ಅವಸರಕ್ಕಿಂತ ವಿಳಂಬ ಹೆಚ್ಚು ಅಪಾಯ
Team Udayavani, Jul 9, 2018, 3:53 PM IST
ಬದುಕಿನಲ್ಲಿ ಯಾವುದೇ ಕಾರ್ಯವಿರಲಿ. ಅದನ್ನು ಯೋಚಿಸಿದ ತತ್‌ಕ್ಷಣ ಜಾರಿಗೆ ತರುವುದು ಒಳ್ಳೆಯದಲ್ಲ. ಹಾಗಂತ ಹೆಚ್ಚು ನಿಧಾನವಾಗಿ ಮಾಡುವುದು ಸರಿಯಲ್ಲ. ಯೋಚನೆಯ ಬಗ್ಗೆ ಯೋಜನೆ ಮಾಡಿ ಸಮಯಕ್ಕನುಗುಣವಾಗಿ ಕಾರ್ಯಗಳನ್ನು ಮಾಡುವುದರಲ್ಲಿದೆ ಜಾಣ್ಮೆ.
ವಿವೇಕವಿರುವುದು ಮಾನವನಿಗೆ ಮಾತ್ರ. ಸಾರಾಸಾರ ವಿಚಾರ ಮಾಡಿ, ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸಿ, ಯುಕ್ತವಾದದ್ದೇ ಮಾಡಿ, ಯುಕ್ತವಾಗಿಲ್ಲದ್ದನ್ನು ಬಿಡುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ. ಇದನ್ನೇ ಸದ್ವಿವೇಕ ಎನ್ನಲಾಗುತ್ತದೆ. ಬದುಕಿನಲ್ಲಿ ಏನೇ ಮಡುವುದಿದ್ದರೂ ಹತ್ತು ಬಾರಿ ಯೋಚಿಸಿ ಮಾಡಬೇಕು. ಒಂದು ಹೆಜ್ಜೆ ಇಡುವಾಗಲೂ ಹಿಂದೆ- ಮುಂದೆ ಎಲ್ಲ ಕಡೆ ನೋಡಿ, ಅನಂತರವೇ ಹೆಜ್ಜೆಯಿಡಬೇಕು. ಒಂದಕ್ಷರ ಮಾತನಾಡುವಾಗಲೂ ಬಹಳ ತೂಗಿ- ಅಳೆದು ಮಾತನಾಡಬೇಕು ಎನ್ನುತ್ತಾರೆ ಹಿರಿಯರು. ಹಾಗಂತ ಕೇವಲ ಯೋಚನೆ ಮಾಡುತ್ತಾ ಕಾಲಹರಣ ಮಾಡಬೇಕೆಂದಲ್ಲ. ಸುಮ್ಮನೆ ವಿಳಂಬ ಮಾಡುವುದರಿಂದ ಹಲವು ಬಾರಿ ಆಗಬಹುದಾಗಿದ್ದ ಕಾರ್ಯವೂ ಆಗದೇ ಹೋಗುತ್ತದೆ.
ಇಲ್ಲಿ ಒಂದು ವಿಷಯ ನೆನಪಿಟ್ಟುಕೊಳ್ಳಬೇಕಾಗುತ್ತದೆ. ಅತಿಯಾದ ಅವಸರವು ಅವಸಾನಕ್ಕೆ ನೇರ ದಾರಿಯಾಗುವುದಂತೂ ಖಚಿತವೇ. ಆದರೆ, ಅಷ್ಟೇ ಅಪಾಯಕಾರಿಯಾಗಿರುವುದು ನಿಧಾನಿಸುವುದಾಗಿದೆ. ಹೀಗಾಗಿ ಬದುಕಿನಲ್ಲಿ ಯಾವುದು ಯಾವ ಕಾಲದಲ್ಲಿ ನಡೆಯಬೇಕು. ಅದನ್ನು ಆಗಲೇ ಮಾಡಿ ಮುಗಿಸಬೇಕು. ನಾಳೆ ಏನಾಗುತ್ತದೆ ಅಥವಾ ನಾವು ನಾಳೆ ಇರುತ್ತೇವೋ, ಇಲ್ಲವೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಅದಕ್ಕಾಗಿ ಮಾಡಬೇಕಾದ ಒಳ್ಳೆಯ ಕಾರ್ಯಗಳನ್ನು ಕೂಡಲೇ ಮಾಡಿ ಮುಗಿಸಬೇಕು.
ನಾವು ಅಮರರೆಂದು ಭಾವಿಸಿ ವಿದ್ಯೆ, ಸಂಪತ್ತನ್ನು ಗಳಿಸಬೇಕು, ಮೃತ್ಯು ನಮ್ಮ ಕೂದಲು ಹಿಡಿದೆಳೆಯುತ್ತಿದೆ ಎಂದು ತಿಳಿದು ಧರ್ಮವನ್ನು ಆಚರಿಸಬೇಕು. ಕೆಟ್ಟ ಯೋಚನೆ ಬಂದಾಗಲೆಲ್ಲ ಒಳ್ಳೆಯ ಕಾರ್ಯಗಳನ್ನು ಮಾಡಿ. ಇದುವೇ ಮನೋದೈಹಿಕ ಸ್ವಾಸ್ಥ್ಯದ ಗುಟ್ಟು.
ಪ್ರೊ| ಬಿ.ವಿ. ಮಾರ್ಕಾಂಡೇಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.