ಮಧ್ಯ ವಯಸ್ಸು, ಸಾಮರ್ಥ್ಯ ಕುಗ್ಗಿಸದಿರಲಿ
Team Udayavani, Aug 27, 2018, 2:38 PM IST
ಅನಿವಾರ್ಯತೆ ಅಥವಾ ಟೈಮ್ ಪಾಸ್‌ಗಾಗಿ ದುಡಿಯುತ್ತಿದ್ದ ಮಹಿಳೆಯರು ಇಂದು ಸಾಧನೆಯ ಪಥದಲ್ಲಿ ಹೆಜ್ಜೆ ಇಡಲು ಪ್ರಾರಂಭಿಸಿದ್ದಾರೆ. ಈ ನಡುವೆ ವಯಕ್ತಿಕ ಕಾರಣಗಳು ಈ ಸಂದರ್ಭದಲ್ಲಿ ಅವರು ಹಿಂಜರಿಯುವಂತೆ ಮಾಡುವುದೂ ಇದೆ. ಮುಖ್ಯವಾಗಿ ವಯಸ್ಸು.
ವಯಸ್ಸಿನ ವಿಷಯದಲ್ಲಿ ಹೆಂಗಸರು ಹೆಚ್ಚು ಕಾಳಜಿ ವಹಿಸುತ್ತಾರೆ. ಹೆಚ್ಚಿದ ಜವಾಬ್ದಾರಿಯ ನಡುವೆ ಸೊರಗುತ್ತಿರುವ ಸೌಂದರ್ಯ, ದೇಹದ ಸಾಮರ್ಥ್ಯ ಕುಗ್ಗಿದ ಅನುಭವ ಅವರನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಜರ್ಜರಿತರಾಗುವಂತೆ ಮಾಡುತ್ತದೆ. ಇದು ಅವರ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ವೃತ್ತಿ ಕ್ಷೇತ್ರದಲ್ಲಿ ಮಾತ್ರವಲ್ಲ ಖಾಸಗಿ ಬದುಕಿನಲ್ಲೂ ಮಧ್ಯ ವಯಸ್ಸಿನ ಮಹಿಳೆಯರಿಗೆ ನಿರಂತರ ಪ್ರೋತ್ಸಾಹ, ಸಹಕಾರ ಬೇಕಾಗುತ್ತದೆ. ಮುಖ್ಯವಾಗಿ ಅವರು ಇದಕ್ಕೆಲ್ಲ ಮಾನಸಿಕವಾಗಿ ಮೊದಲೇ ಸಿದ್ಧರಿರಬೇಕಾಗುತ್ತದೆ.
·ಹೆಚ್ಚಿದ ಜವಾಬ್ದಾರಿಗಳು
ಮಧ್ಯ ವಯಸ್ಸಿನಲ್ಲಿ ಜವಾಬ್ದಾರಿಗಳನ್ನು ಹೊರುವುದು ಒಂದು ಸವಾಲು. ಈ ಹಂತದಲ್ಲಿ ಪ್ರಾಥಮಿಕವಾಗಿ ತಿಳಿದುಕೊಳ್ಳುವ ವಿಷಯಗಳು ಹಲವಾರು ಇವೆ. ಇಲ್ಲಿ ಮಹಿಳೆಯು ಮನೆ, ಫ್ರೆಂಡ್ಸ್, ಉದ್ಯಮ, ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವುದು ಮಾಮೂಲಿ. ಇಲ್ಲಿ ತಿಳಿವಳಿಕೆ ಅಗತ್ಯ. ಪುರುಷರು ನಿರ್ವಹಿಸುವ ಜವಾಬ್ದಾರಿಗಳನ್ನು ಮಹಿಳೆ ಕೈಗೆತ್ತಿಕೊಳ್ಳುವ ಹಂತದಲ್ಲಿ ಜಾಗೃತರಾಗಿರಬೇಕಾಗುತ್ತದೆ.
