ಮಂಗಳೂರು- ಬೆಂಗಳೂರು ರೈಲು ಸಂಚಾರ, ಪರಿಶೀಲನೆಯಾಗಲಿ ಪರ್ಯಾಯ ದಾರಿ
Team Udayavani, Sep 2, 2018, 12:24 PM IST
ಮಂಗಳೂರು- ಬೆಂಗಳೂರು ರೈಲು ಸಂಚಾರ ರದ್ದುಗೊಂಡ ಬಳಿಕ ಸಾಕಷ್ಟು ಪ್ರಯಾಣಿಕರು ಪರದಾಡುವಂತಾಗಿದೆ. ಇದಕ್ಕೆ ಪರಿಹಾರ ಹುಡುಕಲು ಹೊರಟಾಗ ಅನೇಕ ದಾರಿಗಳು ತೆರೆದುಕೊಳ್ಳುತ್ತವೆ. ಸ್ವಲ್ಪ ದೂರ, ಸುತ್ತು ಬಳಸಿ ಇರುವ ಈ ದಾರಿಯ ಮೂಲಕ ಸುಲಭವಾಗಿ ಮಂಗಳೂರಿನಿಂದ ಬೆಂಗಳೂರಿಗೆ; ಬೆಂಗಳೂರಿನಿಂದ ಮಂಗಳೂರಿಗೆ ತಲುಪಲು ಸಾಧ್ಯವಿದೆ. ರೈಲ್ವೇ ಇಲಾಖೆಯು ಈ ನಿಟ್ಟಿನಲ್ಲಿ ಸಮರ್ಪಕ ಯೋಜನೆ ರೂಪಿಸಿದರೆ ಪ್ರಯಾಣಿಕರಿಗೂ ಅನುಕೂಲ. ರೈಲು ರದ್ದುಗೊಂಡ ಬಳಿಕ ಉಂಟಾಗಿರುವ ನಷ್ಟವನ್ನೂ ತಪ್ಪಿಸಬಹುದು.
ಮಂಗಳೂರು- ಬೆಂಗಳೂರು ರೈಲು ಮಾರ್ಗದಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಶಿರಾಡಿ ಘಾಟಿಯಲ್ಲಿ ಎಡಕುಮೇರಿ, ಕಡಗರವಳ್ಳಿ ಮುಂತಾದ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ ರೈಲು ಹಳಿಗಳ ಮೇಲೆ ಮಣ್ಣು , ಬಂಡೆಗಳು ಉರುಳುವುದರಿಂದ ರೈಲುಗಳ ಸಂಚಾರಕ್ಕೆ ಸದಾ ಅನಿಶ್ಚಿತತೆ ಕಾಡುತ್ತಿದೆ. ಈಗಿನ ಲೆಕ್ಕಚಾರಗಳ ಪ್ರಕಾರ ಈ ಮಾರ್ಗದಲ್ಲಿ ಮಣ್ಣು , ಬಂಡೆಗಳನ್ನು ತೆರವುಗೊಳಿಸಿ ಹಳಿಗಳನ್ನು ಸರಿಪಡಿಸಿ ರೈಲು ಸಂಚಾರ ಆರಂಭಿಸಲು ಇನ್ನೂ ಕೆಲವು ಸಮಯ ಬೇಕು. ಒಟ್ಟು ಇಲ್ಲಿನ ಭೌಗೋಳಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ ಇನ್ನೂ ಮುಂದೆಯೂ ಇಲ್ಲಿ ಇಂತಹ ಪರಿಸ್ಥಿತಿಗಳು ಮರುಕಳಿಸುವ ಸಾಧ್ಯತೆಗಳು ಗೋಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು- ಹಾಸನ ರೈಲು ಮಾರ್ಗದ ಜತೆಗೆ ಬೆಂಗಳೂರು- ಮಂಗಳೂರು ಮಧ್ಯೆ ಪರ್ಯಾಯ ಮಾರ್ಗಗಳಲ್ಲೂ ರೈಲು ಸಂಚಾರ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವ ಆವಶ್ಯಕತೆ ಎದುರಾಗಿದೆ.
