ಕಷ್ಟವೆಂಬ ಮಳೆಗೆ ಆತ್ಮಬಲವೇ ಕೊಡೆ…
Team Udayavani, Jun 17, 2019, 6:00 AM IST
ಬಿರುಸಿನ ಗಾಳಿ-ಮಳೆಗೆ ಸಿಕ್ಕ ಪಾದಚಾರಿಯಂತೆ ಬದುಕು. ಕೊಡೆ ಹಿಡಿದು ಸಾಗುವಾಗ ಒಮ್ಮೆ ಹಿಂಬದಿಯಿಂದ, ಮತ್ತೂಮ್ಮೆ ಎಡದಿಂದ, ಬಲದಿಂದ, ಮುಂಬದಿಯಿಂದ-ಹೀಗೆ ಕ್ಷಣಕ್ಕೊಮ್ಮೆ ದಿಕ್ಕು ಬದಲಿಸಿ ಮಳೆ ದಾಳಿ ಇಟ್ಟಿತೆಂದರೆ ಗಮ್ಯ ತಲುಪುವ ವೇಳೆಗೆ ನಾವು ಹೈರಾಣಾಗಿರುತ್ತೇವೆ. ಬದುಕಿನಲ್ಲಿ ಕಷ್ಟಗಳೂ ಹೀಗೆಯೇ. ಒಂದರಿಂದ ಸಾವರಿಸಿಕೊಳ್ಳುವಷ್ಟರಲ್ಲೇ ಇನ್ನೊಂದು ಸಿದ್ಧವಾಗಿರುತ್ತದೆ.
ಹಾಗೆಂದು ಕಷ್ಟವೆಂಬ ಮಳೆಯಿಂದ ದೂರ ಉಳಿಯುವುದೂ ಕಷ್ಟಸಾಧ್ಯ. ಮಳೆಯ ಬಿರುಸು ಕಡಿಮೆಯಾಗುವವರೆಗೆ ಅಲ್ಲೆ ಎಲ್ಲೊ ಒಂದು ಕಡೆ ಆಶ್ರಯ ಪಡೆಯಬಹುದಾದರೂ ಅಲ್ಲಿ ನಮ್ಮ ಸಮಯ ವ್ಯರ್ಥವಾಗುತ್ತದೆ. ಬದುಕಿನಲ್ಲಿ ಸಮಯ ಅತ್ಯಮೂಲ್ಯವಾದ್ದರಿಂದ ಒಂದನ್ನು ಪಡೆಯಬೇಕಾದರೆ ಒಂದನ್ನು ಕಳೆದುಕೊಳ್ಳಬೇಕು ಎಂಬ ಮಾತು ಇಲ್ಲಿ ಜ್ಞಾಪಕಕ್ಕೆ ಬರುತ್ತದೆ. ವ್ಯತಿರಿಕ್ತ ಸನ್ನಿವೇಶದಲ್ಲಿ ಒಂದೊಮ್ಮೆ ಆಶ್ರಯ ಸಿಗದೆಯೂ ಇರಬಹುದು. ಪ್ರವಾಹವೇ ಎದುರಾಗಬಹುದು. ಆಗ ನಮ್ಮ ಜತೆಗಿರುವುದು ಆತ್ಮಬಲವಷ್ಟೆ.
ಕಷ್ಟಗಳಿಗೆ ಕಲ್ಲಾಗುವುದೆಂದರೆ ದೃಢವಾಗಿರುವುದು ಎಂದರ್ಥ. ಕಲ್ಲಿಗಿರುವ ಇನ್ನೊಂದು ಗುಣ ತಾಟಸ್ಥ್ಯ. ಬದುಕು ಎಂದಿಗೂ ಚಲನಶೀಲ.
ತಟಸ್ಥವಾಗಿದ್ದರೆ ಬದುಕಿನ ಓಟದಲ್ಲಿ ನಾವು ಹಿಂದೆ ಬೀಳುತ್ತೇವೆ. ಕಷ್ಟಗಳು ಎದುರಾದಾಗ ದೃಢವಾಗಿರಬೇಕು. ಇದ್ದು ಜೈಸಬೇಕು. ಮಳೆಗೆ ಕರಗದೆ, ಕಷ್ಟಕ್ಕೆ ಕೊರಗದೆ, ಕಲ್ಲಿನ ದೃಢ ಗುಣ, ನೀರಿನ ಚಲನಶೀಲ ಗುಣವನ್ನು ಮೈಗೂಡಿಸಿಕೊಂಡು ಬದುಕನ್ನು ಕಟ್ಟಬೇಕು.
