ಜೀವನ ಆದರ್ಶವಾಗಿರಲಿ..
Team Udayavani, Feb 25, 2019, 7:23 AM IST
ಬದುಕಿನಲ್ಲಿ ನಂಬಿಕೆ ಬಹುಮುಖ್ಯ. ಇನ್ನೊಬ್ಬರ ಸಂಕಷ್ಟಗಳಿಗೆ ಸ್ಪಂದಿಸಿದರಷ್ಟೇ ನಾವು ಮಾನವರಾಗಲು ಸಾಧ್ಯವಿದೆ. ಇದರಲ್ಲೇ ನೆಮ್ಮದಿಯ ಬದುಕು ಕಾಣಬಹುದು ಎಂಬುದನ್ನು ಸಾರಿದ ಪಾಂಡುರಂಗ ಶಾಸ್ತ್ರೀ ಅತ್ತಾವಳೆಯವರು ಭಗವದ್ಗೀತೆಯ ತತ್ತ್ವಗಳನ್ನು ಜನರ ಮನೆ, ಮನಸ್ಸಿಗೆ ತಲುಪಿಸುವ ಕಾರ್ಯ ಮಾಡಿದರು. ಸಂತೋಷವೆಂಬುದು ಬೇರೆಲ್ಲೂ ಇಲ್ಲ. ನಮ್ಮೊಳಗೇ ಇದೆ. ಸಂಬಂಧಗಳಿಗೆ ಗೌರವ ಕೊಟ್ಟರೆ ನಾವೂ ಸಮಾಜದಲ್ಲಿ ಗೌರವದಿಂದ ಬಾಳಲು ಸಾಧ್ಯವಿದೆ ಎಂಬುದನ್ನು ತಮ್ಮ ಬದುಕಿನ ಮೂಲಕವೇ ನಿರೂಪಿಸಿ ಎಲ್ಲರ ಬದುಕಿಗೂ ಆದರ್ಶರಾಗಿದ್ದಾರೆ.
ಯಾರು ಜೀವನದಲ್ಲಿ ಸಂಕಷ್ಟಗಳನ್ನು, ಸಮಸ್ಯೆಗಳನ್ನು ಎದುರಿಸಲು ಸದಾ ಸಿದ್ಧನಿರುತ್ತಾನೋ ಆತ ಜೀವನವನ್ನು ಪ್ರೀತಿಸುವವನಾಗಿರುತ್ತಾನೆ. ಕಷ್ಟಗಳು ಬಂದಾಗ ಬೆನ್ನು ತೋರಿಸದೇ ಎದೆಕೊಟ್ಟು ನಿಂತು ಎದುರಿಸಿದಾಗಲೇ ಜೀವನವನ್ನು ಗೆಲ್ಲಲು ಸಾಧ್ಯ. ಈ ಗುಣ ಇರುವವ ಮಾತ್ರ ಸದಾ ಸಂತಸದಿಂದರಬಲ್ಲ ಎಂಬುದು ಸಾಮಾಜಿಕ ಹೋರಾಟಗಾರ, ತತ್ತ್ವಶಾಸ್ತ್ರಜ್ಞ ಪಾಂಡುರಂಗ ಶಾಸ್ತ್ರಿ ಅತ್ತಾವಳೆ ಅವರ ಮಾತು.
