ಮಂಗಳೂರು ಅಂ. ವಿಮಾನ ನಿಲ್ದಾಣ ಶೀಘ್ರದಲ್ಲಾಗಲಿ ರನ್‌ವೇ ವಿಸ್ತರಣೆ
Team Udayavani, Jul 7, 2019, 5:00 AM IST
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಮತ್ತೆ ಸುದ್ದಿ ಮಾಡಿದೆ. ಜೂ. 30ರಂದು ವಿಮಾನ ರನ್‌ವೇಯಿಂದ ಜಾರಿದ ಘಟನೆ ವಿಮಾನ ನಿಲ್ದಾಣದ ರನ್‌ವೇ
ವಿಸ್ತರಣೆ ಪ್ರಸ್ತಾವನೆಯ ಅನುಷ್ಠಾನದ ಬೇಡಿಕೆಗೆ ಇನ್ನಷ್ಟು ಒತ್ತು ನೀಡಿದೆ. ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಮೇಲ್ದರ್ಜೆಗೇರಿ ವರ್ಷಗಳು ಕಳೆದಿವೆ. ಇದಕ್ಕೆ ಪೂರಕವಾಗಿ ವಿಮಾನ ನಿಲ್ದಾಣದ ರನ್‌ವೇಯೂ ವಿಸ್ತರಣೆ ಆಗಬೇಕಾಗಿದೆ.
ಮಂಗಳೂರು ವಿಮಾನ ನಿಲ್ದಾಣ ಪ್ರಸ್ತುತ 8,038 ಅಡಿ ರನ್‌ವೇ ಹೊಂದಿದೆ. ದೊಡ್ಡ ಗಾತ್ರದ ವಿಮಾನ ಇಳಿಯಬೇಕಾದರೆ ಕನಿಷ್ಠ 10,000 ಅಡಿ ಉದ್ದದ ರನ್‌ವೇ ಅಗತ್ಯವಿದೆ.
ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಇನ್ನೂ ಕನಿಷ್ಠ 2,000 ಅಡಿ ವಿಸ್ತರಣೆಯಾಗುವ ಆವಶ್ಯಕತೆ ಇದೆ. ದೊಡ್ಡ ಗಾತ್ರದ ವಿಮಾನಗಳು ಇಳಿಯಲು ರನ್‌ವೇ ಸಾಕಾಗದಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳ ಗಮನ ನೆರೆಯ ರಾಜ್ಯವಾದ ಕೇರಳದತ್ತ ಹೊರಳುತ್ತಿದೆ.
ವಸ್ತು ಸ್ಥಿತಿ
ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಣೆಯಾಗಿ 6 ವರ್ಷಗಳಾಗುತ್ತಾ ಬಂದಿವೆ. ಇದು ನಿಜಾರ್ಥದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ವರೂಪವನ್ನು ಪಡೆಯಬೇಕಾದರೆ ದೊಡ್ಡ ಗಾತ್ರದ ವಿಮಾನಗಳು ಇಳಿಯ ಬೇಕಾಗುತ್ತದೆ. ಈ ನಿಟ್ಟಿನಲ್ಲಿ 2013ರಲ್ಲಿ ರನ್‌ವೇಯನ್ನು 11,600 ಅಡಿಗೆ ವಿಸ್ತರಿಸುವ ಪ್ರಸ್ತಾವನೆ ರೂಪಿಸಲಾಯಿತು. ಇದಕ್ಕಾಗಿ 280 ಎಕ್ರೆ ಜಾಗ ಅಗತ್ಯವಿದ್ದು, ಯೋಜನೆಯ ಒಟ್ಟು ವೆಚ್ಚ 1,120 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು.
ಈ ಬಗ್ಗೆ ಭೂಸ್ವಾಧೀನಕ್ಕೆ ಪ್ರಸ್ತಾವನೆಯೊಂದನ್ನು ವಿಮಾನನಿಲ್ದಾಣ ಪ್ರಾಧಿಕಾರ ರಾಜ್ಯ ಸರಕಾರದ ಮೂಲಸೌಕರ್ಯ ಸಚಿವಾಲಯಕ್ಕೆ ಸಲ್ಲಿಸಿತ್ತು. ಆದರೆ 280 ಎಕ್ರೆ ಭೂಸ್ವಾಧೀನಕ್ಕೆ ಅಧಿಕ ಮೊತ್ತ ಅವಶ್ಯವಿರುವ ಹಿನ್ನೆಲೆಯಲ್ಲಿ ವಿಸ್ತರಣೆ ವಿಸ್ತೀರ್ಣವನ್ನು 2000 ಅಡಿಗೆ ಇಳಿಸಿ ಇದಕ್ಕೆ ಅವಶ್ಯವಿರುವ 92 ಎಕ್ರೆ ಭೂಮಿ ಸ್ವಾಧೀನಕ್ಕೆ ಹೊಸ ಪ್ರಸ್ತಾವನೆ ರೂಪಿಸಿ ಸಲ್ಲಿಸಲಾಗಿದೆ. ಇದರಲ್ಲಿ 23 ಎಕ್ರೆ ಸರಕಾರಿ ಜಾಗ ಲಭ್ಯವಿದ್ದು, ಸುಮಾರು 69 ಎಕ್ರೆ ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಬೇಕಾಗಿದೆ.
