ಕಾರ್ಪೊರೆಟ್ ತೆರಿಗೆ ಇಳಿಕೆ ಲಾಭವೋ ನಷ್ಟವೋ?
Team Udayavani, Nov 4, 2019, 5:00 AM IST
ಸೆಪ್ಟಂಬರ್ 20ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಾರ್ಪೊರೆಟ್ ತೆರಿಗೆಯನ್ನು ಶೇ. 30 ರಿಂದ ಶೇ. 20ಕ್ಕೆ ಇಳಿಸಲಾಗಿದೆ ಎಂದು ಘೋಷಿಸಿದರು.
ಆ ಘೋಷಣೆಯನ್ನು ಈ ವರ್ಷದ ನಾಲ್ಕನೇ ಬಜೆಟ್ ಅಂತಾನೂ ಕರೆಯುತ್ತಾರೆ. ಯಾಕೆಂದರೆ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಈಗಾಗಲೇ ಮೂರು ಬಾರಿ ಬೇರೆ-ಬೇರೆ ರೀತಿಯಲ್ಲಿ ದೇಶದ ಆರ್ಥಿಕ ನೀತಿಯಲ್ಲಿ ತಿದ್ದುಪಡಿ ತಂದಿದ್ದಾರೆ. ಹಣವನ್ನು ಮಾರುಕಟ್ಟೆಗೆ ಪಂಪ್ ಮಾಡಿದ್ದಾರೆ. ಕಾರ್ಪೊರೆಟ್ ತೆರಿಗೆ ಕಡಿತಗೊಳಿಸಿದ್ದು ಕೂಡ ಆ ತಿದ್ದುಪಡಿಕೆಯಲ್ಲಿ ಒಂದು.
ದೇಶದ ಕಾರ್ಪೊರೆಟ್ ತೆರಿಗೆ, ಉಳಿದೆಲ್ಲ ದೇಶಗಳಿಗೆ ಹೋಲಿಸಿದರೆ ಅತೀ ಹೆಚ್ಚಾಗಿತ್ತು.ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಏರಿಕೆ ಆ ದಿನ ಹಣಕಾಸು ಸಚಿವರ ಈ ನಿರ್ಧಾರಕ್ಕೆ ಪ್ರತಿಕ್ರಿಯೆ ಹೇಗಿತ್ತು ಅಂದರೆ, ಬಾಂಬೆ ಷೇರು ಮಾರುಕಟ್ಟೆಯ ಸೂಚ್ಯಂಕ ಒಂದೇ ದಿನಕ್ಕೆ 1,922 ಪಾಯಿಂಟ್ ಗಳಷ್ಟು ಏರಿಕೆಯನ್ನು ಕಂಡಿತ್ತು.
ಹತ್ತು ವರ್ಷಗಳಲ್ಲಿ ಈ ತರಹದ ಏರಿಕೆ ಕಂಡಿದ್ದು ಇದೇ ಮೊದಲ ಬಾರಿಗೆ. 2009ರ ಮೇ 18ರಂದು ಒಂದೇ ದಿನಕ್ಕೆ ಷೇರು ಮಾರುಕಟ್ಟೆಯ ಸೂಚ್ಯಂಕ ಶೇ. 14 ಅಂದರೆ 2,110 ಪಾಯಿಂಟ್ ಹೆಚ್ಚಾಗಿದ್ದು ಇತಿಹಾಸ. ಈ ತರಹದ ಒಂದು ಪರಿಣಾಮ ಬೀರುವ ಒಂದು ನೀತಿಯ ಬಗ್ಗೆ ಜನ ಸಾಮಾನ್ಯರೂ ಕೂಡ ಅರಿಯುವುದು ಮುಖ್ಯ. ಕಾಪೋರೆಟ್ ತೆರಿಗೆಯ ಲಾಭ ನಷ್ಟಗಳು ಬಗ್ಗೆ ತಿಳಿದು ಕೊಳ್ಳುವುದು ಸದ್ಯದ ಸಂಗತಿ. ಇದರ ಮಾಹಿತಿ ಈ ಕೆಳಗಿದೆ.
ಕಾರ್ಪೊರೆಟ್ ತೆರಿಗೆ ಏನು? ಎಷ್ಟು?