ಶಿರಾಡಿಘಾಟಿಯಲ್ಲಿ ಭೂಕುಸಿತಗಳು ತಲೆದೋರಿ ಸದ್ಯಕ್ಕೆ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಜೋಡುಪಾಲ ಭಾಗದಲ್ಲಿ ಸಂಭವಿಸಿದ ಭಾರೀ ಪ್ರವಾಹ ಹಾಗೂ ನೆರೆಯಿಂದ ಸಂಪಾಜೆ ಘಾಟಿ ರಸ್ತೆ ಕೊಚ್ಚಿ ಹೋಗಿ ಈ ಮಾರ್ಗದಲ್ಲಿ ಮಂಗಳೂರು- ಮಡಿಕೇರಿ- ಮೈಸೂರು ಸಂಚಾರ ನಿಲುಗಡೆಯಾಗಿದೆ. ಚಾರ್ಮಾಡಿ ಘಾಟಿಯಲ್ಲೂ ಭೂಕುಸಿತದಿಂದ ಪದೇಪದೇ ಸಂಚಾರ ಸ್ಥಗಿತಗೊಳ್ಳುತ್ತಿದ್ದು, ಸಂಚಾರಕ್ಕೆ ಆತಂಕಗಳು ಎದುರಾಗುತ್ತಿವೆ. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ ಕರಾವಳಿಯಿಂದ ಹೊರ ಜಿಲ್ಲೆಗಳಿಗೆ ರಸ್ತೆ ಮಾರ್ಗವೂ ಸುಲಲಿತವಾಗಿಲ್ಲ. ಈ ಹಿನ್ನೆಲೆಯಲ್ಲೂ ಮಂಗಳೂರು- ಹಾಸನ ಮಾರ್ಗದ ಜತೆಗೆ ಮಂಗಳೂರು- ಬೆಂಗಳೂರು ಮಧ್ಯೆ ರೈಲು ಸಂಚಾರಕ್ಕೆ ಇನ್ನೊಂದು ಪರ್ಯಾಯ ಮಾರ್ಗದ ಪರಿಶೀಲನೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಮಂಗಳೂರು- ಬೆಂಗಳೂರು ರೈಲು ಮಾರ್ಗದ ಸಕಲೇಶಪುರ ಭಾಗದಲ್ಲಿ ರೈಲು ಸಂಚಾರ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವಾಗಿ ನಂದಿಕೂರು ಮೂಲಕ ಸುಮಾರು 135 ಕಿ.ಮೀ. ಪರ್ಯಾಯ ಮಾರ್ಗದ ಪ್ರಸ್ತಾವವನ್ನು ರೈಲ್ವೇ ಯಾತ್ರಿಕರ ಸಂಘ ಮಂಡಿಸಿತ್ತು. ನಂದಿಕೂರು, ಕಾರ್ಕಳ, ಬಜಗೋಳಿ, ಉಜಿರೆ, ಚಾರ್ಮಾಡಿ ಮೂಲಕ ಸಾಗಿ ಸೋಮನಕಾಡು ಸೇತುವೆಯ ಭಾಗದಲ್ಲಿ ಸುರಂಗದ ಮೂಲಕ ಸಾಗಿ ಕೊಟ್ಟಿಗೆಹಾರದಿಂದ ಮೂಡಿಗೆರೆಯಲ್ಲಿ ರೈಲು ಮಾರ್ಗಕ್ಕೆ ಜೋಡಣೆಯಾಗಿ ಅಲ್ಲಿಂದ ಮುಂದೆ ಬೆಂಗಳೂರಿಗೆ ಸಾಗುವುದು ಮತ್ತು ನಂದಿಕೂರು ಜಂಕ್ಷನ್ ಆಗಿ ರೂಪುಗೊಳ್ಳುವುದು ಈ ಪ್ರಸ್ತಾವನೆಯಲ್ಲಿ ಒಳಗೊಂಡಿದೆ.
