆಮ್ಮೆಯಿಂದ ತಲೆ ಎತ್ತ ಹಾರತೊಡಗಿದರೆ ಅಸಹ್ಯ ಎಂದು ಹೀಗಳೆದವರು ಚೆಲುವಿಗೆ ಮನಸೋತು ಮೂಗಿನ ಮೇಲೆ ಬೆರಳಿಡುತ್ತಾರೆ.
ನಮಗೂ ಆದರ್ಶವಾಗಲಿ
ಇಲ್ಲಿ ನಾವು ಕಲಿಯಬೇಕಾದ ಪಾಠ ಬಹಳಷ್ಟಿದೆ. ಇಂದಿಗೆ ಅಂದುಕೊಂಡು ನಾಳೆ ಗುರಿ ಮುಟ್ಟುತ್ತೇವೆ ಎನ್ನಲು ಸಾಧ್ಯವಿಲ್ಲ. ಅದಕ್ಕೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಜತೆಗೆ ಕಲ್ಲು-ಮುಳ್ಳಿನ ಹಾದಿ ಕ್ರಮಿಸಬೇಕಾಗುತ್ತದೆ. ಇದಕ್ಕೆಲ್ಲ ಸಿದ್ಧರಿದ್ದರಷ್ಟೇ ನಾವು ಇತಿಹಾಸವಾಗುತ್ತೇವೆ. ವಿದ್ಯಾರ್ಥಿ ಜೀವನದಲ್ಲಿ ಬರೆ ಮೋಜು-ಮಸ್ತಿ ಅಂದುಕೊಂಡರೆ ಭವಿಷ್ಯದಲ್ಲಿ ಕೊರಗಬೇಕಾಗುತ್ತದೆ. ಮನೋರಂಜನೆಯಷ್ಟೇ ಮಹತ್ವ ಕಲಿಕೆಗೂ ನೀಡಿದರೆ, ಪರಿಶ್ರಮಪಟ್ಟರೆ,ಗೆಲವು ಒಲಿಯುವುದರಲ್ಲಿ ಸಂದೇಹವಿಲ್ಲ.
- ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.