ಮಂಗಳೂರಿನ ಕೆರೆಗಳು ಜನಾಕರ್ಷಣೆ ಸ್ವರೂಪ ಪಡೆದುಕೊಳ್ಳಲಿ
Team Udayavani, Jul 22, 2018, 3:37 PM IST
ಬೆಂಗಳೂರು ಎಂದರೆ ಅಲ್ಸೂರು ಲೇಕ್, ಹೆಬ್ಟಾಳ ಕೆರೆ, ಕೆಂಪಾಂಬುಧಿ ಕೆರೆ, ಸಾಂಕಿ ಕೆರೆ, ಲಾಲ್‌ಭಾಗ್ ಕೆರೆ, ಮಡಿವಾಳ ಕೆರೆ, ಅಗಾರ ಕೆರೆ, ಕೆಂಗೇರಿ ಕೆರೆ ಹೀಗೆ ಕೆರೆಗಳ ಹೆಸರುಗಳು ಸಾಲು ಸಾಲಾಗಿ ಉಲ್ಲೇಖೀಸಲ್ಪಡುತ್ತವೆ. ಈ ಕೆರೆಗಳು ಬೆಂಗಳೂರು ಪಾಲಿಗೆ ಅನನ್ಯತೆ ತಂದುಕೊಟ್ಟಿರುವುದರ ಜತೆಗೆ ಜನರ ಪಾಲಿಗೆ ವಾಯುವಿಹಾರ ತಾಣಗಳಾಗಿ, ವಿಹಾರಧಾಮಗಳಾಗಿ ಆಕರ್ಷಣೆ ಪಡೆದಿವೆ. ಆದೇ ರೀತಿಯಲ್ಲಿ ಮಂಗಳೂರಿನಲ್ಲೂ ಒಂದಷ್ಟು ಕೆರೆಗಳಿವೆ. ಒಂದೊಮ್ಮೆ ಮಂಗಳೂರಿನ ಅನನ್ಯತೆಯೊಂದಿಗೆ ಜನಜೀವನದ ಭಾಗವಾಗಿದ್ದ ಈ ಕೆರೆಗಳು ನಿರ್ಲಕ್ಷ್ಯಕ್ಕೊಳಗಾಗಿ ಪಾಚಿ, ಕೊಚ್ಚೆಗಳ ತಾಣವಾಗಿ ಪರಿಣಮಿಸಿವೆ. ಪ್ರಸ್ತುತ ಕೆಲವು ಕೆರೆಗಳು ಮಾತ್ರ ಉಳಿದುಕೊಂಡಿವೆ. ಈ ಕೆರೆಗಳನ್ನು ಮಂಗಳೂರಿನ ಅನನ್ಯತೆಯ ಭಾಗವಾಗಿ ಗುರುತಿಸಿಕೊಂಡು ಪುನರ್ ಜೀವನಗೊಳಿಸಿ ಜಲಸಂರಕ್ಷಣೆಯ ಜತೆಗೆ ಬೆಂಗಳೂರಿನ ಮಾದರಿಯಲ್ಲೇ ವಾಯುವಿಹಾರ ಧಾಮಗಳಾಗಿ, ಜನಾಕರ್ಷಣೆಯ ತಾಣಗಳಾಗಿ ರೂಪಿಸಬಹುದಾಗಿದೆ.
ಕೆರೆಗಳ ಊರಾಗಿತ್ತು ಮಂಗಳೂರು
ಮಂಗಳೂರು ನಗರ ಒಂದೊಮ್ಮೆ ಕೆರೆಗಳ ಊರಾಗಿತ್ತು. ಎಮ್ಮೆಕೆರೆ, ಗುಜ್ಜರಕೆರೆ, ಕಾವೂರು ಕೆರೆ, ಒಂಭತ್ತು ಕೆರೆ, ಎಕ್ಕೂರು ಕೆರೆ, ಕಣ್ಣೂರು, ಕುರ್ಕಾಲ ಕೆರೆ, ಬೈರಾಡಿ ಕೆರೆ, ಕದ್ರಿ ಕೈಬಟ್ಟಲು ಕೆರೆ, ಬಜ್ಜೋಡಿ ನೀರಿನ ಝರಿ ಕೆರೆ, ಮುಂಡಾನ ನೀರಿನ ಝರಿ ಮುಂತಾದ ಕೆರೆಗಳ ಸರಮಾಲೆಯೇ ಮಂಗಳೂರಿನ ಮಡಿಲಲ್ಲಿತ್ತು ಮತ್ತು ಕುಡಿಯುವ ನೀರಿನ ಮೂಲವಾಗಿತ್ತು. ಮಂಗಳೂರು ತಾಲೂಕಿನಲ್ಲಿ ಅತಿ ಹೆಚ್ಚು 54 ಕೆರೆಗಳಿದ್ದವು. ತುಂಬೆಯಿಂದ ನೀರು ಪೂರೈಕೆ ಆರಂಭವಾದ ಬಳಿಕ ಈ ಕೆರೆಗಳು ನಗಣ್ಯವಾದವು. ಬರೇ ನಗಣ್ಯವಾಗಿದ್ದರೆ ಪರವಾಗಿಲ್ಲ.