ರೈಲ್ವೇ ಸಂಪರ್ಕದಲ್ಲಿ ಮಂಗಳೂರು ಇನ್ನೂ ಹೆಚ್ಚು ವಿಸ್ತೃತೆಯನ್ನು ಪಡೆದುಕೊಳ್ಳುವಂತಾಗಲು ಹೊಸ ಸಾಧ್ಯತೆಗಳ ಅಧ್ಯಯನಗಳು ನಡೆಯಬೇಕಾಗಿದೆ. ಈಗಿರುವ ಮಾರ್ಗಗಳಲ್ಲಿ ಹೊಸ ರೈಲುಗಳ ಓಡಾಟದ ಜತೆಗೆ ಒಂದಷ್ಟು ಹೊಸ ಮಾರ್ಗಗಳ ಮುಖ್ಯವಾಗಿ ಕರ್ನಾಟಕದ ಪ್ರಮುಖ ನಗರಗಳಿಗೆ ಸಂಚಾರವೇರ್ಪಡುವ ನಿಟ್ಟಿನಲ್ಲಿ ಮಾರ್ಗಗಳ ಗುರುತಿಸುವಿಕೆ, ಈಗಾಗಲೇ ಸಮೀಕ್ಷೆ ನಡೆದಿರುವ ಹೊಸ ಮಾರ್ಗಗಳ ಅನುಷ್ಠಾನ ಮುಂತಾದ ಸಕಾರಾತ್ಮಕ ಕ್ರಮಗಳು ನಡೆಯಬೇಕಾಗಿದೆ.
ಪರ್ಯಾಯ ಸಂಚಾರ ಮಾರ್ಗದ ಸಾಧ್ಯತೆಗಳು
. ಮಂಗಳೂರು- ಹಾಸನ ರೈಲು ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪರ್ಯಾಯವಾಗಿ ಕಾರವಾರ- ಬೆಂಗಳೂರು ರೈಲನ್ನು ತಿರುಪತೂರು- ಪಾಲ್ಘಾಟ್, ಶೋರ್ನೂರು ಮಾರ್ಗವಾಗಿ ಓಡಿಸಲಾಗುತ್ತಿದೆ. ಈ ಮಾರ್ಗದಲ್ಲಿ ರೈಲುಗಳ ಒತ್ತಡದಿಂದ ಇದರ ಸಂಚಾರವೂ ಬಾಧಿತವಾಗಿದೆ.
. ಮಂಗಳೂರಿನಿಂದ ಬೆಂಗಳೂರಿಗೆ ಇನ್ನೊಂದು ಪರ್ಯಾಯ ಮಾರ್ಗವಾಗಿ ದೂದ್‌ಸಾಗರ್, ಕುಲೆಂ, ಲೊಂಡಾ – ಕಾರವಾರ ಮಾರ್ಗ ಬಳಕೆ ಬಗ್ಗೆ ಸಲಹೆಗಳು ಬಂದಿವೆ.