ಒಟ್ಟು ಯೋಜನೆಯ ವೆಚ್ಚ 400 ಕೋಟಿ ರೂ. ಇದರಲ್ಲಿ ಭೂಸ್ವಾಧೀನದ ವೆಚ್ಚವನ್ನು ರಾಜ್ಯ ಸರಕಾರ ಭರಿಸಿದರೆ ಕಾಮಗಾರಿ ವೆಚ್ಚವನ್ನು ಪ್ರಾಧಿಕಾರ ಭರಿಸುತ್ತದೆ. ವಿಮಾನ ನಿಲ್ದಾಣದ ಪಕ್ಕದ ಕಂದಾವರ ಗ್ರಾ.ಪಂ. ವ್ಯಾಪ್ತಿಯ ಕೊಳಂಬೆ ಹಾಗೂ ಅದ್ಯಪಾಡಿ ಗ್ರಾಮದಲ್ಲಿ ಇದಕ್ಕೆ ಪೂರಕವಾಗಿ ಜಮೀನು ಗುರುತಿಸಿ, ಸ್ವಾಧೀನಕ್ಕೆ ಅವಶ್ಯವಿರುವ ಹಣದ ಅಂದಾಜು ಪಟ್ಟಿಯನ್ನು ಜಿಲ್ಲಾಡಳಿತ ರಾಜ್ಯ ಸರಕಾರದ ಮೂಲ ಸೌಕರ್ಯ ಇಲಾಖೆಗೆ ಸಲ್ಲಿಸಿತ್ತು. ಆದರೆ ಯೋಜನೆಯ ಸಂಪೂರ್ಣ ವೆಚ್ಚವನ್ನು ವಿಮಾನ ನಿಲ್ದಾಣ ಪ್ರಾಧಿಕಾರವೇ ಭರಿಸಬೇಕು ಎಂಬ ರಾಜ್ಯ ಮೂಲಸೌಕರ್ಯ ಇಲಾಖೆಯ ನಿಲುವಿನಿಂದಾಗಿ ಯೋಜನೆ ಮುಂದಕ್ಕೆ ಪ್ರಗತಿ ಕಾಣಲೇ ಇಲ್ಲ. ಈ ನಡುವೆ ಕೇರಳದ ಕಣ್ಣೂರಿನಲ್ಲಿ 4ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಪೂರ್ಣಗೊಂಡು ಕಾರ್ಯಾರಂಭ ಮಾಡಿದೆ.
ಜಾಗ ಸ್ವಾಧೀನಕ್ಕೆ ಮೀನಮೇಷ
ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್‌ವೇ ವಿಸ್ತರಣೆ ಕಾಮಗಾರಿಗೆ ಅವಶ್ಯವಿರುವ ಜಮೀನನ್ನು ಉಚಿತವಾಗಿ ನೀಡುವಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ರಾಜ್ಯ ಸರಕಾರವನ್ನು ಕೋರಿದೆ. ವಿಮಾನ ನಿಲ್ದಾಣ ಪ್ರಾಧಿಕಾರದ ಒಡೆತನಕ್ಕೆ ವಿಮಾನ ನಿಲ್ದಾಣವು ಸೇರಿರುವುದರಿಂದ ಭೂಸ್ವಾಧೀನ ಸೇರಿದಂತೆ ಸಂಪೂರ್ಣ ವೆಚ್ಚವನ್ನು ಪ್ರಾಧಿಕಾರವೇ ಭರಿಸಬೇಕು ಎಂಬುದು ಕರ್ನಾಟಕ ರಾಜ್ಯ ಮೂಲಸೌಲಭ್ಯ ಅಭಿವೃದ್ಧಿ ಖಾತೆಯ ನಿಲುವು. ಸಾಮಾನ್ಯವಾಗಿ ಎಲ್ಲ ರಾಜ್ಯಗಳಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಬೇಕಾಗುವ ಭೂಮಿಯನ್ನು ಆಯಾಯ ರಾಜ್ಯ ಸರಕಾರಗಳೇ ನೀಡುತ್ತವೆ. ಈ ನಡುವೆ ಪ್ರಸ್ತುತ ವಿಮಾನಯಾನ ಕಂಪೆನಿಗಳು ದೊಡ್ಡ ವಿಮಾನಗಳ ಬದಲಿಗೆ ಮಧ್ಯಮ ಗಾತ್ರದ ವಿಮಾನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ವಿಮಾನಗಳ ಸಂಚಾರಕ್ಕೆ ಅವಕಾಶಗಳಿವೆ ಎಂಬ ಅಭಿಪ್ರಾಯವನ್ನು ಕೂಡ ಪ್ರಾಧಿಕಾರ ಹೊಂದಿದೆ ಎನ್ನಲಾಗಿದೆ.
