ಕುಟುಂಬ ಪ್ರವಾಸ ಹೋಗುವ ಅಭ್ಯಾಸ ಮಾಡಿಕೊಳ್ಳಿ
ವರ್ಷಕ್ಕೊಮ್ಮೆ ಕುಟುಂಬ ಪ್ರವಾಸ ಸಂಬಂಧ ವೃದ್ಧಿಗೆ ಸೂಕ್ತ ಹೂಡಿಕೆ
Team Udayavani, Feb 13, 2020, 5:56 AM IST
ಕುಟುಂಬ ಪ್ರವಾಸದಿಂದ ಹತ್ತಾರು ಪ್ರಯೋಜನಗಳಿವೆ. ಸಂಬಂಧದ ಬಂಧ ಇನ್ನಷ್ಟು ಗಟ್ಟಿಗೊಳಿಸಲು ಇದೊಂದು ಒಳ್ಳೆಯ ಉಪಕ್ರಮ. ನಿತ್ಯವೂ ದಣಿದ ನಮಗೂ ಲಾಭ. ಇನ್ನೂ ಬದುಕಿನ ಪಾಠ ಕಲಿಯಬೇಕಾದ ನಮ್ಮ ಮಕ್ಕಳಿಗೂ ಲಾಭ. ಹಾಗಾಗಿ ಈ ಮೇ ರಜೆಯಲ್ಲೇ ಆರಂಭಿಸಿ ಎನ್ನುತ್ತಾರೆ ಸುಮೇಧ.
ನೀವು ಎಂದಾದರೂ ಕುಟುಂಬ ಪ್ರವಾಸ ಹೋಗಿದ್ದೀರಾ? ಹೋಗದೆ ಇದ್ದರೆ ಈ ಬಾರಿ ಮಕ್ಕಳ ಶಾಲೆ ಮುಗಿದ ಕೂಡಲೇ ಒಂದು ಊರನ್ನು ಗೊತ್ತು ಮಾಡಿಕೊಳ್ಳಿ.
ಕುಟುಂಬ ಪ್ರವಾಸ ಇರುವುದೇ ಪರಸ್ಪರ ಬೆರೆಯಲು. ನಮ್ಮ ಮನಸ್ಸಿನ ಭಾರವನ್ನು ಕಳೆದುಕೊಳ್ಳುವುದಕ್ಕಾಗಿ, ಒತ್ತಡದ ಹೊರೆಯನ್ನು ಕೆಳಗಿಳಿಸುವುದಕ್ಕಾಗಿ ಕುಟುಂಬ ಪ್ರವಾಸ ಬೇಕೇಬೇಕು.
ಹಿಂದೆ ಮನೆಯವರೆಲ್ಲ ಸೇರಿ ವರ್ಷಕ್ಕೊಮ್ಮೆ ತೀರ್ಥಕ್ಷೇತ್ರಗಳ ಅಥವಾ ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆ ಹೋಗುತ್ತಿದ್ದರು. ಊರಿನ ಕೆಲವು ಮಂದಿ ಸೇರಿ ಒಂದು ವಾಹನವನ್ನು ಮಾಡಿ ಕೊಂಡು, ಒಂದು ವಾರವೋ, ಹತ್ತು ದಿನವೋ ತಿರುಗಾಟಕ್ಕೆ ಹೋಗುತ್ತಿದ್ದುದು ನೆನಪಿರಬಹುದು. ಅವೆಲ್ಲವೂ ಮಾಡುತ್ತಿದ್ದುದು ದೇವರ ದರ್ಶನಕ್ಕಷ್ಟೇ ಅಲ್ಲ; ನಮ್ಮ ನಮ್ಮ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವದಕ್ಕಾಗಿ. ನಮ್ಮನ್ನು ನಾವು ಮತ್ತಷ್ಟು ಅರಿತುಕೊಳ್ಳಲಿಕ್ಕಾಗಿ.