ಪಾಂಡುರಂಗ ಅತ್ತಾವಳೆ ಅವರು ಅಕ್ಟೋಬರ್ 19, 1920ರಂದು ಮಹಾರಾಷ್ಟ್ರದ ರೋಹ ಎಂಬ ಹಳ್ಳಿಯಲ್ಲಿ ವೈಜ್ಞಾತ್ ಶಾಸ್ತ್ರಿ ಮತ್ತು ಪಾರ್ವತಿ ದಂಪತಿಯ ಮಗನಾಗಿ ಜನಿಸಿದರು. ಇವರು 12 ವರ್ಷದ ಪ್ರಾಯದವರಾಗಿರುವಾಗ ಇವರ ತಾತನಿಂದ ಪ್ರಭಾವಿತರಾದ ಇವರು ಭಗವದ್ಗೀತೆಯ ಅಧ್ಯಯನದ ಬಗ್ಗೆ ವಿಶೇಷ ಆಸಕ್ತಿ ತಳೆದರು. 1954ರಲ್ಲಿ 2ನೇ ವಿಶ್ವ ತಣ್ತೀಶಾಸ್ತ್ರಜ್ಞರ ಸಮ್ಮೇಳನದಲ್ಲಿ ಭಾಗವಹಿಸಿದ ಇವರು, ಭಗವದ್ಗೀತೆಯಲ್ಲಿ ವೇದದ ಆದರ್ಶಗಳು ಮತ್ತು ತಂತ್ರಗಳು ಎಂಬ ವಿಷಯವನ್ನು ಮಂಡಿಸಿದರು.
1978ರಲ್ಲಿ ಸ್ವಧ್ಯಾಯ ಪರಿವಾರ್ ಅನ್ನು ಸ್ಥಾಪಿಸಿದ ಇವರು, ಭಗವದ್ಗೀತೆಯ ಆದರ್ಶಗಳನ್ನು ಪಸರಿಸಲು ಆರಂಭಿಸಿದರು. ನಮ್ಮನ್ನು ನಾವು ಆಳವಾಗಿ ಅಧ್ಯಯನ ಮಾಡುವುದೇ ಸ್ವಾಧ್ಯಾಯ ಪರಿವಾರದ ಮುಖ್ಯ ಉದ್ದೇಶವಾಗಿತ್ತು. ಇದರ ಜತೆ ಜತೆಗೆ ಸಮಾನತೆ, ಏಕತೆ ಮತ್ತು ಆಧ್ಯಾತ್ಮಿಕತೆಯ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯಮಾಡಿದರು. ಪಾಂಡುರಂಗ ಶಾಸ್ತ್ರಿ ಅತ್ತಾವಳೆ ಅವರಿಗೆ ದಾದಾಜಿ ಎಂಬ ಮತ್ತೊಂದು ಹೆಸರಲ್ಲೂ ಸಂಬೋಧಿಸಲಾಗುತ್ತದೆ. ದಾದಾಜಿ ಎಂದರೆ ಮರಾಠಿಯಲ್ಲಿ ಹಿರಿಯಣ್ಣ ಎಂದರ್ಥ.
ಸಹೋದರತೆ ಇರಲಿ
ನಾವೆಲ್ಲರೂ ದೇವರ ಮಕ್ಕಳಾಗಿದ್ದು ಸಹೋದರತೆಯಿಂದ ಬದುಕಬೇಕು. ಬಡವ-ಶ್ರೀಮಂತ, ಅಕ್ಷರಸ್ಥ-ಅನಕ್ಷರಸ್ಥ, ಬಿಳಿಯ-ಕರಿಯ, ಪುರುಷ-ಮಹಿಳೆ ಎಂಬೆಲ್ಲ ನಮ್ಮೊಳಗಿನ ಭೇದ ಭಾವಗಳನ್ನು ಮೊದಲು ತೊಡೆದುಹಾಕಬೇಕು. ಇವೆಲ್ಲವುಗಳಿಂದ ಸಮಸ್ಯೆಗಳ ಸೃಷ್ಟಿಯೇ ಹೊರತು, ಶಾಂತಿಯುತ ಜೀವನ ಸಾಧ್ಯವಿಲ್ಲ.
