ಜ್ಞಾನ ಎಂಬುದು ಸಾಗರದಂತೆ…
Team Udayavani, Aug 20, 2018, 1:13 PM IST
ಚಿಕ್ಕ ಮಗುವಿಗೆ ಜಾಣ ಎನ್ನಿ, ಅದರ ಮುಖ ಖುಷಿಯಿಂದ ಹಿಗ್ಗುತ್ತದೆ. ಬದಲಾಗಿ, ನೀನು ಬರಿ ಕೋಣ ಎನ್ನಿ, ಅದರ ಮುಖ ಬಾಡಿ, ಕಂಗಳಲ್ಲಿ ನೀರು ತುಂಬುತ್ತದೆ. ಮಗುವಿಗೆ ಜಾಣ, ಕೋಣ ಎಂದರೇನು ಎಂದು ಸರಿಯಾಗಿ ಗೊತ್ತಿಲ್ಲದಿದ್ದರೂ ಹೊಗಳಿಕೆ, ತೆಗಳಿಕೆಯನ್ನು ಅರ್ಥೈಸಿಕೊಂಡು ತನ್ನ ಸ್ವಾಭಿಮಾನಕ್ಕೆ ಪೆಟ್ಟಾಯ್ತು ಎನ್ನುವ ರೀತಿಯಲ್ಲಿ ವರ್ತಿಸುತ್ತದೆ.
ಮನೆ ಬಾಗಿಲಿಗೆ ಬಂದ ಭಿಕ್ಷುಕನಿಗೆ ಏನು ಇಲ್ಲಪ್ಪಾ ಮುಂದೆ ಹೋಗು ಎಂದರೂ ಆತ ಗೊಣಗುತ್ತಾ ಮುಂದೆ ಹೋಗುತ್ತಾನೆ. ಅದೇ ಕೈಕಾಲು ಗಟ್ಟಿಯಿದೆ, ದುಡಿಯಲಿಕ್ಕೆ ಏನಾಗಿದೆ ಎಂದು ಹೇಳಿದರೆ ಆತನಿಗೂ ಕೋಪ ನೆತ್ತಿಗೇರಿ ನಮಗೇ ಹೊಡೆಯಲು ಬಂದಾನು. ಹೀಗೆ ಬಯ್ಯುವುದು ಅವನ ಸ್ವಾಭಿಮಾನಕ್ಕೆ ಕುಂದು ತರಬಹುದು. ಸ್ವಾಭಿಮಾನ ಮನುಷ್ಯನನ್ನು ಒಳ್ಳೆಯವನನ್ನಾಗಿಯೂ ಮಾಡುತ್ತದೆ, ಕೆಟ್ಟ ಹಾದಿಗೂ ದೂಡುತ್ತದೆ. ಕೆಲವರು ಗಳಿಸಿದ ಆಸ್ತಿ ಪಾಸ್ತಿ, ಜ್ಞಾನದಿಂದಾಗಿ ತಮಗಿಂತ ಮೇಲೆ ಯಾರೂ ಇಲ್ಲ ಎಂಬ ಮುಖವಾಡ ಹೊತ್ತು ತಿರುಗುತ್ತಿರುತ್ತಾರೆ. ಇದು ಸ್ವಾಭಿಮಾನ ಬಿಟ್ಟು ಅಹಂಕಾರದ ಹಾದಿಯನ್ನು ತೋರುತ್ತದೆ. ತಮ್ಮಲ್ಲಿರುವ ನ್ಯೂನತೆಗಳನ್ನು ಒಪ್ಪಿಕೊಂಡು ಸ್ವಾಭಿಮಾನದಿಂದ ಬದುಕುವವರೂ ಇದ್ದಾರೆ. ಇವರು ಜ್ಞಾನದ ಬಾಗಿಲುಗಳನ್ನೇ ಸದಾ ತೆರೆದಿರುತ್ತಾರೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಕಲಿಯಬೇಕು, ಸಾಧಿಸಬೇಕು ಎನ್ನುತ್ತಾ ಮುನ್ನುಗ್ಗುತ್ತಾರೆ.
ಜ್ಞಾನ ಸಾಗರದಲ್ಲಿ ಸ್ವಲ್ಪವಾದರೂ ತಾನು ಪಡೆಯುವ ಎನ್ನುವ ಭಾವ ಬೆಳೆಸಿಕೊಂಡರೆ, ತಮಗೆ ದೊರೆತುದ್ದನ್ನು ಇನ್ನೊಬ್ಬರಿಗೆ ಹಂಚುವ ಪ್ರೀತಿ ಇಟ್ಟುಕೊಂಡರೆ ಸ್ವಾಭಿಮಾನ ತನ್ನಿಂತಾನೇ ಮೊಳಕೆಯೊಡೆದು ಹೆಮ್ಮರವಾಗುತ್ತದೆ.
ಪ್ರೊ| ಬಿ.ವಿ. ಮಾರ್ಕಾಂಡೇಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.