ಆಧುನಿಕ ಯುಗದಲ್ಲಿ ಸಂಬಂಧಗಳು ಹೇಗೆ ಬದಲಾಗಿವೆ ಅಥವಾ ಪುನರ್ ರೂಪ ಪಡೆದಿವೆ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಹಿಂದೆ ಅಪ್ಪ-ಮಕ್ಕಳ ನಡುವೆ ಇದ್ದಿರಬಹುದಾದ ಅಂತರ ಇಂದು ಕಡಿಮೆಯಾಗಿದೆ. ಇಂದು ಹೆತ್ತವರು-ಮಕ್ಕಳು ಒಂದು ವಯಸ್ಸಿನ ಬಳಿಕ ಗೆಳೆಯರಿದ್ದಂತೆ. ಇದು ಒಂದು ಸಂಬಂಧಗಳಿಗೆ ಹೇಳುತ್ತಿಲ್ಲ. ಅದೇ ರೀತಿಯಲ್ಲೇ ಹಿಂದಿನ ತೀರ್ಥ ಕ್ಷೇತ್ರ ತಿರುಗಾಟವು ಈಗ ಕುಟುಂಬ ಪ್ರವಾಸವಾಗಿ ಪುನರ್‌ರೂಪ ಪಡೆಯುತ್ತಿದೆ.
ನಿಮಗಲ್ಲ, ನಿಮ್ಮ ಮಕ್ಕಳಿಗಿರಲಿ
ಹಿಂದೆಲ್ಲಾ ಅಪ್ಪ-ಅಮ್ಮಂದಿರನ್ನು ಪ್ರವಾಸಕ್ಕೆ ಕರೆದಾಗ (ಹಿರಿಯ ತಲೆಮಾರಿನಲ್ಲಿ ಕೆಲವರು), “ನಮಗೆ ವಯಸ್ಸಾಗಿದೆ. ಅದೆಲ್ಲಾ ಬೇಡಪ್ಪಾ, ನೀವೇ ಹೋಗಿ ಬನ್ನಿ’ ಎನ್ನುತ್ತಿದ್ದರು. ಅದೂ ಇಳಿ ವಯಸ್ಸಿನಲ್ಲಿ. ಆದರೆ ಮಧ್ಯ ವಯಸ್ಕನಲ್ಲಿರುವ ನಾವು “ಬ್ಯುಸಿ’ಯ ಕಾರಣವೊಡ್ಡಿ ದೂರ ಯಾಕೆ, ಮನೆಯಲ್ಲೇ ಸುಮ್ಮನೆ ಇದ್ದು ಬಿಡೋಣ ಎಂದುಕೊಳ್ಳುತ್ತಿದ್ದೇವೆ. ಪ್ರತಿ ವಾರಾಂತ್ಯ ಬಂದಾಗಲೂ ಮಾಡುವುದು ಅದನ್ನೇ. ಹತ್ತಿರದ ಸಂಬಂಧದ ಮನೆಗೆ ಹೋಗಲೂ ಟ್ರಾಫಿಕ್ ಬಿಡೋಲ್ಲ, ಪಕ್ಕದ ಬೀದಿಯಲ್ಲಿರುವ ಮನೆಗೆ ಹೋಗಲಿಕ್ಕೆ, ಅವರಿದ್ದಾರೋ ಇಲ್ಲವೋ ಗೊತ್ತಿಲ್ಲ, ಸುಮ್ಮನೆ ತೊಂದರೆ ಯಾಕೆ ಎಂದುಕೊಂಡು ಟಿವಿ ಹಾಕಿಕೊಂಡು ಇದ್ದು ಬಿಡುತ್ತೇವೆ. ವರ್ಷಕ್ಕೊಮ್ಮೆಯಾದರೂ ಪ್ರವಾಸಕ್ಕೆ ಹೊರಡಿ. ಅದರಲ್ಲೂ ಚಿಕ್ಕ ಮಕ್ಕಳು ಇರುವ ಕುಟುಂಬವಂತೂ ಈ ಅವಕಾಶವನ್ನು ತಪ್ಪಿಸಲೇಬೇಡಿ.