ನಮ್ಮೊಳಗಿನ ಅಂಧಕಾರವನ್ನು ಹೋಗಲಾಡಿಸಿಕೊಂಡಾಗ ಮಾತ್ರ ಜಗತ್ತು ಸುಂದರವಾಗಿ ಕಾಣಲು ಸಾಧ್ಯ. ಎಲ್ಲರನ್ನೂ ಪ್ರೀತಿ, ಮಮತೆಯಿಂದ ಕಂಡಾಗಲೇ ನೆಮ್ಮದಿಯ ಜೀವನ ಸಾಧ್ಯ. ಇಂದು ಸಮಾಜ ಸೇವೆ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು ಖುಷಿಯ ವಿಚಾರವೇ ಆದರೆ ಪ್ರಚಾರಕ್ಕಾಗಿ ಅಲ್ಲದೆ ಶ್ರದ್ಧೆಯಿಂದ ಸಮಾಜ ಸೇವೆ ಮಾಡುವ ಮಂದಿ ಇವರಲ್ಲೆಷ್ಟಿದ್ದಾರೆ ಎಂಬುದು ಪ್ರಶ್ನೆ. ಈ ದೇಶ, ಜನರು ಮತ್ತು ಭಗವಂತನಿಗೆ ಖುಷಿಯಿಂದ ಮತ್ತೊಬ್ಬರ ಖುಷಿಗಾಗಿ ಸೇವೆ ಮಾಡುವವರು ಬೇಕೇ ವಿನಾ ಪ್ರಚಾರಕ್ಕಾಗಿ ಮಾಡುವವರಲ್ಲ. ಸಂಕಷ್ಟದಲ್ಲಿರುವವರ ಮನಃ ಸ್ಥಿತಿಯನ್ನು ಅರಿಯುವವರಿಂದ ಮಾತ್ರ ನಿಜ ಸೇವೆ ಮಾಡಲು ಸಾಧ್ಯ. ಪ್ರಚಾರಕ್ಕಾಗಿ ಮಾಡುವ ಸೇವೆ ಎಂದಿಗೂ ಜನರ ಮನಸ್ಸು ಮುಟ್ಟದು. ನಮ್ಮ ಜೀವನ ಮತ್ತೂಬ್ಬರಿಗೆ ಆದರ್ಶವಾಗಿರಬೇಕೇ ಹೊರತು ದಾರಿ ತಪ್ಪಿಸುವಂತಿರಬಾರದು. ಪ್ರತಿಯೊಬ್ಬರಲ್ಲೂ ಭಗವಂತನಿದ್ದಾನೆ. ನಮ್ಮ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತಿರುವುದಕ್ಕೆ ನಾವು ಆತನಿಗೆ ಆಭಾರಿಯಾಗಿರಬೇಕು. ಮಾನವ ಸಂಬಂಧಗಳಿಗೆ ಸ್ಪಂದಿಸಿದಾಗ ಮಾತ್ರ ಮಾನವರೆನಿಸಿಕೊಳ್ಳಲು ಸಾಧ್ಯ ಎಂಬುದನ್ನು ಪಾಂಡುರಂಗ ಶಾಸ್ತ್ರಿ ಅತ್ತಾವಳೆ ಅವರು ಬಲವಾಗಿ ನಂಬಿದ್ದರು.
ಯಾವುದು ಭಕ್ತಿ?