ತ್ಯಾಜ್ಯ ತಂದು ಹಾಕುವ ಗುಂಡಿಗಳಾದವು. ಅಭಿವೃದ್ಧಿಯ ಹೆಸರಿನಲ್ಲಿ ಕೆರೆ ಗ ಳನ್ನೇ ಅಳಿಸುವ ಕಾರ್ಯ ಆರಂಭಗೊಂಡಿತು. ಇದಕ್ಕೆ ತಾಜಾ ಉದಾಹರಣೆ ಬೋಳಾರ ಸಮೀಪದ ಎಮ್ಮೆಕೆರೆ. ಜನರಿಗೆ ಆಪತ್ಕಾಲದಲ್ಲಿ ನೀರಿನ ಮೂಲವಾಗಿದ್ದ ಕೆರೆಗಳು ಬಸ್ ನಿಲ್ದಾಣಗಳ್ಳೋ ವಾಣಿಜ್ಯ ಸಂಕೀರ್ಣಗಳ್ಳೋ ಆಟದ ಮೈದಾನಗಳ್ಳೋ ಆಗಿ ಬಿಟ್ಟಿವೆ. ಸಾರ್ವಜನಿಕ ಬಾವಿಗಳನ್ನು ಒಂದೋ ಮುಚ್ಚಲಾಗಿದೆ ಇಲ್ಲವೇ ಬಳಸದೆ ಪಾಳು ಬಿದ್ದು ತ್ಯಾಜ್ಯ ಎಸೆವ ಗುಂಡಿಗಳಾಗಿ ಪರಿವರ್ತಿವಾಗಿವೆ.
ಅಭಿವೃದ್ಧಿ ಕಾಣಲಿಲ್ಲ
ಮಂಗಳೂರಿನಲ್ಲಿ ಪ್ರಸ್ತುತ ಉಳಿದಿರುವ ಬೆರಳೆಣಿಕೆಯ ಕೆರೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ರೂಪಿತವಾಗಿ ಒಂದಷ್ಟು ಅನುದಾನ ವಿನಿಯೋಗವಾದರೂ ನಿರೀಕ್ಷಿತ ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ. ಕಾವೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಹರಡಿಕೊಂಡಿರುವ ಕಾವೂರು ಕೆರೆ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಈ ಕೆರೆ ಮೂಲತಃ 8 ಎಕ್ರೆ ಪ್ರದೇಶದಲ್ಲಿ ( 3.44 ಹೆ.) ವ್ಯಾಪಿಸಿಕೊಂಡಿತ್ತು. ಈಗ ಕೆರೆಯ ಸುಮಾರು 3 ಎಕ್ರೆ ಪ್ರದೇಶ ಒತ್ತುವರಿ ಆಗಿದೆ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ತುಂಬಿ ತುಳುಕಿ ಜಲಾಶಯದಂತೆ ಕಂಗೊಳಿಸುತ್ತಿದ್ದ ಕಾವೂರು ಕೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕೃಷಿಗೆ ನೀರಿನ ಆಶ್ರಯ ತಾಣವೂ ಆಗಿತ್ತು. ಕುಳೂರು ಮಾಗಣೆಯ 7 ಗ್ರಾಮಗಳ ಅಂತರ್ಜಲ ಮಟ್ಟವನ್ನು ಸಂರಕ್ಷಣೆ ಮಾಡುವಲ್ಲಿ ಕೆರೆ ಸಹಕಾರಿಯಾಗಿತ್ತು. ಬರಬರುತ್ತಾ ಕೆಸರು ಹೂಳು ತುಂಬಿ ಕೆರೆಯ ಸ್ವರೂಪವನ್ನು ಕಳೆದುಕೊಂಡು ಬಟಾಬಯಲು ಆಗಿದೆ. ಇದಕ್ಕೆ ಕಾಯಕಲ್ಪ ನೀಡುವ ಒಂದಷ್ಟು ಪ್ರಯತ್ನಗಳು ಆಡಳಿತ ವ್ಯವಸ್ಥೆಯ ಕಡೆಯಿಂದ ನಡೆದರೂ ಇಚ್ಛಾಶಕ್ತಿ ಕೊರತೆಯಿಂದ ನಿರೀಕ್ಷಿತ ಫಲ ನೀಡಿಲ್ಲ. ಅತ್ಯಂತ ವಿಶಾಲವಾದ ಈ ಕೆರೆಯನ್ನು ಬೆಂಗಳೂರಿನ ಮಾದರಿಯಲ್ಲೇ ಸುತ್ತಲೂ ವಾಕ್ ಟ್ರ್ಯಾಕ್ ಹಾಗೂ ವಾಯು ವಿಹಾರಕ್ಕೆ ಪೂರಕವಾಗಿ ನಿರ್ಮಾಣ ಸುಂದರವಾಗಿ ರೂಪಿಸಲು ಅವಕಾಶವಿದೆ.
