ಕಳೆದ ವರ್ಷದಂತೆಯೇ ಈ ಬಾರಿಯೂ ಕೃತಕ ನೆರೆ
Team Udayavani, Jul 21, 2019, 5:03 AM IST
ನಗರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಈ ಬಾರಿಯೂ ಮಳೆ ನೀರು ತೋಡಿನಲ್ಲಿ ಹರಿಯದೆ ರಸ್ತೆಯಲ್ಲೇ ನಿಂತು ಕೃತಕ ನೆರೆ ಸೃಷ್ಟಿಸಿತ್ತು. ಕಳೆದ ವರ್ಷ ಮೇ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮಹಾನಗರ ಪಾಲಿಕೆ ಪಾಠ ಕಲಿತಿದ್ದು, ಈ ಬಾರಿ ಯಾವುದೇ ರೀತಿಯ ನೆರೆಗಳು ಬಾರದು ಎಂದು ಸಾರ್ವಜನಿಕರು ಅಂದುಕೊಂಡಿದ್ದರು. ಆದರೆ, ಅದು ಹುಸಿಯಾಗಿದೆ.
ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅನೇಕ ಕಡೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿಯೇ ತುಂಬಿಕೊಂಡಿತ್ತು. ಇದರಿಂದಾಗಿ ವಾಹನ ಸವಾರರು, ಸಾರ್ವ ಜನಿಕರು ಪರದಾಡಿದ ಕಷ್ಟ ಅಷ್ಟಿಷ್ಟಲ್ಲ. ಎಂಪೈರ್ ಮಾಲ್ ಬಳಿಯಿಂದ ಅಳಕೆ ಕಡೆಗೆ ತೆರಳುವ ರಸ್ತೆಯಲ್ಲಿ ಈ ವರ್ಷದಂತೆ ಕಳೆದ ವರ್ಷವೂ ನೆರೆ ಸೃಷ್ಟಿಯಾಗಿತ್ತು. ಈ ಪ್ರದೇಶದಲ್ಲಿ ನೀರು ಹರಿಯಲು ಸರಿಯಾದ ತೋಡಿನ ವ್ಯವಸ್ಥೆ ಇಲ್ಲ. ಇನ್ನು ಈಗಿರುವ ತೋಡಿನಲ್ಲಿ ಸಮರ್ಪಕವಾಗಿ ಹೂಳೆತ್ತಿಲ್ಲ. ಇದೇ ಕಾರಣಕ್ಕೆ ನೀರು ಹರಿಯಲು ಸಾಧ್ಯವಾಗುತ್ತಿಲ್ಲ.
ಕಳೆದ ವರ್ಷ ಮಳೆಗೆ ಕುದ್ರೋಳಿ ಭಾಗದಲ್ಲಿ ತೀವ್ರವಾದ ಹಾನಿಯಾಗಿತ್ತು. ಆ ಭಾಗದಲ್ಲಿ ಮಳೆ ನೀರು ಹರಿಯುವ ತೋಡಿದ್ದು, ಅದು ಮಲಿನ ಗೊಂಡಿದೆ. ಅಕ್ಕ ಪಕ್ಕದ ಮನೆಯ ನೀರು ಸೇರಿದಂತೆ ಕೊಳಚೆ ನೀರು ಹೋಗುತ್ತಿದೆ. ಈ ಬಾರಿ ಸಮರ್ಪಕವಾಗಿ ಈ ತೋಡಿನ ಹೂಳೆತ್ತುವ ಕೆಲಸ ಮಾಡಲಿಲ್ಲ. ಕೇವಲ ಕಾಟಾಚಾರಕ್ಕೆ ಕುದ್ರೋಳಿ ತೋಡಿನ ಹೂಳು ತೆಗೆಯಲಾಗಿದೆ. ಸದ್ಯ ಪ್ಲಾಸ್ಟಿಕ್, ಕಸ, ಗಿಡಗಳು ತೋಡಿನಲ್ಲಿದ್ದು, ಮಳೆ ನೀರು ಸರಾಗವಾಗಿ ಹೋಗುತ್ತಿಲ್ಲ. ಇನ್ನು ಸಣ್ಣ ಮಳೆ ಬಂದರೆ ಸಾಕು ನಗರದ ಬಿಗ್‌ಬಜಾರ್ ಪಕ್ಕದಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇಲ್ಲೇ ಪಕ್ಕದಲ್ಲಿ ನೀರು ಹರಿಯಲು ಯಾವುದೇ ತೋಡುಗಳಿಲ್ಲದ್ದೇ ಈ ಸಮಸ್ಯೆಗೆ ಕಾರಣ. ನಗರದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಮಳೆ ಸುರಿಯಲು ಆರಂಭವಾಗಿಲ್ಲ. ಮಹಾನಗರ ಪಾಲಿಕೆಯು ಇನ್ನಾದರೂ ಎಚ್ಚೆತ್ತು ಸಮಸ್ಯೆಯನ್ನು ಬಗೆಹರಿಸಬೇಕಿದೆ.
-ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.