ಯಶಸ್ಸಿನೆಡೆಗೆ ಹೆಜ್ಜೆ ಹಾಕೋಣ
Team Udayavani, May 20, 2019, 6:00 AM IST
ಗುಲಾಬಿ ಗಿಡ ಮುಳ್ಳಿನ ಗಿಡ. ಆದರೆ, ಟೊಂಗೆಯ ತುದಿಯಲ್ಲಿರುವುದು ಅಮರ ಪ್ರೇಮದ ಸಂಕೇತವಾದ ಗುಲಾಬಿ. ಎಷ್ಟೊಂದು ಮುಳ್ಳುಗಳಿವೆಯಲ್ಲ ಎಂದು ಗೊಣಗಿದರೆ ಗುಲಾಬಿಯ ಸುವಾಸನೆ, ಪಕಳೆಗಳ ನುಣುಪು ಹಾಗೂ ಒಟ್ಟು ಹೂವಿನ ಅಂದವನ್ನು ಆಸ್ವಾದಿಸುವುದು ಹೇಗೆ ಸಾಧ್ಯ? ಹೂವಿನ ರಕ್ಷಣೆಗೆ ಮುಳ್ಳು ಬೇಕಲ್ಲವೇ? ನಮಗೆ ಮುಳ್ಳುಗಳ ನಡುವೆ ಹೂವು ಕಾಣಿಸಬೇಕೇ ಹೊರತು, ಹೂವುಗಳ ಹಿಂದಿರುವ ಮುಳ್ಳಲ್ಲ.
ಬದುಕು ನಿಲ್ಲುವಂತಹದ್ದಲ್ಲ. ಅದು ನಿರಂತರ ಚಲಿಸುತ್ತಿರುತ್ತದೆ. ವ್ಯವಸ್ಥೆ ಮತ್ತು ಆಯುಷ್ಯ ನಮ್ಮನ್ನು ಸದಾ ಮುಂದೆ ದೂಡುತ್ತಿರುತ್ತದೆ. ದಾರಿ ಮಧ್ಯೆ ದೊರಕುವಂಥವುಗಳು, ಪಡೆಯುವಂಥವುಗಳು, ಸಿಗುವಂಥವುಗಳಿಗೂ ಇದು ಅನ್ವಯವಾಗುತ್ತದೆ.
ಗುರುವೊಬ್ಬರು ತಮ್ಮ ಶಿಷ್ಯನೊಂದಿಗೆ ವಾಯು ವಿಹಾರಕ್ಕೆ ತೆರಳಿದ್ದರು. ದಾರಿ ಮಧ್ಯೆ ಉದ್ಯಾನದಲ್ಲಿ ಒಂದು ಫಲಭರಿತ ಮಾವಿನ ಹಣ್ಣಿನ ಮರ ಕಂಡಿತು. ಶಿಷ್ಯನನ್ನು ಪರೀಕ್ಷಿಸಬೇಕೆಂದು ಗುರುಗಳು, ಈ ಮರವನ್ನು ನೋಡಿದರೆ ನಿನಗೇನು ಅನ್ನಿಸುತ್ತದೆ ಎಂದು ಪ್ರಶ್ನಿಸಿದರು.
ಶಿಷ್ಯ ಹೇಳಿದ: ಗುರುಗಳೇ, ಈ ಮರ ಸಾಕಷ್ಟು ಕಷ್ಟಗಳನ್ನು ಸಹಿಸಿಕೊಂಡು ಇಷ್ಟುದ್ದ ಬೆಳೆದಿದೆ. ಈಗ ರಸಭರಿತ ಹಣ್ಣುಗಳು ಅದರ ಗೆಲ್ಲುಗಳಲ್ಲಿ ತೊನೆದಾಡುತ್ತಿವೆ. ತನ್ನ ಬಳಿಗೆ ಬರುವ ಮಕ್ಕಳು, ಮುದುಕರು, ಹಕ್ಕಿಗಳು, ಪ್ರಾಣಿಗಳಿಗೆ ಯಾವುದೇ ಭೇದವಿಲ್ಲದೆ ತಣ್ಣನೆಯ ನೆರಳು ಹಾಗೂ ಸಿಹಿಯಾದ ಹಣ್ಣುಗಳನ್ನು ಕೊಡುತ್ತದೆ. ತನಗೆ ಕಲ್ಲು ಬೀರುವವರಿಗೂ, ಕೋಲಿನಿಂದ ಹೊಡೆಯುವವರಿಗೂ ಅದು ಕೊಡುವುದು ಹಣ್ಣುಗಳನ್ನೇ. ಮಾವಿನ ಮರವೇ ನಮಗೆ ಆದರ್ಶವಾಗಬೇಕು!
