ಸ್ನೇಹವೆಂಬ ಮಧುರ ಬಾಂಧವ್ಯ
Team Udayavani, May 20, 2019, 6:00 AM IST
ವಿಸ್ಮಯದ ಜಗತ್ತಿನಲ್ಲಿ ದೇವರು ಮನುಷ್ಯನಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವ ಅನೇಕ ಅಚ್ಚರಿಗಳನ್ನು ಸೃಷ್ಟಿಸಿಟ್ಟಿದ್ದಾನೆ. ಬೆಳಗಾಗುವುದು ಹೇಗೆ, ಮರಗಿಡಗಳಿಗೆ ಹಸುರು ಹೇಗೆ ಬಂತು, ಹಕ್ಕಿಗಳು ಹಾರಾಡುವುದರ ಹಿಂದಿರುವ ರಹಸ್ಯ, ಇಂತಹ ನೂರಾರು ಪ್ರಾಕೃತಿಕ ವೈಚಿತ್ರ್ಯಗಳ ಜತೆಗೆ ಮಾನವ ನಿರ್ಮಿತ ಅನೇಕ ವಿಷಯಗಳು ಇಲ್ಲಿ ಕುತೂಹಲದ ಮೂಲವೇ ಹೌದು. ಮನುಷ್ಯ ಎಷ್ಟೇ ಮುಂದುವರಿದರೂ ಇವೆಲ್ಲದರ ಹಿಂದೆ ಯಾವುದೋ ಒಂದು ಅತಿಮಾನುಷವಾದ ಶಕ್ತಿಯ ಕೈವಾಡ ಇರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಇಂತಹ ಅನೇಕ ಆಶ್ಚರ್ಯಗಳಲ್ಲಿ ಮಾನವ ಸಂಬಂಧವೂ ಒಂದು. ಕೆಲವು ರಕ್ತ ಸಂಬಂಧಗಳಾದರೆ ಇನ್ನೂ ಕೆಲವು ಅದೆಲ್ಲವನ್ನೂ ಮೀರಿದ ಸ್ನೇಹ ಸಂಬಂಧ.
ರಕ್ತಗತವಾಗಿ ಕೆಲವು ವ್ಯಕ್ತಿಗಳು ನಮ್ಮೊಂದಿಗೆ ಬಂಧುರದ ಹಂದರವನ್ನು ಹೆಣೆಯುವ ಕೆಲಸವನ್ನು ದೇವರು ಮಾಡಿದರೆ, ಇನ್ನು ಸ್ನೇಹ ಸಂಬಂಧಗಳನ್ನು ಪೋಣಿಸುವಲ್ಲಿ ಸಹಾಯ ಮಾಡುವುದು ನಾವು ಇತರರ ಜತೆಗೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿ. ಅದರ ಜತೆಗೆ ನಾವು ಇತರರ ಜತೆಗೆ ಎಷ್ಟರ ಮಟ್ಟಿಗೆ ಒಗ್ಗಿಕೊಳ್ಳುತ್ತೇವೆ ಎನ್ನುವುದನ್ನು ಅವಲಂಬಿಸಿಯೂ, ಹಿತ- ವಿಹಿತಗಳ ಆಧಾರದ ಮೇಲೆ ನಮ್ಮ ಬಾಂಧವ್ಯದ ಬಳ್ಳಿ ಎಷ್ಟು ಎತ್ತರಕ್ಕೆ ಹಬ್ಬುತ್ತದೆ ಎಂಬುದು ನಿರ್ಧರಿತವಾಗುತ್ತದೆ.
ಉಳಿಸಿಕೊಳ್ಳುವ ಬಗೆ?
ಹೃದಯಗಳ ಬೆಸುಗೆ ಜೇನಿನ ಹಾಗೆ. ಕೊಂಚ ತಿಂದರೆ ರುಚಿ, ಸವಿಯಾಗಿದೆ ಎಂದು ಮಿತಿ ಮೀರಿ ತಿಂದರೆ ಗಂಟಲಿಗೆ ಕಿರಿಕಿರಿ. ಇಲ್ಲಿ ಎಲ್ಲರ ಮನಸ್ಸು ಯೋಚನೆಗಳು ಒಂದೇ ರೀತಿಯಾಗಿರುತ್ತವೆ ಎನ್ನುವ ವಾದ ಶುದ್ಧ ಸುಳ್ಳು. ಅವರವರು ವಾಸ್ತವವನ್ನು ಅರ್ಥ ಮಾಡಿಕೊಂಡಂತೆ ಅವರವರ ಜೀವನ, ಭಾವನೆಗಳು ರೂಪುಗೊಳ್ಳುತ್ತಾ ಹೋಗುತ್ತದೆ. ಇದನ್ನು ತಿಳಿದುಕೊಂಡು ಇನ್ನೊಬ್ಬರ ಇಷ್ಟ- ಕಷ್ಟಗಳಿಗೂ ಬೆಲೆ ನೀಡಿ, ಅವುಗಳನ್ನು ಒಪ್ಪಿಕೊಂಡು ಸಾಗಿದೆವೆಂದಾದಲ್ಲಿ ಸಂಬಂಧಗಳ ಹೂರಣದ ಸವಿ ನಮ್ಮ ಜೋಳಿಗೆಯೊಳಗೆ ಬಿತ್ತೆಂದೇ ಅರ್ಥ. ಮತ್ತಷ್ಟು ಮನಸ್ಸುಗಳು ನಮ್ಮ ಮನಸ್ಸಿನ ಜತೆಗೆ ಮಿಳಿತವಾಗುವುದು ಇದರಿಂದ ಸಾಧ್ಯವಾಗುತ್ತದೆ.
ಕಷ್ಟವೋ ನಷ್ಟವೋ ಒಟ್ಟಾರೆ ಹೇಳಬೇಕೆಂದರೆ ಒಂದಷ್ಟು ಜನರು ನಮ್ಮೊಂದಿಗಿದ್ದಾರೆ ಎನ್ನುವಾಗ ನಮ್ಮೊಳಗೆ ಸಂಚಲನವಾಗುವ ಶಕ್ತಿ, ಆತ್ಮಸ್ಥೈರ್ಯವಿದೆಯಲ್ಲ, ಅದನ್ನು ವರ್ಣಿಸಲು ಪದಗಳಿಲ್ಲ. ಏಕಾಂಗಿಯಾಗಿ ಯುದ್ಧವನ್ನೇ ಗೆಲ್ಲಬಲ್ಲೆ ಎಂದು ಹೇಳುವ ವೀರರಿಗೂ ಮನದ ಮೂಲೆಯಲ್ಲೆಲ್ಲೋ ನನಗೂ ಸ್ನೇಹಿತರಿದ್ದಿದ್ದರೆ ಎಂಬ ಭಾವನೆ ಬಂದು ಹೋಗದಿರಲು ಸಾಧ್ಯವೇ ಇಲ್ಲ. ಅಂತಹ ಶಕ್ತಿಯೇ ಈ ಸುಮಧುರ ಬಾಂಧವ್ಯ.
– ಭುವನ ಬಾಬು, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.