ಐತಿಹಾಸಿಕವಾಗಿಯೂ ಪ್ರಾಮುಖ್ಯ
ಮಂಗಳೂರು ವಿಮಾನ ನಿಲ್ದಾಣದ ಮೂಲ ಹೆಸರು ಬಜಪೆ ಏರೋಡ್ರೊಮ್ . 1951ರ ಡಿ.25 ರಂದು ಭಾರತದ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಅವರು ಡಿಸಿ-3 ಡಕೋಟಾ ವಿಮಾನದಲ್ಲಿ ಇಲ್ಲಿ ಬಂದಿಳಿದಿದ್ದರು. ಮಹಾಮುತ್ಸದ್ದಿ ಉಳ್ಳಾಲ ಶ್ರೀನಿವಾಸ ಮಲ್ಯ ಅವರು ವಹಿಸಿದ ಮುತುವರ್ಜಿಯಿಂದ ಇಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿತ್ತು. ಆಗ ಇದ್ದ ರನ್‌ವೇ ಉದ್ದ 5,299 ಅಡಿ.
ಉತ್ತಮ ಸಾಧನೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಮಾನ ಪ್ರಯಾಣಿಕರ ಸಂಖ್ಯೆ ಹಾಗೂ ವಿಮಾನಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸಿದೆ. ವಿಮಾನ ನಿಲ್ದಾಣವನ್ನು ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲೊಂದಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಾಧಿಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಗುಣಮಟ್ಟದ ಸೇವೆಗಾಗಿ ಪ್ರಶಸ್ತಿಗಳು ಬಂದಿವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಹೊಸದಾಗಿ ಒಟ್ಟು 240 ಕೋಟಿ ರೂ. ವೆಚ್ಚದ 2 ಯೋಜನೆಗಳು ಕಾರ್ಯಗತಗೊಳ್ಳುತ್ತಿವೆೆ. 110 ಕೋ.ರೂ. ವೆಚ್ಚದಲ್ಲಿ ಹೊಸದಾಗಿ ಟ್ಯಾಕ್ಸಿ ಬೇ (ವಿಮಾನಗಳ ನಿಲುಗಡೆ) ಯೋಜನೆ , 132.24 ಕೋ. ರೂ. ವೆಚ್ಚದಲ್ಲಿ ನಡೆಯುತ್ತಿರುವ ಟರ್ಮಿನಲ್ ವಿಸ್ತರಣ ಯೋಜನೆ ಮುಂತಾದುವುಗಳು ವಿಮಾನ ನಿಲ್ದಾಣವನ್ನು ಇನ್ನಷ್ಟು ಉನ್ನತೀಕರಣಗೊಳಿಸಿದೆ. ನಿಲ್ದಾಣ ಸುಂದರೀಕರಣ ಕಾರ್ಯ ಪ್ರಗತಿಯಲ್ಲಿದೆ. ಪ್ರಾದೇಶಿಕ ಕಲೆ, ಶಿಲ್ಪವನ್ನು ಪ್ರದರ್ಶಿಸುವ ಮೂಲಕ ನಿಲ್ದಾಣಕ್ಕೆ ಇನ್ನಷ್ಟು ಮೆರುಗು ನೀಡಲಾಗಿದೆ. ಆದರೆ ಇದೆಲ್ಲರ ನಡುವೆ ಅವಶ್ಯ ರನ್‌ವೇ ವಿಸ್ತರಣೆಯಾಗದಿರುವುದು ಒಂದು ಪ್ರಮುಖ ಕೊರತೆಯಾಗಿದೆ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Pegasus spyware ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಲಿ: ಸುರ್ಜೇವಾಲಾ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.