ದೇವರ ಮುಂದೆ ಕೂತು ಧ್ಯಾನ ಮಾಡುವುದು, ದೇವರ ನಾಮಗಳನ್ನು, ಸ್ತುತಿಗಳನ್ನೋ ಹಾಡುವುದನ್ನು ಮಾತ್ರ ಭಕ್ತಿ ಎಂದು ಕರೆಯಲಾಗದು. ಬದುಕು ಮತ್ತು ಅಸ್ತಿತ್ವವನ್ನು ತೋರಿಸುವ ವಿಶೇಷ ವರ್ತನೆ ನಿಜವಾದ ಭಕ್ತಿ. ಸಂಪತ್ತು, ವಿದ್ಯೆ, ಅಧಿಕಾರ ಎಲ್ಲವೂ ದೇವರು ನೀಡಿದ ಉಡುಗೊರೆಯೇ ಹೊರತು ಅದೃಷ್ಟದ ದಾನಗಳಲ್ಲ ಎಂಬ ಸತ್ಯವನ್ನು ಹೇಳುವ ಮಾರ್ಗವನ್ನು ಭಕ್ತಿ ಎನ್ನಬಹುದು. ಯಾರಲ್ಲಿ ನಂಬಿಕೆ ಇರುತ್ತದೆಯೋ ಆತನ ಬಳಿ ಎಂದಿಗೂ ಹೆದರಿಕೆ, ಅಂಜಿಕೆ ಎಂಬ ಪದಗಳು ಸುಳಿಯುವುದೇ ಇಲ್ಲ. ಆಗು ಹೋಗುಗಳ ಬಗ್ಗೆ ಯಾರಿಗೂ ಮುಂಚೆಯೇ ಅರಿವಿರುವುದಿಲ್ಲ. ಸ್ಪರ್ಧೆಗೂ ಮುನ್ನ ಫಲಿತಾಂಶ ತಿಳಿಯಬೇಕೆಂದರೆ ಅದು ಸಾಧ್ಯವೇ? ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ನಿಮಗೆ ಇದರ ಪ್ರತಿಫಲ ದೊರಕೇ ದೊರಕುತ್ತದೆ ಎಂಬ ನಂಬಿಕೆ ಇರಲಿ. ಆಗ ಖಂಡಿತವಾಗಿಯೂ ಜಯ ನಿಮ್ಮದೇ ಆಗಿರುತ್ತದೆ. ಯಾವುದೇ ಕೆಲಸವನ್ನು ಮಾಡಬೇಕಾದಾಗ ನಮಗೆ ಆ ಕುರಿತು ಜ್ಞಾನವಿರಬೇಕು. ಏನೂ ಗೊತ್ತಿಲ್ಲದೆ ಯಾವ ಕೆಲಸವನ್ನೂ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾಡಿದರೂ ಅದು ಪರಿಪೂರ್ಣ ಎಂದೆನಿಸಿಕೊಳ್ಳುವುದಿಲ್ಲ. ಜ್ಞಾನದ ಬೆಂಬಲವಿಲ್ಲದ ಕ್ರಿಯೆ, ಕ್ರಿಯೆಯ ಬೆಂಬಲವಿಲ್ಲದ ಜ್ಞಾನ ಇವೆರಡೂ ಸಮಯದ ಪರೀಕ್ಷೆಯ ಮುಂದೆ ನಿಲ್ಲಲಾರವು ಎನ್ನುತ್ತಾರೆ ಅತ್ತಾವಳೆ ಅವರು.
. ಮಿಲಿಟರಿ, ಆರ್ಥಿಕತೆ ಅಥವಾ ತಂತ್ರಜ್ಞಾನಗಳ ಅಭಿವೃದ್ಧಿಗಳಿಂದ ಮಾತ್ರ ಒಂದು ರಾಷ್ಟ್ರವನ್ನು ಮಹಾನ್ ಎನ್ನಲು ಸಾಧ್ಯವಿಲ್ಲ. ಆ ರಾಷ್ಟ್ರದ ಜನರಲ್ಲಿ ಆತ್ಮ ಗೌರವ ಮತ್ತು ಸಮಗ್ರತೆ ಅಂತರ್ಗತವಾದಾಗ ಮಾತ್ರ ರಾಷ್ಟ್ರ ಮಹಾನ್ ಎಂದೆನಿಸಿಕೊಳ್ಳುತ್ತವೆ.
. ಜ್ಞಾನ, ಕ್ರಿಯೆ ಮತ್ತು ಭಕ್ತಿ ಇವುದಕ್ಕೊಂದು ಪೂರಕವಾಗಿರುತ್ತವೆ.
. ಸತ್ಯಕ್ಕೆ ಯಾವುದೇ ಬಾಹ್ಯ ಬೆಂಬಲ ಅಥವಾ ಪ್ರಚಾರದ ಆವಶ್ಯಕತೆ ಇಲ್ಲ.
ಪ್ರಸನ್ನ ಹೆಗಡೆ ಊರಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.