. ಬೆಂಗಳೂರು- ಅರಸೀಕೆರೆ- ಹುಬ್ಬಳ್ಳಿ- ಮಡಂಗಾವ್, ಕಾರವಾರ- ಉಡುಪಿ ಮೂಲಕ ಮಂಗಳೂರಿಗೆ ರೈಲು ಸಂಚಾರಕ್ಕೆ ಅವಕಾಶವಿದ್ದು, ಇದರ ಬಗ್ಗೆಯೂ ನೈಋತ್ಯ ರೈಲ್ವೇ ಗಮನ ಹರಿಸಬೇಕು ಎಂಬ ಬೇಡಿಕಗಳು ರೈಲ್ವೆ ಬಳಕೆದಾರರಿಂದ ವ್ಯಕ್ತವಾಗಿವೆ. ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಬೆಂಗಳೂರಿನಿಂದ ಮಡಂಗಾವ್‌ಗೆ 13 ಗಂಟೆ, ಅಲ್ಲಿಂದ ಕಾರವಾರಕ್ಕೆ 1 ಗಂಟೆ,ಅಲ್ಲಿಂದ ಉಡುಪಿಗೆ 3 ಗಂಟೆ
ಕಾಲಾವಕಾಶ ಬೇಕಾಗಬಹುದು. ಶ್ರವಣಬೆಳಗೂಳ, ಮೈಸೂರು ಅಥವಾ ಶೋರ್ನೂರು ಮಾರ್ಗಗಳಿಂತ ಇಲ್ಲಿ
ಪ್ರಯಾಣಕ್ಕೆ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಆದರೆ ಬೆಂಗಳೂರು ಸಂಚಾರಕ್ಕೆ ಸಕಲೇಶಪುರ ಮಾರ್ಗವನ್ನೇ ನೆಚ್ಚಿಕೊಳ್ಳುವುದು ತಪ್ಪುತ್ತದೆ ಮತ್ತು ಉಡುಪಿ, ಕುಂದಾಪುರ, ಕಾರವಾರ ಭಾಗದ ಜನರಿಗೂ ಹೆಚ್ಚುವರಿಯಾಗಿ ಹುಬ್ಬಳ್ಳಿ- ಬೆಂಗಳೂರಿಗೆ ಸಂಚರಿಸಲು ರೈಲು ಸಂಚಾರ ದೊರಕಿದಂತಾಗುತ್ತದೆ.
. ಇನ್ನೊಂದೆಡೆ ಬೆಂಗಳೂರಿನಿಂದ ಕಣ್ಣೂರುವರೆಗೆ ಪ್ರತಿದಿನ ರೈಲು ಸಂಚಾರವಿದೆ. ಅದು ರಾತ್ರಿ 8 ಗಂಟೆಗೆ ಬೆಂಗಳೂರಿಗೆ ಹೊರಟು ಬೆಳಗ್ಗೆ 9.15 ಕ್ಕೆ ಕಣ್ಣೂರಿಗೆ ಬರುತ್ತದೆ. ಅದೇ ಗಾಡಿಯನ್ನು ಮಂಗಳೂರುವರೆಗೆ ವಿಸ್ತರಿಸುವ ಸಾಧ್ಯತೆಯನ್ನು ಕೂಡ ಪರಿಶೀಲಿಸಬಹುದಾಗಿದೆ.
ಪರ್ಯಾಯ ಮಾರ್ಗಕ್ಕಾಗಿ ಹೆಚ್ಚುತ್ತಿದೆ ಬೇಡಿಕೆ
ಬೆಂಗಳೂರು- ಮಂಗಳೂರು ಮಧ್ಯೆ ಪರ್ಯಾಯವಾಗಿ ಹುಬ್ಬಳ್ಳಿ- ಮಡಂಗಾವ್ ಮೂಲಕ ರೈಲು ಆರಂಭಿಸುವ ಬಗ್ಗೆ ವ್ಯಕ್ತವಾಗುತ್ತಿರುವ ಬೇಡಿಕೆಗಳನ್ನು ಸಂಚಾರ ನೈಋತ್ಯ ರೈಲ್ವೇ ಪರಿಶೀಲನೆ ನಡೆಸಬೇಕು. ಇದು ಸಾಕಾರಗೊಂಡರೆ ಈ ಭಾಗದ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ.
– ಅನಿಲ್ ಹೆಗ್ಡೆ,
ಪಶ್ಚಿಮ ಕರಾವಳಿ, ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ
ಸಲಹೆಗಾರ
ಕೇಶವ ಕುಂದರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.