ಹಣ್ಣು ತಿಂದು ಎಸೆದ ಸಿಪ್ಪೆ ದನಗಳಿಗೆ ಆಹಾರವೋ ಗೊಬ್ಬರವೋ ಆಗುತ್ತದೆ. ಗೊರಟು ಮಣ್ಣಲ್ಲಿ ಹುದುಗಿ ಮತ್ತೆ ಗಿಡವಾಗಿ, ಮರವಾಗಿ ಆಕಾಶದೆತ್ತರಕ್ಕೆ ಕೈಚಾಚಿ, ಹಣ್ಣುಗಳನ್ನು ಕೊಡುತ್ತದೆ. ಈ ಸರಣಿಗೆ ಕೊನೆಯೇ ಇಲ್ಲ. ಗಿಡವೆಂದರೆ ಹುಟ್ಟಲ್ಲ, ಗೊರಟೆಂದರೆ ಸಾವೂ ಅಲ್ಲ.
ಒಂದು ತರಗತಿಯಲ್ಲಿ ಪರೀಕ್ಷೆ ನಡೆದಿತ್ತು. ಅಧ್ಯಾಪಕರು ಎಲ್ಲ ವಿದ್ಯಾರ್ಥಿಗಳಿಗೂ ಒಂದೊಂದು ಹಾಳೆಯನ್ನು ಹಂಚಿದರು. ಇದರಲ್ಲೇ ಪ್ರಶ್ನೆ ಇದೆ. ಇದೇ ಹಾಳೆಯ ಹಿಂಬದಿಯಲ್ಲಿ ಉತ್ತರ ಬರೆಯಿರಿ ಎಂದರು. ಎಲ್ಲ ವಿದ್ಯಾರ್ಥಿಗಳೂ ಹಾಳೆಯನ್ನು ಹೊರಳಿಸಿ ನೋಡಿದರು. ಒಂದು ಕಪ್ಪು ಚುಕ್ಕೆಯ ಹೊರತು ಯಾರಿಗೂ ಬೇರೇನೂ ಕಾಣಿಸಲಿಲ್ಲ. ಇದರಲ್ಲಿ ಪ್ರಶ್ನೆಗಳೆಲ್ಲಿವೆ ಗುರುಗಳೇ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಅಧ್ಯಾಪಕರ ನಗುವೇ ಉತ್ತರವಾಗಿತ್ತು. ಇದು ಮಕ್ಕಳಲ್ಲಿ ಮತ್ತಷ್ಟು ಗೊಂದಲ ಹುಟ್ಟಿಸಿತು. ಕೊನೆಗೆ ಅಧ್ಯಾಪಕರೇ, ಈ ಪರೀಕ್ಷೆ ಸರಳವಾಗಿದೆ. ನಿಮಗೆ ಏನು ಕಾಣಿಸುತ್ತದೆಯೋ ಅದನ್ನೇ ಬರೆಯಿರಿ ಎಂದರು.