·ನಿರಂತರ ಪ್ರೋತ್ಸಾಹ ಅಗತ್ಯ
ವೃತ್ತಿ ಕ್ಷೇತ್ರಕ್ಕೆ ಕಾಲಿಟ್ಟ ಮೊದಲ ಕೆಲವು ತಿಂಗಳ ತರಬೇತಿ ಪಡೆದು, ಒಂದು ಹಂತದಲ್ಲಿ ಕೆಲಸ ನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸ ಹೊಂದಿರುತ್ತವೆ ಆದರೆ ಜವಾಬ್ದಾರಿ ಹೆಚ್ಚಿದಂತೆ ಈ ವಿಶ್ವಾಸ ಕುಂಠಿತವಾಗುತ್ತ ಸಾಗುತ್ತದೆ. ಹೀಗಾಗಿ ಮುಖ್ಯವಾಗಿ ಮಹಿಳೆಯರಿಗೆ ಮಧ್ಯಮ ವಯಸ್ಸಿನಲ್ಲೂ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಬಲ್ಲ ತರಬೇತಿಯ ಅಗತ್ಯವಿರುತ್ತದೆ.
ಏನು ಮಾಡಬಹುದು?
·ಉತ್ಸಾಹ ಹೆಚ್ಚಿಸಿಕೊಳ್ಳಿ
ಸಾಮಾನ್ಯವಾಗಿ ವೃತ್ತಿ ಕ್ಷೇತ್ರಕ್ಕೆ ಕಾಲಿಟ್ಟ ಅನಂತರ ಒತ್ತಡ ಎಂಬುವುದು ಸಾಮಾನ್ಯ. ಹೆಚ್ಚಾಗಿ ಮಧ್ಯ ವಯಸ್ಸಿನಲ್ಲಿ ಉದಾಸೀನತೆ ಹೆಚ್ಚಾಗಿ ಕಾಡುತ್ತದೆ. ಇದರಿಂದ ಗುರಿ ತಲುಪುವ ಸಮಯದಲ್ಲಿ ಆಸಕ್ತಿ ಕುಂದುತ್ತದೆ. ಈ ಸಂದರ್ಭದಲ್ಲಿ ಗುರಿ ತಲುಪಲು ಬೇಕಾದ ಏಕಾಗ್ರತೆಯನ್ನು ಕಂಡುಕೊಳ್ಳಬೇಕಾಗಿದೆ. ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ನೀಡಿ ಉತ್ಸಾಹ ಹೆಚ್ಚಿಸಿಕೊಳ್ಳಲು ಪೂರಕವಾದ ಚಟುವಟಿಕೆಗಳ ಅಗತ್ಯವಿರುತ್ತದೆ.
·ವಾರ್ಷಿಕ ಗುರಿಯ ಕಡೆ ಗಮನವಿರಲಿ
ಏನೆಲ್ಲ ಕರ್ತವ್ಯ ನಿರ್ವಹಿಸಬೇಕು, ಮುಂದೆ ಏನಾಗಲು ಬಯಸುತ್ತೇವೆ ಎಂದು ನಿರ್ಧರಿಸಿಕೊಳ್ಳಿ. ಆಸಕ್ತಿಗೆ ಪೂರಕವಾದ ಕ್ಷೇತ್ರಗಳ ಬಗೆಗೆ ಗಮನ ಹರಿಸಬೇಕಾಗಿದೆ. ಸಹೋದ್ಯೋಗಿಗಳ ಜತೆ ವ್ಯವಹರಿಸುವ ವೇಳೆ ಚರ್ಚೆಗೆ ಆಸ್ಪದವಿಲ್ಲದೆ ಮಿತಿಗಳ ಕಡೆಗೂ ಗಮನಹರಿಸಿಕೊಳ್ಳಿ.