ಬದುಕಿನಲ್ಲಿ ಧನಾತ್ಮಕತೆ ಬಹಳ ಮುಖ್ಯ. ಸಾಧನೆಯ ಬೆನ್ನೇರಿ ಹೊರಟವರು ವಾಮಮಾರ್ಗ ತುಳಿಯುವುದು ಸಲ್ಲ. “ಶಾರ್ಟ್‌ಕಟ್’ ಆಧುನಿಕ ಜಗತ್ತಿನ ಶೈಲಿಯಾದರೂ, ಶೀಘ್ರ ಕಾರ್ಯಸಿದ್ಧಿ ಆಗುವುದಾದರೂ ಎಲ್ಲ ವಿಚಾರಗಳಿಗೂ ಅದನ್ನು ಅನ್ವಯಿಸಬಾರದು. ಕಲಿಕೆ, ಗಳಿಕೆಯಲ್ಲಿ ಶಾರ್ಟ್‌ಕಟ್ ಅಪಾಯಕಾರಿ. ಮುಖ್ಯವೆಂದರೆ ಬದುಕಿನಲ್ಲಿ ಈ ಎರಡೂ ಅಂಶಗಳು ಬಹುಮುಖ್ಯವಾದುವು.
ಜೀವನ ಎಂಬುದು ನಿರಂತರ ಪ್ರಕ್ರಿಯೆ. ಅದೊಂದು ಕಲಿಕೆ ಎಂಬುದು ಜ್ಞಾನಿಗಳ ಅಭಿಪ್ರಾಯ. ಈ ಬದುಕೆಂಬ ಕಲಿಕೆಯ ಒಳಗೂ ಕಲಿಯುವಿಕೆಗಳಿವೆ. ಇಲ್ಲಿ ಶಾರ್ಟ್‌ಕಟ್ ಸಲ್ಲದು. ಉದಾಹರಣೆಗೆ ವಿದ್ಯಾಭ್ಯಾಸ ಎಂದುಕೊಂಡರೆ, ವಿದ್ಯೆಯನ್ನು ಪೂರ್ಣ ರೀತಿಯಲ್ಲಿ ಕಲಿಯುವುದು ಉತ್ತಮ. ಪರಿಣತಿ ಹೆಚ್ಚು. ಕೌಶಲವೂ ಒದಗಿ ಬರುತ್ತದೆ. ಹಾಗೆಯೇ ಗಳಿಕೆ ಕೂಡ. ಅಕ್ರಮ ಸಂಪಾದನೆ, ಮೋಸದ ದುಡ್ಡು ನೈಜ ಸಂಪಾದನೆಯಾಗದು.
ಧನಾತ್ಮಕತೆಯಿಂದ ದೇವರ ಪರೀಕ್ಷೆ ಗೆಲ್ಲೋಣ
ಹಾಗೆಯೇ ನೇರ ದಾರಿಯಲ್ಲಿ ನಡೆಯುವುದಕ್ಕೆ ಸಾಕಷ್ಟು ತಾಳ್ಮೆ ಇರಬೇಕು. “ತಾಳುವಿಕೆಗಿಂತ ಅನ್ಯ ತಪವಿಲ್ಲ’ ಎಂದವರು ಹಿರಿಯರು. ತಾಳ್ಮೆ ತಪಸ್ಸಿದ್ದಂತೆ. ತಪಸ್ವಿಗೆ ದೇವರ ಸಾಕ್ಷಾತ್ಕಾರವಾಗುವಂತೆ ಸಾಧಕನಿಗೆ ಯಶಸ್ಸು ನಿಶ್ಚಿತ. ನೇರ ದಾರಿಯಲ್ಲಿ ನಡೆಯುವಾಗ ಹಲವು ಪರೀಕ್ಷೆಗಳು ಎದುರಾಗುತ್ತವೆ.
ಸಾಧಕನನ್ನು ಪರೀಕ್ಷಿಸುವುದು ದೇವರ ರೂಢಿಯಷ್ಟೆ? ನೇರವಾದ ಮರಗಳು ಮೊದಲು ಕತ್ತರಿಸಲ್ಪಡುತ್ತವೆ. ನೇರ ನಡೆ-ನುಡಿ, ವ್ಯಕ್ತಿತ್ವದ ಜನರು ಮೊದಲು ಹಣಿಯಲ್ಪಡುತ್ತಾರೆ ಎಂಬುದು ಕೌಟಿಲ್ಯನ ಹಿತವಚನ. ಹಾಗೆಂದು ಅಡ್ಡದಾರಿ ಹಿಡಿದರೆ ನಮ್ಮತನ ಬಿಟ್ಟಂತೆ. ಹಾಗಾಗಿಯೇ ಬದುಕು ಕತ್ತಿಯ ಅಲಗಿನ ಮೇಲಣ ನಡಿಗೆಯಂತೆ ಕೆಲವೊಮ್ಮೆ ಭಾಸವಾಗುವುದೂ ಇದೆ. ಆದರೂ ಕಷ್ಟ-ಸುಖಗಳ ಮಿಶ್ರಣವಾದ ಬದುಕನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡುತ್ತ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತ ದೇವರ ಪರೀಕ್ಷೆ ಗೆಲ್ಲುವುದು ನಮ್ಮ ಮುಂದಿರುವ ಮಾರ್ಗ.
- ಕುದ್ಯಾಡಿ ಸಂದೇಶ್ ಸಾಲ್ಯಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.