ಒಂದು ಕಂಪೆನಿಯ ಒಟ್ಟೂ ಲಾಭದ ಮೇಲೆ ಏನು ತೆರಿಗೆ ಅನ್ವಯಿಸುತ್ತದೆಯೋ ಅದನ್ನು ಕಾರ್ಪೊರೆಟ್ ತೆರಿಗೆ ಎನ್ನುತ್ತಾರೆ. ಉದಾ ಹರಣೆಗೆ, ಒಂದು ಕಂಪೆನಿ ಒಂದು ಕೋಟಿ ರೂ. ಲಾಭ ಮಾಡಿದರೆ ತೆರಿಗೆ, ಮೇಲೆ¤ರಿಗೆ, ಎಜುಕೇಶನ್ ಸೆಸ್ ಎಲ್ಲ ಸೇರಿ 35.41 ಲಕ್ಷ ರೂ. ತೆರಿಗೆ ಕೊಡಬೇಕಿತ್ತು. ಈಗ ಅದನ್ನು ಹತ್ತು ಪ್ರತಿಶತ ಕಡಿಮೆ ಮಾಡಿ 25.41 ಲಕ್ಷ ರೂ. ಗೆ ಇಳಿಸಿದ್ದಾರೆ. ಇಷ್ಟು ಸರಳವಾಗಿಲ್ಲ ಲೆಕ್ಕಾಚಾರ. ಅದರಲ್ಲಿ ಹಲವು ಪದರಗಳಿವೆ. ತೆರಿಗೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ. ಪ್ರತಿ ವರ್ಷ ಕಂಪೆನಿ ಗಳಿಸುವ ಲಾಭಕ್ಕೆ ಅನುಸಾರವಾಗಿ, ದೇಶೀಯ ಹಾಗೂ ಅಥವಾ ವಿದೇಶದ ಕಂಪೆನಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಕಾರ್ಪೊರೆಟ್ ತೆರಿಗೆಯ ವಿನಾಯಿತಿಯು ನಮ್ಮ ದೇಶದ ಬೊಕ್ಕಸದ ಸುಮಾರು 1.45 ಲಕ್ಷ ಕೋಟಿ ರೂ. ಕಡಿಮೆ ಮಾಡಲಿದೆ.
ಸಾಮಾನ್ಯ ಜನಕ್ಕೆ ಏನು ಲಾಭ?
ಇಂದು ಸಾಮಾನ್ಯರು ಕೂಡ ಮ್ಯೂಚುವಲ್ ಫಂಡ್, ಎಸ್‌ಐಪಿ ಅಂತ ತಾವು ಗಳಿಸಿದ ಆದಾಯದಲ್ಲಿ ಸ್ವಲ್ಪ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುತ್ತಾರೆ. ಒಬ್ಬರು 4-5 ಸಾವಿರ, ಇನ್ನೊಬ್ಬರು 10-15 ಸಾವಿರ ಹೀಗೆ, ಅವರವರ ದೈನಂದಿನ ಬದುಕಿನ ಖರ್ಚಿನಲ್ಲಿ ಉಳಿಸಿದ ಹಣ ಅದು. ಕಳೆದ ಎರಡು ವರ್ಷಗಳಲ್ಲಿ ಇಂತಹ ಸುಮಾರು ಮೂರು ಲಕ್ಷ ಕೋಟಿ ರೂ. ಹಣ ಮಾರುಕಟ್ಟೆಯಲ್ಲಿ ಹೂಡಿಕೆಯಾಗಿದೆ. ದಿನವೂ ಷೇರು ಮಾರುಕಟ್ಟೆ ಕುಸಿಯುತ್ತಿದ್ದರೆ, ಎಕನಾಮಿ ದುರ್ಬಲವಾಗುತ್ತಿದ್ದರೆ ನಷ್ಟ ಯಾರಿಗೆ? ಸಾಮಾನ್ಯ ಜನರಿಗೆ ತಾನೇ? ಕಳೆದ ಎರಡು ವರ್ಷಗಳಲ್ಲಿ ಸಾಮಾನ್ಯ ಜನರ ಹೂಡಿಕೆ 3 ಲಕ್ಷ ಕೋಟಿ. ಇದಕ್ಕೆ ಹೋಲಿಸಿದರೆ ವಿದೇಶಿ ಬಂಡವಾಳ, ದೊಡ್ಡ ದೊಡ್ಡ ಹೂಡಿಕೆದಾರರಿಂದ ಬಂದ ಹಣ ಕೇವಲ 20,000 ಕೋಟಿ ಮಾತ್ರ. ಇಂಥ ಸಂದರ್ಭ ಹಣಕಾಸು ಸಚಿವರು ತಂದ ತೆರಿಗೆ ವಿನಾಯಿತಿ ಸಾಮಾನ್ಯರಲ್ಲಿ ವಿಶ್ವಾಸ ಹೆಚ್ಚಿಸುತ್ತದೆ, ಅವರು ಹೂಡಿದ ಹಣಕ್ಕೆ ಡಿವಿಡೆಂಡ್ ಮೂಲಕ, ಷೇರಿನ ಬೆಲೆ ಏರುವುದರ ಮೂಲಕ ಲಾಭ ಸಿಗುತ್ತದೆ.
-ವಿಕ್ರಮ್ ಜೋಶಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.