·ನಿಮ್ಮನ್ನು ನೀವು ಗೌರವಿಸಿ
ಯಶಸ್ಸಿಗೆ ಸಾವಿರ ಹಾದಿ. ಮಧ್ಯಮ ವಯಸ್ಸಿನಲ್ಲಿ ಯಾವುದೇ ಕೆಲಸ ಮಾಡಿದರೂ, ಉತ್ಸಾಹದ ಜತೆಗೆ ನಿಮ್ಮಲ್ಲಿಯೇ ಅದು ಖುಷಿ ನೀಡುವಂತೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ. ಅದೇನೇ ಕೆಲಸವಾದರೂ ಮನಸ್ಸಲ್ಲಿ ಸಾರ್ಥಕ್ಯ ಭಾವನೆಯನ್ನು ಇಟ್ಟುಕೊಂಡರೆ ಉತ್ತಮ. ಕಚೇರಿ ಕೆಲಸದಲ್ಲಿಯೂ, ಕೆಲಸ ಮುಗಿದ ಅನಂತರ ಸಹೋದ್ಯೋಗಿಗಳ ಜತೆ ಮಾತುಕತೆ ನಡೆಸಿ. ಮಧ್ಯಮ ವಯಸ್ಸಿನ ಕಲಿಯುವ ಹಂತದಲ್ಲಿನ ಏಳು ಬೀಳುಗಳ ಜತೆ ಹೆಜ್ಜೆ ಹಾಕುವುದನ್ನು ರೂಢಿಸಿಕೊಂಡರೆ ಮುಂದೊಂದು ದಿನ ನೀವು ಇತರರಿಗೆ ಮಾದರಿಯಾಗಬಹುದು.
·ರಜಾದಿನವನ್ನು ಕಾಯ್ದಿರಿಸಿಕೊಳ್ಳಿ
ಕೆಲವು ದಿನಗಳ ರಜೆಯನ್ನು ಕಾಯ್ದಿರಿಸಿಕೊಳ್ಳಿ. ಕೆಲಸದ ಒತ್ತಡ ನಿವಾರಿಸಲು ಈ ರಜೆಯನ್ನು ಸದ್ಬಳಕೆ ಮಾಡಿಕೊಳ್ಳಿ. ರಜಾ ದಿನಗಳಲ್ಲಿ ಹತ್ತಿರದ ಬೀಚ್ ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಬನ್ನಿ. ಇದರಿಂದ ಮನಸ್ಸು ಉಲ್ಲಾಸಿತವಾಗುತ್ತದೆ. ರಜೆ ಮುಗಿಸಿ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಹೊಸ ಉತ್ಸಾಹ ಮೂಡುತ್ತದೆ.
·ಸಮಸ್ಯೆ ಹಂಚಿಕೊಳ್ಳಿರಿ
ಮಧ್ಯ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಲು ಕಠಿನ ಪರಿಶ್ರಮ ಪಡಬೇಕಾಗುತ್ತದೆ. ಸಮಸ್ಯೆ ಬಗೆಹರಿಸಿಕೊಳ್ಳಲು ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತನಾಡಿ.ಸಮಸ್ಯೆಗಳನ್ನು ಗುಪ್ತವಾಗಿಡುವುದು ಯಾವುದೇ ಪರಿಹಾರವಲ್ಲ. ಇದನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಪರಿಹಾರ ಸಿಗುತ್ತದೆ.
ಟೈಮ್ ಟೇಬಲ್ ತಯಾರಿಸಿ
ಮಹಿಳೆಯರಿಗೆ ಕುಟುಂಬ ಜವಾಬ್ದಾರಿಗಳ ಜತೆ ವೃತ್ತಿ ಕ್ಷೇತ್ರವನ್ನು ನಿರ್ವಹಿಸುವುದು ಸುಲಭವಲ್ಲ. ಇದರಿಂದ ವಾರದಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಮೊದಲೇ ತಯಾರಿಸಿಕೊಂಡು, ಆ ಪಟ್ಟಿಯ ವಿವರದಂತೆ ನಿಯಮಿತವಾಗಿ ಮುಂದುವರೆಯಿರಿ. ಇದರಿಂದ ಕೆಲಸಗಳು ದಿನದಿಂದ ದಿನಕ್ಕೆ ಸಲೀಸಾಗಿ ಮುಗಿಸಬಹುದು. ಜವಾಬ್ದಾರಿಗಳನ್ನು ನಿಭಾಯಿಸುವ ಕಲೆಯು ವೃದ್ಧಿಯಾಗುತ್ತದೆ.
ಶ್ರುತಿ ನೀರಾಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.