ಸಮಾಜದೊಂದಿಗಿನ ಅವಕಾಶ
ಈಗಿನ ಜೀವನ ಕ್ರಮ ನಮಗೆ ಗೊತ್ತೇ ಇದೆ. ಶಾಲೆ ಮತ್ತು ಮನೆ, ಹೆಚ್ಚೆಂದರೆ ನಮ್ಮ ಅಕ್ಕಪಕ್ಕದ ಎರಡು ಮನೆಗಳು. ಈ ಸೀಮಿತ ಪ್ರಪಂಚದಲ್ಲಿ ಮಕ್ಕಳಿಗೆ ಸಮಾಜದೊಂದಿಗೆ ಪ್ರತಿಸ್ಪಂದಿಸಲು, ಸಂವಾದಿಸಲು ಸಿಗುವ ಅವಕಾಶವೇ ತೀರಾ ಕಡಿಮೆ. ಆದರೆ ಪ್ರವಾಸದಲ್ಲಿ ಹಾಗಲ್ಲ, ಹಲವಾರು ಬಗೆಯ ಜನರು ಎದುರು ಸಿಗುತ್ತಾರೆ ಮತ್ತು ಅವರೊಂದಿಗೆ ಸಂಭಾಷಿಸುವ ಅವಕಾಶ ಸಿಗುತ್ತದೆ. ಹೊಸ ಸ್ಥಳದಲ್ಲಿನ ವಾತಾವರಣ ಅರಿವಿಗೆ ಬರುತ್ತದೆ, ಮಾಹಿತಿ ಮತ್ತು ಜ್ಞಾನ ಸಂಪಾದನೆಯೂ ಆಗುತ್ತದೆ. ಸಮಾಜವನ್ನು ದೊಡ್ಡ ಅರ್ಥದಲ್ಲಿ ನೋಡಲು ಸಿಗುವುದು ಈಗಲೇ. ಅದನ್ನು ತಪ್ಪಿಸಬೇಡಿ.
ಸಮಾಜವೇ ಕಲಿಕಾ ಮನೆ
ನಾವು ತರಗತಿ ಕೋಣೆಯಲ್ಲಿ ಕಲಿಯುವುದು ಇದ್ದದ್ದೇ. ಹೊರಗೆ ಕಲಿಯಲು ಬಹಳಷ್ಟಿದೆ. ಮಕ್ಕಳಿಗೆ ಈ ಲೋಕದಲ್ಲಿ ಕಲಿಯಲು ಸಿಗುವ ಅವಕಾಶವೇ ಪ್ರವಾಸ. ಲೋಕಜ್ಞಾನವಿಲ್ಲದಿದ್ದರೆ ಲೋಕವನ್ನು ಗೆಲ್ಲುವುದು ಹೇಗೆ? ಅದಕ್ಕಾಗಿಯೇ ಈ ಪ್ರವಾಸ ಅವಶ್ಯ.
ಮಕ್ಕಳ ಚುರುಕುತನ ಹೆಚ್ಚಿಸಬಲ್ಲದು
ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಹೋಗುವ ಪ್ರವಾಸ ಮಕ್ಕಳಲ್ಲಿನ ಬುದ್ಧಿಯನ್ನು ಇನ್ನಷ್ಟು ಚುರುಕುಗೊಳಿಸುತ್ತದೆ. ಮಕ್ಕಳ ಸ್ವಭಾವವೇ ಕುತೂಹಲ, ಪ್ರಶ್ನಿಸುವುದು, ಅನ್ವೇಷಣೆ. ಆ ಸ್ವಭಾವದ ನಿರಂತರತೆಗೆ ಪ್ರವಾಸ ಸಹಾಯ ಮಾಡಬಲ್ಲದು. ಪ್ರವಾಸ ಹೋಗುವ ಕುಟುಂಬದಲ್ಲಿನ ಮಕ್ಕಳಲ್ಲಿ ಕುತೂಹಲ ಹೆಚ್ಚಿರುತ್ತದೆ. ಅದೇ ಸ್ವಭಾವ ತಾರುಣ್ಯಕ್ಕೆ ಬಂದಾಗ ಸಾಹಸ ಪ್ರವೃತ್ತಿಯಾಗಿ ಪರಿವರ್ತನೆಯಾಗುತ್ತದೆ.