ಪಡೀಲ್ ಸಮೀಪ ಮೈರಾಡಿ ಕೆರೆಗೆ ಕಾಯಕಲ್ಪ ನೀಡುವ ಕಾರ್ಯ ನಡೆದರೂ ಇದನ್ನು ಜನಾಕರ್ಷಣೆ ತಾಣವಾಗಿ ರೂಪಿಸುವಲ್ಲಿ ಯಶಸ್ಸು ಕಂಡಿಲ್ಲ. ಸಂರಕ್ಷಣೆಗೆ ಒಂದು ಶಾಶ್ವತ ಯೋಜನೆ ಇನ್ನೂ ರೂಪಿತವಾಗಿಲ್ಲ. ಒಂದಷ್ಟು ಅನುದಾನ ವಿನಿಯೋಗಿಸಿ ಬಳಿಕ ಮೌನವಹಿಸಲಾಗುತ್ತದೆ. ಮರು ವರ್ಷ ಕೆರೆ ತನ್ನ ಹಿಂದಿನ ಸ್ವರೂಪಕ್ಕೆ ಮರಳುತ್ತದೆ. ಪ್ರಸ್ತುತ ಜಪ್ಪಿನಮೊಗರು ಬಳಿ ಕಳೆದ ವರ್ಷ ಎರಡು ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಮಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಕೆಲವು ಕೆರೆ ಸಂರಕ್ಷಣಾ ಸಮಿತಿಗಳು ಶ್ರಮಿಸುತ್ತಿವೆ. ಆದರೆ ಅದಕ್ಕೆ ಪೂರಕವಾಗಿ ಅರ್ಥಿಕ ಸಂಪನ್ಮೂಲದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ, ಸರಕಾರ ಸ್ಪಂದಿಸಬೇಕಾಗಿದೆ. ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು.
5- 6 ವರ್ಷಗಳಿಂದ ಕಾಯಕಲ್ಪಕ್ಕೆ ಕಾಯುತ್ತಿದೆ
ಐತಿಹಾಸಿಕ ಗುಜ್ಜರಕೆರೆ ಮೂಲತಃ 3.80 ಎಕ್ರೆ ವಿಸ್ತೀರ್ಣವಿದೆ. ಆದರೆ ಬಹಳಷ್ಟು ಜಾಗ ಒತ್ತುವರಿಯಾಗಿದೆ. ಇದನ್ನು ಉಳಿಸಿ ಸಂರಕ್ಷಿಸಬೇಕು ಎಂಬುದಾಗಿ ಬಹಳಷ್ಟು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಇದಕ್ಕೆ ಕಾಯಕಲ್ಪ ನೀಡುವ ಕಾರ್ಯ ಕಳೆದ ಐದಾರು ವರ್ಷಗಳಿಂದ ನಡೆಯುತ್ತಿದ್ದರೂ ಇನ್ನೂ ಅದು ನಿರ್ಣಾಯಕ ಹಂತ ತಲುಪಿಲ್ಲ. ಈಗಾಗಲೇ ಕೋಟ್ಯಂತರ ರೂಪಾಯಿ ವಿನಿಯೋಗಿಸಲಾಗಿದೆ. ಆದರೂ ಇದಕ್ಕೆ ಒಂದು ಅಂತಿಮ ಸ್ವರೂಪವನ್ನು ನೀಡಲು ಸಾಧ್ಯವಾಗಿಲ್ಲ. ಇದನ್ನು ಒಂದು ವಿಹಾರಧಾಮವಾಗಿ ಆಕರ್ಷಣೀಯಗೊಳಿ
ಸಬಹುದಾಗಿದೆ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.