ಎಲ್ಲರೂ ಹಾಳೆಯ ಮಧ್ಯೆಯಿದ್ದ ಆ ಕಪ್ಪು ಚುಕ್ಕೆಯ ಗಾತ್ರ, ಕೋನ ಇತ್ಯಾದಿಗಳನ್ನೇ ಬರೆದರು. ಒಂದು ಚುಕ್ಕೆಯಿಂದಾಗಿ ಇಡೀ ಹಾಳೆಯೇ ಹಾಳಾಯಿತೆಂದೂ ವಿವರಿಸಿದರು. ಎಲ್ಲರಿಗೂ ಆ ಪುಟ್ಟ ಕಪ್ಪು ಚುಕ್ಕೆ ಕಾಣಿಸಿತು. ಅದರ ಹೊರತಾಗಿ ಇಡೀ ಹಾಳೆ ಖಾಲಿಯೇ ಇದೆ. ಅದರಲ್ಲೇ ನಮ್ಮ ಭವಿಷ್ಯವನ್ನು ಬರೆದುಕೊಳ್ಳಬಹುದು ಎಂಬುದು ಯಾರಿಗೂ ಹೊಳೆಯಲಿಲ್ಲ.
ಎಲ್ಲರೂ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಗುರುಗಳು ನಿರಾಶೆಯಿಂದಲೇ ಘೋಷಿಸಿದರು. ಕಪ್ಪು ಚುಕ್ಕೆಯಿಂದ ನಿಮ್ಮ ದೃಷ್ಟಿಯನ್ನು ಕಿತ್ತು, ಖಾಲಿ ಹಾಳೆಯತ್ತ ಗಮನವಿರಿಸಿ ಎಂದೂ ಕಿವಿಮಾತು ಹೇಳಿದರು.
ಆನೆಯ ಶಕ್ತಿಗೆ ಹೋಲಿಸಿದರೆ, ಅದರ ಕಾಲಿಗೆ ಕಟ್ಟಿರುವ ಸರಪಳಿ ಒಂದು ಬಂಧನವಾಗಲು ಸಾಧ್ಯವೇ? ಆದರೆ, ಕುದುರೆಗೆ ಪಟ್ಟಿ ಕಟ್ಟಿದಂತೆ ನಾವು ನಮ್ಮ ಆಲೋಚನೆಗಳಿಗೆ ಮಿತಿ ಹಾಕಿಕೊಳ್ಳುತ್ತೇವೆ. ಅನಂತರ ವಿಸ್ತಾರದ ಕುರಿತು ಗಮನ ಹರಿಸುವುದೇ ಇಲ್ಲ. ನಮ್ಮೆದುರೇ ಅವಕಾಶಗಳ ಆಕಾಶ ಕೊನೆಯಿಲ್ಲದಂತೆ ಚಾಚಿರುವಾಗ ಮುಂದಡಿ ಇಡುವುದಿಲ್ಲ ಎಂದರೆ ಹೇಗೆ? ನಮ್ಮ ದೌರ್ಬಲ್ಯದ ಪರಿಧಿಯನ್ನು ಮೀರಿದರೆ ಮಾತ್ರ ಪರಮೋಚ್ಚ ಸಾಧನೆ ಆಗುವುದು. ಪ್ರತಿಯೊಂದು ಪಯಣವೂ ಆರಂಭವಾಗುವುದು ಒಂದು ಹೆಜ್ಜೆಯಿಂದಲೇ.
ಸಣ್ಣ ಬದಲಾವಣೆಗೆ ಪ್ರತಿಯೊಬ್ಬರೂ ಮುಂದಾದರೆ ಅದೇ ದೊಡ್ಡ ಬದಲಾವಣೆಗೆ ನಾಂದಿಯಾಗುತ್ತದೆ. ಕತ್ತಲಾಯಿತೆಂದು ಕೊರಗುವುದೇಕೆ? ಸಣ್ಣ ಹಣತೆಯಿಂದ ಬದುಕನ್ನು ಬೆಳಗಿಸಿಕೊಳ್ಳೋಣ. ಹಣತೆಯಿಲ್ಲದಿದ್ದರೂ ಬಾನಂಗಳದಲ್ಲಿ ಅಸಂಖ್ಯ ನಕ್ಷತ್ರಗಳಿವೆಯಲ್ಲ? ಅವುಗಳ ಬೆಳಕೂ ಸಾಕು, ನಾವು ಸಾಗುವ ದಾರಿಗೆ.
ಬನ್ನಿ, ಯಶಸ್ಸಿನೆಡೆಗೆ ಹೆಜ್ಜೆ ಹಾಕೋಣ.
– ಅನಂತ ಹುದೆಂಗಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.