ಪರಿಸರ ಪ್ರೀತಿ
ಪರಿಸರ ಪ್ರೀತಿ ಮಕ್ಕಳಿಗೆ ಎಲ್ಲಿಂದ ಬರುತ್ತದೆ? ಈ ಪ್ರಶ್ನೆಗೆ ಪ್ರವಾಸವೂ ಒಂದು ಉತ್ತರ. ಯಾಕೆಂದರೆ, ಪ್ರವಾಸದಲ್ಲಿ ಹೆಚ್ಚು ಬೆರೆಯುವುದು ಪರಿಸರದ ಜತೆಗೆ. ಅದು ಕಲಿಸುವ ಪಾಠ ಮತ್ತು ಅರಿವು ವಿಶೇಷವಾದದ್ದು. ಪೋಷಕರಾದ ನಾವೂ ಪರಿಸರದ ಬಗೆಗಿನ ಕಾಳಜಿ ಬೆಳೆಸಲು ಪ್ರವಾಸವನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಬಹುದು.
ಇವು ಕೆಲವೇ ಕಾರಣಗಳು. ಆದರೆ ಕುಟುಂಬ ಪ್ರವಾಸ ಸೂಕ್ತ ಎಂಬುದಕ್ಕೆ ಹಲವು ಕಾರಣಗಳಿವೆ. ದೈನಂದಿಕ ಬದುಕಿನ ಕಾರ್ಯ ಒತ್ತಡದಿಂದ ಮುಕ್ತಿಗೊಳಿಸುವುದಲ್ಲದೇ, ಬದುಕಿನ ಪಾಠವನ್ನು ಕಲಿಸುತ್ತದೆ. ಅದಕ್ಕೇ ಈ ಮೇ ತಿಂಗಳ ರಜೆಗೆ ಈಗಲೇ ಸಿದ್ಧತೆ ಆರಂಭಿಸಿ.
ವರ್ಷಕ್ಕೊಂದು ಇರಲಿ
ಈ ಮಾತು ಹೇಳುತ್ತಿರುವುದು ಇಷ್ಟೇ. ಇಂದಿನ ಒತ್ತಡದ ಯುಗದಲ್ಲಿ ವರ್ಷಕ್ಕೊಮ್ಮೆ ಒಂದು ವಾರ ಇಡೀ ಕುಟುಂಬ ಯಾವುದೋ ಒಂದು ನಿರ್ದಿಷ್ಟ ಸ್ಥಳಕ್ಕೆ ಹೋಗಿ ಒಟ್ಟಿಗೆ ಕಳೆದರೆ ಸಿಗುವ ಸುಖ ಎಷ್ಟು ಹಣ ಒಟ್ಟುಗೂಡಿಸಿದರೂ ಬಾರದು. ಒಟ್ಟಿಗಿದ್ದು ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಿಗುವ ಅವಕಾಶವೂ ಹೌದು. ನಮ್ಮ ಸಂಬಂಧಗಳೇ ನಮಗೆ ಹೊಸ ಹೊಳಪಿನಲ್ಲಿ ಕಾಣುತ್ತವೆ. ಮಕ್ಕಳ ಕುತೂಹಲ, ಬೆರಗು, ಉತ್ಸಾಹವನ್ನು ಕಂಡು ನಮ್ಮ ಮಕ್ಕಳು ಎಷ್ಟು ದೊಡ್ಡವರಾಗಿದ್ದಾರೆ ಎಂದೆನಿಸುವುದೂ ಇಂಥದೊಂದು ಪ್ರವಾಸದಲ್ಲಿಯೇ. ಅದಕ್ಕೇ ವರ್ಷಕ್ಕೆ ಒಂದು ಬಾರಿ ಪ್ರವಾಸವನ್ನು ತಪ್ಪಿಸಲೇಬೇಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.